Dailyhunt Logo
  • Light mode
    Follow system
    Dark mode
    • Play Story
    • App Story
ಅಶಾಶ್ವತ ಮಿತ್ರ ಶತ್ರುಗಳ ನಡುವೆ ಶಾಶ್ವತ ಹಿತಾಸಕ್ತಿಯ ಅವಕಾಶ

ಅಶಾಶ್ವತ ಮಿತ್ರ ಶತ್ರುಗಳ ನಡುವೆ ಶಾಶ್ವತ ಹಿತಾಸಕ್ತಿಯ ಅವಕಾಶ

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ತ್ತೀಚಿನವರೆಗೂ 'ಇಂಡಿಯನ್ ಸಬ್​ಕಾಂಟಿನೆಂಟ್' ಎಂದೂ, ಈಗ 'ಸೌತ್ ಏಷ್ಯನ್ ಸಬ್​ಕಾಂಟಿನೆಂಟ್' ಎಂದೂ ಗುರುತಿಸಲಾಗುವ ಉಪಖಂಡದ ಪೂರ್ವ ಭಾಗದ ಕುರಿತಾಗಿ ಭಾರತ, ಅಮೆರಿಕ ಮತ್ತು ಚೀನಾ ಲೆಕ್ಕಾಚಾರಗಳು ಮತ್ತು ಅವುಗಳಿಗನುಗುಣವಾಗಿ ನೀತಿಗಳು ಕಳೆದ ಏಳೂವರೆ ದಶಕಗಳಲ್ಲಿ ನಿರಂತರ ಬದಲಾವಣೆ ಕಂಡಿವೆ.
ಭಾರತದ ನೀತಿ ಬಗ್ಗೆ ಮೊದಲಿಗೆ ಹೇಳುವುದಾದರೆ ಅದು ಗೊಂದಲ-ಅನುಮಾನಗಳಿಂದ ಆರಂಭವಾಗಿ ನಂತರ ಆಸಕ್ತಿಯ ರೂಪ ತಳೆಯಿತು. ಮೊದಲ ಪ್ರಧಾನಿ ನೆಹರೂಗೆ ನಾಗಾಲ್ಯಾಂಡ್ ಭಾರತದ್ದೇ, ಬರ್ವದ್ದೇ ಎಂಬ ಸ್ಪಷ್ಟ ತಿಳಿವಳಿಕೆ ಇರಲಿಲ್ಲ. ಸ್ವಾತಂತ್ರ್ಯಾನಂತರ ಕೊಹಿಮಾಗೆ ಹೋದಾಗ ಬರ್ವದ ಪ್ರಧಾನಿ ಉನು ಅವರನ್ನೂ ಜತೆಯಲ್ಲಿ ಕರೆದುಕೊಂಡು ಹೋಗಿದ್ದರು. ಹಾಗೆಯೇ ಅರುಣಾಚಲ ಪ್ರದೇಶ (ಅಂದಿನ ನೇಫಾ) ಬಗೆಗೂ ಅವರು ಸರಿಯಾದ ಅರಿವು ಹೊಂದಿದ್ದಂತೆ ಕಾಣುವುದಿಲ್ಲ. ನೇಫಾದ್ದೊಂದು ವಿಚಿತ್ರ ಕಥೆ. 20ನೇ ಶತಮಾನದ ಆರಂಭದವರೆಗೂ ಟಿಬೆಟ್​ನ ಭಾಗವಾಗಿದ್ದ ಅದನ್ನು 1904-11ರಲ್ಲಿ ಬ್ರಿಟಿಷ್ ಭಾರತೀಯ ಸೇನೆ ಆಕ್ರಮಿಸಿಕೊಂಡಿತು.
ನಂತರ ಅದು ತಾನೇ ಏಕಪಕ್ಷೀಯವಾಗಿ ಎಳೆದ ಹೊಸ ಮೆಕ್​ವುಹೋನ್ ಗಡಿರೇಖೆಗೆ ಟಿಬೆಟ್-ಚೀನಾಗಳ ಸಮ್ಮತಿ ಪಡೆಯಲು 1914ರ ಶಿಮ್ಲಾ ಮಾತುಕತೆಗಳಲ್ಲಿ ವಿಫಲ ಯತ್ನ ನಡೆಸಿತು. ನೇಫಾ ಭಾರತದ ಭಾಗವಾಗುವುದನ್ನು ಚೀನಾ ಸಾರಾಸಗಟಾಗಿ ತಿರಸ್ಕರಿಸಿತು, ಮೊದಲಿಗೆ ಸಮ್ಮತಿಸಿದ ಟಿಬೆಟ್ ಮರುಕ್ಷಣವೇ ನಿರಾಕರಿಸಿತು. ಆದಾಗ್ಯೂ ಆ ಪ್ರದೇಶದ ಮೇಲೆ ಬ್ರಿಟಿಷ್ ಭಾರತದ ನಿಯಂತ್ರಣ ತೆರವುಗೊಳಿಸಲು ಅವೆರಡೂ ಪ್ರಯತ್ನ ಮಾಡಲಿಲ್ಲ. ಮಾಡಬಹುದಾದ ಸೇನಾಶಕ್ತಿಯೂ ಅವುಗಳಿಗಿರಲಿಲ್ಲ. ಇಷ್ಟಾಗಿಯೂ ನೇಫಾವನ್ನು ಬ್ರಿಟಿಷ್ ಭಾರತ ತನ್ನ ಅಧಿಕೃತ ಭೂಪಟಗಳಲ್ಲಿ 1938ರವರೆಗೂ ಟಿಬೆಟ್​ನ ಭಾಗವಾಗಿಯೇ ತೋರಿಸುತ್ತಿತ್ತು!
ಇಂತಹ ಐತಿಹಾಸಿಕ ಹಿನ್ನೆಲೆಯಿದ್ದ ಆ ಪ್ರದೇಶದ ಮೇಲೆ ಚೀನಾದ ಕಣ್ಣು ಇದ್ದೇ ಇರುತ್ತದೆ, ಟಿಬೆಟ್​ಅನ್ನು ನುಂಗಿದ ಮೇಲೆ ಅದು ನೇಫಾದತ್ತ ನಾಲಿಗೆ ಚಾಚುತ್ತದೆ, ಹೀಗಾಗಿ ಅದರ ರಕ್ಷಣೆಗೆ ತಾವು ಕ್ರಮ ತೆಗೆದುಕೊಳ್ಳಬೇಕು ಎಂದೂ ನೆಹರೂ ಯೋಚಿಸಲಿಲ್ಲ. ಯೋಚಿಸಿದ್ದರೆ ಟಿಬೆಟ್ ಮೇಲೆ ಚೀನಿ ಆಕ್ರಮಣವನ್ನು ಅವರು ತಣ್ಣಗೆ ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ಭಾರತೀಯ ಸೇನೆ ಪ್ರಧಾನಿಗಿಂತಲೂ ಹೆಚ್ಚಿನ ಭೂ-ರಾಜಕೀಯ ಹಾಗೂ ಭೂ-ಸಾಮರಿಕ ತಿಳಿವಳಿಕೆ ಹೊಂದಿತ್ತು. ಆಯಕಟ್ಟಿನ ತವಾಂಗ್ ಹಿಮಾಲಯದ ಉದ್ದಕ್ಕೂ ಹಾದುಹೋಗುವ ಮೆಕ್​ವುಹೋನ್ ಗಡಿರೇಖೆಯ ದಕ್ಷಿಣಕ್ಕಿದ್ದರೂ ಬ್ರಿಟಿಷರು ಅದನ್ನು ಟಿಬೆಟ್​ನ ವಶದಲ್ಲೇ ಬಿಟ್ಟಿದ್ದರು.
ಟಿಬೆಟ್​ನೊಂದಿಗೆ ಅದೂ ಚೀನೀ ಸೇನೆಯ ಕೈಗೆ ಬಿದ್ದರೆ ಚೀನೀ ಹಿಡಿತ ಹಿಮಾಲಯದ ದಕ್ಷಿಣಕ್ಕೂ ಹರಡಿದಂತಾಗುತ್ತದೆ, ಆಗ ಅಲ್ಲಿ ಚೀನೀಯರು ನಮ್ಮ ಮೇಲೆ ಸಾಮರಿಕವಾಗಿ ಮೇಲುಗೈ ಸಾಧಿಸುವಂತಾಗುತ್ತದೆ ಎಂದು ಸರಿಯಾಗಿಯೇ ಲೆಕ್ಕಹಾಕಿದ ಭಾರತೀಯ ಸೇನೆ ಸದ್ದುಗದ್ದಲವಿಲ್ಲದೇ ತವಾಂಗ್​ಅನ್ನು ಆಕ್ರಮಿಸಿಕೊಂಡು ನೇಫಾಗೆ ಸೇರಿಸಿಬಿಟ್ಟಿತು. ಆಮೇಲೆ ತವಾಂಗ್ ಸೇರಿದಂತೆ ಇಡೀ ನೇಫಾ ಮೇಲೆ ಚೀನಾ ಹಕ್ಕು ಸ್ಥಾಪಿಸಹೊರಟಿದ್ದು, 1962ರ ಯುದ್ಧ ಎಲ್ಲವೂ ನಡೆದುಹೋಯಿತು. ನೆಹರೂ ಅವಧಿಯಲ್ಲೇ ಇಡೀ ಪೂವೋತ್ತರ ಭಾರತದಲ್ಲಿ ಕ್ರಿಶ್ಚಿಯನ್ನರ ಮತಾಂತರ ಯಾವ ಅಂಕೆಯೂ ಇಲ್ಲದೇ ಸಾಗಿತು. ಭಾರತ-ವಿರೋಧಿ ಚಟುವಟಿಕೆಗಳೂ ತೀವ್ರಗೊಂಡವು. ಆ ಬಗ್ಗೆ ಕ್ರಮಕ್ಕೆ ಮುಂದಾದದ್ದು ಇಂದಿರಾ ಗಾಂಧಿ ಸರ್ಕಾರ. ಅವು ಯಶಸ್ಸು ಕಾಣಲು 3 ದಶಕಗಳೇ ಹಿಡಿದವು.
ಈಗಂತೂ ಮೋದಿ ಸರ್ಕಾರ ಪೂವೋತ್ತರ ಭಾರತವನ್ನು ಭಾವನಾತ್ಮಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ರಕ್ಷಣಾ ದೃಷ್ಟಿಯಿಂದ ಭಾರತದೊಂದಿಗೆ ಬಿಡಿಸಲಾಗದಂತೆ ಬೆಸೆಯಲು ಪ್ರಯತ್ನಿಸುತ್ತಿದೆ. ಅದರಲ್ಲಿ ಯಶಸ್ವಿಯಾಗುತ್ತಲೂ ಇದೆ. ಹಾಗಾಗಿಯೇ ಮೋದಿ ಸರ್ಕಾರ ತನ್ನ ಗಮನವನ್ನು ಉತ್ತರ ಮ್ಯಾನ್ಮಾರ್​ಗೂ ವಿಸ್ತರಿಸಿದೆ.ಅರುಣಾಚಲ ಪ್ರದೇಶ (ನೇಫಾ) ಹಿಂದೊಮ್ಮೆ ಟಿಬೆಟ್​ನ ಭಾಗವಾಗಿತ್ತು ಎನ್ನುವ ಕಾರಣದಿಂದಲೇ ಆ ಪ್ರದೇಶದ ಮೇಲೆ ಹಕ್ಕು ಸ್ಥಾಪಿಸಲು ಆರಂಭಿಸಿದ ಚೀನಾ ನಂತರ ಈಶಾನ್ಯ ಭಾರತದ ಬುಡಕಟ್ಟು ಜನಾಂಗಗಳ ಭಾರತ-ವಿರೋಧಿ ಮನೋಭಾವವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಹೊಂಚು ಹಾಕಿತು. ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾ, ಅಸ್ಸಾಂಗಳ ಸಶಸ್ತ್ರ ಬಂದೂಕುಕೋರರಿಗೆ ಶಸ್ತ್ರಾಸ್ತ್ರ, ಹಣ ಪೂರೈಸುತ್ತ ಅವು ಈಶಾನ್ಯ ಭಾರತವನ್ನು ಅಶಾಂತವಾಗಿರಿಸುವಂತೆ, ಆ ಮೂಲಕ ಅಲ್ಲಿ ಭಾರತದ ಆಡಳಿತ ಬಲಹೀನವಾಗುವಂತೆ ತಂತ್ರ ಹೂಡಿತು. ಇದೆಲ್ಲವೂ ಪಾಕಿಸ್ತಾನದ ಸಹಕಾರದಿಂದ ಮತ್ತು ಪೂರ್ವ ಪಾಕಿಸ್ತಾನದ ನೆಲದ ಮೂಲಕ. ಈಶಾನ್ಯ ಭಾರತವನ್ನು ಇಡಿಯಾಗಿ ಕತ್ತರಿಸಲು ಚೀನಾ ಯೋಜನೆ ಹಾಕಿದ್ದರ ಬಗ್ಗೆ ಇಲ್ಲಿ ಉಲ್ಲೇಖ ಅಗತ್ಯ. ಸಿಕ್ಕಿಂ, ಭೂತಾನ್ ನಡುವೆ ಕಠಾರಿಯಂತೆ ನಿಂತಿರುವ ತನ್ನ ಹಿಡಿತದ ಚುಂಬಿ ಕಣಿವೆಯ ಮೂಲಕ ಚೀನಿ ಸೇನೆ ದಕ್ಷಿಣಕ್ಕಿಳಿದು ಉತ್ತರ ಬಂಗಾಳದ ಕೂಚಬೆಹಾರ್ ಮೈದಾನ ಪ್ರದೇಶ ತಲುಪಿದರೆ, ಪಾಕಿಸ್ತಾನಿ ಸೇನೆಯೂ ಪೂರ್ವ ಪಾಕಿಸ್ತಾನದ ರಂಗ್​ಪುರ್ ಗಡಿಯನ್ನು ದಾಟಿ ಕೂಚ್​ಬೆಹಾರ್​ನಲ್ಲಿ ಚೀನಿ ಸೇನೆಯನ್ನು ಕೂಡಿಕೊಂಡರೆ ಅವೆರಡೂ ಸೇರಿ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಕತ್ತರಿಸಿಬಿಡುವ ಅಪಾಯ 1960ರ ದಶಕದಲ್ಲಿ, ಮುಖ್ಯವಾಗಿ 1965ರ ಯುದ್ಧದ ದಿನಗಳಲ್ಲಿ ದಟ್ಟವಾಗಿತ್ತು.
ನಂತರ ವಿಸ್ತರಿಸುತ್ತ ಹೋದ ನಮ್ಮ ಸೇನಾ ಸಾಮರ್ಥ್ಯ ಮತ್ತು ಸೋವಿಯತ್ ಯೂನಿಯನ್ ಜತೆಗಿನ ನಮ್ಮ ರಕ್ಷಣಾ ಸಂಬಂಧಗಳು ಆ ಚೀನಾ-ಪಾಕಿಸ್ತಾನ ದುಷ್ಟ ಯೋಜನೆಗೆ ತಡೆಯಾದದ್ದು ಎಲ್ಲರಿಗೂ ತಿಳಿದೇ ಇದೆ. ಆದರೆ ಅದರಲ್ಲಿ ಅಮೆರಿಕದ ಪಾತ್ರದ ಬಗ್ಗೆ ಹೆಚ್ಚು ಚರ್ಚೆ ನಡೆದಂತೆ ಕಾಣುವುದಿಲ್ಲ. ಸೋವಿಯತ್ ವಿರುದ್ಧದ ಶೀತಲಸಮರ ಲೆಕ್ಕಾಚಾರದಲ್ಲಿ ಭಾರತವನ್ನು ಸೇರಿಸಿಕೊಳ್ಳುವ ತನ್ನ ಪ್ರಯತ್ನದಲ್ಲಿ ಅಮೆರಿಕ ಯಶಸ್ವಿಯಾಗಿದ್ದರೆ ಅದಕ್ಕೆ ಪಾಕಿಸ್ತಾನದ ಅಗತ್ಯ ಇಲ್ಲವೇ ಇಲ್ಲ ಎನ್ನುವಷ್ಟು ಕುಗ್ಗಿಹೋಗುತ್ತಿತ್ತು. ಇರಲಿ, ಇತಿಹಾಸದಲ್ಲಿ 'ರೆ'ಗೆ ಸ್ಥಾನವಿಲ್ಲ. ಅಂತಿಮವಾಗಿ ಆದದ್ದೇನೆಂದರೆ ಪಶ್ಚಿಮ ಪಾಕಿಸ್ತಾನಿ ನೆಲದಿಂದ ಕಮ್ಯೂನಿಸ್ಟ್ ಸೋವಿಯತ್ ಮೇಲೆ, ಪೂರ್ವ ಪಾಕಿಸ್ತಾನಿ ನೆಲದಿಂದ ಚೀನಿ ನೆಲದ ಮೇಲೆ ಕಣ್ಣಿಡಲು ಅಮೆರಿಕ 1950ರ ದಶಕದ ಆದಿಯಿಂದಲೇ ಪ್ರಯತ್ನ ಆರಂಭಿಸಿತು. ಜತೆಗೆ ತನ್ನ ಪಾಕಿಸ್ತಾನ್ ಸಖ್ಯ ಭಾರತಕ್ಕೆ ಒಂದು ಮಿತಿಯಾಚೆಗೆ ಹಾನಿಯಾಗದಂತೆಯೂ ವಾಷಿಂಗ್ಟನ್ ಎಚ್ಚರ ವಹಿಸಿತು. ತಾನು ಪಾಕಿಸ್ತಾನಕ್ಕೆ ನೀಡಿದ ಶಸ್ತ್ರಾಸ್ತ್ರಗಳನ್ನು ಭಾರತಕ್ಕೂ ನೀಡುವ ಪ್ರಸ್ತಾಪವನ್ನು ಅಮೆರಿಕ 1957ರಲ್ಲಿ ಮಾಡಿದ್ದು, ಭಾರತ ಅದನ್ನು ತಿರಸ್ಕರಿಸಿದ್ದು. ಕಮ್ಯೂನಿಸ್ಟ್ ಅಪಾಯಗಳ ವಿರುದ್ಧ ಬಳಸಲೆಂದು ತಾನು ನೆರವಿನ ಮೂಲಕ ನೀಡಿರುವ ಶಸ್ತ್ರಾಸ್ತ್ರಗಳನ್ನು ಭಾರತದ ವಿರುದ್ಧ ಬಳಸಬಾರದೆಂಬ ನಿಬಂಧನೆಯನ್ನು ಪಾಕಿಸ್ತಾನಕ್ಕೆ ಹಾಕಿದ್ದು ಗಮನಾರ್ಹ. ಎರಡೂ ಕಮ್ಯೂನಿಸ್ಟ್ ದೈತ್ಯರ ನಡುವೆ 1959ರಲ್ಲಿ ಬಿರುಕು ಕಾಣಿಸಿಕೊಂಡಾಗ ಮುಂದೊಂದು ದಿನ ಚೀನಾವನ್ನು ತನ್ನತ್ತ ಸೆಳೆದುಕೊಂಡು ಸೋವಿಯತ್ ಬಣವನ್ನು ಶಕ್ತಿಗುಂದಿಸಬಹುದೆಂದು ಅಮೆರಿಕ ಲೆಕ್ಕಹಾಕಿತು. ಅದಕ್ಕಾಗಿ ಚೀನಾದತ್ತ ಒಂದು ಕಿಟಕಿ ತೆರೆದೇ ಇರಬೇಕು ಎನ್ನುವ ಉದ್ದೇಶದಿಂದ ವಾಷಿಂಗ್ಟನ್ ಚೀನಾದ ಜತೆ ಪಾಕಿಸ್ತಾನದ ಸ್ನೇಹಕ್ಕೆ ಮೌನ ಸಮ್ಮತಿ ನೀಡಿತು. ಮುಂದೆ ಅದು 1970-72ರಲ್ಲಿ ಪ್ರಯೋಜನಕ್ಕೆ ಬಂತು. ಆಗ ಪಾಕಿಸ್ತಾನದ ಮೂಲಕವೇ ಅಮೆರಿಕ ಮತ್ತು ಚೀನಾ ಪರಸ್ಪರ ಸಂಪರ್ಕ ಏರ್ಪಡಿಸಿಕೊಂಡದ್ದೀಗ ಇತಿಹಾಸ.ಆದರೆ ಚೀನಾ ಜತೆ ಸೇರಿ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಪ್ರತ್ಯೇಕಿಸುವ ಪಾಕಿಸ್ತಾನಿ ಹೊಂಚನ್ನು ಮಾತ್ರ ಅಮೆರಿಕ ಸ್ಪಷ್ಟವಾಗಿ ವಿರೋಧಿಸಿತು. ತನ್ನ ಪ್ರಭಾವದಲ್ಲಿರುವ ಪೂರ್ವ ಪಾಕಿಸ್ತಾನಿ ನೆಲ ಮತ್ತು ಚೀನಾ ನಡುವೆ ಭಾರತೀಯ ನೆಲವಿರುವುದು ಅಗತ್ಯ ಎನ್ನುವುದು ಅಮೆರಿಕದ ನಿಲುವಾಗಿತ್ತು. ಒಂದು ವೇಳೆ ಭಾರತದ ವಿರುದ್ಧ ಚೀನಿ-ಪಾಕಿಸ್ತಾನಿ ಹಂಚಿಕೆ ಯಶಸ್ವಿಯಾದರೆ ಆಗ ಚೀನಾ ಮತ್ತು ಅಮೆರಿಕದ ಹಿತಾಸಕ್ತಿಗಳು ನೇರವಾಗಿ ಎದುರಾಗುವ ಅಪಾಯವಿತ್ತು ಮತ್ತು ಅದು ವಾಷಿಂಗ್ಟನ್​ಗೆ ಬೇಡವಾಗಿತ್ತು. ಅದಕ್ಕಾಗಿಯೇ ಅದು ಈಶಾನ್ಯ ರಾಜ್ಯಗಳಲ್ಲಿ ಮತಾಂತರವನ್ನು ಉತ್ತೇಜಿಸಿ ಅಲ್ಲಿನ ಬುಡಕಟ್ಟು ಜನಾಂಗಗಳು ಕ್ರಿಶ್ಚಿಯನ್ ಆಗುವಂತೆ ಅಮೆರಿಕ ನಿರ್ದಿಷ್ಟ ಯೋಜನೆಗಳನ್ನೇ ರೂಪಿಸಿತ್ತು. ಕ್ರಿಶ್ಚಿಯನ್ ಜನಾಂಗಗಳಲ್ಲಿ ಕಮ್ಯುನಿಸ್ಟ್ ಆಟಗಳಿಗೆ ಸ್ಥಾನವಿರುವುದಿಲ್ಲ ಎನ್ನುವ 'ನಂಬಿಕೆ'ಯೇ ಅಮೆರಿಕದ ಆ ಮತಾಂತರ ಕೃತ್ಯಗಳಿಗೆ ಪ್ರಮುಖ ಕಾರಣ. ಚೀನಾ, ಪಾಕಿಸ್ತಾನ ಜಂಟಿ ಯೋಜನೆಯಿಂದಾಗಿ ತನ್ನ ಆ ಪ್ರಯತ್ನಕ್ಕೆ ಧಕ್ಕೆಯಾಗುವುದನ್ನು ಕಂಡ ಅಮೆರಿಕ ಆ ದುಷ್ಟ ಯೋಜನೆಗೆ ವಿರುದ್ಧವಾಗಿ ನಿಂತಿತು. ಅಮೆರಿಕದ ಆ ನಿಲುವಿಗೆ ಸ್ವಹಿತಾಸಕ್ತಿಯೇ ಪ್ರೇರಕವಾಗಿದ್ದರೂ ಅದರಿಂದ ಭಾರತಕ್ಕೆ ಅನುಕೂಲ ಆಯಿತು. ಹೀಗೆ ಉಪಖಂಡದ ಪೂರ್ವಭಾಗದಲ್ಲಿ ಮುಸುಕಿನೊಳಗೇ ಗುದ್ದಾಡುತ್ತಿದ್ದ ಅಮೆರಿಕ, ಚೀನಾ 1971ರಲ್ಲಿ ಭಾರತದ ವಿರುದ್ಧ ಒಂದುಗೂಡಿದ್ದೊಂದು ಆಸಕ್ತಿಕರ ತಿರುವು.ಪೂರ್ವ ಪಾಕಿಸ್ತಾನ ಸ್ವತಂತ್ರಗೊಂಡು ಬಾಂಗ್ಲಾದೇಶವಾಗುವುದು ಚೀನಾ-ಅಮೆರಿಕ 2 ದಶಕಗಳಿಂದ ಸಾಗಿಸಿಕೊಂಡು ಬಂದಿದ್ದ ಯೋಜನೆಗಳೆಲ್ಲವನ್ನೂ ಹಾಳುಗೆಡವುವಂತಿದ್ದವು. ಬಾಂಗ್ಲಾದೇಶದಲ್ಲಿ ಭಾರತ, ಸೋವಿಯತ್​ನ ಪ್ರಭಾವ ಉಂಟಾಗುವ ಕಾರಣ ಅದನ್ನು ತಡೆಯಲು ಬಾಂಗ್ಲಾದೇಶದ ಸ್ವಾತಂತ್ರ್ಯವನ್ನೇ ಆ ಎರಡು ದೇಶಗಳು ವಿರೋಧಿಸಿ ನಿಂತವು. ತಮ್ಮ ಹಿತಾಸಕ್ತಿಗಳ ಮುಂದೆ ಅವುಗಳಿಗೆ ಬಂಗಾಳಿಗಳ ಮಾರಣಹೋಮ ಲೆಕ್ಕಕ್ಕೆ ಬರಲೇ ಇಲ್ಲ. ಆದರೆ ಅಮೆರಿಕ-ಚೀನಾಗಳ ವಿರೋಧವನ್ನೂ ಮೀರಿ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದೊಡನೆ ಅದನ್ನೇ ತಮ್ಮೆಡೆಗೆ ಸೆಳೆದುಕೊಳ್ಳಲು ಅವೆರಡೂ ಪ್ರಯತ್ನಕ್ಕಿಳಿದವು. ಶೀಘ್ರದಲ್ಲೇ ಯಶಸ್ವಿಯೂ ಆದವು.
ಬಂಗಾಳಿ ಮುಸ್ಲಿಮರ ಐತಿಹಾಸಿಕ ಹಿಂದೂದ್ವೇಷ, ಭಾರತದ್ವೇಷ ವಾಷಿಂಗ್ಟನ್-ಬೀಜಿಂಗ್​ಗೆ ಪ್ರಯೋಜನಕಾರಿಯಾದದ್ದು ಸಹಜವೇ. ಆದರೀಗ ಕಾಲ ಬದಲಾಗಿದೆ, ಬಾಂಗ್ಲಾದೇಶೀಯರೇನೋ ಹಿಂದೂಗಳನ್ನೂ, ಭಾರತವನ್ನೂ ದ್ವೇಷಿಸುವುದರಲ್ಲಿ ಹೊಸ ಹುಮ್ಮಸ್ಸು ತೋರಿಸುತ್ತಿದ್ದಾರೆ. ಆದರಿಂದು ಚೀನಾ-ಅಮೆರಿಕಾಗೆ ತಂತಮ್ಮ ಹಿತಾಸಕ್ತಿ ಸಾಧಿಸಿಕೊಳ್ಳಲು ಭಾರತದ ಅವಶ್ಯಕತೆ ಉಂಟಾಗಿದೆ. ಪರಿಣಾಮವಾಗಿ ಅವೆರಡೂ ಭಾರತವನ್ನು ಒಂದು ಮಿತಿಯಿಂದಾಚೆಗೆ ದೂರ ಮಾಡಿಕೊಳ್ಳಲು ತಯಾರಿಲ್ಲ. ಉತ್ತರ ಮ್ಯಾನ್ಮಾರ್​ನ ಕಾಚಿನ್ ರಾಜ್ಯದ ದುರ್ಲಭ ಖನಿಜ ಭಂಡಾರದ ಮೇಲೆ ಚೀನಾದ ಹಿಡಿತ ಕಳೆದುಹೋಗಿದೆ. ಆ ಭಂಡಾರ ಈಗ ಭಾರತದ ಮೂಲಕ ಅಮೆರಿಕಕ್ಕೆ ತಲುಪಬಾರದು ಎನ್ನುವುದು ಚೀನಾದ ಇಂಗಿತ.ಆ ಭಂಡಾರ ಎಂದೆಂದೂ ಚೀನಾದ ಕೈಗೆ ಹೋಗದಿರಲು ತಾನು ಭಾರತದ ಕೈಗಳನ್ನು ಬಲಪಡಿಸಬೇಕು ಎನ್ನುವುದು ಅಮೆರಿಕದ ಲೆಕ್ಕಾಚಾರ. ಆ ಮೂಲಕ ಮುಂದೊಂದು ದಿನ ಅದನ್ನು ತನ್ನ ಕೈಗೆ ದಾಟಿಸಿಕೊಳ್ಳುವ ದೂರಗಾಮಿ ಲೆಕ್ಕಾಚಾರ ಸಹ. ಆದರೆ ತಮ್ಮ ಈ ಹೊಸ ಲೆಕ್ಕಾಚಾರಗಳು ಪೂರ್ಣವಾಗಿ ಭಾರತಕ್ಕೆ ಅನುಕೂಲವಾಗಬಾರದು ಅಂದರೆ ತಮ್ಮನ್ನು ಧಿಕ್ಕರಿಸುವಷ್ಟು ಅನುಕೂಲ ಸ್ಥಿತಿಗೆ ಭಾರತ ತಲುಪಬಾರದೆನ್ನುವುದೂ ಅವುಗಳ ನೀತಿ. ಹೀಗಾಗಿ ಭಾರತಕ್ಕೆ ಇಷ್ಟವಿಲ್ಲದ ಮುಹಮ್ಮದ್ ಯೂನುಸ್ ಢಾಕಾ ಕುರ್ಚಿಯಿಂದ ಇಳಿಯಬೇಕು, ತಾರಿಖ್ ರೆಹಮಾನ್ ತಮ್ಮನ್ನು ಹಿನ್ನೆಲೆಗೆ ಸರಿಸಿ ಭಾರತಕ್ಕೆ ಅಂಟಿಕೊಳ್ಳಲೂಬಾರದೆನ್ನುವುದೂ ಎರಡೂ ಆರ್ಥಿಕ ದೈತ್ಯರ ಸದ್ಯದ ಕಳವಳ.ಒಟ್ಟಾರೆಯಾಗಿ ಪೂರ್ವ ಉಪಖಂಡದಲ್ಲಿ ಹಿಂದೆಂದೂ ಇಲ್ಲದಷ್ಟು ಸಶಕ್ತ ಸ್ಥಿತಿಯಲ್ಲಿ ಇಂದು ಭಾರತವಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ತನ್ನ ದೇಶದ ಇಂಧನ ಅಗತ್ಯಕ್ಕಾಗಿ ಭಾರತವನ್ನೇ ಅವಲಂಬಿಸಬೇಕೆಂಬ ವಾಸ್ತವವನ್ನು ಪ್ರಧಾನಿ ರೆಹಮಾನ್ ಅರಿತಿದ್ದಾರೆ. ಅತ್ತ ಅಮೆರಿಕದ ಮಾರಿಕಣ್ಣಿನಿಂದ ಬಚಾವಾಗಲು ಮತ್ತು ಕಾಚಿನ್ ಖನಿಜಗಳನ್ನು ಕಳೆದುಕೊಂಡ ಚೀನಾದ ಉರಿಗಣ್ಣಿನಿಂದ ರಕ್ಷಣೆ ಪಡೆಯಲೂ ತನಗೆ ಭಾರತ ಅಗತ್ಯ ಎಂದು ಮ್ಯಾನ್ಮಾರ್​ನ ಮಾಜಿ ಸೇನಾ ಶಾಸಕ, ಹಾಲಿ ಅಧ್ಯಕ್ಷ ಉ ಮಿನ್ ಆಂಗ್ ಹ್ಲೈಂಗ್ ಅರ್ಥ ಮಾಡಿಕೊಂಡಿದ್ದಾರೆ. ಅಂದರೆ ಹಿತಾಸಕ್ತಿಗಳ ಘರ್ಷಣೆ ಕಾಣುತ್ತಿರುವ ಚೀನಾ-ಅಮೆರಿಕ ಹಾಗೂ ದೈತ್ಯರ ನಡುವೆ ಸಿಕ್ಕಿ ಹಾನಿಗೊಳಗಾಗಬಾರದೆಂದು ಬಯಸುವ ಬಾಂಗ್ಲಾದೇಶ-ಮ್ಯಾನ್ಮಾರ್​ಗಳಿಗೂ ಇಂದು ಭಾರತ ಅತ್ಯಗತ್ಯ.ಭೂ-ರಾಜಕೀಯ, ಭೂ-ಸಾಮರಿಕ ಹಾಗೂ ಭೂ-ಆರ್ಥಿಕ ವಾಸ್ತವಗಳು ಏಕಾಏಕಿ ಬದಲಾಗುವ ಮರಳುಗಾಡಿನ ಮೇಲ್ಮೈನಂತೆ. ಇಂದು ಕಾಣುತ್ತಿರುವ ಅದು ಭಾರತಕ್ಕೆ 'ನ ಭೂತೋ ನ ಭವಿಷ್ಯತಿ' ಎನ್ನುವಷ್ಟು ಅನುಕೂಲಕರ. ಇಲ್ಲಿಯವರೆಗೆ ಅದನ್ನು ಪ್ರಸಕ್ತ ಭಾರತ ಸರ್ಕಾರ ಸರಿಯಾಗಿಯೇ ಅರ್ಥ ಮಾಡಿಕೊಂಡಿದೆ, ಸರಿಯಾದ ದಾರಿಯಲ್ಲೇ ಹೆಜ್ಜೆಯಿಡುತ್ತಿದೆ. ಪರಿಸ್ಥಿತಿ ಬದಲಾಗುವುದರೊಳಗೆ ಸಿಲಿಗುರಿ ಕಾರಿಡಾರ್​ನಲ್ಲಿ ನಮ್ಮ ಸ್ಥಿತಿಯನ್ನು ಬಲಪಡಿಸಿಕೊಳ್ಳಲು ಹಾಗೂ ಚಿತ್ತಗಾಂಗ್ (ಚಟ್ಟೋಗ್ರಾಂ) ಬಂದರಿನಿಂದ ಪೂವೋತ್ತರ ರಾಜ್ಯಗಳಿಗೆ ಸಂಪರ್ಕ ಸ್ಥಾಪಿಸಿಕೊಳ್ಳುವ ಸವಲತ್ತನ್ನು ಬಾಂಗ್ಲಾದೇಶದಿಂದಲೂ, ಕಾಚಿನ್ ದುರ್ಲಭ ಖನಿಜಗಳ ಮೇಲೆ ಭಾರತದ ಹಿಡಿತವನ್ನು ಇನ್ನಷ್ಟು ಬಲಪಡಿಸಿಕೊಳ್ಳುವ 'ಹಕ್ಕನ್ನು' ಮ್ಯಾನ್ಮಾರ್​ನಿಂದಲೂ ಪಡೆದುಕೊಳ್ಳುವುದರಲ್ಲಿ ಮತ್ತು ಈ ಯೋಜನೆಗಳಿಗೆ ಸಹಕಾರಿಯಾಗುವ ಅಥವಾ ಅಡ್ಡಿಯಾಗದ ಸ್ಥಿತಿಯಲ್ಲಿ ಅಮೆರಿಕ ಮತ್ತು ಚೀನಾವನ್ನು ಇರಿಸಿಕೊಳ್ಳುವುದರಲ್ಲಿ ಮೋದಿ ಸರ್ಕಾರ ಯಶಸ್ವಿಯಾದರೆ ಈ ವಲಯದ ಇತಿಹಾಸ ನಿರ್ಣಾಯಕ ತಿರುವನ್ನು ಕಾಣುತ್ತದೆ.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani