Dailyhunt Logo
  • Light mode
    Follow system
    Dark mode
    • Play Story
    • App Story
ಅವರಿಂದ ಆದಷ್ಟು ದೂರ ಇದ್ರೆ ನಿನಗೇ ಒಳ್ಳೆಯದು... ವೈಭವ್​ಗೆ ಮಹತ್ವದ ಸಲಹೆ ಕೊಟ್ಟ ಎಸ್​. ಶ್ರೀಶಾಂತ್! Vaibhav Sooryavanshi ​

ಅವರಿಂದ ಆದಷ್ಟು ದೂರ ಇದ್ರೆ ನಿನಗೇ ಒಳ್ಳೆಯದು... ವೈಭವ್​ಗೆ ಮಹತ್ವದ ಸಲಹೆ ಕೊಟ್ಟ ಎಸ್​. ಶ್ರೀಶಾಂತ್! Vaibhav Sooryavanshi ​

ವದೆಹಲಿ: ಇತ್ತೀಚೆಗೆ ಕ್ರಿಕೆಟ್ ಕ್ಷೇತ್ರದಲ್ಲಿ ತಮ್ಮ ಬಿರುಗಾಳಿಯ ಬ್ಯಾಟಿಂಗ್​ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ( Vaibhav Sooryavanshi ) ಅವರಿಗೆ ಟೀಮ್​ ಇಂಡಿಯಾದ ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.
ರಾತ್ರೋರಾತ್ರಿ ಸಿಕ್ಕಿರುವ ಈ ಯಶಸ್ಸಿನ ನಡುವೆ ವೃತ್ತಿಪರ ಮ್ಯಾನೇಜರ್‌ಗಳ ಮಾತುಗಳನ್ನು ಕೇಳಿ ದಿಕ್ಕು ತಪ್ಪದೇ, ಕೇವಲ ಕ್ರಿಕೆಟ್‌ನತ್ತ ಮಾತ್ರ ತಮ್ಮ ಗಮನವನ್ನು ಕೇಂದ್ರೀಕರಿಸುವಂತೆ ವೈಭವ್​ ಬಳಿ ಶ್ರೀಶಾಂತ್​ ಮನವಿ ಮಾಡಿದ್ದಾರೆ.
ಕೇವಲ 15 ವರ್ಷದ ವಂಡರ್​ ಕಿಡ್​ ವೈಭವ್, ಇತ್ತೀಚೆಗಷ್ಟೇ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕಾಗಿ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಭಾರತ ಪುರುಷರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಈ ಮೂಲಕ ಅವರು 1989ರಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ 16ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ 36 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಮಾಜಿ ಕ್ರಿಕೆಟಿಗ ಶ್ರೀಶಾಂತ್ ಅವರು ಯುವ ಆಟಗಾರ ವೈಭವ್ ಸೂರ್ಯವಂಶಿ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಅವರ ಯಶಸ್ಸಿನ ಹಿಂದೆ ಆಟಗಾರನ ಬದ್ಧತೆ, ಶಿಸ್ತು ಹಾಗೂ ಅವರ ಕುಟುಂಬದ ಮಹತ್ತರ ತ್ಯಾಗವಿದೆ ಎಂದು ಹೆಳಿದ್ದಾರೆ. ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡಿದ ಅವರು, ಸೂರ್ಯವಂಶಿಯನ್ನು ಎಷ್ಟು ಹೊಗಳಿದರೂ ಕಮ್ಮಿಯೇ, ಸಾಧಿಸಬೇಕೆಂದುಕೊಳ್ಳುವ ಇಂದಿನ ಯುವ ಪೀಳಿಗೆಗೆ ಅವರೊಂದು ಅತ್ಯುತ್ತಮ ಉದಾಹರಣೆಯಾಗಿದ್ದಾರೆ ಎಂದಿದ್ದಾರೆ. ಈ ಹಿಂದೆ ನಮಗೆ ಸಚಿನ್, ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ದಾರಿ ತೋರಿಸಿಕೊಟ್ಟಿದ್ದರು, ಆದರೆ, ವೈಭವ್ ಸೂರ್ಯವಂಶಿ ತೀರಾ ಸಣ್ಣ ವಯಸ್ಸಿನಲ್ಲೇ ತೋರಿರುವ ಬದ್ಧತೆ ಮತ್ತು ನಿರಂತರ ಪರಿಶ್ರಮ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಶ್ರೀಶಾಂತ್ ಕೊಂಡಾಡಿದ್ದಾರೆ.
ಮಾಜಿ ವೇಗದ ಬೌಲರ್ ಶ್ರೀಶಾಂತ್ ಅವರು ಕೋವಿಡ್-19 ಸಾಂಕ್ರಾಮಿಕದ ಕಠಿಣ ದಿನಗಳಲ್ಲಿಯೂ ವೈಭವ್ ಸೂರ್ಯವಂಶಿ ನಡೆಸುತ್ತಿದ್ದ ಕಠಿಣ ಅಭ್ಯಾಸದ ವಿಡಿಯೋಗಳನ್ನು ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ವೈಭವ್ ತನ್ನ ಮನೆಯ ಟೆರೇಸ್ ಮೇಲೆಯೇ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದ ದಿನಗಳನ್ನು ಸ್ಮರಿಸಿದ ಅವರು, ವೈಭವ್‌ನ ಈ ಸುದೀರ್ಘ ಪಯಣವನ್ನು ರೂಪಿಸುವಲ್ಲಿ ಅವರ ತಂದೆ ಮತ್ತು ತರಬೇತುದಾರರು ವಹಿಸಿದ ಪಾತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕ್ರಿಕೆಟ್‌ನಲ್ಲಿ ಸದಾ 'ಅವಕಾಶಗಳ' ಬಗ್ಗೆಯೇ ಮಾತನಾಡುವ ಈ ದಿನಗಳಲ್ಲಿ, ಯಾವುದೇ ಖಾತರಿ ಇಲ್ಲದಿದ್ದರೂ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಪ್ರಯಾಣಿಸಿ, ನಿರಂತರವಾಗಿ ಅಭ್ಯಾಸ ನಡೆಸಿ ಹಿಂತಿರುಗುತ್ತಿದ್ದ ಅವರ ಬದ್ಧತೆಗೆ ಶ್ರೀಶಾಂತ್ ಗೌರವ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಅದೇ ಎಸೆತ, ಅದೇ ತಪ್ಪು... ಬಯಲಾಯ್ತು ವಂಡರ್ ಕಿಡ್ ವೈಭವ್​ ಸೂರ್ಯವಂಶಿ ಬ್ಯಾಟಿಂಗ್​ ವೀಕ್‌ನೆಸ್! Vaibhav Sooryavanshi
ಪ್ರತಿದಿನ ಸುಮಾರು 750 ರಿಂದ 1000 ಚೆಂಡುಗಳನ್ನು ಎದುರಿಸುತ್ತಾ ಡ್ರಿಲ್ಸ್ ಮಾಡುತ್ತಿದ್ದ ವೈಭವ್, ತನಗೆ ವಿಶ್ರಾಂತಿ ಸಿಕ್ಕಾಗ ಒಳ್ಳೆಯ ಅನುಭವವಾಗುವುದಿಲ್ಲ ಎಂದು ಹೇಳಿರುವುದನ್ನು ಉಲ್ಲೇಖಿಸಿದ ಶ್ರೀಶಾಂತ್, ನಾನು ಈ ಮಗುವಿನಿಂದ ಕಲಿಯುತ್ತೇನೆ ಎಂದಿದ್ದಾರೆ. ಎಲ್ಲಾ ಶ್ರೇಷ್ಠ ಕ್ರಿಕೆಟಿಗರಿಗೆ ಗೌರವ ಸಲ್ಲಿಸುತ್ತಲೇ, ಈ ಚಿಕ್ಕ ವಯಸ್ಸಿನ ಹುಡುಗ ತೋರಿರುವ ಸಾಧನೆ ಅದ್ಭುತವಾಗಿದ್ದು, ಈಗಿನಿಂದಲೇ ಅವರ ಸುತ್ತ ಸಾಲು ಸಾಲು ಮ್ಯಾನೇಜರ್‌ಗಳು ಸುತ್ತುವರಿಯಬಹುದು, ಆದರೆ ದಯವಿಟ್ಟು ಅವನನ್ನು ಸದ್ಯಕ್ಕೆ ಅವನು ಹೇಗಿದ್ದಾನೋ ಹಾಗೆಯೇ ಮುಕ್ತವಾಗಿ ಬಿಟ್ಟುಬಿಡಿ ಎಂದು ಶ್ರೀಶಾಂತ್ ಮನವಿ ಮಾಡಿದ್ದಾರೆ.
ಕೊನೆಯದಾಗಿ, ವೈಭವ್ ಸೂರ್ಯವಂಶಿಗೆ ಒಂದು ಪ್ರಮುಖ ಕಿವಿಮಾತು ಹೇಳಿರುವ ಶ್ರೀಶಾಂತ್, ಸದಾ ಸರಳವಾಗಿರುವಂತೆ ಮತ್ತು ಮೈದಾನದ ಹೊರಗಿನ ವ್ಯವಹಾರಗಳನ್ನು ಕುಟುಂಬದವರಿಗೇ ಬಿಟ್ಟುಬಿಡಲು ಸಲಹೆ ನೀಡಿದ್ದಾರೆ. ವೈಭವ್, ನೀನೇನಾದರೂ ಇದನ್ನು ನೋಡುತ್ತಿದ್ದರೆ, ನನ್ನದೊಂದು ವಿನಂತಿ, ಈ ಪ್ರೊಫೆಷನಲ್ ಮ್ಯಾನೇಜರ್‌ಗಳನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು ಕೇವಲ ನಿನ್ನ ಆಟದ ಕಡೆಗೆ ಮಾತ್ರ ಗಮನ ಹರಿಸು, ಉಳಿದ ಎಲ್ಲಾ ವಿಷಯಗಳನ್ನು ನಿನ್ನ ತಂದೆ ಮತ್ತು ಕುಟುಂಬದ ಸದಸ್ಯರೇ ನಿಭಾಯಿಸುತ್ತಾರೆ, ಅವರಿಂದ ದೂರವಿರು ಎಂದು ಶ್ರೀಶಾಂತ್ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ, (ಏಜೆನ್ಸೀಸ್​).

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani