ಢಾಕಾ: ಬಾಂಗ್ಲಾದೇಶದ ನೌಕಾಲಿ ಎಂಬಲ್ಲಿ ಇಸ್ಕಾನ್ ದೇಗುಲದ ಮೇಲೆ 200ಕ್ಕೂ ಹೆಚ್ಚು ಉದ್ರಿಕ್ತರಿದ್ದ ಗುಂಪು ದಾಳಿ ನಡೆಸಿ ಒಬ್ಬ ಭಕ್ತನನ್ನು ದಾರುಣವಾಗಿ ಹತ್ಯೆ ಮಾಡಿದೆ. ದೇಗುಲವನ್ನು ಧ್ವಂಸ ಮಾಡಿದ್ದಾರೆ. ವಿಜಯ ದಶಮಿ ದಿನವಾದ ಶುಕ್ರವಾರವೇ ಈ ದಾಳಿ ನಡೆದಿದೆ.
ಮೃತ ಭಕ್ತನನ್ನು ಪಾರ್ಥದಾಸ್ ಎಂದು ಗುರುತಿಸಲಾಗಿದೆ. ಈತನ ಶವ ದೇವಸ್ಥಾನದ ಪುಷ್ಕರಣಿ ಪಕ್ಕದಲ್ಲೇ ಪತ್ತೆಯಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಇಸ್ಕಾನ್, ದುಷ್ಕರ್ವಿುಗಳ ವಿರುದ್ಧ ಬಾಂಗ್ಲಾ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಒಬ್ಬ ಭಕ್ತನನ್ನು ಹತ್ಯೆ ಮಾಡಲಾಗಿದೆ. ದೇವಾಲಯ ಬಹುತೇಕ ಹಾನಿಗೊಳಗಾಗಿದೆ. ಒಬ್ಬ ಭಕ್ತನ ಸ್ಥಿತಿ ಗಂಭೀರವಾಗಿದೆ. ಹಿಂದುಗಳ ಬದುಕಿಗೆ ಸುರಕ್ಷತೆಯನ್ನು ಮತ್ತು ನ್ಯಾಯವನ್ನು ಬಾಂಗ್ಲಾ ಸರ್ಕಾರ ಒದಗಿಸಬೇಕು ಎಂದು ಕೇಳಿ ಕೊಂಡಿದೆ. ಕುಮಿಲಾದಲ್ಲಿ ಕಳೆದ ವಾರ ದುರ್ಗಾಪೂಜೆ ಪೆಂಡಾಲ್ನಲ್ಲಿ ದುರ್ಗಾದೇವಿಯ ಮೊಣಕಾಲಿನಲ್ಲಿ ಕುರಾನ್ ಇರಿಸಿ ಅವಮಾನ ಮಾಡಲಾಗಿದೆ ಎಂಬ ವದಂತಿ ಬೆನ್ನಿಗೆ ಬಾಂಗ್ಲಾದೇಶದಲ್ಲಿ ಅನೇಕ ಹಿಂದು ದೇವಸ್ಥಾನಗಳ ಮೇಲೆ ದಾಳಿಗಳಾಗಿವೆ. ಕೊಮಿರಾ ಹಿಂಸಾಚಾರದ ಬೆನ್ನಿಗೆ ಚಾಂದಪುರದ ಹಾಜಿಗಂಗ್ಜಿ, ಚಿತ್ತಗಾಂಗ್ನ ಬನ್ಶುಕಾರಿ, ಬಜಾರ್ ಆಫ್ ಕಾಕ್ಸ್ನ ಪೆಕ್ವಾ ದೇವಸ್ಥಾನಗಳ ಮೇಲೆ ದಾಳಿ ನಡೆದಿತ್ತು. ಈ ಹಿಂಸಾಚಾರ ಭುಗಿಲೆದ್ದ ಕಾರಣ ಸರ್ಕಾರ ಕೂಡಲೇ 22 ಜಿಲ್ಲೆಗಳಲ್ಲಿ ಅರೆಸೇನಾ ಪಡೆಯನ್ನು ಭದ್ರತೆ ನಿಯೋಜಿಸಿದೆ. ಅಷ್ಟರಲ್ಲಿ ನಾಲ್ವರು ಹತ್ಯೆಗೀಡಾಗಿದ್ದು, ಹಲವರು ಗಾಯಗೊಂಡಿದ್ದರು ಎಂದು ಬಾಂಗ್ಲಾ ಮಾಧ್ಯಮಗಳು ವರದಿ ಮಾಡಿವೆ.
ಇಬ್ಬರ ಬಲಿ: ಬೇಗಂಗಂಜ್ನಲ್ಲಿ ಇತ್ತೀಚೆಗೆ ಸಂಭವಿಸಿದ ಕೋಮು ಹಿಂಸಾಚಾರದಲ್ಲಿ ಇಬ್ಬರು ಹಿಂದುಗಳು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಇದುವರೆಗೆ ಹಿಂಸಾಚಾರಕ್ಕೆ ಬಲಿಯಾದ ಹಿಂದುಗಳ ಸಂಖ್ಯೆ 6ಕ್ಕೆ ಏರಿದೆ. ಕನಿಷ್ಠ 150 ಹಿಂದುಗಳು ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ 90 ಜನರನ್ನು ಬಂಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

