ಕಲಬುರಗಿ: ಆರ್ಥಿಕ ಹೊರೆಯಿಂದ ಕುಸಿದಿರುವ ಗುಲ್ಬರ್ಗ ವಿಶ್ವವಿದ್ಯಾಲಯ ಇದೀಗ ಹೊರಗುತ್ತಿಗೆ ನೌಕರರ ಸೇವಾವಧಿ ಮುಕ್ತಾಯಗೊಳಿಸಿ ಗುರುವಾರ ಆದೇಶ ಹೊರಡಿಸಿದೆ. ಹೀಗಾಗಿ 10-15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಗುತ್ತಿಗೆ ನೌಕರರ ಬದುಕು ಬೀದಿಗೆ ಬಿದ್ದಿದ್ದು, ಸರ್ಕಾರ ಮಾನವೀಯ ಆಧಾರದಲ್ಲಿ ಸೂಕ್ತ ನೆಲೆ ಒದಗಿಸಲು ಚಿಂತನೆ ನಡೆಸಬೇಕಿದೆ.ಹೊರಗುತ್ತಿಗೆ ನೌಕರರ ಸೇವೆ ಬೆಂಗಳೂರಿನ ಮೆ.
ಜಿ.ಎ.ಡಿಜಿಟಲ್ ವೆಬ್ವರ್ಡ್ ಪೆವೇಟ್ ಲಿಮಿಟೆಡ್ ಏಜೆನ್ಸಿಯ ಗುತ್ತಿಗೆ ಅವಧಿ ಏ.30(ಗುರುವಾರ)ಕ್ಕೆ ಮುಗಿದಿದೆ. ಹೀಗಾಗಿ ಈ ಏಜೆನ್ಸಿ ಅಡಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ವಿವಿ ಮೇ 1ರಿಂದ ಸೇವೆಯಿಂದ ಮುಕ್ತಗೊಳಿಸಿದೆ.ಯಾವುದೇ ವಿಭಾಗ ಅಥವಾ ಕಚೇರಿಯಲ್ಲಿ ಈ ಏಜೆನ್ಸಿ ಮೂಲಕ ತಾತ್ಕಾಲಿಕ ಸಿಬ್ಬಂದಿ ಸೇವೆ ಪಡೆಯಕೂಡದು. ಹಾಜರಾತಿ ನಿರ್ವಹಣೆ ಮಾಡಕೂಡದು. ಯಾವುದೇ ಸಿಬ್ಬಂದಿ ಸೇವೆ ಪಡೆದಲ್ಲಿ ಸಂಭವನೀಯ ಸಮಸ್ಯೆಗಳಿಗೆ ಸಂಬಂಧಿಸಿದ ವಿಭಾಗ ಮತ್ತು ಕಚೇರಿ ಮುಖ್ಯಸ್ಥರೇ ಹೊಣೆಗಾರರು ಎಂಬ ಸ್ಪಷ್ಟ ಮತ್ತು ಖಡಕ್ ಸಂದೇಶ ನೀಡಿದೆ.ವಿವಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ 281 ನೌಕರರಿಗೆ ಮಾಸಿಕ 55&60 ಲಕ್ಷ ರೂ. ವೇತನ ಪಾವತಿ ಮಾಡಲಾಗುತ್ತಿತ್ತು. ಇದೀಗ ಸೇವೆಯಿಂದ ಮುಕ್ತಗೊಳಿಸಿದ್ದರಿಂದ ಗುತ್ತಿಗೆ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ.ಸರ್ಕಾರದ ಆದೇಶವಿಶ್ವವಿದ್ಯಾಲಯಗಳು ಪಿಂಚಣಿ ಬೇಡಿಕೆಗೆ ಅನುಗುಣ ತಮ್ಮ ಆಂತರಿಕ ಸಂಪನ್ಮೂಲದಲ್ಲಿ ಶೇಕಡವಾರು ಮೊತ್ತ ಪಿಂಚಣಿ ನಿಧಿಗೆ ಪ್ರತ್ಯೇಕವಾಗಿ ಠೇವಣಿ ಇರಿಸಬೇಕು. ಪಿಂಚಣಿ ಬಾಧ್ಯತೆ ಹೆಚ್ಚಿರುವ ಮತ್ತು ಆಂತರಿಕ ಸಂಪನ್ಮೂಲ ಗಣನೀಯ ಕಡಿಮೆಯಾಗಿರುವ ಹಳೆಯ ವಿವಿಗಳು ಖಾಲಿ ಹುದ್ದೆಗಳಿಗಿಂತ ಹೆಚ್ಚುವರಿಯಾಗಿ ನೇಮಿಸಿರುವ ನೌಕರರನ್ನು ತೆಗೆದುಹಾಕಿದಲ್ಲಿ ಮಾತ್ರ ಒಟ್ಟು ಪಿಂಚಣಿ ಕೋರಿಕೆಯಲ್ಲಿ ಶೇ.50 ಸರ್ಕಾರದಿಂದ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಹೇಳಿದೆ. ಸರ್ಕಾರದ ಸೂಚನೆಯಂತೆ ಕ್ರಮ ಕೈಗೊಳ್ಳದಿದ್ದರೆ ಆಡಳಿತಾತ್ಮಕ ಮತ್ತು ವೇತನ ವೆಚ್ಚ ತಗ್ಗಿಸದ ವಿವಿಗಳಿಗೆ ಪಿಂಚಣಿ ಅನುದಾನ ಕಡಿಮೆ ಮಾಡುವುದಾಗಿ ಸರ್ಕಾರ ಸ್ಪಷ್ಪವಾಗಿ ತಿಳಿಸಿದೆ..
ಮರು ಟೆಂಡರ್ಗೆ ಅವಕಾಶಔಟ್ಸೋರ್ಸ್ ಏಜೆನ್ಸಿ ಟೆಂಡರ್ ಅವಧಿ ಪೂರ್ಣಗೊಂಡಿದ್ದರಿಂದ ಗುತ್ತಿಗೆ ನೌಕರರನ್ನು ಸೇವೆಯಲ್ಲಿ ಮುಂದುವರಿಸಲು ಬರುವುದಿಲ್ಲ. ಹೀಗಾಗಿ ಮರು ಟೆಂಡರ್ ಮೂಲಕ ನೇಮಕ ಪ್ರಕ್ರಿಯೆ ನಡೆಯಲಿದೆ. ಈಗಿರುವ ಗುತ್ತಿಗೆ ನೌಕರರು ಟೆಂಡರ್ ಪಡೆದ ಏಜೆನ್ಸಿ ಮೂಲಕ ಮರಳಿ ಬರಬಹುದು. ಈ ನೌಕರರನ್ನು ತೆಗೆದು ಹಾಕುವ ಉದ್ದೇಶ ನಮ್ಮದಲ್ಲ. ಸರ್ಕಾರದ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಗುಲ್ಬರ್ಗ ವಿವಿ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ತಿಳಿಸಿದ್ದಾರೆ.ಅನಿರ್ದಿಷ್ಟ ಧರಣಿ ಶುರುಸಂಚಿತ ವೇತನ ಜಾರಿಗೊಳಿಸಿ ನೇರ ಪಾವತಿ ಮಾಡುವಂತೆ ಆಗ್ರಹಿಸಿ ಗುಲ್ಬರ್ಗ ವಿವಿ ಗುತ್ತಿಗೆ ನೌಕರರ ಕಲ್ಯಾಣ ಸಂದ ಪದಾಧಿಕಾರಿಗಳು, ಕಾರ್ಯಕರ್ತರು ಕಾರ್ಯಸೌಧ ಎದುರು ಬುಧವಾರ ಅರ್ನಿದಿಷ್ಟ ಧರಣಿ ಶುರು ಮಾಡಿದ್ದಾರೆ. ಕಾಯಂ ಸ್ವರೂಪದ ಎಲ್ಲ ಕೆಲಸಗಳನ್ನು ಗುತ್ತಿಗೆ ನೌಕರರು ಮಾಡುತ್ತಿದ್ದಾರೆ. ವಿವಿಯಲ್ಲಿ ಬಹುತೇಕ ಕಾಯಂ ನೌಕರರು ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಇವರ ಕೆಲಸದ ಭಾರವನ್ನು ನಾವು ಹೊರುತ್ತಿದ್ದೇವೆ. ಉದ್ಯೋಗ ಭದ್ರತೆ ಇಲ್ಲದೆ 15&20 ವರ್ಷಗಳಿಂದ ಅತ್ಯಂತ ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದರೂ ಸೂಕ್ತ ನ್ಯಾಯ ದೊರೆಯುತ್ತಿಲ್ಲ ಎಂದು ಗೋಳು ತೋಡಿಕೊಂಡಿದ್ದಾರೆ. ಕಾರ್ಮಿಕ ಕಾಯ್ದೆ ಅನುಸಾರ ವೇತನ ಪ್ರತಿ ತಿಂಗಳು 7ರೊಳಗೆ ಕಡ್ಡಾಯ ಪಾವತಿಸಬೇಕು. ಕಾರ್ಮಿಕ ಇಲಾಖೆ ಜಾರಿಗೊಳಿಸಿರುವ 2025&26 ಮತ್ತು 2026&27ರ ತುಟ್ಟಿಭತ್ಯೆ ಜತೆ ಬಾಕಿ ವೇತನ ಪಾವತಿಸಬೇಕು ಎಂಬುದು ಗುತ್ತಿಗೆ ನೌಕರರ ಆಗ್ರಹ.
"
ವಿವಿಯಲ್ಲಿ ಧರಣಿ ನಡೆಸುವ ಗುತ್ತಿಗೆ ನೌಕರರೊಂದಿಗೆ ಚರ್ಚಿಸಲಾಗಿದೆ. ಇವರನ್ನು ತೆಗೆಯುವ ಉದ್ದೇಶವಿಲ್ಲ. ಏಜೆನ್ಸಿ ಟೆಂಡರ್ ಅವಧಿ ಮುಗಿದಿದ್ದರಿಂದ ಕಾನೂನು ಅಡಿ ಈ ಕ್ರಮ ಕೈಗೊಳ್ಳಲಾಗಿದೆ. ಮರು ಟೆಂಡರ್ ಮಾಡುವುದು ನಿರಂತರ ಪ್ರಕ್ರಿಯೆ. ಆ ಮೂಲಕ ಏಜೆನ್ಸಿ ಇವರ ಸೇವೆ ಬಳಸಿಕೊಳ್ಳಬಹುದು.
- > ಪ್ರೊ.ಶಶಿಕಾಂತ ಉಡಿಕೇರಿ ಕುಲಪತಿ, ಗುಲ್ಬರ್ಗ ವಿವಿ"
ಮರು ಟೆಂಡರ್ ಕರೆದು ಏಜೆನ್ಸಿಗೆ ನೀಡುವ ಬದಲು ವಿಶ್ವವಿದ್ಯಾಲಯವೇ ನೇರವಾಗಿ ಗುತ್ತಿಗೆ ನೌಕರರಿಗೆ ವೇತನ ನೀಡಬೇಕು. ಇದರಿಂದ ವಿವಿಗೂ ಉಳಿತಾಯ ಆಗಲಿದೆ. ನಮ್ಮ ಬೇಡಿಕೆಯನ್ನು ವಿವಿ ಆಡಳಿತ ಒಪ್ಪುತ್ತಿಲ್ಲ. ಹೀಗಾಗಿ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ.
- > ವಿಜಯ ಕೆಂಗಲ್ ಗೌರವಾಧ್ಯಕ್ಷ, ಗುಲ್ಬರ್ಗ ವಿವಿ ಗುತ್ತಿಗೆ ನೌಕರರ ಕಲ್ಯಾಣ ಸಂಘಇನ್ನಷ್ಟು ಓದಿ

