Wednesday, 02 Dec, 11.50 pm ವಿಜಯವಾಣಿ

ಮುಖಪುಟ
ಬಂತು ಮೊದಲ ಲಸಿಕೆ; ಇನ್ನೊಂದು ವಾರದಲ್ಲಿ ಜನಬಳಕೆಗೆ ಲಭ್ಯ ಫೈಜರ್ ಮದ್ದು

ಲಂಡನ್: ಮನುಕುಲವನ್ನು ಕಾಡುತ್ತಿರುವ ಕರೊನಾ ಮಹಾಮಾರಿಗೆ ಕಡಿವಾಣ ಹಾಕುವುದಕ್ಕೆ ಎಲ್ಲರೂ ಲಸಿಕೆಗಾಗಿ ಎದುರು ನೋಡುತ್ತಿರುವಂತೆ, ಬ್ರಿಟನ್​ನಲ್ಲಿ ಲಸಿಕೆ ಜನಬಳಕೆಗೆ ಮುಕ್ತವಾಗಿದೆ. ಅಮೆರಿಕದ ಫೈಜರ್ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್ -19 ಲಸಿಕೆಗೆ ಅನುಮೋದನೆ ನೀಡಿದ್ದು, ತೀರಾ ಅಗತ್ಯವಿರುವ ತನ್ನ ಪ್ರಜೆಗಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಮುಂದಿನ ವಾರವೇ ಆರಂಭಿಸುವುದಾಗಿ ಬ್ರಿಟನ್ ಬುಧವಾರ ಘೋಷಿಸಿದೆ.

ಕರೊನಾ ಲಸಿಕೆ ಅಭಿವೃದ್ಧಿ ವಿಚಾರದಲ್ಲಿ ಅಮೆರಿಕ ಮತ್ತು ಯುರೋಪನ್ನು ಹಿಂದಿಕ್ಕಿರುವ ಬ್ರಿಟನ್, ಕರೊನಾ ಲಸಿಕೆಗೆ ಅಧಿಕೃತ ಸಮ್ಮತಿ ನೀಡಿದ ಮೊದಲ ಪಾಶ್ಚಿಮಾತ್ಯ ದೇಶವೆನಿಸಿದೆ. ಫೈಜರ್ ಲಸಿಕೆಗೆ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿರುವುದು ಜಾಗತಿಕ ಜಯವಾಗಿದ್ದು, ಕತ್ತಲ ನಡುವೆ ಮೂಡಿದ ಆಶಾವಾದದ ಬೆಳಕಿನ ಕಿರಣವಾಗಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ವರ್ಣಿಸಿದ್ದಾರೆ. ಕೋವಿಡ್-19 ಮಹಾವ್ಯಾಧಿಗೆ ಜಾಗತಿಕವಾಗಿ ಈವರೆಗೆ 15 ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಆರ್ಥಿಕತೆಯೂ ಏರುಪೇರಾಗಿದೆ. ಬ್ರಿಟನ್​ನ ಔಷಧಗಳು ಮತ್ತು ಆರೋಗ್ಯರಕ್ಷಣೆ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಎಚ್​ಆರ್​ಎ), ಫೈಜರ್-ಬಯೋಎನ್​ಟೆಕ್ ಲಸಿಕೆ ಬಳಸಲು ತುರ್ತು ಅನುಮತಿ ನೀಡಿದೆ. ಈ ಲಸಿಕೆ ದಾಖಲೆಯ ಕೇವಲ 23 ದಿನಗಳಲ್ಲಿ ಕರೊನಾ ವೈರಸ್ ವಿರುದ್ಧ ಪರಿಣಾಮ ಬೀರಿರುವುದಾಗಿ ಫೈಜರ್-ಬಯೋಎನ್​ಟೆಕ್ ಘೋಷಿಸಿವೆ. ಮಾನವರ ಮೇಲಿನ ಪ್ರಯೋಗದ ಫಲಿತಾಂಶದ ದತ್ತಾಂಶವನ್ನು ಕಂಪನಿ ಪ್ರಕಟಿಸಿದೆ. ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ ಸಮ್ಮತಿಸಿರುವುದು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಐತಿಹಾಸಿಕ ಕ್ಷಣ ಎಂದು ಫೈಜರ್ ಹೇಳಿದೆ. ಇದಕ್ಕೆ 800 ರೂ.ಗಿಂತ ಕಡಿಮೆ ದರ ಇರುವ ಸಾಧ್ಯತೆ ಇದ್ದು, 2 ಕೋಟಿ ಜನರಿಗಾಗುವಷ್ಟು ಲಸಿಕೆಗೆ ಬ್ರಿಟನ್ ಸರ್ಕಾರ ಬೇಡಿಕೆ ಇಟ್ಟಿದೆ.

ಕೋವ್ಯಾಕ್ಸಿನ್ ಪರೀಕ್ಷೆ ಆರಂಭ: ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಮಾನವರ ಮೇಲಿನ ಪರೀಕ್ಷೆ ಪ್ರಕ್ರಿಯೆಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಶ್ ಧನಕರ್ ಬುಧವಾರ ಚಾಲನೆ ನೀಡಿದರು. ಕೋಲ್ಕತದಲ್ಲಿರುವ ಐಸಿಎಂಆರ್-ಎನ್​ಐಸಿಇಡಿಯಲ್ಲಿ (ಕಾಲರಾ ಮತ್ತು ಕರುಳುಸಂಬಂಧಿ ರೋಗಗಳ ರಾಷ್ಟ್ರೀಯ ಸಂಸ್ಥೆ) ಉದ್ಘಾಟನೆ ನೆರವೇರಿಸಿದರು.

3ನೇ ಬಾರಿ ಸೋಂಕು!: ಕೋವಿಡ್ -19ನಿಂದ ಎರಡು ಬಾರಿ ಗುಣಮುಖರಾಗಿದ್ದ ಇಟಲಿಯ 101 ವರ್ಷದ ಮಹಿಳೆ ಮಾರಿಯಾ ಒರ್ಸಿಂಘರ್​ಗೆ ಮತ್ತೆ ಸೋಂಕು ತಗಲಿದೆ. 20ನೇ ಶತಮಾನದ ಸ್ಪಾನಿಶ್ ಫ್ಲೂ ಮತ್ತು ದ್ವಿತೀಯ ಮಹಾಯುದ್ಧವನ್ನೂ ಕಂಡಿದ್ದ ಮಾರಿಯಾ ಮತ್ತೆ ಕರೊನಾ ಸೋಂಕಿನಿಂದ ಬಳಲುತ್ತಿದ್ದಾರೆಂದು ಅವರ ಪುತ್ರಿ ಕ್ಲಾರಾ ಹೇಳಿದ್ದಾರೆ.

ಮುಂದೇನು?: ಸಂಬಂಧಿತ ಪ್ರಾಧಿಕಾರಗಳಿಂದ ಲಸಿಕೆ ಉತ್ಪಾದನೆ ಹಾಗೂ ಸಾರ್ವತ್ರಿಕ ಬಳಕೆಗೆ ಅನುಮತಿ ಪಡೆಯಬೇಕಾಗುತ್ತದೆ. ಬಳಿಕವಷ್ಟೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.

ಭಾರತಕ್ಕೆ ಸದ್ಯಕ್ಕಿಲ್ಲ: ಫೈಜರ್ ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸುವುದು ಅಗತ್ಯವಾದ್ದರಿಂದ ಸದ್ಯಕ್ಕೆ ಇದು ಭಾರತಕ್ಕೆ ಸಿಗುವುದಿಲ್ಲ. ಲಸಿಕೆಗೆ ಶೀತ ವಾತಾವರಣದ ಅಗತ್ಯ ಬೇಕಿಲ್ಲ ಎಂಬ ಕಾರಣಕ್ಕೆ ಭಾರತ ಇತರ ದೇಶಗಳ ಸಹಯೋಗದಲ್ಲಿ ಇತರ ಲಸಿಕೆಗಳತ್ತ ಚಿತ್ತ ಹರಿಸಿದೆ. ಅದಾಗ್ಯೂ ಮುಂದಿನ ದಿನಗಳಲ್ಲಿ ಫೈಜರ್ ಖರೀದಿಸುವ ಕುರಿತು ಸರ್ಕಾರ ಪರಿಶೀಲಿಸುತ್ತಿದೆ.

ಇದೊಂದು ಅದ್ಭುತ ಸಂಗತಿ. ಮುಂದಿನ ವಾರದಿಂದ ಬ್ರಿಟನ್​ನಾದ್ಯಂತ ಲಸಿಕೆ ಒದಗಿಸಲಾಗುತ್ತದೆ. ಲಸಿಕೆಯು ನೀಡುವ ರಕ್ಷಣೆಯೇ ಅಂತಿಮವಾಗಿ ನಮ್ಮ ಜೀವನವನ್ನು ಮರಳಿ ಪಡೆಯಲು ಹಾಗೂ ಆರ್ಥಿಕತೆ ಸಹಜ ಸ್ಥಿತಿಗೆ ಮರಳಲು ನೆರವಾಗಲಿದೆ.

| ಬೋರಿಸ್ ಜಾನ್ಸಸ್ ಬ್ರಿಟನ್ ಪ್ರಧಾನಿ

ಹೊಸ ಕರೊನಾ ವೈರಸ್ ಮಾರಿ ಚೀನಾದ ವುಹಾನ್​ನಲ್ಲಿ ಮೊದಲಿಗೆ ಕಾಣಿಸಿಕೊಂಡು ಒಂದು ವರ್ಷ ಕಳೆದ ಸಂದರ್ಭದಲ್ಲಿ ಅದರ ನಿಯಂತ್ರಣಕ್ಕೆ ಬೇಕಾದ ಲಸಿಕೆ ಬಳಕೆಗೆ ಸಮ್ಮತಿ ಲಭ್ಯವಾಗಿದೆ. ಇದು ವಿಜ್ಞಾನಕ್ಕೆ ಸಂದ ಜಯವಾಗಿದೆ.

| ಆಲ್ಬರ್ಟ್ ಬೌರ್ಲಾ ಫೈಜರ್ ಮುಖ್ಯಸ್ಥ

ಫೈಜರ್ ವಿಶೇಷತೆ

  • ಪ್ರಾಯೋಗಿಕ ಪರೀಕ್ಷೆಯಲ್ಲಿ ಶೇ.95 ಪರಿಣಾಮಕಾರಿ ಎಂಬುದು ಸಾಬೀತಾಗಿದೆ.
  • 16 ವರ್ಷ ಮೇಲ್ಪಟ್ಟವರಿಗೆ ಮಾತ್ರ ಫೈಜರ್ ಲಸಿಕೆ ನೀಡುವ ಸಾಧ್ಯತೆ ಇದೆ, ಮೊದಲ ಇಂಜೆಕ್ಷನ್ ನೀಡಿದ 28 ದಿನಗಳ ಬಳಿಕ ರೋಗ ನಿರೋಧಕ ಶಕ್ತಿ ಹೆಚ್ಚಳ.
  • ಕೆಲವೊಂದು ಸೌಮ್ಯವಾದ ಅಡ್ಡಪರಿಣಾಮ ಬಿಟ್ಟು ಬೇರೆ ತೊಂದರೆ ಇಲ್ಲ, 65 ವರ್ಷ ಮೇಲ್ಪಟ್ಟವರಲ್ಲೂ ಶೇ.95 ಚೇತರಿಕೆ ಕಂಡುಬಂದಿದೆ.
  • ಲಕ್ಷಣರಹಿತ ಸೋಂಕಿತರಿಗೂ ಲಸಿಕೆ ಪರಿಣಾಮಕಾರಿ.
  • ಅಮೆರಿಕದ ಆಹಾರ, ಔಷಧ ಇಲಾಖೆಯ (ಎಫ್​ಡಿಎ)ತುರ್ತು ಬಳಕೆಯ ಸುರಕ್ಷತಾ ಮಾನದಂಡವನ್ನು ಪೂರೈಸಲಾಗಿದೆ.

ರಾಷ್ಟ್ರಗಳ ಸ್ಥಿತಿ

ಭಾರತ ತ್ವರಿತ: ಸದ್ಯ ದೇಶದ 3 ಕಡೆ ಕರೊನಾ ಲಸಿಕೆ ಸಿದ್ಧವಾಗುತ್ತಿದೆ. ಜೈಡುಸ್ ಬಯೋಟೆಕ್​ನ ಜೈಕೋವಿಡ್ ಲಸಿಕೆ, ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಹಾಗೂ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಒಳಪಟ್ಟಿವೆ. ಈ ಪೈಕಿ ಕೋವಿಶೀಲ್ಡ್ ಶೇ.90, ಕೋವ್ಯಾಕ್ಸಿನ್ ಶೇ.95 ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. 2021ರ ಫೆಬ್ರವರಿ ವೇಳೆಗೆ ಲಸಿಕೆ ಸಿಗುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ.

ಚೀನಾದಲ್ಲಿ ಚುಚ್ಚುಮದ್ದು: ಕರೊನಾ ಸೃಷ್ಟಿಕರ್ತ ಎಂದೇ ಅಪವಾದಕ್ಕೀಡಾಗಿರುವ ಚೀನಾ ಮೂರು ಪ್ರಯೋಗಾತ್ಮಕ ಲಸಿಕೆಗಳಿಗೆ ಅನುಮತಿ ಕೊಟ್ಟಿದೆ. ಜುಲೈನಿಂದೀಚೆಗೆ ಸುಮಾರು ಹತ್ತು ಲಕ್ಷ ಜನರಿಗೆ ಚುಚ್ಚುಮದ್ದಿನ ಮೂಲಕ ಲಸಿಕೆಯನ್ನು ನೀಡಿದೆ.

ರಷ್ಯಾ ಪ್ರಯೋಗ: ಸ್ಪುಟ್ನಿಕ್ ಲಸಿಕೆಗೆ ಆಗಸ್ಟ್​ನಲ್ಲಿ ಅನುಮೋದನೆ ಸಿಕ್ಕ ನಂತರ ರಷ್ಯಾ ತನ್ನ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುತ್ತಿದೆ.

ರಾಜ್ಯದಲ್ಲಿ 3ನೇ ಹಂತದ ಪರೀಕ್ಷೆ

ಬೆಂಗಳೂರು: ಕರೊನಾ ಲಸಿಕೆ ಕೋವ್ಯಾಕ್ಸಿನ್​ನ 3ನೇ ಹಂತದ ಪ್ರಾಯೋಗಿಕ ಪರೀಕ್ಷೆಗೆ ಬುಧವಾರ ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿದೆ. ರಾಜಧಾನಿಯ ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪ್ರಯೋಗ ಆರಂಭಗೊಂಡಿದೆ. ರಾಜ್ಯದಲ್ಲಿ 1600ರಿಂದ 1800 ಜನರಿಗೆ ಪ್ರಾಯೋಗಿಕ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಬೆಂಗಳೂರು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾದೇಶಿಕ ಲಸಿಕೆ ಕೇಂದ್ರ ಆರಂಭಿಸಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top