Dailyhunt Logo
  • Light mode
    Follow system
    Dark mode
    • Play Story
    • App Story
ಭಕ್ತರ ನಂಬಿಕೆಗೆ ಘಾಸಿಯಾಗದಿರಲಿ...

ಭಕ್ತರ ನಂಬಿಕೆಗೆ ಘಾಸಿಯಾಗದಿರಲಿ...

'ಅಯ್ಯೋ ರಾಮಾ... ಇದು ನಿಜವಾ... ನಂಬಲಿಕ್ಕೇ ಆಗುತ್ತಿಲ್ಲ...'- ಅಯೋಧ್ಯೆ ರಾಮ ಮಂದಿರದಲ್ಲಿ ದೇಣಿಗೆ ಹಣ ಲೂಟಿ ಹೊಡೆಯಲಾಗಿದೆ ಎಂಬ ಸುದ್ದಿ ಕೇಳಿದಾಗ ಬಹಳ ಜನರಿಂದ ಬಂದ ಉದ್ಗಾರ ಇದು. ಇಂಥದೊಂದು ಅನಿಸಿಕೆ ಸಹಜವೇ ಎನ್ನಿ. ಮರ್ಯಾದಾಪುರುಷೋತ್ತಮ ಶ್ರೀರಾಮನ ಜನ್ಮಸ್ಥಳದಲ್ಲಿಯೇ ಮಂದಿರ ಬೇಕು ಎಂಬುದು ಆಸ್ತಿಕ ಜನರ ಶತಮಾನಗಳ ಕನಸಾಗಿತ್ತು.
ಅದನ್ನು ಸಾಕಾರಗೊಳಿಸಲು ನಡೆದ ಹೋರಾಟಗಳು ಹಲವು. ಈ ದೀರ್ಘ ಹೋರಾಟ, ಪ್ರಯತ್ನದಲ್ಲಿ ಎಷ್ಟೋ ಜನರ ಪ್ರಾಣಾರ್ಪಣೆಯೂ ಆಯಿತು. ವಿಷಯ ವಿವಿಧ ಹಂತಗಳಲ್ಲಿ ನ್ಯಾಯಾಲಯಗಳ ಮೆಟ್ಟಿಲೇರಿತು. ಅಂತೂ, ಕೊನೆಗೆ ಭವ್ಯ ರಾಮಮಂದಿರ ನಿರ್ವಣಗೊಂಡಿತು. ಬಾಲರಾಮನ ಚೆಂದದ ಮೂರ್ತಿ ಪ್ರತಿಷ್ಠಾಪನೆಗೊಂಡು ಭಕ್ತರ ಸಂಭ್ರಮ ಹೆಚ್ಚಿತು. 2024ರ ಜನವರಿಯಲ್ಲಿ ತೆರೆದುಕೊಂಡ ರಾಮಮಂದಿರಕ್ಕೆ ಅದೇ ವರ್ಷ ಸುಮಾರು 1.60 ಕೋಟಿ ಭಕ್ತರು ಭೇಟಿ ನೀಡಿದ್ದರು ಎಂದರೆ ಅಲ್ಲಿನ ಭಕ್ತಸಂದಣಿಯನ್ನು ಊಹಿಸಬಹುದು. ಪ್ರವಾಸಿಗರ ಆಕರ್ಷಣೆಯ ತಾಣವಾದ ತಾಜ್​ವುಹಲ್​ಗಿಂತ ಹೆಚ್ಚಿನ ಪ್ರಮಾಣದಲ್ಲಿ ಜನರು ಅಯೋಧ್ಯೆಯತ್ತ ತೆರಳುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ಇಂಥ ಶ್ರದ್ಧಾಕೇಂದ್ರದಲ್ಲಿ ದೇಣಿಗೆ ಹಣದಲ್ಲಿ ಹೈಗೈ ಆಗಿದೆ ಎಂದರೆ ನಂಬಲು ಕಷ್ಟವೇ.

ಮಾಧ್ಯಮ ವರದಿಗಳ ಪ್ರಕಾರ, ರಾಮಮಂದಿರದಲ್ಲಿ ದೇಣಿಗೆ ಕಳವು ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು (ಎಸ್​ಐಟಿ) ಪ್ರಾಥಮಿಕ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ದೇಣಿಗೆ ಹಣ ಎಣಿಕೆಗೆ ಟ್ರಸ್ಟ್ ನೇಮಕ ಮಾಡಿಕೊಂಡಿದ್ದ ಅವಿನಾಶ್ ಶುಕ್ಲಾ ಎಂಬಾತನನ್ನು ಮುಖ್ಯ ಆರೋಪಿ ಎಂದು ಹೆಸರಿಸಿದೆ. ಈ ಪ್ರಕರಣ ಕುರಿತು ಮಾಧ್ಯಮಗಳಲ್ಲಿ ಮೂಲಗಳನ್ನು ಆಧರಿಸಿ ನಾನಾ ಬಗೆಯ ವರದಿಗಳು ಬರುತ್ತಿದ್ದು, ಎಸ್​ಐಟಿ ಅಂತಿಮ ವರದಿಯನ್ನು ಸಲ್ಲಿಸಿದ ಮೇಲೆ, ಅದು ಅಧಿಕೃತವಾಗಿ ಬಹಿರಂಗವಾದ ಮೇಲೆ ಪೂರ್ಣ ವಿವರ ಗೊತ್ತಾಗಬೇಕಿದೆ. ಅದೇ ಹೊತ್ತಿಗೆ, ಭಕ್ತರು ದೇಣಿಗೆಯಾಗಿ ನೀಡಿದ ಬೆಳ್ಳಿ ಮತ್ತು ಬಂಗಾರದ ಆಭರಣಗಳು ಸುರಕ್ಷಿತವಾಗಿವೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ. ಅಪಾರ ಪ್ರಮಾಣದಲ್ಲಿ ದೇಣಿಗೆ ಹರಿದು ಬರುವುದು ನಿರೀಕ್ಷಿತವೇ ಆಗಿದ್ದಾಗ ಪಾರದರ್ಶಕತೆ ನಿಟ್ಟಿನಲ್ಲಿ ಟ್ರಸ್ಟ್​ನವರು ಶುರುವಲ್ಲೇ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂಬುದು ಜನರ ಭಾವನೆ. ದೇಶ-ವಿದೇಶಗಳ ಭಕ್ತರು ನಿತ್ಯವೂ ಅಲ್ಲಿಗೆ ಬರುತ್ತಿರುವುದರಿಂದಾಗಿ, ಅಲ್ಲಿ ನಡೆಯುವ ಸಣ್ಣ ವಿದ್ಯಮಾನವೂ ಹೊರಜಗತ್ತಿನ ಗಮನ ಸೆಳೆಯುತ್ತದೆ ಎಂಬುದು ಆಡಳಿತ ಹೊಣೆ ಹೊತ್ತವರ ಗಮನದಲ್ಲಿರಬೇಕು. ಈಚೆಗೆ ಟ್ರಸ್ಟ್ ಸಭೆ ನಡೆದಿದ್ದು ದೇಣಿಗೆ ಹಣ ಎಣಿಕೆಯೂ ಸೇರಿದಂತೆ ಆಡಳಿತ ವ್ಯವಸ್ಥೆಯಲ್ಲಿ ಕೆಲವು ಹೊಸ ಹೆಜ್ಜೆ ಇರಿಸಲು ನಿರ್ಧಾರ ಮಾಡಲಾಗಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ನೇಮಕ ಇವುಗಳಲ್ಲಿ ಒಂದು. ಈ ಮೂಲಕ ವೃತ್ತಿಪರತೆ ಸ್ಪರ್ಶ ನೀಡುವ ಆಲೋಚನೆ ಒಡಮೂಡಿದೆ.

'ರಾಮಮಂದಿರದಲ್ಲಿ ಆಗಿದ್ದು ಕಳ್ಳತನ. ಹಣಕಾಸಿನ ವಿಷಯ ನೋಡಿಕೊಳ್ಳುತ್ತಿದ್ದ ಕೆಳಹಂತದ ಸಿಬ್ಬಂದಿಯಿಂದ ಆದದ್ದು. ಉನ್ನತ ಹಂತದವರು ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿದ್ದರೆ ಅದು ಭ್ರಷ್ಟಾಚಾರ ಎನಿಸಿಕೊಳ್ಳುತ್ತಿತ್ತು. ಆದರೆ ಇಲ್ಲಿ ಹಾಗಾಗಿಲ್ಲ. ದೇಣಿಗೆ ಕಳವು ಬೆಳಕಿಗೆ ಬಂದಾಗ ಕಠಿಣ ಕ್ರಮ ಕೈಗೊಂಡರೇ ಹೊರತು ಅದನ್ನು ಮುಚ್ಚಿಹಾಕುವ ಸಾಂಸ್ಥಿಕ ಯತ್ನ ನಡೆಯಲಿಲ್ಲ. ಜೂನ್ 4ರಂದು ಮಂದಿರದ ಶೌಚಗೃಹದಲ್ಲಿ ಎರಡು ಲಕ್ಷ ರೂ. ನಗದು ಪತ್ತೆಯಾದ ತಕ್ಷಣ ಟ್ರಸ್ಟ್ ಸಿಸಿಟಿವಿ ಪರಿಶೀಲನೆ ನಡೆಸಿ, ಪ್ರಕರಣದಲ್ಲಿ ಪೊಲೀಸ್ ಪ್ರವೇಶವಾಗುವ ಮುನ್ನವೇ ಕ್ರಮಕ್ಕೆ ಮುಂದಾಯಿತು. ಅದಾದ ಆರು ದಿನಗಳ ನಂತರ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತು' ಎಂದು ಹಿರಿಯ ಪತ್ರಕರ್ತ ಎಸ್.ಗುರುಮೂರ್ತಿ ಹೇಳಿದ್ದಾರೆ. ಎಸ್​ಐಟಿ ತ್ವರಿತವಾಗಿ ತನಿಖೆ ನಡೆಸಿ ಜೂನ್ 26ರ ಹೊತ್ತಿಗೆ ಎಂಟು ಜನರನ್ನು ಬಂಧಿಸಿತು. ನೈತಿಕ ಹೊಣೆಹೊತ್ತು ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅದೇ ದಿನ ರಾಜೀನಾಮೆ ನೀಡಿದರು. 'ಚಂಪತ್ ರಾಯ್ ಪ್ರಾಮಾಣಿಕರು. ಈ ಪ್ರಕರಣದಲ್ಲಿ ಅವರನ್ನು ವಿವಾದಕ್ಕೆಳೆಯುವುದು ಅನಗತ್ಯ' ಎಂದು ಕೆಲವರು ಪ್ರತಿಪಾದಿಸುತ್ತಾರೆ.

ಇದೇನೇ ಇದ್ದರೂ, ಈ ವಿಷಯ ರಾಜಕೀಯ ವಿವಾದದ ಸ್ವರೂಪ ಪಡೆದಿದೆ.

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ವಿಚಾರ ಮತ್ತಷ್ಟು ಕಾವೇರಿಸಿದೆ. ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ಇದನ್ನು ಅಸ್ತ್ರವಾಗಿ ಕೈಗೆತ್ತಿಕೊಂಡಿವೆ. ಮಂದಿರ ಆಂದೋಲನದಿಂದಾಗಿ ಬಿಜೆಪಿಗೆ ಭರ್ಜರಿ ಫಸಲು ಸಿಕ್ಕಿದ್ದು ಗೊತ್ತಿರುವ ಸಂಗತಿ. ಯೋಗಿ ಆದಿತ್ಯನಾಥ ಅವರು ಸತತ ಎರಡು ಅವಧಿಯಿಂದ ರಾಜ್ಯದ ಚುಕ್ಕಾಣಿ ಹಿಡಿದಿದ್ದು ಹ್ಯಾಟ್ರಿಕ್ ಸಾಧನೆಯ ಹುಮ್ಮಸ್ಸಿನಲ್ಲಿದ್ದಾರೆ. ಚುನಾವಣೆ ಮೇಲೆ ಈ ವಿಷಯ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಯೋಗಿ ಆದಿತ್ಯನಾಥ ಮುತುವರ್ಜಿ ವಹಿಸಿದ್ದು ಗೊತ್ತೇ ಇದೆ.

ಹೆಚ್ಚಿದ ಭಕ್ತಸಂದಣಿ: ಆಧ್ಯಾತ್ಮಿಕ ಪ್ರವಾಸೋದ್ಯಮ ಈಚಿನ ವರ್ಷಗಳಲ್ಲಿ ಅಗಾಧವಾಗಿ ಬೆಳೆಯುತ್ತಿದ್ದು 2024ರಲ್ಲಿ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಆದಾಯ ಈ ವಲಯದಲ್ಲಿ ಆಗಿದೆ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿದೆ. 2030ರ ವೇಳೆಗೆ ಇದು ದುಪ್ಪಟ್ಟಾಗುವ ನಿರೀಕ್ಷೆ ಇದೆ. ಈ ಮೂಲಕ ಉದ್ಯೋಗ ಸೃಷ್ಟಿಯೂ ಆಗಿ, ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರವಾಗಿದೆ. ಈ ಸಕಾರಾತ್ಮಕ ಬೆಳವಣಿಗೆ ನಡುವೆ ಅಲ್ಲಲ್ಲಿ ಅನಪೇಕ್ಷಿತ ಘಟನೆಗಳು ನಡೆಯುವುದು ಬೇಸರದ ಸಂಗತಿ. ತಿರುಪತಿ ಲಡ್ಡು ತಯಾರಿಯಲ್ಲಿ ಕಲಬೆರಕೆ ತುಪ್ಪ ಬಳಸಲಾಗಿತ್ತೆಂಬ ಪ್ರಕರಣ ಇದಕ್ಕೆ ಇನ್ನೊಂದು ಉದಾಹರಣೆ. ಶಬರಿಮಲೆ ದೇಗುಲ ದ್ವಾರಕ್ಕೆ ಬಂಗಾರದ ಪ್ಲೇಟ್ ಅಳವಡಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿರುವುದು ಮತ್ತೊಂದು ನಿದರ್ಶನ. ಇಂಥ ಘಟನೆಗಳು ಭಕ್ತರನ್ನು ನೋಯಿಸುತ್ತವೆ.

ದೊಡ್ಡ ದೊಡ್ಡ ಧಾರ್ವಿುಕ ಕೇಂದ್ರಗಳಲ್ಲಿ ದೇವರ ದರ್ಶನ ಪಡೆಯಲು ಜನರು ತಾಸು ಎರಡು ತಾಸು, ಅಷ್ಟೇ ಏಕೆ ಕೆಲವೆಡೆ ಇನ್ನೂ ಹೆಚ್ಚು ಸಮಯ ಕಾಯುವ ಸಂದರ್ಭ ಇರುತ್ತದೆ. ಮಕ್ಕಳು, ಮಹಿಳೆಯರು, ವೃದ್ಧರು ಎಂಬ ಭೇದವಿಲ್ಲದೆ ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ಅಷ್ಟಾದರೂ ಜನರು ತಾಳ್ಮೆಯಿಂದ ಇರುತ್ತಾರೆ. ಏಕೆಂದರೆ ಅವರ ಗಮನ ಇರುವುದು ದೇವರ ದರ್ಶನದತ್ತ. ಒಮ್ಮೆ ದೇವರನ್ನು ಕಣ್ತುಂಬಿಕೊಂಡಾಗ ಎಲ್ಲ ತ್ರಾಸು ಮಾಯವಾಗಿ ಉಲ್ಲಾಸ ಆವರಿಸುತ್ತದೆ.

ನಮ್ಮ ದೇಶದಲ್ಲಿ ದೇಗುಲಗಳ ಅಡಳಿತ ವ್ಯವಸ್ಥೆ ವೈವಿಧ್ಯಮಯವಾಗಿದೆ. ಕೆಲ ದೇವಸ್ಥಾನಗಳು ಸರ್ಕಾರದ ಸುಪರ್ದಿಯಲ್ಲಿದ್ದರೆ (ಮುಜರಾಯಿ), ಇನ್ನು ಕೆಲವು ಕೌಟುಂಬಿಕ ಆಡಳಿತ ಪರಂಪರೆ ವ್ಯವಸ್ಥೆ ಹೊಂದಿವೆ. ಇನ್ನು ಹಲವು ಟ್ರಸ್ಟ್ ಆಡಳಿತಕ್ಕೆ ಒಳಪಟ್ಟಿವೆ. ಯಾವ ಆಡಳಿತ ಸ್ವರೂಪ ಇದ್ದರೂ ಭಕ್ತರ ನಂಬಿಕೆಗೆ ಚ್ಯುತಿ ಬಾರದ ಹಾಗೆ ನಡೆಸುವುದು ಮುಖ್ಯ. ಕೆಲವೆಡೆ ಕಾಲದ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಅಪ್ಡೇಟ್ ಮಾಡಲಾಗುತ್ತಿದೆ. ತಂತ್ರಜ್ಞಾನ ಬಳಸಿ ಸುಗಮವಾಗಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಸಾಗಲು ಕ್ಯೂ ಕಾಂಪ್ಲೆಕ್ಸ್ ವ್ಯವಸ್ಥೆ ಕಲ್ಪಿಸಿರುವುದು ಇದಕ್ಕೊಂದು ನಿದರ್ಶನ.

ವ್ಯವಸ್ಥೆ ಕಲ್ಪಿಸುವ ಸವಾಲು: ಇವತ್ತಿನ ದಿನಗಳಲ್ಲಿ ಧಾರ್ವಿುಕ-ಆಧ್ಯಾತ್ಮಿಕ ಕೇಂದ್ರಗಳಿಗೆ ತೆರಳುವ ಜನರ ಸಂಖ್ಯೆ ಜಾಸ್ತಿ ಆಗಿದೆ, ಆಗುತ್ತಲೇ ಇರುತ್ತದೆ. ಖ್ಯಾತ, ದೊಡ್ಡ ಮಂದಿರಗಳು ಮಾತ್ರವಲ್ಲ, ಆಯಾ ಊರಿನ ದೇಗುಲದಲ್ಲಿ ವಿಶೇಷ ಕಾರ್ಯಕ್ರಮ ನಡೆದಾಗಲೂ ಭಕ್ತಸಂದಣಿಯೇ ಆಗಮಿಸುತ್ತದೆ. ಹೀಗಾಗಿ ದೇಗುಲ ಆಡಳಿತ ಮಂಡಳಿಗಳ ಹೊಣೆಗಾರಿಕೆ ಕೂಡ ಹೆಚ್ಚಿದೆ. ಹಣಕಾಸು ಪಾರದರ್ಶಕತೆ, ಭಕ್ತರ ಭದ್ರತೆ, ದೇವಸ್ಥಾನ ಪರಿಸರದಲ್ಲಿ ಸುಗಮ ವ್ಯವಸ್ಥೆ- ಹೀಗೆ ಬಹುವಿಧ ನೆಲೆಯಲ್ಲಿ ಸೂಕ್ತ ಕ್ರಮಗಳನ್ನು ಆಯೋಜಿಸಬೇಕಾಗುತ್ತದೆ. ಒಂದು ಸಣ್ಣ ಲೋಪವೂ ಅನಾಹುತಕ್ಕೆ ಆಹ್ವಾನವೀಯಬಲ್ಲುದು. ಜಮ್ಮು-ಕಾಶ್ಮೀರದ ವೈಷ್ಣೋದೇವಿಯಲ್ಲಿ 2022ರ ಜನವರಿ 1ರಂದು ಕಾಲ್ತುಳಿತ ಉಂಟಾಗಿ 12 ಜನರು ಸಾವನ್ನಪ್ಪಿ 16 ಮಂದಿ ಗಾಯಗೊಂಡಿದ್ದರು. 2011ರ ಜನವರಿ 14ರಂದು ಮಕರ ಸಂಕ್ರಮಣ ಸಮಯದಲ್ಲಿ ಶಬರಮಲೆಯ ಪುಲ್ಲುಮೇಡಿನಲ್ಲಿ ಕಾಲ್ತುಳಿತ ಘಟಿಸಿ 106 ಜನರು ಮರಣಿಸಿ, 100 ಮಂದಿ ಗಾಯಗೊಂಡಿದ್ದರು. 2025ರ ಜನವರಿ 8ರಂದು ತಿರುಪತಿಯಲ್ಲಿ ನೂಕುನುಗ್ಗಲು ಉಂಟಾಗಿ ಆರು ಜನರು ಪ್ರಾಣ ಕಳೆದುಕೊಂಡಿದ್ದರು. 2025ರ ಜನವರಿ 29ರಂದು ಕುಂಭಮೇಳ ಸಂದರ್ಭದಲ್ಲಿ ಪ್ರಯಾಗದಲ್ಲಿ 30 ಜನರು ಸಾವನ್ನಪ್ಪಿದ್ದರು. ಇವೆಲ್ಲ ದುರಂತಗಳನ್ನು ನಾವು ಮರೆಯುವಂತಿಲ್ಲ.

ಕೆಲವು ತಾಣಗಳಲ್ಲಿ ಅವ್ಯವಸ್ಥೆ, ಗಲೀಜು, ಭಕ್ತರಿಗೆ ಮಾಹಿತಿ ಕೊರತೆ ಇತ್ಯಾದಿ ಸಮಸ್ಯೆಗಳು ಸಹ ಇವೆ. ದೇಗುಲ ದರ್ಶನ ಸ್ಮರಣೀಯ ಆಗಬೇಕೆಂದರೆ ಇಂಥ ನ್ಯೂನತೆಗಳು ಇರಬಾರದು. ಈಚಿನ ವರ್ಷಗಳಲ್ಲಿ ಕಾರಿಡಾರ್ ಮೂಲಕ ಹೊಸತನ ತರುವ ಕೆಲಸ ಅಲ್ಲಲ್ಲಿ ಆಗುತ್ತಿದೆ. ಇನ್ನೂ ಆಗಬೇಕಾದ್ದು ಬಹಳ ಇದೆ.

ತಂತ್ರಜ್ಞಾನದ ನೆರವು: ಈಗ ತಂತ್ರಜ್ಞಾನ ನೆರವು ಪಡೆದು ವ್ಯವಸ್ಥೆಯನ್ನು ಸುಧಾರಿಸುವ ಅವಕಾಶಗಳು ಇವೆ. ಕೃತಕ ಬುದ್ಧಿಮತ್ತೆ ಮೂಲಕ ಜನಸಂದಣಿ ನಿಯಂತ್ರಣ ಯೋಜನೆ ಮಾಡಬಹುದು ಎಂಬುದಕ್ಕೆ ಒಂದು ಉದಾಹರಣೆ ನೀಡುವುದಾದರೆ- ಹೊಸ ವರ್ಷದ ಸಂದರ್ಭದಲ್ಲಿ ಬೆಂಗಳೂರಿನ ಎಂಜಿ ರಸ್ತೆ ಮತ್ತು ಆಸುಪಾಸಿನ ರಸ್ತೆಗಳಲ್ಲಿ ದೊಡ್ಡ ಸಂಖ್ಯೆಯ ಜನರು-ವಿಶೇಷವಾಗಿ ಯುವಜನರು- ಸೇರುತ್ತಾರೆ. ಭದ್ರತೆ ಒದಗಿಸುವುದು ಪೊಲೀಸರಿಗೆ ದೊಡ್ಡ ಸವಾಲು. ಅಂತಾರಾಷ್ಟ್ರೀಯ ಖ್ಯಾತಿಯ ನಗರವಾಗಿರುವುದರಿಂದ ಇಲ್ಲಿ ನಡೆಯುವ ಸಣ್ಣ ಘಟನೆಯೂ ದೊಡ್ಡ ಸುದ್ದಿಯಾಗುತ್ತದೆ. 2025ರ ಡಿಸೆಂಬರ್ 31ರ ಹೊಸ ವರ್ಷಾಚರಣೆ ಸಂದರ್ಭದಲ್ಲಿ, ಜನರು ಹೆಚ್ಚಾಗಿ ಸೇರುವ ಸ್ಥಳಗಳನ್ನು ತಕ್ಷಣ ಗುರುತಿಸಲು ಪೊಲೀಸರು ಎಐ ತಂತ್ರಜ್ಞಾನ ಬಳಸಿಕೊಂಡರು. ಇದರಿಂದ ಭದ್ರತೆ ಕೆಲಸ ಹಗುರಾಯಿತು. ಸೌದಿಯಲ್ಲಿ ಹಜ್ ಯಾತ್ರೆ ವೇಳೆ, ಒಂದೇದಿನ ಲಕ್ಷಾಂತರ ಜನ ಸೇರುತ್ತಾರೆ. ಜನಸಮೂಹ ಗಮನಿಸಲು ಅಲ್ಲಿಯೂ ಎಐ ತಂತ್ರಜ್ಞಾನ ಬಳಸಲಾಗುತ್ತದೆ. ಸಣ್ಣ ದೇವಸ್ಥಾನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ವ್ಯವಸ್ಥೆ ಅಳವಡಿಕೆ ಕಷ್ಟಸಾಧ್ಯ. ಆದರೆ ಬೃಹತ್ ಸಂಖ್ಯೆಯ ಜನರು ಸೇರುವ, ಅಧಿಕ ಆದಾಯ ಇರುವ ದೊಡ್ಡ ದೇವಾಲಯಗಳಲ್ಲಿ ಆದೀತು.

ಕೊನೇ ಮಾತು: ಭಗವಾನ್ ರಾಮ, ಕೃಷ್ಣ, ಶಿವ... ಇವರೆಲ್ಲರ ಜೀವನದ ಪ್ರಸಂಗಗಳು ಅನೇಕ ಅಮೂಲ್ಯ ಸಂದೇಶಗಳನ್ನು ಸಹ ಅಡಗಿಸಿಕೊಂಡಿರುತ್ತವೆಯಾದ್ದರಿಂದ ನಮಗೆ ಜೀವನಕ್ಕೆ ದಾರಿದೀಪವೂ ಹೌದು. ರಾಮನು ರಾವಣನನ್ನು ಯುದ್ಧದಲ್ಲಿ ವಧಿಸಿದ ಸಂದರ್ಭ. ಸ್ವರ್ಣಮಯಿ ಲಂಕೆಯನ್ನು ಕಂಡು ಬೆರಗುಗೊಳ್ಳುವ ಲಕ್ಷ್ಮಣನ ಮನಸ್ಸಿನಲ್ಲಿ, ರಾಮನು ಇಲ್ಲೇ ರಾಜನಾಗಿ ಆಡಳಿತ ನಡೆಸಬಾರದೇ ಎಂಬ ಭಾವನೆ ಮೂಡಿದಾಗ, ಜನ್ಮವಿತ್ತ ತಾಯಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂಬ ರಾಮನ ಮಾತು ಮನನೀಯ. ಜತೆಗೆ, ಪರರ ಸಂಪತ್ತಿನ ಬಗ್ಗೆ ನಿಮೋಹತ್ವದ ಸಂಕೇತವೂ ಹೌದು. ಹೀಗಾಗಿ, ದೇವರ ಸಾನ್ನಿಧ್ಯದ ತಾಣಗಳಾದ ದೇವಸ್ಥಾನಗಳು ಆಸ್ತಿಕರ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಒಂದು ದೇವಸ್ಥಾನ ಎಂದರೆ ಧಾರ್ವಿುಕ ಆಯಾಮ ಮಾತ್ರ ಅಲ್ಲ. ಹೂವು ಹಣ್ಣು ಕಾಯಿ ಮತ್ತಿತರ ವಸ್ತುಗಳ ವ್ಯಾಪಾರ, ಹೋಟೆಲ್, ವಸತಿಗೃಹ, ಸಾರಿಗೆ ವ್ಯವಸ್ಥೆ... ಹೀಗೆ ಹಲವು ಮಜಲುಗಳು ಸುತ್ತುವರಿದಿರುತ್ತವೆ. ಅಷ್ಟು ಜನಕ್ಕೆ ಜೀವನೋಪಾಯ ಆಗುತ್ತದೆ. ಹೀಗಿರುವಾಗ ಜನರಿಗೆ ವ್ಯವಸ್ಥಿತ ಪರಿಸರ ನಿರ್ಮಾಣ ಮಾಡಿಕೊಡುವುದು ಸಂಬಂಧಪಟ್ಟವರ ಜವಾಬ್ದಾರಿ ಆಗಿರುತ್ತದೆ. ಎಲ್ಲೋ ಕೆಲವೆಡೆ ಕೆಲವರು ಮಾಡುವ ತಪ್ಪಿನಿಂದಾಗಿ ಈ ಪವಿತ್ರ ಪರಂಪರೆಗೆ ಕುಂದು ಆಗುವ ಹಾಗಾಗದಿರಲಿ ಎಂಬುದು ಆಶಯ.

-(ಲೇಖಕರು 'ವಿಜಯವಾಣಿ' ಡೆಪ್ಯೂಟಿ ಎಡಿಟರ್)



ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani