ಯಲಹಂಕ : ಡಾ.ಶಿವರಾಮ ಕಾರಂತ್ ಬಡಾವಣೆ ಯೋಜನೆಯು ಸರ್ವೋಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪ್ರಾರಂಭಗೊಂಡು, ಇದೀಗ ರಾಜ್ಯದ ಉಚ್ಛ ನ್ಯಾಯಾಲಯದ ನಿಗಾವಣೆಯಲ್ಲಿ ಅಂತಿಮ ಹಂತಕ್ಕೆ ಬಂದಿದೆ. ಆದರೆ, ಸದರಿ ಯೋಜನೆಯ ಅನುಷ್ಠಾನದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು ಭೂಮಿ ಕಳೆದುಕೊಂಡ ರೈತರನ್ನು ಶೇಕಡ 40% ಪಾರುದಾರರೆಂದು ಪರಿಗಣಿಸದೆ ಹಾಗೂ ರೈತರೊಂದಿಗೆ ಚರ್ಚಿಸದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ರೈತರಿಗೆ ಶೋಷಣೆ ಮಾಡಿದೆ ಎಂದು 'ಡಾ.
ಡಾ. ಶಿವರಾಮ ಕಾರಂತ್ ಬಡಾವಣೆ ಸಂತ್ರಸ್ತರ ಸಂಘ ಮತ್ತು ದ.ಸಂ.ಸ. ಬೆಂಗಳೂರು ಜಿಲ್ಲಾ ಸಂಯೋಜಕ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಡಾ.ಶಿವರಾಮ ಕಾರಂತ್ ಬಡಾವಣೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರು ಸಂತ್ರಸ್ಥರಾಗಿದ್ದು, ತಮಗಿಷ್ಟವಾದ ನಿವೇಶಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಹತೆ ಹೊಂದಿದ್ದಾರೆ ಎಂದು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಸಹ ಸದರಿ ಆದೇಶವನ್ನು ಬಿಡಿಎ ಗಾಳಿಗೆ ತೂರಿ ತಮ್ಮ ಇಷ್ಟದಂತೆ ನಿವೇಶನ ಹಂಚಿಕೆ ಮಾಡಲು ಹೊರಟಿರುವುದು ಭೂಮಿ ಕಳೆದುಕೊಂಡ ರೈತರ ಪಾಲಿಗೆ ಮರಣ ಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಭೂಮಿ ಕಳೆದುಕೊಳ್ಳುವ ರೈತರಿಗೆ ಅವರ ಸರ್ವೇ ನಂಬರ್ ನಲ್ಲಿಯೇ ನಿವೇಶನ ನೀಡುವ ಭರವಸೆ ನೀಡಲಾಗಿತ್ತು, ಆದರೆ,ಇದೀಗ ಬಿಡಿಎ ಆ ನಿರ್ಧಾರದಿಂದ ಹಿಂದೆ ಸರಿದು ತಮಗಿಷ್ಟದಂತೆ ನಿವೇಶನ ಹಂಚಿಕೆ ಮಾಡಲು ಹೊರಟಿದೆ. ಪ್ರತಿ 30/40 ಅಡಿಗಳ ನಿವೇಶನಕ್ಕೆ ಪ್ರತಿ ಅಡಿಗೆ 50 ರೂ ನಂತೆ 54 ಸಾವಿರ ರೂ. ಆಡಳಿತಾತ್ಮಕ ವೆಚ್ಚ ನಿಗದಿ ಮಾಡಿರುವುದು ಈ ಯೋಜನೆಯಲ್ಲಿ ನಿವೇಶನ ಹೊಂದುವ ರೈತರ ಕನಸನ್ನು ಕನಸಾಗಿಯೇ ಉಳಿಸುವ ನಿರ್ಧಾರವಾಗಿದೆ. ಬಿಡಿಎ ಕೂಡಲೇ ಈ ಆಡಳಿತಾತ್ಮಕ ವೆಚ್ಚವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚಿಗೆ ಸರ್ಕಾರ ಘೋಷಣೆ ಮಾಡಿರುವ ಬಿಡದಿ ಟೌನ್ ಶಿಪ್ ಯೋಜನೆ, ದೊಡ್ಡಬಳ್ಳಾಪುರ ಕೆಎಚ್‌ಬಿ ಯೋಜನೆ ಮತ್ತು ಆನೇಕಲ್ ಕೆ.ಐ.ಎ.ಡಿ.ಬಿ. ಯೋಜನೆಗಳಲ್ಲಿ ಶೇಕಡಾ 50:50ರ ಅನುಪಾತದಲ್ಲಿ ರೈತರಿಗೆ ನಿವೇಶನ ಹಂಚಿಕೆಯ ಘೋಷಣೆ ಮಾಡಿದ್ದು, ಶಿವರಾಮ ಕಾರಂತ ಬಡಾವಣೆ ಯೋಜನೆಯಲ್ಲಿ ರೈತರಿಗೆ ಇನ್ನೂ ಸಹ ನಿವೇಶನ ಹಂಚಿಕೆ ಮಾಡದೇ ಇರುವುದರಿಂದ ಈ ಯೋಜನೆಯಲ್ಲಿಯೂ ಸಹ ರೈತರಿಗೆ ಅಭಿವೃದ್ಧಿ ಪಡಿಸಿದ 100/80 ನಿವೇಶನಗಳು ಮತ್ತು 60 ಅಡಿ ರಸ್ತೆಗಳಿಗೆ ಹೊಂದಿಕೊಂಡಂತಿರುವ ವಾಣಿಜ್ಯ ಮತ್ತು ಮೂಲೆ ನಿವೇಶನಗಳನ್ನು ಶೇಕಡ 50:50 ರ ಅನುಪಾತದಲ್ಲಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ದ.ಸಂ.ಸ. ಬೆಂಗಳೂರು ಜಿಲ್ಲಾ ಸಂಯೋಜಕ ರಾಮಗೊಂಡನಹಳ್ಳಿ ರಮೇಶ್ ಮಾತನಾಡಿ 'ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಡಾ.ಶಿವರಾಮ ಕಾರಂತ್ ಬಡಾವಣೆ ಯೋಜನೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸುಮಾರು 7 ಸಾವಿರ ಸ್ವತ್ತುಗಳಿಗೆ ಸ್ವಾಧೀನ ಪತ್ರಗಳನ್ನು ನೀಡಿದ್ದು, ಈ ಸ್ವತ್ತುಗಳ ಪೈಕಿ 16 ಗ್ರಾಮಗಳ ಕಟ್ಟಡಗಳಿಗೆ ಸ್ಥಳೀಯ ಗ್ರಾಮ ಪಂಚಾಯತಿಗಳು ಮತ್ತು 1 ಗ್ರಾಮಕ್ಕೆ ಬಿಬಿಎಂಪಿ ಹತ್ತಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದವು, ಆದರೆ,ಈಗ ಬಿಡಿಎ ಏಕಾಏಕಿಯಾಗಿ ಅವೈಜ್ಞಾನಿಕವಾದ ದುಬಾರಿ ಪುರೋಭಿವೃದ್ಧಿ ತೆರಿಗೆಯನ್ನು ಈ 17 ಗ್ರಾಮಗಳಿಗೆ ವಿಧಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಪೂರೋಭಿವೃದ್ಧಿ ತೆರಿಗೆಯನ್ನು ರದ್ದುಗೊಳಿಸ ಬೇಕು ಎಂದು ಆಗ್ರಹಿಸಿದರು.
ಜೆಸಿಸಿ ಕಮಿಟಿಗೆ ಅರ್ಜಿ ಸಲ್ಲಿಸಿರುವ ಮತ್ತು ಅರ್ಜಿ ಸಲ್ಲಿಸದಿರುವ ಎಲ್ಲ ಕಟ್ಟಡಗಳಿಗೂ ದಾಖಲಾತಿಗಳನ್ನು ನೀಡಬೇಕು. 300 ಅಡಿ ಒಳಗಿನ ವಿಸ್ತೀರ್ಣಕ್ಕೆ ನಿಗದಿಪಡಿಸಿರುವ ನಗದು ಪರಿಹಾರವನ್ನು ರದ್ದುಪಡಿಸಿ ಅದಕ್ಕೆ ಬದಲಿಯಾಗಿ 20/30 ಅಳತೆಯ ನಿವೇಶನ ಹಂಚಿಕೆ ಮಾಡಬೇಕು. ಪಹಣಿಯಲ್ಲಿ ಇರುವ ಸಣ್ಣಪುಟ್ಟ ನ್ಯೂನ್ಯತೆಗಳನ್ನು ಸರ್ಕಾರವೇ ಸಂಬಂಧ ಪಟ್ಟ ಕಂದಾಯ ಇಲಾಖೆಯೊಡನೆ ಸಮನ್ವಯ ಸಾಧಿಸಿಕೊಂಡು ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಡಾ.ಶಿವರಾಮ ಕಾರಂತ್ ಬಡಾವಣೆ ಸಂತ್ರಸ್ತರ ಸಂಘದ ಪದಾಧಿಕಾರಿಗಳಾದ ಬಸವರಾಜ ಪಾದಯಾತ್ರಿ, ರಾಮಗೊಂಡನಹಳ್ಳಿ ರಮೇಶ್ ಮುನಿರಾಜು, ಟಿ.ಜಿ.ಚಂದ್ರು, ಕೃಷ್ಣಪ್ಪ ಸೇರಿದಂತೆ ಸಂತ್ರಸ್ತ ರೈತರಿದ್ದರು.

