ಪಟನಾ : ಬಿಹಾರದ ಗಯಾ ಜಿಲ್ಲೆಯ ಬಾರಾಚಟ್ಟಿ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಭಾನುವಾರ ನಸುಕಿನಲ್ಲಿ ಎನ್ಕೌಂಟರ್ ಸಂಭವಿಸಿದ್ದು, ಭದ್ರತಾಪಡೆಗಳ ಗುಂಡಿಗೆ ಮೂವರು ನಕ್ಸಲರು ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟನಾದಿಂದ 100 ಕಿ.ಮೀ. ಅಂತರದಲ್ಲಿರುವ ಗಯಾ ಜಿಲ್ಲೆ ನಕ್ಸಲ್ ಪೀಡಿತವಾಗಿದ್ದು, ನಕ್ಸಲ್ ನಿಗ್ರಹ ಕಾರ್ಯಾಚರಣೆ ಚಾಲ್ತಿಯಲ್ಲಿದೆ. ನಕ್ಸಲರ ಇರುವಿಕೆಯ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗೆ ನಕ್ಸಲರು ಅರಣ್ಯ ಪ್ರದೇಶದಲ್ಲಿ ಮುಖಾಮುಖಿಯಾಗಿದ್ದು, ಗುಂಡಿನ ದಾಳಿ ಆರಂಭಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಸ್ಥಳ ತಪಾಸಣೆ ನಡೆಸಿದಾಗ ಮೂವರು ನಕ್ಸಲರ ಶವ ಪತ್ತೆಯಾಗಿದೆ.
ಘಟನಾ ಸ್ಥಳದಿಂದ ಎಕೆ ಸೀರೀಸ್ ನ ಅಸಾಲ್ಟ್ ರೈಫಲ್, ಇನ್ಸಾಸ್ ರೈಫಲ್ ಪತ್ತೆಯಾಗಿದ್ದು, ಭದ್ರತಾಪಡೆ ಅವುಗಳನ್ನು ವಶಪಡಿಸಿಕೊಂಡಿದೆ.

