(ಲೇಖಕರು 'ವಿಜಯವಾಣಿ' ಡೆಪ್ಯೂಟಿ ಎಡಿಟರ್)ಕೆಲವೊಮ್ಮೆ ಕಾಕತಾಳೀಯವಾಗಿ ಇತಿಹಾಸದ ಘಟನೆಗಳನ್ನು ನೆನಪಿಸುವಂಥ ಪ್ರಸಂಗಗಳು ವರ್ತಮಾನದಲ್ಲಿ ಸರಿಸುಮಾರು ಅದೇ ಸಮಯದಲ್ಲಿ ನಡೆಯುತ್ತವೆ. ಒಂದಕ್ಕೊಂದು ಸಂಬಂಧ ಇಲ್ಲದಿದ್ದರೂ, ಬಹುವರ್ಷಗಳ ಅಂತರವಿದ್ದರೂ ಇಂಥ ಪ್ರಸಂಗಗಳ ಸಾಮ್ಯ ಅಚ್ಚರಿ ಮೂಡಿಸುತ್ತದೆ.
1876ರ ಜುಲೈ 26ರಂದು, ಅಂದರೆ 150 ವರ್ಷಗಳ ಹಿಂದೆ ಸುರೇಂದ್ರನಾಥ ಬ್ಯಾನರ್ಜಿ ಮತ್ತು ಆನಂದ ಮೋಹನ ಬೋಸ್ ಅವರು ಕೊಲ್ಕತದಲ್ಲಿ ಇಂಡಿಯನ್ ಅಸೋಸಿಯೇಷನ್ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ದೇಶದಲ್ಲಿ ಸಾರ್ವಜನಿಕ ಅಭಿಪ್ರಾಯ ರೂಪಿಸುವುದಕ್ಕೆ ಬಲವಾದ ವೇದಿಕೆ ಒದಗಿಸುವುದು, ಸಾಮಾನ್ಯ ರಾಜಕೀಯ ಆಸಕ್ತಿ ಮತ್ತು ಆಕಾಂಕ್ಷೆಗಳ ಆಧಾರದ ಮೇಲೆ ಜನರ ಒಗ್ಗಟ್ಟು, ಸಾರ್ವಜನಿಕ ಆಂದೋಲನಗಳಿಗೆ ಜನರನ್ನು ಒಳಗೊಳ್ಳುವುದು, ಹಿಂದೂ-ಮುಸ್ಲಿಮರ ನಡುವೆ ಸ್ನೇಹಭಾವ ಪ್ರಚುರಪಡಿಸುವುದು- ಮುಂತಾದ ಉದ್ದೇಶಗಳನ್ನು ಈ ಸಂಘಟನೆ ಹೊಂದಿತ್ತು. 1857ರ ಪ್ರಥಮ ಸ್ವಾತಂತ್ರ್ಯಸಂಗ್ರಾಮದ ಕೆಲ ವರ್ಷಗಳ ಅಂತರದಲ್ಲಿ, ದೇಶದಲ್ಲಿ ಸ್ವಾತಂತ್ರ್ಯ ಆಂದೋಲನ ಇನ್ನೂ ಹೆಪುಪಗಟ್ಟಬೇಕಾದ ಸಂದರ್ಭದಲ್ಲಿ ಈ ಸಂಘಟನೆಯ ಕಾರ್ಯಚಟುವಟಿಕೆ- ಉದ್ದೇಶಗಳು ಗಮನಾರ್ಹವಾಗಿದ್ದವು.
ವಿಶೇಷ ಅಂದರೆ ಈ ಸಂಘಟನೆ ವತಿಯಿಂದ ಕೈಗೊಂಡ ಆರಂಭಿಕ ಪ್ರತಿಭಟನೆ ವಿದ್ಯಾರ್ಥಿಗಳ ಸಮಸ್ಯೆ ಕುರಿತಾಗಿತ್ತು. ಅಂದಿನ ವಸಾಹತುಶಾಹಿ ಬ್ರಿಟಿಷ್ ಸರ್ಕಾರವು ಭಾರತೀಯ ನಾಗರಿಕ ಪರೀಕ್ಷೆಗಳನ್ನು (ಇಂಡಿಯನ್ ಸಿವಿಲ್ ಸರ್ವಿಸ್) ತೆಗೆದುಕೊಳ್ಳಬಹುದಾದ ಗರಿಷ್ಠ ವಯೋಮಿತಿಯನ್ನು 21ರಿಂದ 19ಕ್ಕೆ ಇಳಿಸಿತ್ತು. ಈ ಸಿವಿಲ್ ಸರ್ವಿಸ್ ಪರೀಕ್ಷೆಯು ಸರ್ಕಾರದಲ್ಲಿ ಉನ್ನತ ಸ್ಥಾನ ಗಳಿಸಲು ರಹದಾರಿಯಾಗಿತ್ತು- ಈಗಿನ ಐಎಎಸ್, ಐಪಿಎಸ್ನಂತೆ. ಗರಿಷ್ಠ ವಯೋಮಿತಿ ತಗ್ಗಿಸಿದ್ದರಿಂದ ಭಾರತೀಯ ಯುವಕರು ಐಸಿಎಸ್ ಪರೀಕ್ಷೆಗೆ ಕೂಡ್ರುವ ಅವಕಾಶಗಳು ಕ್ಷೀಣಿಸುತ್ತವೆ ಎಂಬುದು ಇಂಡಿಯನ್ ಅಸೋಸಿಯೇಷನ್ ವಾದವಾಗಿತ್ತು.
ಆಗ ಆ ಪರೀಕ್ಷೆ ಬರೆಯಲು ಲಂಡನ್ಗೆ ಹೋಗಬೇಕಿದ್ದುದರಿಂದ ಬಹಳ ಖರ್ಚೂ ಬರುತ್ತಿತ್ತು. ಹೀಗಿರುವಾಗ ವಯೋಮಿತಿಯನ್ನೂ ತಗ್ಗಿಸಿದ್ದು ಗಾಯದ ಮೇಲಿನ ಬರೆಯೇ ಆಗಿತ್ತು. ಈ ನಿರ್ಧಾರದ ವಿರುದ್ಧ ಪ್ರತಿಭಟಿಸಲು ಇಂಡಿಯನ್ ಅಸೋಸಿಯೇಷನ್ ವತಿಯಿಂದ ಕೊಲ್ಕತದಲ್ಲಿ ಸಾರ್ವಜನಿಕ ಸಭೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಮತ್ತೊಂದೆಡೆ, ಬ್ಯಾನರ್ಜಿಯವರು ದೇಶದ ವಿವಿಧೆಡೆ ಸುತ್ತಿ ಯುವಜನರ ಆಕ್ರೋಶಕ್ಕೆ ದನಿನೀಡಿದರು. ಇದರಿಂದಾಗಿ ಬ್ರಿಟಿಷ್ ಸರ್ಕಾರವೇನು ತಕ್ಷಣಕ್ಕೆ ವಯೋಮಿತಿಯನ್ನು ಏರಿಸಲಿಲ್ಲವಾದರೂ, ಮುಂದಿನ ರಾಷ್ಟ್ರೀಯ ಪ್ರತಿಭಟನೆಗಳಿಗೆ ಇದು ಬುನಾದಿಯನ್ನಂತೂ ಹಾಕಿತು ಎಂದು ಇತಿಹಾಸಕಾರರು ದಾಖಲಿಸಿದ್ದಾರೆ.
ಕ್ರಮೇಣ ಇಂಡಿಯನ್ ಅಸೋಸಿಯೇಷನ್ನಿನ ಪ್ರಮುಖ ನಾಯಕರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರಿಂದಾಗಿ ಸಂಘಟನೆ ತನ್ನ ಪ್ರತ್ಯೇಕ ರಾಜಕೀಯ ಅಸ್ಮಿತೆಯನ್ನು ಕಳೆದುಕೊಂಡಿತು. ಆದರೂ ಸರ್ಕಾರದ ನಿರ್ಧಾರಗಳ ವಿರುದ್ಧ ಬಲವಾದ ಜನಾಂದೋಲನ ಹುಟ್ಟುಹಾಕಬಹುದೆಂಬ ನಿದರ್ಶನವನ್ನು ಇದು ನೀಡಿತು.
ಇನ್ನು, ಈಚಿನ ದೆಹಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ ಹೆಸರಿನಲ್ಲಿ 'ಪಾರ್ಟಿ' ಎಂದಿದ್ದರೂ, ಅದು ರಾಜಕೀಯ ಪಕ್ಷವಲ್ಲ. ಸಿಜೆಪಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮಾತುಗಳನ್ನೇ ಆಧಾರವಾಗಿಟ್ಟುಕೊಂಡು ಹೇಳುವುದಾದರೆ ಸದ್ಯ ರಾಜಕೀಯ ಪ್ರವೇಶದ ಆಲೋಚನೆಯಿಲ್ಲ. 'ಆದರೆ ರಾಜಕೀಯ ಒತ್ತಡ ತರುವ ಗುಂಪಾಗಿ (ಪ್ರೆಶರ್ ಗ್ರೂಪ್) ಕೆಲಸ ಮಾಡುತ್ತೇವೆ. ಹಾಗೇ, ಕೇವಲ ಶಿಕ್ಷಣ ನಮ್ಮ ಗಮನವಲ್ಲ. ನಿರುದ್ಯೋಗ ಸಮಸ್ಯೆ, ಆರ್ಥಿಕ ಅಸಮಾನತೆ ಇತ್ಯಾದಿ ಸಂಗತಿಗಳ ಬಗ್ಗೆಯೂ ಧ್ವನಿಯೆತ್ತುತ್ತೇವೆ' ಎಂದು ದೀಪ್ಕೆ ಹೇಳಿದ್ದಾರೆ. ವಿವಿಧ ವಿಷಯಗಳ ಬಗ್ಗೆ ಸಾರ್ವಜನಿಕರ ಜತೆ ಸಂವಾದ ನಡೆಸುವ ಉದ್ದೇಶದಿಂದ 'ಜನ ಏನಂತಾರೆ' (ಕ್ಯಾ ಬೋಲ್ತಿ ಪಬ್ಲಿಕ್) ಅಭಿಯಾನವನ್ನು ಮುಂದಿನ ತಿಂಗಳಿಂದ ನಡೆಸಲು ಸಿಜೆಪಿ ನಿರ್ಧರಿಸಿದೆ. ಈ ಸಂಘಟನೆಯು ಉಳಿದು ಬೆಳೆದೀತೇ ಅಥವಾ ತಾತ್ಕಾಲಿಕ ಅಬ್ಬರವೇ ಎಂಬುದು ಮುಂದಷ್ಟೇ ಸ್ಪಷ್ಟವಾಗಬೇಕಿದೆ.
ಯುವಜನರ ಮೇಲೆ ಕಣ್ಣು: ಸಿಜೆಪಿ ರಾಜಕೀಯಕ್ಕೆ ಬರುತ್ತದೆಯೋ ಇಲ್ಲವೋ, ಆದರೆ ರಾಜಕೀಯ ಪಕ್ಷಗಳು ಮಾತ್ರ ಯುವಜನರ ಮತಗಳ ಮೇಲೆ ಕಣ್ಣಿಡುವುದು ಪಕ್ಕಾ. ನಮ್ಮ ದೇಶದ ಜನಸಂಖ್ಯಾ ವಿನ್ಯಾಸವೇ ಹಾಗಿದೆ. 2029ರಲ್ಲಿ ಲೋಕಸಭಾ ಚುನಾವಣೆ ನಡೆಯಲಿಕ್ಕಿದೆ. ಬಿಜೆಪಿ ಮತ್ತು ಮಿತ್ರಪಕ್ಷಗಳು 2014ರಿಂದ ನಿರಂತರವಾಗಿ ಅಧಿಕಾರದಲ್ಲಿದ್ದು, ಸತತ ನಾಲ್ಕನೇ ಸಲ ದೇಶದ ಚುಕ್ಕಾಣಿ ಹಿಡಿಯುವ ಹುಮ್ಮಸ್ಸಿನಲ್ಲಿದೆ ಎನ್ಡಿಎ ಮೈತ್ರಿಕೂಟ. 2014 ಮತ್ತು 2019ಕ್ಕೆ ಹೋಲಿಸಿದರೆ 2024ರಲ್ಲಿ ಎನ್ಡಿಎ ಸೀಟುಗಳ ಸಂಖ್ಯೆ ತಗ್ಗಿದೆ. ಮೊದಲೆರಡು ಸಲ ಸ್ವಂತ ಬಲದ ಮೇಲೆ ಅಧಿಕಾರ ಮಾಡುವಷ್ಟು ಸೀಟುಗಳನ್ನು ಹೊಂದಿದ್ದ ಬಿಜೆಪಿಗೆ ಈಗ ಮಿತ್ರರ ಬೆಂಬಲ ಅನಿವಾರ್ಯವಾಗಿದೆ. ಹೀಗಾಗಿ ಕಳೆದಿರುವ ವರ್ಚಸ್ಸು ಮತ್ತು ಸೀಟುಗಳನ್ನು ಮರಳಿ ಪಡೆಯಲು ಆ ಪಕ್ಷ ಶತಪ್ರಯತ್ನ ನಡೆಸುವುದು ಸಹಜ. ಈ ನಿಟ್ಟಿನಲ್ಲಿ
ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಮತ್ತು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಿ, ಅಂಗೀಕಾರ ಪಡೆಯುವ ಮೂಲಕ ಇದರ ಲಾಭ ಎತ್ತುವಳಿ ಮಾಡುವ ಆಲೋಚನೆ ಬಿಜೆಪಿಯ ಹಿರಿಯ ನಾಯಕರದು. ಒಂದೊಮ್ಮೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಾದಲ್ಲಿ ಈಗಿರುವ 550 ಕ್ಷೇತ್ರಗಳ ಸಂಖ್ಯೆ 850ಕ್ಕೆ ಏರಿಕೆಯಾಗುತ್ತದೆ. ಇದರಿಂದಾಗಿ, ಬಿಜೆಪಿಗೆ ಏನಿಲ್ಲೆಂದರೂ 20-25 ಸೀಟುಗಳು ಅನಾಯಾಸವಾಗಿ ದಕ್ಕುತ್ತವೆ ಎಂದು ಕೆಲ ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದೆಡೆ, ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಬಂದರೆ, ಅದರ ಹೆಚ್ಚಿನ ಶ್ರೇಯವನ್ನು ಎನ್ಡಿಎ ಪಡೆಯಬಹುದು ಎನ್ನುವ ಲೆಕ್ಕಾಚಾರಗಳೂ ಇವೆ. ಭಾರತದ ಒಟ್ಟು ಮತದಾರರಲ್ಲಿ ಮಹಿಳೆಯರ ಪ್ರಮಾಣ ಸುಮಾರು ಅರ್ಧದಷ್ಟಿದೆ. ಇದಲ್ಲದೆ, ಈಚಿನ ವರ್ಷಗಳಲ್ಲಿ ಮಹಿಳಾ ಮತದಾನ ಪ್ರಮಾಣ ಕೂಡ ಹೆಚ್ಚಿದೆ.
ಹಿಂದೆಲ್ಲ ನಮ್ಮಲ್ಲಿ ಸಾಮಾನ್ಯವಾಗಿ ಹೇಗಿತ್ತೆಂದರೆ, ಮನೆಯ ಯಜಮಾನ ಯಾರಿಗೆ ಹೇಳುತ್ತಾನೋ ಅವರಿಗೆ ಮನೆಮಂದಿಯೆಲ್ಲ ಮತ ಹಾಕುತ್ತಿದ್ದರು. ಪ್ರತ್ಯೇಕವಾಗಿ ರಾಜಕೀಯ ಒಲವು ಎಂದೆಲ್ಲ ಇರುತ್ತಿದ್ದುದು ಕಡಿಮೆಯಾಗಿತ್ತು. ಆದರೆ ಈಗ ಯುವಜನರು ಮನೆಯ ಹಿರಿಯನ 'ರಾಜಕೀಯ' ಅಪ್ಪಣೆಯನ್ನು ಪಾಲಿಸುವರೇ ಎಂಬುದು ಪ್ರಶ್ನಾರ್ಥಕ. ಈ ಪೀಳಿಗೆಯ ಆಲೋಚನೆಗಳ ಜಾಡು ಹಿಡಿಯುವುದು ಮನೆಯವರಿಗೇ ಅಸಾಧ್ಯ ಎಂಬಂತಿರುವಾಗ, ಉಳಿದವರಿಗೆ ಆದೀತೆ? ಆದರೂ ಈಚಿನ ವರ್ಷಗಳ ಟ್ರೆಂಡ್ ನೋಡಿದರೆ, ನರೇಂದ್ರ ಮೋದಿಯವರು ದೊಡ್ಡ ಸಂಖ್ಯೆಯ ಯುವಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ತಿಳಿಯುತ್ತದೆ.
ಮುಂದೆಯೂ ಹೀಗೇ ಇರುತ್ತದೆಯಾ ಎಂಬುದನ್ನು ಕಾದುನೋಡಬೇಕಷ್ಟೆ. ಜನರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು ಅದಕ್ಕೆ ತಕ್ಕಂತೆ ಪ್ರತಿಕ್ರಿರುಸುವುದರಲ್ಲಿ ಮೋದಿ ಸಿದ್ಧಹಸ್ತರು ಎಂಬುದನ್ನು ಅವರ ವಿರೋಧಿಗಳೂ ಒಪುಪತ್ತಾರೆ. ಈಚಿನ ಯುವಜನರ ಪ್ರತಿಭಟನೆ ಸಂದರ್ಭವನ್ನೇ ನೋಡಿ. ಸೆಲ್ಪಿ ವಿಡಿಯೋ ಮೂಲಕ ತ್ವರಿತ ಸಂವಹನದ ಹಾದಿ ಹಿಡಿದ ಮೋದಿ, ಈ ಮೂಲಕ ಪ್ರತಿಭಟನೆಯಿಂದಾದ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದು ಅವರ ಚಾತುರ್ಯಕ್ಕೆ ಸಾಕ್ಷಿ. 2029ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 5-6 ಕೋಟಿ ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸುವ ಅರ್ಹತೆ ಪಡೆಯಲಿದ್ದಾರೆ. ಈ ಅಂಕಿಅಂಶವೇ ಇವರ ಮಹತ್ವವನ್ನು ಸಾರಿಹೇಳುತ್ತದೆ.
ಬೇಗುದಿಗೆ ಹಲವು ಕಾರಣ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ಸಂದರ್ಭದಲ್ಲಿ ಪ್ರಧಾನಿ ವಿರುದ್ಧ ಕೆಲವರು ಆಡಿದ ಎಲ್ಲೆ ಮೀರಿದ ಮಾತುಗಳು, ಅಪರಾಧ ಹಿನ್ನೆಲೆಯವರು ಕೂಡ ಆಂದೋಲನದಲ್ಲಿ ತೂರಿಕೊಂಡಿದ್ದು, ಇವೆಲ್ಲ ಸಹ ನಡೆದವು. ಉಳಿದ ವಿದ್ಯಾರ್ಥಿಗಳ ಮೇಲಿನ ಪ್ರಕರಣ ಹಿಂಪಡೆಯುವುದಾಗಿ ಹೇಳಿರುವ ಸರ್ಕಾರ, ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧದ ಕೇಸ್ ಮುಂದುವರಿಯುತ್ತದೆ ಎಂದು ಸವೋಚ್ಚ ನ್ಯಾಯಾಲಯದ ವಿಚಾರಣೆ ವೇಳೆ ಸ್ಪಷ್ಟಪಡಿಸಿದೆ. ಸಾರ್ವಜನಿಕ ಆಂದೋಲನ ನಡೆಸುವಾಗ ಸಂಘಟಕರು ಬೇರೆ ಬೇರೆ ಆಯಾಮಗಳಲ್ಲಿ ನೋಡಬೇಕಾಗುತ್ತದೆ ಎಂಬುದಕ್ಕೆ ಇದೊಂದು ಪಾಠ. ಇದೇನೇ ಇದ್ದರೂ, ಈ ಪ್ರತಿಭಟನೆಗೆ ಯುವಜನರ ಬೆಂಬಲ ದೊರಕಲು ಕೇವಲ ನೀಟ್ ಅವ್ಯವಸ್ಥೆ ಕಾರಣವೆನ್ನಲಾಗದು.
ನೀಟ್ ಮೇಲ್ನೋಟಕ್ಕೆ ಕಾಣುವ ಕಾರಣ. ಆದರೆ ಆಂತರ್ಯದ ಬೇಗುದಿಗೆ ಇನ್ನಷ್ಟು ಕಾರಣಗಳಿವೆ. ನಮ್ಮ ಒಟ್ಟಾರೆ ಶಿಕ್ಷಣ ವ್ಯವಸ್ಥೆ, ಅದರಲ್ಲಿನ ಗೊಂದಲಗಳು, ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ದೊರಕದ ಉದ್ಯೋಗ, ನೇಮಕಾತಿ ಹಗರಣಗಳು, ಬದಲಾದ ಸಾಮಾಜಿಕ-ಆರ್ಥಿಕ ಸನ್ನಿವೇಶದಲ್ಲಿ ತಮ್ಮ ಆಸೆಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಸರಿಯಾದ ಅವಕಾಶ ಸಿಗುತ್ತಿಲ್ಲವೆಂಬ ಹತಾಶೆ....ಇವೆಲ್ಲ ಅಂಶಗಳು ಹಿನ್ನೆಲೆಯಲ್ಲಿ ಕೆಲಸಮಾಡಿದಂತಿದೆ. ಆ ವೇಳೆ ಹಲವು ಮಂದಿ ಇಂಥ ಅನಿಸಿಕೆ ಹೇಳಿಕೊಂಡರು ಕೂಡ. ಒಂದು ಉದಾಹರಣೆ ಗಮನಿಸುವುದಾದರೆ: 2023-24ರಲ್ಲಿ ಕೇಂದ್ರದ 22 ನಾಗರಿಕ ಮತ್ತು ರಕ್ಷಣಾ ಸೇವೆಗಳ ವಲಯದಲ್ಲಿ 7,999 ಹುದ್ದೆಗಳಿಗೆ ನಡೆದ ಪರೀಕ್ಷೆಗಳಲ್ಲಿ ಒಟ್ಟು 15,08,430 ಅಭ್ಯರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ ಶೇ.0.5 ಜನರಿಗೆ ಮಾತ್ರ ಉದ್ಯೋಗ ಲಭ್ಯತೆಯ ಅವಕಾಶವಿತ್ತು. ಅಂದರೆ ಉದ್ಯೋಗ ಅವಕಾಶಕ್ಕೂ-ಆಕಾಂಕ್ಷಿಗಳಿಗೂ ಅಗಾಧ ಅಂತರವಿದೆ.
ಇವತ್ತಿನ ದಿನಮಾನದಲ್ಲಿ ಜನರಿಗೆ ಮುಖ್ಯ ಖರ್ಚಿನ ಬಾಬತ್ತುಗಳು ಶಿಕ್ಷಣ ಮತ್ತು ಆರೋಗ್ಯ ಎಂಬಂತಾಗಿದೆ. ಉತ್ತಮ ಶಿಕ್ಷಣ ಪಡೆದು, ಒಳ್ಳೆಯ ನೌಕರಿ ಗಿಟ್ಟಿಸಿಕೊಂಡು ಲೈಫಲ್ಲಿ ಸೆಟ್ಲ್ ಆಗಬೇಕು ಎಂಬುದು ಎಲ್ಲರ ಸಹಜ ಆಸೆ. ಹೀಗಾಗಿ ಬಡವರು ಸಹ ಸಾಲಸೋಲ ಮಾಡಿಯಾದರೂ ಮಕ್ಕಳನ್ನು ಓದಿಸುತ್ತಾರೆ. ಎಲ್ಕೆಜಿ ಯುಕೆಜಿಗೇ ಲಕ್ಷಾಂತರ ರೂಪಾಯಿ ತೆರಬೇಕು. ಪೂರ್ತಿ ಶಿಕ್ಷಣ ಮುಗಿಸುವ ಹೊತ್ತಿಗೆ ಎಷ್ಟು ಹಣವಾಗಿರುತ್ತದೆ! ಸರ್ಕಾರಗಳು ಎಷ್ಟು ಪ್ರಯತ್ನಪಟ್ಟರೂ ಸರ್ಕಾರಿ ಶಾಲೆಗಳ ಇಮೇಜನ್ನು ನಿರೀಕ್ಷಿಸಿದ ಮಟ್ಟಕ್ಕೆ ಎತ್ತರಿಸಲು ಆಗುತ್ತಿಲ್ಲ. ಹೀಗಾಗಿ ದುಬಾರಿಯಾದರೂ ಖಾಸಗಿಯತ್ತ ಜನರು ಮುಖಮಾಡುತ್ತಾರೆ. ಆದರೆ ಶಿಕ್ಷಣ ಪಡೆದರೂ ಮುಂದೆ ಅದಕ್ಕೆ ತಕ್ಕ ಉದ್ಯೋಗ ಸಿಕ್ಕೇಬಿಡುತ್ತದೆ ಎಂಬ ಗ್ಯಾರಂಟಿಯಿಲ್ಲ.
ಯಾವುದೇ ದೇಶದಲ್ಲಿ, ಅರ್ಹ ಎಲ್ಲರಿಗೂ ಸರ್ಕಾರಿ ಉದ್ಯೋಗ ನೀಡುವುದು ಅಸಾಧ್ಯ. ಇನ್ನೊಂದೆಡೆ, ಜಾಗತಿಕ ವಾತಾವರಣವನ್ನು ಅವಲಂಬಿಸಿ ಖಾಸಗಿ ವಲಯದಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಜಾಬ್ ಸಿಗದ ಯುವಜನರಿಗೆ ವ್ಯವಸ್ಥೆಯ ಮೇಲೆ ಸಹಜವಾಗಿ ಆಕ್ರೋಶ ಮೂಡುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಹೇಳಿದಂತೆ, ಜೆನ್ ಜೀ ಪೀಳಿಗೆಯ ಜತೆ ಮುಕ್ತ ಸಂವಾದ ನಡೆದರೆ ಅವರ ಒಳತೋಟಿಗಳನ್ನು ಅರಿಯಲು ಅನುವಾಗುತ್ತದೆ. ಶಿಕ್ಷಣ ಮತ್ತು ಆರೋಗ್ಯದ ವೆಚ್ಚವನ್ನು ತಗ್ಗಿಸಲು ತ್ವರಿತ ಕ್ರಮಗಳಾಗಬೇಕೆಂಬುದು ಜನರ ಮನದಾಳ. ಈ ಗೋಡೆ ಮೇಲಿನ ಬರಹವನ್ನು ಸಂಬಂಧಿಸಿದವರು ಗಮನಿಸಲೇಬೇಕಿದೆ.
ಕೊನೇ ಮಾತು: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಯುವಜನರ ಕುರಿತು ಈಚೆಗೆ ಆಡಿರುವ ಮಾತುಗಳು ಮತ್ತು ನೀಡಿರುವ ಸಲಹೆ ಮನನೀಯ. 'ಯುವಪೀಳಿಗೆ ಇಂದು ತಾವು ಅನುಭವಿಸುತ್ತಿರುವ ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಚೌಕಟ್ಟಿನೊಳಗೆ ನಾವು ಪಡೆಯುವ ಸ್ವಾತಂತ್ರ್ಯಕ್ಕೂ, ಮುಕ್ತತೆಯ ಸ್ವಾತಂತ್ರ್ಯಕ್ಕೂ ವ್ಯತ್ಯಾಸವಿದೆ. ಸ್ವಾತಂತ್ರ್ಯ ಎಂದರೆ ಸ್ವೇಚ್ಛೆಯಲ್ಲ. ಈ ಹಿಂದೆಯೂ ಭಾರತ ಇದೇ ರೀತಿ ಇತ್ತು ಎಂದು ಅವರು ಭಾವಿಸಿದ್ದಾರೆ.
ಆದರೆ ಹಾಗಿರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು, ಪ್ರಾಣತ್ಯಾಗ ಮಾಡಿದವರಿದ್ದರು. ಆದರೆ ಇಂದು ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಗುವ ಅಪಾಯದ ಮಟ್ಟ ತಲುಪಿದೆ. ನಮ್ಮ ಯುವಜನರು ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಅರಿಯಲು ಲೋಕಮಾನ್ಯ ಬಾಲಗಂಗಾಧರ ತಿಲಕರ ಜೀವನ ಮತ್ತು ದೇಶನಿರ್ವಣದಲ್ಲಿ ಅವರ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕು' ಎಂದಿದ್ದಾರೆ ದೋವಲ್. ನಮ್ಮ ಯುವಜನರ ಶಕ್ತಿಸಾಮರ್ಥ್ಯಗಳನ್ನು ಗುರುತಿಸಿ ಬೆನ್ನುತಟ್ಟುತ್ತಲೇ, ದೋವಲ್ ಮಾತು ಯುವಜನರಿಗೆ ಮಾರ್ಗದರ್ಶಕ ಎಂದೂ ಪರಿಗಣಿಸಬಹುದು...

