Dailyhunt Logo
  • Light mode
    Follow system
    Dark mode
    • Play Story
    • App Story
ಚಾರಿತ್ರಿಕ ದಾಖಲೆಯಲ್ಲಿ ಕರುನಾಡ ಹೆಜ್ಜೆ ಗುರುತುಗಳು

ಚಾರಿತ್ರಿಕ ದಾಖಲೆಯಲ್ಲಿ ಕರುನಾಡ ಹೆಜ್ಜೆ ಗುರುತುಗಳು

(ಲೇಖಕರು ರಾಜ್ಯ ಬಿಜೆಪಿ ಅಧ್ಯಕ್ಷರು)

ತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ದೇಶವನ್ನು ದೀರ್ಘಕಾಲ ಆಳಿದ ನಾಯಕರ ಹೆಸರುಗಳು ಸಿಗಬಹುದು. ಆದರೆ, ದೇಶದ ಕೋಟ್ಯಂತರ ಜನಸಾಮಾನ್ಯರ ಹೃದಯಗಳನ್ನು ಆಳುತ್ತ, ಅವರ ಬದುಕಿನ ಕತ್ತಲೆಯನ್ನು ಸರಿಸಿ ಅಭಿವೃದ್ಧಿಯ ಬೆಳಕು ನೀಡಿದ ನಾಯಕರು ಸಿಗುವುದು ಅತ್ಯಪರೂಪ.
ಸ್ವತಂತ್ರ ಭಾರತದ ಸುದೀರ್ಘ ಆಡಳಿತದ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮೀರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೇವಲ ಒಬ್ಬ ಜನಪ್ರಿಯ ಪ್ರಧಾನಿಯಾಗಿ ಉಳಿದಿಲ್ಲ. ಅವರು ದೇಶದ ಪ್ರತಿ ಪ್ರಜೆಯ ಮನೆಯ ಮಗನಾಗಿದ್ದಾರೆ, ಭರವಸೆಯ ಬೆಳಕಾಗಿದ್ದಾರೆ.
ನಾನು ಪ್ರಧಾನ ಸೇವಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಪ್ರಧಾನಿಯವರ ಕಣ್ಣುಗಳಲ್ಲಿ ನವ ಭಾರತದ ಕನಸಿದೆ, ಅವರ ಹೃದಯದಲ್ಲಿ ಕರುನಾಡಿನ ಮೇಲಂತೂ ಅಖಂಡ ಪ್ರೀತಿಯೇ ಇರುವುದನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಈ ಪ್ರೀತಿ, ಕಾಳಜಿ ಕೇವಲ ಭಾಷಣಗಳಲ್ಲಲ್ಲ, ಕರ್ನಾಟಕದ ಮಣ್ಣಿನ ಕಣಕಣದಲ್ಲೂ ಇಂದು ಜೀವಂತವಾಗಿ ವಿಕಸನಗೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಕರಾವಳಿಯ ತೀರದಿಂದ ಹಿಡಿದು ಬಯಲುಸೀಮೆಯ ಹಳ್ಳಿಗಳವರೆಗೆ ಮೋದಿ ಸರಕಾರದ ಅಭಿವೃದ್ಧಿಯ ಛಾಯೆಗಳನ್ನು ಸೆರೆಹಿಡಿಯುವ, ಸ್ಮರಿಸುವ ಹೊತ್ತಿದು. ಗಂಟೆಗಟ್ಟಲೆ ಧೂಳು, ಗುಂಡಿಗಳ ರಸ್ತೆಯಲ್ಲಿ ಬಳಲಿ ಬೆಂಡಾಗುತ್ತಿದ್ದ ಪ್ರಯಾಣಿಕನಿಗೆ ಇಂದು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಒಂದು ದಿವ್ಯ ಅನುಭೂತಿಯನ್ನು ನೀಡುತ್ತಿದೆ.
ಹೆದ್ದಾರಿಯ ಮೇಲೆ ವಾಹನ ಸಾಗುವಾಗ ಸಿಗುವ ಆ ನಯವಾದ ವೇಗ, ಕೇವಲ ರಸ್ತೆಯ ವೇಗವಲ್ಲ; ಅದು ಕನ್ನಡಿಗನ ಆರ್ಥಿಕ ಪ್ರಗತಿಯ ವೇಗ. ಪಶ್ಚಿಮ ಘಟ್ಟಗಳ ಹಸಿರ ಸಿರಿಯ ನಡುವೆ ಮೈದಳೆದ ಹೆದ್ದಾರಿಗಳು, ಕಡಿದಾದ ಬೆಟ್ಟಗಳನ್ನು ಸೀಳಿ ನಿರ್ವಿುಸಿದ ದೈತ್ಯ ಸೇತುವೆಗಳು ಇಂದು ಕರ್ನಾಟಕದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿವೆ. ರೈಲ್ವೆ ಹಳಿಗಳ ಮೇಲೆ ಸದ್ದಿಲ್ಲದೆ ಹಕ್ಕಿಯಂತೆ ಹಾರುವ 'ವಂದೇ ಭಾರತ್' ರೈಲಿನಲ್ಲಿ ಕುಳಿತ ಕನ್ನಡಿಗನ ಮುಖದಲ್ಲಿನ ಹೆಮ್ಮೆ, ಕಿಟಕಿಯಾಚೆಗಿನ ಪ್ರಕೃತಿಯಷ್ಟೇ ಸುಂದರವಾಗಿದೆ. ಒಂದು ಕಾಲದಲ್ಲಿ ವಿಮಾನ ಹತ್ತುವುದು ಕೇವಲ ಶ್ರೀಮಂತರ ಕನಸಾಗಿತ್ತು.
ಅದರಲ್ಲಿಯೂ ಮಲೆನಾಡಿನ ಭಾಗದ ಜನ ಎಲ್ಲೋ ಆಕಾಶದಲ್ಲಿ ಚುಕ್ಕಿಯಂತೆ ಸರಿಯುತ್ತಿದ್ದ ವಿಮಾನವನ್ನೇ ಕಿರುಗಣ್ಣಿನಿಂದ ನೋಡುತ್ತ ತೃಪ್ತರಾಗುತ್ತಿದ್ದರು. ಆದರೆ, ಈಗ? ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಹಿಡಿದು, ಕಲ್ಯಾಣ ಕರ್ನಾಟಕದ ಕಲಬುರಗಿ, ವಿಜಯಪುರದ ಆಕಾಶದಲ್ಲಿ ವಿಮಾನಗಳು ಹಾರಾಡುವಾಗ, ಸಾಮಾನ್ಯ ಕನ್ನಡಿಗನ ಕನಸುಗಳೂ ರೆಕ್ಕೆ ಬಿಚ್ಚಿ ಹಾರುತ್ತವೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಭವ್ಯ ಟರ್ವಿುನಲ್-2 ಪ್ರವೇಶಿಸಿದಾಗ, ಆಧುನಿಕತೆಯ ಜತೆಗೆ ನಮ್ಮ ನಾಡಿನ ಕಲೆ ಮತ್ತು ಪ್ರಕೃತಿಯನ್ನು ಸಮ್ಮಿಲನಗೊಳಿಸಿದ ಮೋದಿ ಅವರ ಕಲಾತ್ಮಕ ದೃಷ್ಟಿಗೆ ಮನಸ್ಸು ಮೂಕವಿಸ್ಮಿತವಾಗಿ ಕೈಮುಗಿಯುತ್ತದೆ.

ಮೋದಿ ಅವರ ಆಡಳಿತ ಕೇವಲ ಕಾಂಕ್ರೀಟ್ ಗೋಡೆಗಳನ್ನಷ್ಟೇ ಕಟ್ಟಲಿಲ್ಲ, ಅದು ಕನ್ನಡಿಗರ ಸ್ವಾಭಿಮಾನದ ಗೋಪುರವನ್ನೂ ಕಟ್ಟಿತು. ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿಗಳು ಪ್ರಭಾವಿ ರಾಜಕಾರಣಿಗಳ ಸಚಿವಾಲಯದಿಂದ ಹೊರಬಂದು, ಕರ್ನಾಟಕದ ಹಳ್ಳಿ-ಹಳ್ಳಿಗಳ ಗುಡಿಸಲುಗಳನ್ನು ತಲುಪಿದಾಗ ಇಡೀ ನಾಡು ಅಚ್ಚರಿಗೊಂಡಿದ್ದು, ಭಾವುಕವಾಗಿದ್ದನ್ನು ಯಾವ ಪದಗಳಿಂದಲೂ ವರ್ಣಿಸಲಾಗದು. ಕಾಲಿಗೆ ಚಪ್ಪಲಿಯೂ ಇಲ್ಲದೆ, ದೆಹಲಿಯ ಭವ್ಯ ದರ್ಬಾರ್ ಹಾಲ್​ನಲ್ಲಿ ನಡೆದುಹೋಗಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ವೃಕ್ಷಮಾತೆ ತುಳಸಿ ಗೌಡರನ್ನು ಕಂಡು ಕಣ್ಣಾಲಿಗಳು ಒದ್ದೆಯಾಗದ ಕನ್ನಡಿಗನಿದ್ದಾನೆಯೇ?

ಅಕ್ಷರ ಜ್ಞಾನವಿಲ್ಲದಿದ್ದರೂ ತಾನು ಗಳಿಸಿದ ಅಲ್ಪ ಹಣದಲ್ಲೇ ಬಡ ಮಕ್ಕಳಿಗಾಗಿ ಶಾಲೆ ಕಟ್ಟಿದ ಅಕ್ಷರ ಸಂತ ಹರೇಕಳ ಹಾಜಬ್ಬನ ಹೆಗಲ ಮೇಲೆ ಪ್ರಧಾನಿ ಮೋದಿ ಪ್ರೀತಿಯಿಂದ ಕೈಯಿಟ್ಟಾಗ, ಅದು ಇಡೀ ಶೋಷಿತ ಸಮಾಜಕ್ಕೆ ಸಿಕ್ಕ ಗೌರವವಾಗಿತ್ತು. ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ ಅವರಂಥ ಮಣ್ಣಿನ ಮಕ್ಕಳನ್ನು ಜಗತ್ತಿನ ಕಣ್ಣಿಗೆ ಪರಿಚಯಿಸಿದ ಮೋದಿ, ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆನಿಂತರು. ತುಮಕೂರಿನಲ್ಲಿ ತಲೆಯೆತ್ತಿರುವ ಏಷ್ಯಾದ ಅತಿ ದೊಡ್ಡ ಹೆಲಿಕಾಪ್ಟರ್ ಕಾರ್ಖಾನೆ ಇಂದು ಭಾರತದ ರಕ್ಷಣಾ ವಲಯದಲ್ಲಿ ಕರ್ನಾಟಕದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಮಿನುಗುವಂತೆ ಮಾಡಿದೆ.

ಹಳ್ಳಿಗಳ ಕೋಟ್ಯಂತರ ತಾಯಂದಿರು ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ನಡೆಯುವ ಕಷ್ಟವನ್ನು ಅರಿತ ಮೋದಿ, 'ಜಲ ಜೀವನ್ ಮಿಷನ್' ಮೂಲಕ ಪ್ರತಿಯೊಂದು ಮನೆಗೂ ಗಂಗೆಯನ್ನು ತಲುಪಿಸಿ ಕೋಟಿ ತಾಯಂದಿರ ಒಡಲ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ. ಇದು ಕೇವಲ ಆಡಳಿತವಲ್ಲ, ಇದು ಜನರ ನೋವಿಗೆ ಮಿಡಿಯುವ ಕರುಣೆ. ಪ್ರಧಾನಿ ನರೇಂದ್ರ ಮೋದಿ ಎನ್ನುವ ಧೀಮಂತ ನಾಯಕ ಕೇವಲ ದಾಖಲೆಗಳನ್ನು ಮುರಿಯಲು ಬಂದವರಲ್ಲ, ಬದಲಿಗೆ ಭಾರತದ ಭವಿಷ್ಯವನ್ನು ಬರೆಯಲು ಬಂದ ಯುಗಪುರುಷ. ಕರ್ನಾಟಕದ ಹೆಮ್ಮೆಯ ಇತಿಹಾಸ, ಸಂಸ್ಕೃತಿ ಮತ್ತು ಇಂದಿನ ಆಧುನಿಕ ತಂತ್ರಜ್ಞಾನವನ್ನು ಬೆಸೆದು, ಕರುನಾಡನ್ನು ಪ್ರಗತಿಯ ಶಿಖರಕ್ಕೇರಿಸಿದ ಹೆಗ್ಗಳಿಕೆ ಮೋದಿ ಅವರದು.

ಆಡಳಿತದ ಸುದೀರ್ಘ ಪಯಣದಲ್ಲಿ ಅವರು ಗಳಿಸಿರುವುದು ಕೇವಲ ಅಧಿಕಾರದ ವರ್ಷಗಳನ್ನಲ್ಲ, ಬದಲಿಗೆ ಕೋಟಿ ಕೋಟಿ ಜನರ ಅಚಲವಾದ ಪ್ರೀತಿ, ನಂಬಿಕೆ ಮತ್ತು ಹೃದಯದ ಸಿಂಹಾಸನವನ್ನು. ಮುಂದಿನ ದಿನಗಳಲ್ಲಿ ಕರುನಾಡಿನಲ್ಲಿಯೂ ಬಿಜೆಪಿ ಕಹಳೆ ಮೊಳಗಿ, ಈ ನಾಡು ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂಬ ವಿಶ್ವಾಸ ನನ್ನದು. ಕಳೆದ 12 ವರ್ಷಗಳಲ್ಲಿ ಭಾರತ ಕಂಡಿರುವ ಅಭಿವೃದ್ಧಿಯ ಪರ್ವಕ್ಕೆ ಮೋದಿ ಅವರ ದೂರದೃಷ್ಟಿಯ ಯೋಜನೆಗಳೇ ಸಾಕ್ಷಿ. ಅವರ ನೇತೃತ್ವದಲ್ಲಿ ಜಾರಿಯಾದ ಯೋಜನೆಗಳು ದೇಶದ ಹಾಗೂ ಕರ್ನಾಟಕದ ಪ್ರತಿಯೊಂದು ಕುಟುಂಬದ ಬದುಕನ್ನು ನೇರವಾಗಿ ಸರಿಸಿವೆ.

ಬ್ಯಾಂಕಿಂಗ್ ವ್ಯವಸ್ಥೆಯನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಂದ 'ಜನ್ ಧನ್', ಸ್ವಾವಲಂಬಿ ಬದುಕಿಗೆ ಆಸರೆಯಾದ 'ಮುದ್ರಾ', 'ಸ್ವನಿಧಿ', 'ಸ್ಟಾರ್ಟಪ್' ಹಾಗೂ 'ಸ್ಟ್ಯಾಂಡ್​ ಅಪ್ ಇಂಡಿಯಾ' ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಿವೆ. ಇನ್ನು, ಅನ್ನದಾತನಿಗೆ ಬೆಂಬಲವಾಗಿ ನಿಂತ 'ಕಿಸಾನ್ ಸಮ್ಮಾನ್ ನಿಧಿ' ಮತ್ತು 'ಫಸಲ್ ಬಿಮಾ', ಶ್ರಮಿಕರ ಕಲ್ಯಾಣದ 'ಶ್ರಮ ಯೋಗಿ ಮಾನ್​ಧನ್' ಮತ್ತು 'ಪಿಎಂ ವಿಶ್ವಕರ್ಮ' ಯೋಜನೆಗಳು ದುಡಿಯುವ ಕೈಗಳಿಗೆ ಗೌರವ ತಂದುಕೊಟ್ಟಿವೆ. 'ಉಜ್ವಲ' ಅನಿಲ ಸಂಪರ್ಕ, 'ಆವಾಸ್ ಯೋಜನೆ'ಯಡಿ ಸುಸಜ್ಜಿತ ಮನೆ, 'ಜಲ್ ಜೀವನ್ ಮಿಷನ್' ಮೂಲಕ ಮನೆಮನೆಗೆ ಗಂಗೆ ಹಾಗೂ 'ಆಯುಷ್ಮಾನ್ ಭಾರತ್' ಮತ್ತು 'ಮಾತೃ ವಂದನಾ' ಯೋಜನೆಗಳ ಮೂಲಕ ಸಿಗುತ್ತಿರುವ ಆರೋಗ್ಯ ಸುರಕ್ಷತೆ ಭಾರತೀಯರ ಜೀವನಮಟ್ಟವನ್ನು ಗಣನೀಯವಾಗಿ ಹೆಚ್ಚಿಸಿದೆ.

'ಗರೀಬ್ ಕಲ್ಯಾಣ್ ಅನ್ನ ಯೋಜನೆ' ಹಸಿವುಮುಕ್ತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುತ್ತಿದ್ದರೆ, 'ಡಿಜಿಟಲ್ ಇಂಡಿಯಾ', 'ಸ್ಮಾರ್ಟ್ ಸಿಟಿ' ಮತ್ತು 'ಅಮೃತ್ ಭಾರತ್ ಸ್ಟೇಷನ್' ಯೋಜನೆಗಳು ಭಾರತವನ್ನು ಆಧುನೀಕರಣದತ್ತ ಮುನ್ನಡೆಸುತ್ತಿವೆ. ಈ ಎಲ್ಲ ಜನಪರ ಯೋಜನೆಗಳ ಮೂಲಕ ಭಾರತೀಯರ ಬದುಕನ್ನು ಹಸನಾಗಿಸಿರುವ ಪ್ರಧಾನಿ ಮೋದಿ ಅವರು, ಮುಂಬರುವ ದಿನಗಳಲ್ಲಿ ದೇಶವನ್ನು ಮತ್ತಷ್ಟು ಉನ್ನತ ಶಿಖರಕ್ಕೇರಿಸುವ ಮೂಲಕ ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸಲಿ. ಆಡಳಿತದ ವಿಷಯದಲ್ಲಿ ಪಕ್ಷ ಸಂಕೋಲೆಗಳನ್ನು ದಾಟಿ ಒಟ್ಟು ಭಾರತದ ಅಭಿವೃದ್ಧಿಯ ದೃಷ್ಟಿಯಿಂದ ಮೋದಿಯವರು ಕೇಂದ್ರದಿಂದ ಸಹಕಾರದ ಆಲಿಂಗನಕ್ಕೆ ಬಾಗಿಲು ತೆರೆದು ಆಹ್ವಾನ ನೀಡುತ್ತಲೇ ಬಂದಿದ್ದಾರೆ. ಆದರೆ ಬಿಜೆಪಿಯೇತರ ಸರ್ಕಾರದ ಕೆಲ ರಾಜ್ಯಗಳು ಇದಕ್ಕೆ ಪೂರಕವಾಗಿ ಸ್ಪಂದಿಸದೇ ಮೊಸರಿನಲ್ಲಿ ಕಲ್ಲು ಹುಡುಕುವ ಮಾತುಗಳನ್ನಾಡುತ್ತ ಕಾಲ ಕಳೆದಿದ್ದಾರೆ. ಇದರ ಪರಿಣಾಮ ಕೆಲವು ಬಿಜೆಪಿಯೇತರ ರಾಜ್ಯಗಳು ಅಭಿವೃದ್ಧಿ ವಿಷಯದಲ್ಲಿ ಎಡವಿ ಬಿದ್ದಿವೆ.

ತಮ್ಮ ವೈಫಲ್ಯಗಳಿಗೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದೇ ಅವರ ಚಾಳಿಯಾಗಿದೆ. ಇದಕ್ಕೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವೂ ಹೊರತಲ್ಲ. ಏಕೆಂದರೆ 'ಮೋದಿ' ಎನ್ನುವ ಹೆಸರು ಕೇಳಿದ ತಕ್ಷಣವೇ ಚೇಳು ಕಚ್ಚಿದವರಂತೆ ಆಡಳಿತಾರೂಢ ಕಾಂಗ್ರೆಸ್​ನ ಕೆಲವು ನಾಯಕರು ವರ್ತಿಸುವುದನ್ನು ನೋಡಿದರೆ ಬೇಸರವಾಗುತ್ತದೆ. ಚುನಾವಣೆ ಮುಗಿದು ಮೂರು ವರ್ಷದ ಬಳಿಕವೂ ದ್ವೇಷದ ರಾಜಕಾರಣ ಮಾಡುವವರು ಈ ಸಂದೇಶದಿಂದ ಪಾಠ ಕಲಿಯಬೇಕಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ವಿಷಯ ಬಂದಾಗ ಪಕ್ಷಭೇದ ಮರೆತು ಒಟ್ಟಾಗಿ ಕೆಲಸ ಮಾಡಬೇಕೇ ಹೊರತು, ಅಲ್ಲಿಯೂ ಕ್ಷುಲ್ಲಕ ರಾಜಕೀಯ ಮಾಡಬಾರದು. ನರೇಂದ್ರ ಮೋದಿ ಎಂಬ ಮಹಾವ್ಯಕ್ತಿತ್ವದಿಂದ ಕೆಲವರು ಕಲಿಯುವುದು ಸಾಕಷ್ಟಿದೆ, ಅವರೂ ಕಲಿಯಲಿ. ನಾವು ಅವರನ್ನು ಅನುಸರಿಸೋಣ. ನವ ಭಾರತದ ಜತೆಗೆ ನವ ಕರ್ನಾಟಕವನ್ನು ಸಮೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಯುಗಪುರುಷ ಮೋದಿ. ದಾಖಲೆವೀರನಿಗೆ ಸಾವಿರ ಸಾವಿರ ಚಪ್ಪಾಳೆ. ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು.



ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani