ಮೈಸೂರು:ಜನರ ಮೇಲೆ ಪ್ರಭಾವ ಬೀರುವ ಚಲನಚಿತ್ರಗಳು ಸತ್ಯಕ್ಕೆ ಹತ್ತಿರವಾದ ಮೌಲ್ಯಯುತ ವಿಷಯಗಳನ್ನು ನೀಡಬೇಕು. ಧುರಂಧರ ಈ ಪ್ರಯತ್ನ ಮಾಡಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಿ.ವಿ.ಗುರುಪ್ರಸಾದ್ ಹೇಳಿದರು. ಅತಿ ಚರ್ಚಿತ ಧುರಂಧರರ ಬದುಕುಗಳನ್ನು ಆಧರಿಸಿದ 'ಪಾಕ್‌ನಲ್ಲಿ ಧುರಂಧರರು' ಕೃತಿಯನ್ನು ನಗರದ ಸಪ್ನ ಬುಕ್ ಹೌಸ್‌ನಲ್ಲಿ ಆಯೋಜಿಸಿದ್ದ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಚಾರಿತ್ರಿಕ, ಐತಿಹಾಸಿಕ ಚಿತ್ರಗಳನ್ನು ಸತ್ಯಕ್ಕೆ ಹತ್ತಿರವಿರುವ ಘಟನೆಗಳನ್ನ ಆಧರಿಸಿ ಮಾಡುವುದು ಕಷ್ಟ.
ಧುರಂಧರ ಇಂತಹ ಪ್ರಯತ್ನ ಮಾಡಿದೆ. ಪಾಕಿಸ್ತಾನದ ಐಎಸ್‌ಐ ಭಾರತಕ್ಕೆ ಖೋಟಾ ನೋಟುಗಳನ್ನು ಮುದ್ರಿಸಿ ಕಳುಹಿಸುತ್ತಿದೆ. ಭಾರತದಲ್ಲಿ ಈ ಹಿಂದೆ ನೋಟುಗಳ ಅಮಾನ್ಯೀಕರಣ ಮಾಡಲಾಗಿತ್ತು. ಈ ಮೂಲಕ ದೇಶದ ಆರ್ಥಿಕತೆ ಮೇಲೆ ನಡೆಯುತ್ತಿದ್ದ ಭಯೋತ್ಪಾದನೆಯನ್ನು ತಡೆಗಟ್ಟುಲು ಸಾಧ್ಯವಾಯಿತು ಎಂದು ತಿಳಿಸಿದರು. ಕೃತಿ ಬಿಡುಗಡೆಗೊಳಿಸಿದ ನಗರ ಪೊಲೀಸ್ ಆಯುಕ್ಷೆ ಸೀಮಾ ಲಾಟ್ಕರ್ ಮಾತನಾಡಿ, ಧುರಂಧರ್ ಚಿತ್ರ ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಈ ಸಂದರ್ಭದಲ್ಲಿ ಪಾಕ್‌ನಲ್ಲಿ ನಮ್ಮ ಧುರಂಧರರು ಪುಸ್ತಕ ಬರೆದಿರುವುದು ವಿಶೇಷವಾಗಿದೆ. ಎಲ್ಲರೂ ಧುರಂಧರ್ ಭಾಗ ಒಂದು, ಭಾಗ ಎರಡರ ಗುಂಗಲ್ಲೇ ಇದ್ದಾರೆ. ಇಂತಹ ಸಂದರ್ಭದಲ್ಲಿ ಗುರುಪ್ರಸಾದ್ ಅವರ ಈ ಪುಸ್ತಕದಲ್ಲಿ ಕುತೂಹಲಕಾರಿ ಸಂಗತಿಯನ್ನು ಹೊರಹಾಕುವ ಮೂಲಕ ಓದುವ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.ಗುರುಪ್ರಸಾದ್ ಅವರ ಜತೆ ಕಾರ್ಯನಿರ್ವಹಿಸುವಾಗ ಒಳ್ಳೆಯ ಪ್ರಕರಣಗಳನ್ನು ತನಿಖೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದರು. ಅವರ ವಿಶೇಷ ಗುಣವೆಂದರೆ ಎಲ್ಲ ಶಿಷ್ಯಂದಿರನ್ನು ಪ್ರೀತಿ, ಗೌರವದಿಂದ ಕಾಣುವ ದೊಡ್ಡತನವಿದೆ. ಈಗಲೂ ಅದೇ ಪ್ರೀತಿ, ವಿಶ್ವಾಸದಿಂದ ಎಲ್ಲರನ್ನೂ ಕಾಣುತ್ತಾರೆ. ಬರವಣೆಗೆಯನ್ನು ಮೈಗೂಡಿಸಿಕೊಂಡಿರುವ ಅವರು, ಮಾಹಿತಿಯುಳ್ಳ ಉತ್ತಮ ಪುಸ್ತಕಗಳನ್ನು ರಚಿಸಿದ್ದಾರೆ ಎಂದರು.ಪತ್ರಕರ್ತ ಕೂಡ್ಲಿ ಗುರುರಾಜ್ ಮಾತನಾಡಿ, ಗುರುಪ್ರಸಾದ್ ಅವರು ಬರಹಗಾರರಷ್ಟೇ ಅಲ್ಲ, ವೈವಿಧ್ಯಮಯ ಗುಣ ಹೊಂದಿದ್ದಾರೆ. ಅವರು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲೂ ಹಮ್ಮು, ಬಿಮ್ಮು ಇಲ್ಲದೆ ಕೆಲಸ ಮಾಡಿದವರು. ಮಾನವೀಯ ಅಂತಃಕರಣದಿಂದ, ಹೆಚ್ಚು ಪ್ರೀತಿಯಿಂದ ಎಲ್ಲರೊಡನೆ ಬೆರೆಯುತ್ತಿದ್ದುದು ವಿಶೇಷವಾಗಿತ್ತು ಎಂದು ತಿಳಿಸಿದರು.ಡಿಆರ್‌ಡಿಒ ನಿವೃತ್ತ ಪಿಆರ್‌ಒ ಎಸ್. ಜಯಪ್ರಕಾಶ್‌ರಾವ್, ಚಾಮರಾಜನಗರ ಲೋಕಾಯುಕ್ತ್ತ ಡಿವೈಎಸ್‌ಪಿ ಗಜೇಂದ್ರಪ್ರಸಾದ್, ಪತ್ರಕರ್ತರಾದ ನಂಜನಗೂಡು ಮೋಹನ್ ಕುಮಾರ್, ರೇಣುಕಾ ಮಂಜುನಾಥ್ ಮಾತನಾಡಿದರು.
ಇನ್ನಷ್ಟು ಓದಿ
ಇನ್ನಷ್ಟು ಓದಿ

