Dailyhunt
ಚೆನ್ನೈ ಸೂಪರ್‌ಕಿಂಗ್ಸ್‌ಗೆ ಸೋಲುಣಿಸಿ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್

ಚೆನ್ನೈ ಸೂಪರ್‌ಕಿಂಗ್ಸ್‌ಗೆ ಸೋಲುಣಿಸಿ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್

ದುಬೈ: ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧದ ಜಿದ್ದಾಜಿದ್ದಿನ ಪಂದ್ಯದ ಕೊನೇ ಓವರ್‌ನಲ್ಲಿ 3 ವಿಕೆಟ್‌ಗಳಿಂದ ಗೆಲುವು ದಾಖಲಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 14ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಟೂರ್ನಿಯಲ್ಲಿ 4ನೇ ಸೋಲು ಕಂಡ ಎಂಎಸ್ ಧೋನಿ ಬಳಗ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿಯಿತು.

ದುಬೈ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಕಾದಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸಿಎಸ್‌ಕೆ ತಂಡವನ್ನು ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ (18ಕ್ಕೆ 2) ಮತ್ತು ಆರ್. ಅಶ್ವಿನ್ (20ಕ್ಕೆ 1) ಕಾಡಿದರು. ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು (55*ರನ್, 43 ಎಸೆತ, 5 ಬೌಂಡರಿ, 2 ಸಿಕ್ಸರ್) ಆಸರೆಯಿಂದ ಸಿಎಸ್‌ಕೆ 5 ವಿಕೆಟ್‌ಗೆ 136 ರನ್ ಪೇರಿಸಿತು. ಪ್ರತಿಯಾಗಿ ಡೆಲ್ಲಿ ತಂಡಕ್ಕೂ ಪ್ರಮುಖ ಬ್ಯಾಟರ್‌ಗಳು ಕೈಕೊಟ್ಟರೂ, 19.4 ಓವರ್‌ಗಳಲ್ಲಿ 7 ವಿಕೆಟ್‌ಗೆ 139 ರನ್ ಪೇರಿಸಿ ಜಯಿಸಿತು.

ಸಾಧಾರಣ ಮೊತ್ತದ ಚೇಸಿಂಗ್ ಆರಂಭಿಸಿದ ಡೆಲ್ಲಿ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಒಂದೆಡೆ ಭದ್ರವಾಗಿ ನಿಂತಿದ್ದ ಎಡಗೈ ಆರಂಭಿಕ ಶಿಖರ್ ಧವನ್ (39 ರನ್, 35 ಎಸೆತ, 3 ಬೌಂಡರಿ, 2 ಸಿಕ್ಸರ್) ಕೂಡ ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಔಟಾದರು. ಕೊನೇ 5 ಓವರ್‌ಗಳಲ್ಲಿ ಡೆಲ್ಲಿಗೆ 38 ರನ್ ಅಗತ್ಯವಿದ್ದಾಗ ಜತೆಗೂಡಿದ ಶಿಮ್ರೊನ್ ಹೆಟ್ಮೆಯರ್ (28*ರನ್, 18 ಎಸೆತ, 2 ಬೌಂಡರಿ, 1 ಸಿಕ್ಸರ್) ಮತ್ತು ಅಕ್ಷರ್ ಪಟೇಲ್ (5) 7ನೇ ವಿಕೆಟ್‌ಗೆ 36 ರನ್ ಸೇರಿಸಿ ಜಯದತ್ತ ಮುನ್ನಡೆಸಿದರು. ಡ್ವೇನ್ ಬ್ರಾವೊ ಎಸೆದ ಅಂತಿಮ ಓವರ್‌ನ ಕೊನೇ 4 ಎಸೆತಗಳಲ್ಲಿ 2 ರನ್ ಬೇಕಿದ್ದಾಗ ಅಕ್ಷರ್ ಔಟಾದರೂ, ಕಗಿಸೊ ರಬಾಡ ಮರು ಎಸೆತದಲ್ಲಿ ಬೌಂಡರಿ ಬಾರಿಸಿ ಗೆಲುವು ತಂದರು. ಹೆಟ್ಮೆಯರ್ 12 ರನ್ ಗಳಿಸಿದ್ದಾಗ ಬದಲಿ ಫೀಲ್ಡರ್ ಕೆ. ಗೌತಮ್ ಕ್ಯಾಚ್ ಕೈಚೆಲ್ಲಿದ್ದು ಸಿಎಸ್‌ಕೆಗೆ ದುಬಾರಿಯಾಯಿತು. ಶಿಖರ್ ಧವನ್ (501) ಹಾಲಿ ಟೂರ್ನಿಯಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ 3ನೇ ಬ್ಯಾಟರ್ ಎನಿಸಿದರು. ಕೆಎಲ್ ರಾಹುಲ್ (528) ಮತ್ತು ಋತುರಾಜ್ ಗಾಯಕ್ವಾಡ್ (521) ಮೊದಲಿಬ್ಬರು.

ರಾಯುಡು-ಧೋನಿ ಆಧಾರ
ಸಿಎಸ್‌ಕೆ ತಂಡ 62 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಮಯದಲ್ಲಿ ಜತೆಗೂಡಿದ ಅಂಬಟಿ ರಾಯುಡು ಮತ್ತು ನಾಯಕ ಎಂಎಸ್ ಧೋನಿ 5ನೇ ವಿಕೆಟ್‌ಗೆ 64 ಎಸೆತಗಳಲ್ಲಿ 70 ರನ್ ಜತೆಯಾಟವಾಡಿದರು. ಈ ಪೈಕಿ ರಾಯುಡು ಅವರೊಬ್ಬರ ಕೊಡುಗೆಯೇ 51 ರನ್ ಆಗಿತ್ತು. ಧೋನಿ ಕ್ರೀಸ್‌ಗೆ ಅಂಟಿಕೊಂಡಿದ್ದರೂ, ರನ್ ಗಳಿಸಲು ಪರದಾಡಿದರು. ಎದುರಿಸಿದ 27 ಎಸೆತಗಳಲ್ಲಿ ಒಂದೂ ಬೌಂಡರಿ-ಸಿಕ್ಸರ್ ಬಾರಿಸದೆ 18 ರನ್ ಗಳಿಸಿದ ಧೋನಿ ಕೊನೇ ಓವರ್‌ನಲ್ಲಿ ಔಟಾದರು. ಮತ್ತೊಂದೆಡೆ ರಾಯುಡು ಮೊದಲಿಗೆ ತಾಳ್ಮೆಯ ಆಟವಾಡಿದರೂ ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿ ಸಿಎಸ್‌ಕೆ ಮೊತ್ತ ಏರಿಸಿದರು. ಆವೇಶ್ ಖಾನ್ ಮತ್ತು ನೋಕಿಯ ಎಸೆದ ಇನಿಂಗ್ಸ್‌ನ 18 ಮತ್ತು 19ನೇ ಓವರ್‌ನಲ್ಲಿ ತಲಾ 14 ರನ್ ಸಿಡಿಸುವ ಮೂಲಕ ಈ ಜೋಡಿ ಸಿಎಸ್‌ಕೆ ಮೊತ್ತವನ್ನು 130ರ ಗಡಿ ದಾಟಿಸಿತು.

ಅಕ್ಷರ್ ಪಟೇಲ್ ಆಘಾತ
ಸ್ಪಿನ್ನರ್ ಅಕ್ಷರ್ ಪಟೇಲ್ ಸಿಎಸ್‌ಕೆ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಇನಿಂಗ್ಸ್‌ನ 3ನೇ ಓವರ್‌ನಲ್ಲೇ ದಾಳಿಗಿಳಿದ ಅಕ್ಷರ್, ಫಾಫ್​ ಡು ಪ್ಲೆಸಿಸ್ (10) ವಿಕೆಟ್ ಕಬಳಿಸಿದರು. ಇದರ ಬೆನ್ನಲ್ಲೇ, ಕಳೆದ ಪಂದ್ಯದ ಶತಕವೀರ ಋತುರಾಜ್ ಗಾಯಕ್ವಾಡ್ (13) ವೇಗಿ ಅನ್ರಿಚ್ ನೋಕಿಯಗೆ ವಿಕೆಟ್ ಒಪ್ಪಿಸಿದರು. ಇದರಿಂದ ಸಿಎಸ್‌ಕೆ ಪವರ್‌ಪ್ಲೇಯಲ್ಲೇ ಇಬ್ಬರೂ ಆರಂಭಿಕರನ್ನು ಕಳೆದುಕೊಂಡಿತು. ಬಳಿಕ ಮೊಯಿನ್ ಅಲಿ ಕೂಡ ಅಕ್ಷರ್ ಪಟೇಲ್ ಎಸೆತದಲ್ಲೇ ಔಟಾದರು. ವನ್‌ಡೌನ್ ಬ್ಯಾಟ್ಸ್‌ಮನ್ ಆಗಿ ಆಡಿದ ಕನ್ನಡಿಗ ರಾಬಿನ್ ಉತ್ತಪ್ಪ ಎಸೆತಕ್ಕೊಂದರಂತೆ 19 ರನ್ ಗಳಿಸಿ ಕ್ರೀಸ್‌ನಲ್ಲಿ ನೆಲೆಯೂರುವ ಹಂತದಲ್ಲಿ ಅನುಭವಿ ಸ್ಪಿನ್ನರ್ ಅಶ್ವಿನ್‌ಗೆ ರಿಟರ್ನ್ ಕ್ಯಾಚ್ ನೀಡಿ ನಿರಾಸೆ ಅನುಭವಿಸಿದರು. ರಾಬಿನ್ ಉತ್ತಪ್ಪ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡಿದ 2ನೇ ಕನ್ನಡಿಗರೆನಿಸಿದರು. ಈ ಮುನ್ನ 2015ರಲ್ಲಿ ರೋನಿತ್ ಮೋರೆ 2 ಪಂದ್ಯವಾಡಿದ್ದರು.

ಕೊನೆಗೂ ರಾಬಿನ್ ಉತ್ತಪ್ಪ ಕಣಕ್ಕೆ
ಈ ವರ್ಷ ಸಿಎಸ್‌ಕೆ ತಂಡ ಸೇರಿ ಬೆಂಚು ಕಾಯುಸುತ್ತಿದ್ದ ಕರ್ನಾಟಕದ ಅನುಭವಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಟೂರ್ನಿಯ 13ನೇ ಲೀಗ್ ಪಂದ್ಯದಲ್ಲಿ ಕೊನೆಗೂ ಅವಕಾಶ ಪಡೆದರು. ಮೊಣಕಾಲು ಸಮಸ್ಯೆ ಎದುರಿಸುತ್ತಿರುವ ಸುರೇಶ್ ರೈನಾ ಬದಲಿಗೆ ಉತ್ತಪ್ಪ ಸಿಎಸ್‌ಕೆ ಪರ ಮೊದಲ ಪಂದ್ಯವಾಡಿದರು. ಜತೆಗೆ ಸ್ಯಾಮ್ ಕರ‌್ರನ್ ಮತ್ತು ಕೆಎಂ ಆಸಿಫ್​ ಬದಲಿಗೆ ಡ್ವೇನ್ ಬ್ರಾವೊ ಮತ್ತು ದೀಪಕ್ ಚಹರ್ ಮರಳಿದರು. ಡೆಲ್ಲಿ ಪರ ಗುಜರಾತ್ ಬ್ಯಾಟರ್ ರಿಪಲ್ ಪಟೇಲ್ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಸ್ಟೀವನ್ ಸ್ಮಿತ್ ಬದಲಿಗೆ ಕಣಕ್ಕಿಳಿದರು.

ಮಹಿಳಾ ಕ್ರಿಕೆಟರ್​ ಸ್ಮತಿ ಮಂದನಾ ಶತಕಕ್ಕಿಂತ ಮುಂಗುರುಳಿಗೆ ಫಿದಾ ಆದ್ರೂ ಫ್ಯಾನ್ಸ್!

Dailyhunt
Disclaimer: This content has not been generated, created or edited by Dailyhunt. Publisher: Vijayvani