ಮೈಸೂರು:ಮೈಸೂರು ರೈಲು ನಿಲ್ದಾಣದ ಮೇಲ್ದರ್ಜೆಗೇರಿಸುವ ಹಾಗೂ ತೃತೀಯ ಪ್ರವೇಶ ದ್ವಾರ ಕಾಮಗಾರಿಗಳಿಗೆ ಅನುಮೋದನೆ ಹಾಗೂ ಚೆನ್ನೈ-ಮೈಸೂರು ಹೈಸ್ಪೀಡ್ ರೈಲು ಸಂಪರ್ಕ ವಿಸ್ತರಣೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದರು.
ಮೈಸೂರು ರೈಲು ನಿಲ್ದಾಣದ ಬಹುಕಾಲದ ನಿರೀಕ್ಷೆಯ ತೃತೀಯ ಪ್ರವೇಶ ದ್ವಾರ ಹಾಗೂ ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ತಕ್ಷಣದ ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆ ನೀಡುವಂತೆ ಇತ್ತೀಚೆಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ. ಚೆನ್ನೈ -ಮೈಸೂರು ಹೈಸ್ಪೀಡ್ ರೈಲು (ಬುಲೆಟ್ ಟ್ರೈನ್) ಸಂಪರ್ಕವನ್ನು ವಿಸ್ತರಿಸುವ ಸಾಧ್ಯತೆಯನ್ನು ಪರಿಗಣಿಸುವಂತೆ ಕೋರಿದ್ದಾರೆ. ಅಲ್ಲದೆ, ಶೈಕ್ಷಣಿಕ, ಪ್ರವಾಸೋದ್ಯಮ ಹಾಗೂ ಆರ್ಥಿಕ ಕೇಂದ್ರವಾಗಿ ಬೆಳೆಯುತ್ತಿರುವ ಮೈಸೂರಿಗೆ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ರೈಲ್ವೆ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.ಸಚಿವರ ಹಿಂದಿನ ನಿರ್ದೇಶನದಂತೆ ತಾವು ವಾಸ್ತುಶಿಲ್ಪಿಗಳು ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ್ದು, ಯೋಜನೆಯ ವಿನ್ಯಾಸ ಮತ್ತು ಯೋಜನಾ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಶೀಘ್ರದಲ್ಲೇ ಆಡಳಿತಾತ್ಮಕ ಹಾಗೂ ಆರ್ಥಿಕ ಅನುಮೋದನೆ ನೀಡಿ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸುವಂತೆ ಮನವಿ ಮಾಡಿದ್ದಾರೆ.ಹೈಸ್ಪೀಡ್ ರೈಲು ಸಂಪರ್ಕ ವಿಸ್ತರಣೆಯಿಂದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಆರ್ಥಿಕ ಏಕೀಕರಣವನ್ನು ಬಲಪಡಿಸಬಹುದು. ಜೊತೆಗೆ ಪ್ರವಾಸೋದ್ಯಮ, ವ್ಯಾಪಾರ ಹಾಗೂ ಹೂಡಿಕೆ ಅವಕಾಶಗಳಿಗೆ ಉತ್ತೇಜನ ನೀಡಲಿದೆ. ಬೆಳೆಯುತ್ತಿರುವ ಕೈಗಾರಿಕಾ ಮತ್ತು ಶೈಕ್ಷಣಿಕ ಪರಿಸರ ವ್ಯವಸ್ಥೆಗೆ ಪೂರಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇನ್ನಷ್ಟು ಓದಿ
ಇನ್ನಷ್ಟು ಓದಿ

