Saturday, 01 Aug, 12.18 pm ವಿಜಯವಾಣಿ

ಮುಖಪುಟ
ಚೀನಾದ ಸೇನೆ ಕಾಗದದ ಮೇಲಿನ ಹುಲಿ, ಇವೆ ಹಲವು ದೌರ್ಬಲ್ಯ

ನವದೆಹಲಿ: ಇಡೀ ವಿಶ್ವವೇ ಭಾವಿಸುವಂತೆ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಸಂಖ್ಯಾಬಲದಿಂದ ಬಲಿಷ್ಠ ಸೇನೆ ಎಂಬಂತೆ ಕಾಣುತ್ತದೆ. ಆದರೆ, ಅದರ ಒಳಗೆ ಹೊಕ್ಕು ನೋಡಿದಾಗ ಅದರಲ್ಲಿ ಹಲವು ನ್ಯೂನತೆಗಳು, ದೌರ್ಬಲ್ಯಗಳು ಇರುವುದು ಗೊತ್ತಾಗುತ್ತದೆ.

ಆಗಸ್ಟ್​ 1ರಂದು ಪಿಎಲ್​ಎ ತನ್ನ 93ನೇ ಸಂಸ್ಥಾಪನಾ ದಿನ ಆಚರಿಸುತ್ತಿದೆ. ನಾನ್​ಚಾಂಗ್​ ಕ್ರಾಂತಿಯ ಸಂದರ್ಭದಲ್ಲಿ ನೆಲೆಯನ್ನು ಭದ್ರತಪಡಿಸಿಕೊಂಡು ಚೀನಾ ಕಮ್ಯುನಿಷ್ಟ್​ ಪಾರ್ಟಿ (ಸಿಸಿಪಿ) 1927ರಲ್ಲಿ ಪಿಎಲ್​ಎ ಅನ್ನು ಸ್ಥಾಪಿಸಿತ್ತು. ಚೀನಾದಲ್ಲಿ ಆಂತರಿಕ ಕದನಗಳು ಜೋರಾಗಿದ್ದಾಗ ಕೌಮಿನ್​ಟ್ಯಾಂಗ್​ನ ಕಮ್ಯುನಿಸ್ಟ್​ ವಿರೋಧಿ ಹೋರಾಟಗಳನ್ನು ಹತ್ತಿಕ್ಕಲು ಶಸ್ತ್ರಾಸ್ತ್ರ ಪಡೆಯಾಗಿ ಪಿಎಲ್​ಎ ಅನ್ನು ಸ್ಥಾಪಿಸಲಾಗಿತ್ತು. ಇದೀಗ ಈ ಸೇನೆಯಲ್ಲಿ 2.03 ದಶಲಕ್ಷ ಯೋಧರು ಹಾಗೂ 5.10 ಲಕ್ಷ ಮೀಸಲು ಪಡೆ ಯೋಧರು ಇದ್ದು, ವಿಶ್ವದ ಅತಿದೊಡ್ಡ ಸೇನಾಪಡೆ ಎನಿಸಿಕೊಂಡಿದೆ.

ಪಿಎಲ್​ಎಯ ಇತ್ತೀಚಿನ ಇತಿಹಾಸವನ್ನು ಗಮನಿಸಿದಾಗ ಅದರಲ್ಲಿ ಎರಡು ಮಹತ್ತರ ಬದಲಾವಣೆಗಳು ಕಾಣಿಸುತ್ತವೆ. 1990ರ ಖಾರಿ ಯುದ್ಧದ ಸಂದರ್ಭದಲ್ಲಿ ಅಮೆರಿಕ ಅತ್ಯಾಧುನಿಕ ಮತ್ತು ಮಾರಕವಾದ ಶಸ್ತ್ರಾಸ್ತ್ರಗಳನ್ನು ಬಳಸಿತ್ತು. ಇದನ್ನು ಗಮನಿಸಿದ ಚೀನಾ ತನ್ನ ಪಿಎಲ್​ಎ ಅನ್ನು ತಾಂತ್ರಿಕವಾಗಿ ಆಧುನೀಕರಣಗೊಳಿಸಿ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲು ನಿರ್ಧರಿಸಿತು. ಅಂತೆಯೇ 2049ರ ವೇಳೆಗೆ ಪಿಎಲ್​ಎ ಅನ್ನು ವಿಶ್ವದ ಅತ್ಯಂತ ಬಲಿಷ್ಠ ಸೇನೆಯನ್ನಾಗಿಸಲು ಚೀನಾದ ಸೆಂಟ್ರಲ್​ ಮಿಲಿಟರಿ ಕಮಿಷನ್​ (ಸಿಎಂಸಿ) ಚೇರ್ಮನ್​ ಆಗಿರುವ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ನಿರ್ಧರಿಸಿದ್ದಾರೆ. ಆದ್ದರಿಂದ ಅದರ ರಚನಾವಿನ್ಯಾಸ ಮತ್ತು ಆಧುನೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಯತ್ನಿಸುತ್ತಿದ್ದಾರೆ.

ಪಿಎಲ್​ಎ ಅದೆಷ್ಟೇ ಆಧುನೀಕರಣಗೊಂಡರೂ, ತಾಂತ್ರಿಕವಾಗಿ ಬಲಿಷ್ಠವಾದರೂ ಅದಕ್ಕೆ ಅದರದ್ದೇ ಆದ ಅನೇಕ ದೌರ್ಬಲ್ಯಗಳಿವೆ. ಅವುಗಳಲ್ಲಿ ನಾಲ್ಕು ಪ್ರಮುಖ ದೌರ್ಬಲ್ಯಗಳು ಅದರ ಪಾಲಿಗೆ ಮಾರಕವಾಗುವುದು ನಿಶ್ಚಿತವಾಗಿದೆ.

ಪಿಎಲ್​ಎಗೆ ಶಾಂತಿ ಎಂಬ ಪದವೇ ಬಹುದೊಡ್ಡ ಅಲರ್ಜಿ. ಶಾಂತಿಯ ಕಾಯಿಲೆ, ಶಾಂತಿ ಸಂದರ್ಭದಲ್ಲಿನ ವರ್ತನೆಗಳು ಮತ್ತು ಶಾಂತಿ ಸಮಯದ ಸಮಸ್ಯೆಗಳಿಂದ ಬಳಲುತ್ತಿದೆ. 1979ರ ನಂತರದಲ್ಲಿ ಯಾವುದೇ ಯುದ್ಧ ಮಾಡದಿರುವುದು ಅದರ ಈ ಸ್ಥಿತಿಗೆ ಕಾರಣವಾಗಿದೆ. ಶಾಂತಿಯ ಸಂದರ್ಭದಲ್ಲಿ ಏರ್ಪಡಿಸುವ ತರಬೇತಿ ಕಾರ್ಯಕ್ರಮಗಳನ್ನು ಯೋಧರು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಗಾಗಿ ಯುದ್ಧಕ್ಕೆ ಸನ್ನದ್ಧಗೊಳ್ಳಬೇಕಾದ ಸಂದರ್ಭದಲ್ಲಿ ಇದು ಬಹುದೊಡ್ಡ ತೊಡಕಾಗುವುದರಲ್ಲಿ ಅನುಮಾನವಿಲ್ಲ.

ಆಧುನಿಕ ಯುದ್ಧತಂತ್ರಗಾರಿಕೆ ಪಿಎಲ್​ಎಗೆ ಅರ್ಥವಾಗುವುದಿಲ್ಲ ಎಂಬ ಆತಂಕ ಚೀನಾ ಕಮ್ಯುನಿಸ್ಟ್​ ಪಾರ್ಟಿಗೆ (ಸಿಸಿಪಿ) ಇದ್ದೇ ಇದೆ. ಆದ್ದರಿಂದ, ವಾಸ್ತವ ಯುದ್ಧದ ವಾತಾವರಣದಲ್ಲಿ ತರಬೇತಿ ಆಯೋಜನೆಯನ್ನು ಕಡ್ಡಾಯಗೊಳಿಸಿ, ತರಬೇತಿ ಕಾರ್ಯಕ್ರಮದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಹಾಗಾಗಿಯೇ ಅದು 2014ರ ನಂತರದಲ್ಲಿ ದ್ವಿಪಕ್ಷೀಯ ಮತ್ತು ತ್ರಿಪಕ್ಷೀಯ ಸಮರ ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾರಂಭಿಸಿದೆ. ಯಾವುದಾದರೂ ಒಂದು ದೇಶದ ಮೇಲೆ ಚೀನಾ ಯುದ್ಧ ಸಾರದ ಹೊರತು ಈ ಬದಲಾವಣೆಯಿಂದ ಆಗಿರುವ ಪರಿಣಾಮ ಏನೆಂಬುದು ಸ್ಪಷ್ಟವಾಗುವುದಿಲ್ಲ.

ಕಳೆದ ಎರಡು ದಶಕಗಳಿಂದ ಪಿಎಲ್​ಎ ಆಧುನೀಕರಣಕ್ಕೆ ತನ್ನನ್ನು ತಾನು ತೆರೆದುಕೊಂಡಿದೆ. 2012ರಲ್ಲಿ ಕ್ಸಿ ಜಿನ್​ಪಿಂಗ್​ ಸಿಎಂಸಿ ಚೇರ್ಮನ್​ ಆದ ನಂತರದಲ್ಲಿ ಈ ಪ್ರಕ್ರಿಯೆ ಮತ್ತಷ್ಟು ವೇಗ ಪಡೆದುಕೊಂಡಿದೆ. ಚೀನಾದ ರಕ್ಷಣಾ ಬಜೆಟ್​, ದೊರೆಯುವ ಅನುದಾನಗಳ ಪ್ರಮಾಣವನ್ನು ಗಮನಿಸಿದಾಗ ಇದು ಸರ್ವವಿಧಿತವಾಗುತ್ತದೆ. ಆದರೆ, ಮಿಲಿಟರಿ ಆಧುನೀಕರಣ ಪ್ರಕ್ರಿಯೆ ಮತ್ತು ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ಚಾಕಚಕ್ಯತೆ ಮತ್ತು ಕೌಶಲಗಳು ಪಿಎಲ್​ಎ ಯೋಧರಿಗೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಅದರಲ್ಲೂ ವಿಶೇಷವಾಗಿ ತಾಂತ್ರಿಕ ಪರಿಣತಿಯನ್ನು ಹೆಚ್ಚಾಗಿ ಬೇಡುವ ನೌಕಾಪಡೆ, ವಾಯುಪಡೆ ಮತ್ತು ರಾಕೆಟ್​ ಪಡೆಗಳಲ್ಲೇ ಈ ಕೊರತೆ ಹೆಚ್ಚಾಗಿರುವುದು ಚೀನಾದ ಆತಂಕಕ್ಕೆ ಕಾರಣವಾಗಿದೆ.

ಈ ನ್ಯೂನತೆಯನ್ನು ಸರಿಪಡಿಸಿಕೊಳ್ಳಲು ಮುಂದಾಗಿರುವ ಪಿಎಲ್​ಎ ತನ್ನ ನೇಮಕಾತಿ ಪ್ರಕ್ರಿಯೆಯಲ್ಲಿ ತಾಂತ್ರಿಕ ವಿಶ್ವವಿದ್ಯಾಲಯಗಳ ಪದವೀಧರರನ್ನೇ ಹೆಚ್ಚಾಗಿ ನೇಮಿಸಿಕೊಳ್ಳಲು ಮುಂದಾಗುತ್ತಿದೆ. 2035ರ ವೇಳೆಗೆ ಸೇನೆಯನ್ನು ಮಾಹಿತಿತಂತ್ರಜ್ಞಾನ ಆಧಾರಿತವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವುದಾಗಿ 2017ರ ಪಕ್ಷದ ವಾರ್ಷಿಕ ಸಭೆಯಲ್ಲಿ ಕ್ಸಿ ಜಿನ್​ಪಿಂಗ್​ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬಲವಂತವಾಗಿ ಸೇನೆಗೆ ಸೇರ್ಪಡೆಗೊಳಿಸಿಕೊಳ್ಳುವ ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಪಿಎಲ್​ಎ ಮುಂದಾಗುತ್ತಿದೆ.

ಇದಕ್ಕಾಗಿ ಅದು ಅತ್ಯಂತ ಪ್ರತಿಭಾನ್ವಿತ ಯುವಕರನ್ನು ಸೇನೆಯತ್ತ ಸೆಳೆಯಲು ಭಾರಿ ಆರ್ಥಿಕ ಪ್ರೋತ್ಸಾಹಕಗಳನ್ನು ಘೋಷಿಸುತ್ತಿದೆ. ಅದರ ಈ ಪ್ರಯತ್ನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೂ, ಈ ಕ್ಷೇತ್ರದಲ್ಲಿರುವ ಕೊರತೆಯ ಕಂದಕವನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ.
ಮೂರನೆಯದ್ದು ಹಾಗೂ ಬಹುದೊಡ್ಡ ದೌರ್ಬಲ್ಯ ಎಂದರೆ ಭ್ರಷ್ಟಾಚಾರದ್ದಾಗಿದೆ. ಈ ಸಮಸ್ಯೆಯಿಂದಾಗಿ ಯುದ್ಧಭೂಮಿಯಲ್ಲಿ ಪಿಎಲ್​ಎ ಕಾಗದದ ಮೇಲಿನ ಹುಲಿಯಾಗಿ ಉಳಿಯುವಂತೆ ಮಾಡುತ್ತಿದೆ. 1980ರಲ್ಲಿ ಆದ ಹೊಸ ಮಾರುಕಟ್ಟೆ ಸುಧಾರಣೆಗಳಿಂದಾಗಿ ಪಿಎಲ್​ಎ ತನ್ನ ವ್ಯಾಪ್ತಿಯನ್ನು ವಾಣಿಜ್ಯೋದ್ಯಮದತ್ತಲೂ ವಿಸ್ತರಿಸಿತು. ಇದರಿಂದಾಗಿ ಭ್ರಷ್ಟಾಚಾರ ಪಿಎಲ್​ಎ ಅನ್ನು ಮಿತಿಮೀರಿ ವ್ಯಾಪಿಸಿತು. ಆಗಿನ ಸಿಎಂಸಿ ಚೇರ್ಮನ್​ ಜಿಯಾಗ್​ ಜೆಮಿನ್​ 1998ರಲ್ಲಿ ಮಿಲಿಟರಿ-ವಾಣಿಜ್ಯೋದ್ಯಮ ಕಾಂಪ್ಲೆಕ್ಸ್​ ಅನ್ನು ಬರ್ಖಾಸ್ತುಗೊಳಿಸುವ ಮೂಲಕ ಈ ಸಮಸ್ಯೆಯನ್ನು ನಿಯಂತ್ರಿಸಲು ಯತ್ನಿಸಿದರು. ಆದರೆ, ಆ ವೇಳೆಗಾಗಲೆ ಭ್ರಷ್ಟಾಚಾರದ ಬೇರು, ಬಿಳಲುಗಳು ತುಂಬಾ ಆಳಕ್ಕೆ ಮತ್ತು ವ್ಯಾಪಕವಾಗಿ ಹರಡಿಯಾಗಿತ್ತು. 2012ರಲ್ಲಿ ಸಿಸಿಪಿ ಪ್ರಧಾನ ಕಾರ್ಯದರ್ಶಿಯಾದ ಬಳಿಕ ಸೇನೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕ್ಸಿ ಹಲವು ಕ್ರಮಗಳನ್ನು ಕೈಗೊಂಡರು. ಇದರ ಪರಿಣಾಮ ಅಂದಾಜು 4 ಸಾವಿರ ಭ್ರಷ್ಟಾಚಾರ ಪ್ರಕರಣಗಳು ದಾಖಲಿಸಲ್ಪಟ್ಟವು. ಸಿಸಿಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಹ್ಯು ಜಿನ್ತಾವೋ ಕಾಲದಲ್ಲಿ ಸಿಎಂಸಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಕ್ಸು ಚೈಹೌ ಮತ್ತು ಗ್ಯು ಬಾಕ್ಸಿಯಾಂಗ್​ ವಿರುದ್ಧದ ಪ್ರಕರಣಗಳು ಪ್ರಮುಖವಾದವು.

ಸಿಎಂಸಿಯಲ್ಲಿ ಶಿಸ್ತು ಪರಿಶೀಲನಾ ಆಯುಕ್ತರ ನೇಮಕವನ್ನು ಆರಂಭಿಸಿದ್ದು, ನಾಲ್ಕು ಮಿಲಿಟರಿ-ಅಧಿಕಾರಶಾಹಿ ಇಲಾಖೆಗಳನ್ನು ಬರ್ಖಾಸ್ತುಗೊಳಿಸಿದ್ದು, ಸಿಎಂಸಿಯಿಂದ ಸೇನಾಪಡೆ ಮುಖ್ಯಸ್ಥರನ್ನು ತೆಗೆದುಹಾಕುವಂಥ ಪ್ರಕ್ರಿಯೆಗಳು ಆಂತರಿಕ ವಿರೋಧಗಳಿಗೆ ಕಾರಣವಾಗಿವೆ.
ಕ್ಸಿ ಜಾರಿಗೊಳಿಸಿದ ಈ ಸುಧಾರಣಾ ನೀತಿಗಳಿಂದಾಗಿ ಹಲವು ಪ್ರಭಾವಿಗಳು ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಪಿಎಲ್​ಎಯಿಂದ ಅವರೆಲ್ಲರನ್ನೂ ಕಿತ್ತೊಗೆಯುವ ಬದಲು ಅವರವರ ಶ್ರೇಣಿಗೆ ತಕ್ಕಂತೆ ಆಡಳಿತಕ್ಕೆ ಸಮಪರ್ಕವೆನಿಸಿದ ಹುದ್ದೆಗಳಿಗೆ ಅವರನ್ನು ಸೀಮಿತಗೊಳಿಸಲಾಗುತ್ತಿದೆ. ಇದರಿಂದ ಅಸಮಾಧಾನಗಳು ಮತ್ತು ವಿರೋಧಗಳು ಸ್ವಲ್ಪ ಕಡಿಮೆಯಾಗಿವೆ ಎನ್ನಲಾಗಿದೆ. ಆದರೆ, ಭ್ರಷ್ಟಾಚಾರ ನಿಯಂತ್ರಿಸುವ ಉದ್ದೇಶ ಮಾತ್ರ ಈಡೇರಿಲ್ಲ ಎನ್ನಲಾಗುತ್ತಿದೆ.

ಮಿಲಿಟರಿಯ ನಿರಂತರ ಆಧುನೀಕರಣದಿಂದಾಗಿ 2049ಕ್ಕೆ ಪಿಎಲ್​ಎ ಅನ್ನು ಬಲಿಷ್ಠ ಸೇನೆಯಾಗಿ ರೂಪಿಸುವ ಚೀನಾದ ಕನಸಿಗೆ ಕಿಚ್ಚು ಹೊತ್ತಿಸಿರಬಹುದು. ಆದರೆ, ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಈಗಾಗಲೆ ಸೇವೆಗೆ ಸೇರ್ಪಡೆಗೊಳಿಸಿಕೊಂಡಿರುವ ಯುದ್ಧೋಪಕರಣಗಳ ನಿರ್ವಹಣೆ ಕಷ್ಟವಾಗಿರುವುದು ಮಾರಕವಾಗಿ ಪರಿಣಮಿಸಬಹುದು.

ಮಿಲಿಟರಿ ಆಧುನೀಕರಣಕ್ಕಾಗಿ ಚೀನಾ ಮಾಡುತ್ತಿರುವ ಒಟ್ಟಾರೆ ರಕ್ಷಣಾ ವೆಚ್ಚ ಮತ್ತು ಬಂಡವಾಳ ವೆಚ್ಚ 2012ರಿಂದ ಪ್ರತಿವರ್ಷ ಹೆಚ್ಚಾಗುತ್ತಿದೆ. 2015ರ ನಂತರದಲ್ಲಿ ಇದು ಶೇ.40 ಅನ್ನು ಮೀರಿ ಹೋಗುತ್ತಿದೆ. 57 ದಶಲಕ್ಷಕ್ಕೂ ಹೆಚ್ಚು ಯೋಧರನ್ನು ಹೊಂದಿರುವ ಕಾರಣ ಪ್ರತಿವರ್ಷ ನಿವೃತ್ತಿ ಹೊಂದುವವರ ಸಂಖ್ಯೆಯೂ ದೊಡ್ಡದಾಗಿದೆ. ಅವರೆಲ್ಲರಿಗೂ ನಿವೃತ್ತಿ ನಂತರದ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಅವರಿಗೆ ಕೊಡುವ ಪಿಂಚಣಿ ಮತ್ತಿತರ ಭತ್ಯೆಗಳು ಚೀನಾದ ರಕ್ಷಣಾ ವೆಚ್ಚವೂ ತುಂಬಾ ಹೆಚ್ಚಾಗುತ್ತಿದೆ.

ನೌಕಾಪಡೆ ಮತ್ತು ವಾಯುಪಡೆಗಾಗಿ ಈಗಾಗಲೆ ಖರೀದಿಸಲಾಗಿರುವ ಉಪಕರಣಗಳು, ಯುದ್ಧವಿಮಾನ ಮತ್ತು ಯುದ್ಧನೌಕೆಗಳ ನಿರ್ವಹಣಾ ವೆಚ್ಚ ಅವುಗಳ ತಯಾರಿಕೆ ಮತ್ತು ಸೇವೆಗೆ ಸೇರ್ಪಡೆಗೊಳಿಸಿಕೊಳ್ಳುವ ವೆಚ್ಚವನ್ನೂ ಮೀರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇದು ಸೇರಿ ಸಮುದ್ರದಲ್ಲಿ ಸಂಚರಿಸುತ್ತಿರುವಾಗಲೇ ಯುದ್ಧನೌಕೆಗಳಿಗೆ ಇಂಧನ ಮರುಭರ್ತಿ ಮಾಡುವುದು, ಹಾರುತ್ತಿರುವಾಗಲೇ ಯುದ್ಧವಿಮಾನಗಳಿಗೆ ಇಂಧನ ಮರುಭರ್ತಿ ಮಾಡುವುದು ಸೇರಿ ಇನ್ನೂ ಹಲವು ಕೊರತೆಗಳು ಪಿಎಲ್​ಎ ಅನ್ನು ಕಾಡುತ್ತಿದೆ. ಹಾಗಾಗಿಯೇ ಅದನ್ನು ಕಾಗದದ ಮೇಲಿನ ಹುಲಿ ಎನ್ನಲು ಅಡ್ಡಿಯಿಲ್ಲ.

ಪ್ರೇಯಸಿ ಜತೆ ಚಕ್ಕಂದ ಆಡುವುದನ್ನು ಕಂಡ 6 ವರ್ಷದ ಬಾಲಕನನ್ನು ಕೊಂದ ಪ್ರೇಮಿ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top