Wednesday, 25 Nov, 7.45 am ವಿಜಯವಾಣಿ

ಮುಖಪುಟ
ದಶಕದ ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿ ಕೊಹ್ಲಿ, ಅಶ್ವಿನ್

ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ದಶಕದ ಕ್ರಿಕೆಟಿಗ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. ದಶಕದ ಕ್ರಿಕೆಟಿಗ ಪ್ರಶಸ್ತಿ ಅಲ್ಲದೆ, ದಶಕದ ಏಕದಿನ, ಟೆಸ್ಟ್ ಹಾಗೂ ಟಿ20 ಕ್ರಿಕೆಟಿಗ ಪ್ರಶಸ್ತಿ ವಿಭಾಗದಲ್ಲೂ ವಿರಾಟ್ ಕೊಹ್ಲಿ ಸ್ಪರ್ಧೆಯಲ್ಲಿದ್ದಾರೆ. ವಿವಿಧ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿರುವ ಆಟಗಾರರ ಹೆಸರುಗಳನ್ನು ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಕ್ರಿಕೆಟ್ ಪ್ರೇಮಿಗಳ ಮತದಾನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ವಿರಾಟ್ ಕೊಹ್ಲಿ ಹಾಗೂ ಅಶ್ವಿನ್ ಜತೆಗೆ 7 ಆಟಗಾರರನ್ನು ಪ್ರತಿಷ್ಠಿತ ದಶಕದ ಕ್ರಿಕೆಟಿಗ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ. ಇಂಗ್ಲೆಂಡ್‌ನ ಜೋ ರೂಟ್, ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌, ಶ್ರೀಲಂಕಾದ ಕುಮಾರ ಸಂಗಕ್ಕರ ನಾಮನಿರ್ದೇಶನಗೊಂಡಿರುವ ಇತರರು. ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ದಶಕದ ಏಕದಿನ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರೆ, ರೋಹಿತ್ ಶರ್ಮ ದಶಕದ ಏಕದಿನ ಮತ್ತು ಟಿ20 ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಮಿಥಾಲಿ ರಾಜ್, ಮಹಿಳಾ ವಿಭಾಗದಿಂದ ನಾಮ ನಿರ್ದೇಶನಗೊಂಡಿರುವ ಭಾರತದ ಏಕೈಕ ಆಟಗಾರ್ತಿ ಎನಿಸಿದ್ದಾರೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೂರು ಮಾದರಿಯಲ್ಲೂ 50ಕ್ಕಿಂತ ಹೆಚ್ಚಿನ ಸರಾಸರಿ ಹೊಂದಿದ್ದು, ಇದುವರೆಗೂ 70 ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದಾರೆ. ಸಚಿನ್ ತೆಂಡುಲ್ಕರ್ (100) ಹಾಗೂ ರಿಕಿ ಪಾಂಟಿಂಗ್ (71) ಬಳಿಕ ಅತಿ ಹೆಚ್ಚು ಶತಕ ಸಿಡಿಸಿರುವ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಮೂರು ಪ್ರಕಾರದಿಂದ ಇದುವರೆಗೂ 21,444 ರನ್ ಬಾರಿಸಿದ್ದಾರೆ. ಕಳೆದ ಒಂದು ದಶಕದಲ್ಲಿ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 7 ಸಾವಿರ ರನ್, ಏಕದಿನ ಕ್ರಿಕೆಟ್‌ನಲ್ಲಿ 11,000 ಹಾಗೂ ಟಿ20ಯಲ್ಲಿ 2600 ರನ್ ಬಾರಿಸಿದ್ದಾರೆ.

ಐಸಿಸಿ ಪ್ರಶಸ್ತಿಗೆ ನಾಮನಿರ್ದೇಶನ ಪಟ್ಟಿ:
ದಶಕದ ಕ್ರಿಕೆಟಿಗ: ವಿರಾಟ್ ಕೊಹ್ಲಿ, ಆರ್.ಅಶ್ವಿನ್, ಜೋ ರೂಟ್, ಕೇನ್ ವಿಲಿಯಮ್ಸನ್, ಸ್ಟೀವನ್ ಸ್ಮಿತ್, ಎಬಿ ಡಿವಿಲಿಯರ್ಸ್‌, ಕುಮಾರ್ ಸಂಗಕ್ಕರ.
ದಶಕದ ಮಹಿಳಾ ಕ್ರಿಕೆಟರ್: ಎಲ್ಲಿಸ್ ಪೆರ‌್ರಿ, ಮೆಗ್ ಲ್ಯಾನ್ನಿಂಗ್ (ಇಬ್ಬರೂ ಆಸ್ಟ್ರೇಲಿಯಾ), ಸೂಜಿ ಬೇಟ್ಸ್ (ನ್ಯೂಜಿಲೆಂಡ್), ಸ್ಟಿಫಾನಿ ಟೇಲರ್ (ವೆಸ್ಟ್ ಇಂಡೀಸ್), ಮಿಥಾಲಿ ರಾಜ್ (ಭಾರತ), ಸಾರ ಟೇಲರ್ (ಇಂಗ್ಲೆಂಡ್).
ದಶಕದ ಟೆಸ್ಟ್ ಕ್ರಿಕೆಟಿಗ: ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಸ್ಟೀವನ್ ಸ್ಮಿತ್, ಜೇಮ್ಸ್ ಆಂಡರ್‌ಸನ್, ರಂಗನಾ ಹೆರಾತ್, ಯಾಸಿರ್ ಷಾ.
ದಶಕದ ಏಕದಿನ ಕ್ರಿಕೆಟಿಗ: ವಿರಾಟ್ ಕೊಹ್ಲಿ, ಲಿಸಿತ್ ಮಾಲಿಂಗ, ಮಿಚೆಲ್ ಸ್ಟಾರ್ಕ್, ಎಬಿ ಡಿವಿಲಿಯರ್ಸ್‌, ರೋಹಿತ್ ಶರ್ಮ, ಎಂಎಸ್ ಧೋನಿ, ಕುಮಾರ ಸಂಗಕ್ಕರ.
ದಶಕದ ಟಿ20 ಕ್ರಿಕೆಟಿಗ: ರಶೀದ್ ಖಾನ್, ವಿರಾಟ್ ಕೊಹ್ಲಿ, ಇಮ್ರಾನ್ ತಾಹಿರ್, ಆರನ್ ಫಿಂಚ್, ಲಸಿತ್ ಮಾಲಿಂಗ, ಕ್ರಿಸ್ ಗೇಲ್, ರೋಹಿತ್ ಶರ್ಮ.
ದಶಕದ ಮಹಿಳಾ ಟಿ20 ಕ್ರಿಕೆಟರ್: ಮೆಗ್ ಲ್ಯಾನ್ನಿಂಗ್, ಸೋಫಿ ಡಿವೈನ್, ಎಲ್ಲಿಸ್ ಪೆರ‌್ರಿ, ಡಿಯೆಂಡ್ರಾ ಡಾಟಿನ್, ಅಲಿಸ್ಸಾ ಹೀಲಿ, ಅನ್ಯಾ ಶ್ರೋಬ್ಸೊಲೆ.
ದಶಕದ ಮಹಿಳಾ ಏಕದಿನ ಕ್ರಿಕೆಟರ್: ಮೆಗ್ ಲ್ಯಾನ್ನಿಂಗ್, ಮಿಥಾಲಿ ರಾಜ್, ಸೂಜಿ ಬೇಟ್ಸ್, ಸ್ಟಿಫಾನಿ ಟೇಲರ್, ಜೂಲನ್ ಗೋಸ್ವಾಮಿ.

ದಶಕದ ಕ್ರಿಕೆಟ್ ಸ್ಪಿರಿಟ್ ಪ್ರಶಸ್ತಿ: ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಬ್ರೆಂಡನ್ ಮೆಕ್ಕಲಂ, ಮಿಸ್ಬಾ ಉಲ್ ಹಕ್, ಎಂಎಸ್ ಧೋನಿ, ಅನ್ಯಾ ಶ್ರೋಬ್ಸೊಲೆ, ಕ್ಯಾಥರಿನ್ ಬ್ರಂಟ್, ಮಹೇಲಾ ಜಯವರ್ಧನೆ, ಡೇನಿಯಲ್ ವೆಟ್ಟೋರಿ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top