Dailyhunt
ಏ.೧೦ ರಂದು ದಶಮಂಟಪ ಕ್ರಿಕೆಟ್ ಪ್ರೀಮಿಯರ್ ಲೀಗ್

ಏ.೧೦ ರಂದು ದಶಮಂಟಪ ಕ್ರಿಕೆಟ್ ಪ್ರೀಮಿಯರ್ ಲೀಗ್

ಡಿಕೇರಿ: ಟೀಂ ಕೆ.ಆರ್.ಟಿ(ಟೀಮ್ ಕೋದಂಡರಾಮ ಟೆಂಪಲ್) ಆಯೋಜಿತ ೨ನೇ ವರ್ಷದ ದಶಮಂಟಪ ಪ್ರೀಮಿಯರ್ ಲೀಗ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಏ.೧೦ ರಂದು ಚಾಲನೆ ದೊರಕಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.ಕಳೆದ ವರ್ಷ ನೂತನ ಪರಿಕಲ್ಪನೆಯಲ್ಲಿ ಐತಿಹಾಸಿಕ ಮಡಿಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ದಶ ದೇವಾಲಯಗಳ ಮಂಟಪ ಸಮಿತಿಗಳನ್ನೊಳಗೊಂಡ ಕ್ರಿಕೆಟ್ ಪಂದ್ಯಾಟವನ್ನು ಟೀಂ ಕೆ.ಆರ್.ಟಿ ತಂಡ ಪ್ರಾರಂಭಿಸಿತ್ತು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಟೂರ್ನಿ ಯಶಸ್ವಿಯಾಗಿ ಜರುಗಿತ್ತು. ಈ ಬಾರಿ ೩ ದಿನಗಳ ಕಾಲ ೧೦ ಮಂಟಪ ತಂಡಗಳನ್ನೊಳಗೊಂಡ ಟೂರ್ನಿ ಏ.೧೦, ೧೧ ಹಾಗೂ ೧೨ ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಗೆದ್ದ ತಂಡಕ್ಕೆ ಆಕರ್ಷಕ ಹನುಮ ಗದೆ ಆಕಾರದ ರೋಲಿಂಗ್ ಟ್ರೋಫಿಯೊಂದಿಗೆ ವಿನ್ನರ್ಸ್‌ ಟ್ರೋಫಿ ಹಾಗೂ ನಗದು ಬಹುಮಾನವಿರಲಿದೆ. ಮೊದಲ ಹಾಗೂ ಎರಡನೆಯ ರನ್ನರ್ ಟ್ರೋಫಿಯನ್ನೂ ತಂಡಗಳಿಗೆ ನೀಡಲಾಗುವುದೆಂದು ಟೀಂ ಕೆ.ಆರ್.ಟಿ ತಂಡ ತಿಳಿಸಿದೆ.
ಟ್ರೋಫಿ ಅನಾವರಣ: ದಶಮಂಟಪ ಪ್ರೀಮಿಯರ್ ಲೀಗ್‌ನ ವಿನ್ನರ್ಸ್‌ ಹಾಗೂ ೨ ರನ್ನರ್ ಟ್ರೋಫಿಗಳ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಗರದ ಮಲ್ಲಿಕಾರ್ಜುನ ನಗರದಲ್ಲಿರುವ ಕೋದಂಡರಾಮ ದೇವಾಲಯದ ಸಮುದಾಯ ಭವನದಲ್ಲಿ ನೆರವೇರಿತು. ಅತಿಥಿ ಗಣ್ಯರು ಹಾಗೂ ದಾನಿಗಳು ಟ್ರೋಫಿ ಅನಾವರಣದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್ ಅನ್ವೇಕರ್ ಅವರು, ಟೂರ್ನಿ ನಡೆಸಲು ಎಲ್ಲರ ಸಹಕಾರ ಅಗತ್ಯವಿದೆ. ಪಾಲ್ಗೊಳ್ಳುವ ಪ್ರತಿ ಮಂಟಪ ಸಮಿತಿಯವರೂ ಧನಸಹಾಯ ಮಾಡಿದಲ್ಲಿ ಪಂದ್ಯಾಟ ಆಯೋಜನೆ ಸುಲಭವಾಗಲಿದೆ. ಸಮಿತಿಯವರು ಕನಿಷ್ಟ ೧೦ ಸಾವಿರ ಧನಸಹಾಯ ಮಾಡಿದಲ್ಲಿ ಆಯೋಜಕರ ಮೇಲಿನ ಹೊರೆ ಇಳಿಯಲಿದೆ ಎಂದರು.
ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್ ಕುಮಾರ್ ಮಾತನಾಡಿ, ಕೋದಂಡರಾಮ ದೇವಾಲಯದ ತಂಡವು ಪಂದ್ಯಾಟ ಪ್ರಾರಂಭಿಸುವ ಮೂಲಕ ಉತ್ತಮ ಹಜ್ಜೆ ಇಟ್ಟಿದೆ. ಎಲ್ಲ ಸಮಿತಿಗಳ ಸದಸ್ಯರ ಸಂಘಟನೆಗೆ ಈ ಪಂದ್ಯಾಟ ಸಹಕಾರಿಯಾಗಲಿದೆ. ಕೇವಲ ದಸರಾ ಸಂದರ್ಭ ಮಾತ್ರ ಒಟ್ಟಿಗೆ ಸೇರುವುದಲ್ಲದೇ ಇತರ ಸಂದರ್ಭಗಳಲ್ಲೂ ಒಟ್ಟಾಗಿ ಭಾಗವಹಿಸುವುದರಿಂದ ಸಮಿತಿ ಸದಸ್ಯರ ನಡುವೆ ಬಾಂಧವ್ಯ ಹೆಚ್ಚಾಗಲಿದೆ ಎಂದರು.
ಕೋದಂಡರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ನಂಜುಂಡ ಮಾತನಾಡಿ, ಕಳೆದ ಬಾರಿ ಪಂದ್ಯಾಟ ಅತ್ಯುತ್ತಮವಾಗಿ ಆಯೋಜನೆಗೊಂಡಿದೆ. ಈ ಬಾರಿಯೂ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ನಗರಸಭಾ ಅಧ್ಯಕ್ಷೆ ಕಲಾವತಿ ಅವರು ಮಾತನಾಡಿ, ಕ್ರೀಡಾಕೂಟದ ಯಶಸ್ಸಿಗೆ ಶುಭ ಹಾರೈಸಿದರು.
ಕೋದಂಡರಾಮ ದೇವಾಲಯದ ರಾಮ ಸೇವಾ ಸಮಿತಿ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ಟೂರ್ನಿಗೆ ಎಲ್ಲರ ಸಹಕಾರ ಅಗತ್ಯವಿದ್ದು, ಎಲ್ಲ ದೇವಾಲಯಗಳ ಸಮಿತಿಗಳೂ ಪಾಲ್ಗೊಳ್ಳುವಂತಾಗಬೇಕೆಂದರು.
ಶಕ್ತಿ ದಿನಪತ್ರಿಕೆಯ ಸಹಾಯಕ ಸಂಪಾದಕ ಪ್ರಜ್ವಲ್.ಜಿ.ಆರ್ ಮಾತನಾಡಿ, ಪ್ರತಿ ವರ್ಷ ಈ ಟೂರ್ನಿ ಆಯೋಜನೆ ಮಾಡುವುದಾಗಿ ಕಳೆದ ಬಾರಿ ಟೀಂ ಕೆ.ಆರ್.ಟಿ ತಂಡ ಘೋಷಿಸಿದ್ದು, ಅದರಂತೆ ನಡೆದುಕೊಳ್ಳುತ್ತಿದೆ. ಪಂದ್ಯಾಟದಲ್ಲಿ ಇತರ ಆಟಗಾರರೊಂದಿಗೆ ದಶಮಂಟಪ ಸಮಿತಿಗಳ ಸದಸ್ಯರೂ ಕನಷ್ಟ ಸಂಖ್ಯೆಯ ನಿಯಮದಡಿಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ನಗರಸಭಾ ನಾಮನಿರ್ದೇಶಿತ ಸದಸ್ಯರಾದ ಮುದ್ದುರಾಜು ಮಾತನಾಡಿ, ಈ ಬಾರಿಯ ದಸರಾಗೆ ದಶಮಂಟಪಗಳಿಗೆ ಹೆಚ್ಚುವರಿ ರೂ.೫ ಲಕ್ಷ ಅನುದಾನ ಒದಗಿಸುವ ಚಿಂತನೆ ಇದ್ದು, ಈ ಸಂಬಂಧ ಸದ್ಯದಲ್ಲಿಯೇ ಶಾಸಕರಾದ ಡಾ.ಮಂತರ್ ಗೌಡ ಅವರು ಮಂಟಪ ಸಮಿತಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದರು.
ಪಂದ್ಯಾಟಕ್ಕೆ ಸಹಕಾರ ನೀಡಿದ ಉದ್ಯಮಿಗಳಾದ ಅಲಿ, ತನುಜ, ದೇವಾಲಯದ ಟ್ರಸ್ಟ್ ಕಾರ್ಯದರ್ಶಿ ತಿಮ್ಮಯ್ಯ, ಪ್ರಮುಖರಾದ ರವೀಂದ್ರ ಹಾಗೂ ಜ್ಯೋತಿ ಯುವಕ ಸಂಘದ ಅಧ್ಯಕ್ಷ ವಿಶ್ವನಾಥ್ ಮಾತನಾಡಿ ಪಂದ್ಯಾಟಕ್ಕೆ ಶುಭ ಹಾರೈಸಿದರು. ಜ್ಯೋತಿ ಯುವಕ ಸಂಘದ ಸದಸ್ಯರಾದ ಮಹೇಶ್, ವಿಜಯ್, ಗಗನ್, ವಿವೇಕ್, ರೋಶನ್ ಹಾಗೂ ಇತರರು ಹಾಜರಿದ್ದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani