Thursday, 19 Nov, 9.13 pm ವಿಜಯವಾಣಿ

ಮುಖಪುಟ
ಇಂದಿನಿಂದ ಐಎಸ್‌ಎಲ್ ಫುಟ್‌ಬಾಲ್ ಹಬ್ಬ, ಲಾಕ್‌ಡೌನ್ ಬಳಿಕ ದೇಶದಲ್ಲಿ ಮೊದಲ ಕ್ರೀಡಾಕೂಟ

ಬಂಬೋಲಿಮ್ (ಗೋವಾ): ಐಪಿಎಲ್ ಟಿ20 ಟೂರ್ನಿ ಮುಗಿದ ಬೆನ್ನಲ್ಲೇ ಫುಟ್‌ಬಾಲ್ ಹಬ್ಬಕ್ಕೆ ವೇದಿಕೆ ಸಜ್ಜಾಗಿದೆ. ದೇಶದ ಪ್ರತಿಷ್ಠಿತ ಫುಟ್‌ಬಾಲ್ ಟೂರ್ನಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 7ನೇ ಆವೃತ್ತಿಗೆ ಶುಕ್ರವಾರ ಚಾಲನೆ ಸಿಗಲಿದೆ. ಎಟಿಕೆ ಮೋಹನ್ ಬಾಗನ್ ಮತ್ತು ಕೇರಳ ಬ್ಲಾಸ್ಟರ್ಸ್‌ ತಂಡಗಳ ನಡುವೆ ಜಿಎಂಸಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಲಾಕ್‌ಡೌನ್ ಬಳಿಕ ಮತ್ತು ಕಳೆದ 8 ತಿಂಗಳಲ್ಲಿ ದೇಶದಲ್ಲಿ ನಡೆಯಲಿರುವ ಮೊದಲ ಪ್ರಮುಖ ಕ್ರೀಡಾಕೂಟ ಇದಾಗಿದೆ. ಐಪಿಎಲ್ ಟೂರ್ನಿ ದೂರದ ಯುಎಇಯಲ್ಲಿ ನಡೆದಿದ್ದರೆ, ಐಎಸ್‌ಎಲ್‌ಗೆ ಗೋವಾದಲ್ಲಿ ಅಂಥದ್ದೇ ಬಯೋ-ಬಬಲ್ ವಾತಾವರಣ ನಿರ್ಮಿಸಲಾಗಿದೆ.

ಕರೊನಾ ಭೀತಿಯ ನಡುವೆ ಎಲ್ಲ ಪಂದ್ಯಗಳು ಗೋವಾದಲ್ಲಿ ಪ್ರೇಕ್ಷಕರಿಲ್ಲದೆ 3 ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಎಸ್‌ಸಿ ಈಸ್ಟ್ ಬೆಂಗಾಲ್ ತಂಡದ ಸೇರ್ಪಡೆಯೊಂದಿಗೆ ಈ ಬಾರಿ ಒಟ್ಟು 11 ತಂಡಗಳು ಕಣದಲ್ಲಿವೆ. ಇದಲ್ಲದೆ ಕೋಲ್ಕತದ ಪ್ರತಿಷ್ಠಿತ ಮೋಹನ್ ಬಾಗನ್ ತಂಡ ಈ ಬಾರಿ ಹಾಲಿ ಚಾಂಪಿಯನ್ ಎಟಿಕೆ ತಂಡದೊಂದಿಗೆ ವಿಲೀನವಾಗುತ್ತಿದ್ದು, ಎಟಿಕೆ ಮೋಹನ್ ಬಾಗನ್ ಹೆಸರಿನಲ್ಲಿ ತಂಡ ಕಣಕ್ಕಿಳಿಯುತ್ತಿದೆ. ಮಾಜಿ ಚಾಂಪಿಯನ್ ಬೆಂಗಳೂರು ಎಫ್​ಸಿ ತಂಡ ನವೆಂಬರ್ 22ರಂದು ಆತಿಥೇಯ ಎಫ್​ಸಿ ಗೋವಾ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಬೆಂಗಳೂರು ಎಫ್​ಸಿ ತನ್ನ ಎಲ್ಲ ತವರು ಪಂದ್ಯಗಳನ್ನು ಟೋರ್ಡ ಕ್ರೀಡಾಂಗಣದಲ್ಲಿ ಆಡಲಿದೆ. ವಾಸ್ಕೋದ ತಿಲಕ್ ಮೈದಾನ್ ಟೂರ್ನಿಯ ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ 3ನೇ ತಾಣವಾಗಿದೆ.

ಜನವರಿ 11ರವರೆಗಿನ ಮೊದಲ ಹಂತದ 55 ಲೀಗ್ ಪಂದ್ಯಗಳ ವೇಳಾಪಟ್ಟಿಯಷ್ಟೇ ಸದ್ಯಕ್ಕೆ ಬಿಡುಗಡೆಯಾಗಿದೆ. ಟೂರ್ನಿಯಲ್ಲಿ ಒಟ್ಟು 115 ಪಂದ್ಯಗಳು ನಡೆಯಲಿದ್ದು, ಫೆಬ್ರವರಿವರೆಗೂ ಲೀಗ್ ಪಂದ್ಯಗಳು ಸಾಗಲಿವೆ. ಬಳಿಕ ಅಗ್ರ 4 ತಂಡಗಳು ಸೆಮಿಫೈನಲ್ ಹಂತಕ್ಕೇರಲಿವೆ. ಪ್ರತಿದಿನ ರಾತ್ರಿ 7.30ರಿಂದ ಪಂದ್ಯಗಳು ನಡೆಯಲಿವೆ. 2 ಪಂದ್ಯಗಳಿರುವ ವಾರಾಂತ್ಯದ ದಿನಗಳಲ್ಲಿ ಮೊದಲ ಪಂದ್ಯ ಸಂಜೆ 5 ಗಂಟೆಗೆ ಆರಂಭಗೊಳ್ಳಲಿದೆ.

ಐ-ಲೀಗ್‌ನಿಂದ ಐಎಸ್‌ಎಲ್‌ಗೆ ಪ್ರವೇಶ ಪಡೆದಿರುವ ಮೋಹನ್ ಬಾಗನ್ ಮತ್ತು ಈಸ್ಟ್ ಬೆಂಗಾಲ್ ತಂಡಗಳಿಂದ ಟೂರ್ನಿಯ ಮೆರುಗು ಮತ್ತಷ್ಟು ಹೆಚ್ಚಾಗಿದ್ದು, ಟೂರ್ನಿಯಲ್ಲಿ ಕೋಲ್ಕತದ ಇವೆರಡು ಪ್ರತಿಷ್ಠಿತ ತಂಡಗಳ ಮೊದಲ ಮುಖಾಮುಖಿ ನವೆಂಬರ್ 27ರಂದು ನಡೆಯಲಿದೆ. ಶತಮಾನಕ್ಕೂ ಹಳೆಯದಾದ ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿಗೆ ಈಗ ಹೊಸ ವೇದಿಕೆ ದೊರೆತಿದೆ. ಟೂರ್ನಿಯ ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವ ತಂಡ ಎಎಫ್​ಸಿ ಚಾಂಪಿಯನ್ಸ್ ಲೀಗ್ ಟೂರ್ನಿಯ ಗ್ರೂಪ್ ಹಂತಕ್ಕೆ ನೇರಪ್ರವೇಶ ಪಡೆಯಲಿದೆ. ಟೂರ್ನಿಯ ವಿಜೇತ ತಂಡ ಎಎಫ್​ಸಿ ಕಪ್ ಅರ್ಹತಾ ಸುತ್ತಿಗೆ ಪ್ರವೇಶ ಪಡೆಯಲಿದೆ.

ಐಎಸ್‌ಎಲ್ ಟೂರ್ನಿಯ ಚಾಂಪಿಯನ್ ತಂಡ 8 ಕೋಟಿ ರೂ. ಬಹುಮಾನ ಗಳಿಸಲಿದೆ. ರನ್ನರ್‌ಅಪ್ ತಂಡ 4 ಕೋಟಿ ರೂ. ಮತ್ತು ಸೆಮಿಫೈನಲಿಸ್ಟ್ ತಂಡಗಳು ತಲಾ 1.5 ಕೋಟಿ ರೂ. ಬಹುಮಾನ ಪಡೆಯಲಿವೆ. ಇನ್ನು ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವ ತಂಡ 50 ಲಕ್ಷ ರೂ. ಬಹುಮಾನ ಪಡೆಯಲಿದೆ.

ತಂಡಗಳು: ಎಟಿಕೆ ಮೋಹನ್ ಬಾಗನ್, ಬೆಂಗಳೂರು ಎಫ್​ಸಿ, ಚೆನ್ನೈಯಿನ್ ಎಫ್​ಸಿ, ಎಫ್​ಸಿ ಗೋವಾ, ಹೈದರಾಬಾದ್ ಎಫ್​ಸಿ, ಜಮ್ಶೆಡ್‌ಪುರ ಎಫ್​ಸಿ, ಕೇರಳ ಬ್ಲಾಸ್ಟರ್ಸ್‌ ಎಫ್​ಸಿ, ಮುಂಬೈ ಸಿಟಿ ಎಫ್​ಸಿ, ನಾರ್ಥ್‌ಈಸ್ಟ್ ಯುನೈಟೆಡ್ ಎಫ್​ಸಿ, ಒಡಿಶಾ ಎಫ್​ಸಿ, ಎಸ್‌ಸಿ ಈಸ್ಟ್ ಬೆಂಗಾಲ್.

ಐಎಸ್‌ಎಲ್ ಚಾಂಪಿಯನ್ಸ್:
2014: ಅಥ್ಲೆಟಿಕೊ ಡಿ ಕೋಲ್ಕತ
2015: ಚೆನ್ನೈಯಿನ್ ಎಫ್​ಸಿ
2016: ಅಥ್ಲೆಟಿಕೊ ಡಿ ಕೋಲ್ಕತ
2017-18: ಚೆನ್ನೈಯಿನ್‌ ಎಫ್​ಸಿ
2018-19: ಬೆಂಗಳೂರು ಎಫ್​ಸಿ
2019-20: ಎಟಿಕೆ

ಇಂದು ಉದ್ಘಾಟನಾ ಪಂದ್ಯ
ಕೇರಳ ಬ್ಲಾಸ್ಟರ್ಸ್‌ ಎಫ್​ಸಿ-ಎಟಿಕೆ ಮೋಹನ್ ಬಾಗನ್
ಸ್ಥಳ: ಜಿಎಂಸಿ ಕ್ರೀಡಾಂಗಣ, ಬಂಬೊಲಿಮ್ (ಗೋವಾ)
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಇತರ ಕ್ರೀಡೆಗಳಿಗೆ ಸ್ಫೂರ್ತಿ ಎಂದ ದಾದಾ
ಐಎಸ್‌ಎಲ್ ಟೂರ್ನಿಯ ಯಶಸ್ಸು ದೇಶದಲ್ಲಿ ಇತರ ಕ್ರೀಡಾಸ್ಪರ್ಧೆಗಳನ್ನೂ ಆರಂಭಿಸಲು ಸ್ಫೂರ್ತಿಯಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. 'ಲಾಕ್‌ಡೌನ್ ಬಳಿಕ ದೇಶದಲ್ಲಿ ನಡೆಯುತ್ತಿರುವ ಮೊದಲ ಟೂರ್ನಿ ಇದಾಗಿದ್ದು, ಹೊಸ ಆರಂಭವಾಗಿದೆ. ನಮ್ಮ ಬದುಕು ಈಗ ಸಹಜಸ್ಥಿತಿಗೆ ಬರಬೇಕಾಗಿದ್ದು, ಭಯವನ್ನು ಓಡಿಸಬೇಕಿದೆ. ಕರೊನಾಗಿಂತ ಹೆಚ್ಚಾಗಿ ಅದರ ಭಯವೂ ಜನರನ್ನು ಬಾಧಿಸಿದೆ. ಐಎಸ್‌ಎಲ್ ಟೂರ್ನಿ ಇವೆಲ್ಲ ಭೀತಿಯನ್ನು ನಿವಾರಿಸಲಿದೆ. ಕ್ರಿಕೆಟ್ ಸಹಿತ ಇತರ ಕ್ರೀಡೆಗಳಿಗೂ ಈ ಟೂರ್ನಿ ಪ್ರೇರಣೆ ತುಂಬಲಿದೆ. ಮುಂದಿನ ವರ್ಷಾರಂಭದಲ್ಲೇ ದೇಶೀಯ ಕ್ರಿಕೆಟ್ ಋತು ಆರಂಭಿಸಲು ಇದೂ ಧೈರ್ಯ ತುಂಬಲಿದೆ ಎಂದು ಗಂಗೂಲಿ ಹೇಳಿದ್ದಾರೆ.

ಫುಟ್‌ಬಾಲ್ ಆಟಗಾರ್ತಿಯರ ತಾಯ್ತನ ಹಕ್ಕು ರಕ್ಷಣೆಗೆ ಹೊಸ ನಿಯಮ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top