ಮಾದನಹಿಪ್ಪರಗಿ: ವನ್ಯ ಸಂಪತ್ತು ನಾಶವಾಗುತ್ತಿದ್ದು, ಇದರಿಂದ ಮಳೆ ಕೊರತೆ ಹಾಗೂ ವಾತಾವರಣದಲ್ಲಿ ವ್ಯತಿರಿಕ್ತ ಪರಿಣಾಮ ಕಾಣುತ್ತಿದ್ದೇವೆ. ಹೀಗಾಗಿ ಅರಣ್ಯ ಸಂಪತ್ತನ್ನು ಹೆಚ್ಚಿಸಲು ಮುಂಬರುವ ಜೂನ್, ಜುಲೈನಲ್ಲಿ ಶಿವಲಿಂಗ ಹಸಿರ ವನ, ಸಿದ್ಧರಾಮರ ಹಸಿರು ವನ ಹೆಸರಿನಿಂದ ಒಂದು ಲಕ್ಷ ವೃಕ್ಷ ನೆಡುವ ಸಂಕಲ್ಪ ಮಾಡಿದ್ದೇವೆ ಎಂದು ಜಿಡಗಾ, ಮುಗಳಖೋಡ ಮಠದ ಪೀಠಾಧಿಪತಿ ಶ್ರೀ ಡಾ.ಮುರುರಾಜೇಂದ್ರ ಶಿವಯೋಗಿಗಳು ಹೇಳಿದರು.ಶಿವಲಿಂಗೇಶ್ವರ ವಿರಕ್ತ ಮಠದಲ್ಲಿ ಜಾತ್ರೋತ್ಸವ ನಿಮಿತ್ತ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಹಾಗೂ ಕೃಷಿ&ಕೃಷಿಕ ಚಿಂತನೆ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಾವಯವ ಕೃಷಿಯಿಂದ ಮಾತ್ರ ಸದೃಢ ಹಾಗೂ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ.
ಕೃಷಿ ಇಲ್ಲದೆ ರೈತರಿಲ್ಲ, ರೈತರಿಲ್ಲದೆ ದೇಶವಿಲ್ಲ. ಜಿಡಗಾ ಮಠವು ರೈತರ ಸಮಸ್ಯೆ ಬಗೆಹರಿಸಲು ನಿರಂತರ ಪ್ರಯತ್ನಿಸುತ್ತಿದೆ. ಜಿಡಗಾದಲ್ಲಿ 180 ಎಕರೆ ಜಮೀನಿನಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಕೆರೆ ನಿರ್ಮಾಣ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ಸರ್ಕಾರವೂ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕೆರೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಮಾತನಾಡಿ, ಭಾರತ ಋಷಿಮುನಿಗಳ, ಸಾಧು&ಸಂತರ, ಮಹಾಪುರುಷರ ದೇಶವಾಗಿದೆ. ಈ ಪರಂಪರೆ, ಸಂಸತಿಯನ್ನು ನಾಡಿನ ಮಠಾಧೀಶರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪೂಜ್ಯರ ಪ್ರವಚನ, ಸಂದೇಶಗ ಆಲಿಸುವುದರಿಂದ ಜೀವನದಲ್ಲಿ ಸುಖ&ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎಂದು ಹೇಳಿದರು.ಕಲಬುರಗಿ ಗೋಪಾಲ್ಸ್ ತಂಡದ ಮಲ್ಲಕಾರ್ಜುನ ಹೆಮಾಡೆ ಉಪನ್ಯಾಸ ನೀಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಪ್ರತಿ ಹಳ್ಳಿಗಳ ಜನ ಸ್ವಾವಲಂಬಿ ಜೀವನ ನಡೆಸುತ್ತಿದ್ದರು. ನಂತರ ರಾಸಾಯನಿಕ ರಸಗೊಬ್ಬರಗಳ ಗುಲಾಮರಾಗಿದ್ದೇವೆ. ಕಳೆನಾಶಕ ಎಣ್ಣೆ ಸಸ್ಯ ಸಂಕುಲಕ್ಕೆ ಮಾರಕಾವಾಗಿದೆ. ಇದರಿಂದ ಕರಕಿ, ನೆಗ್ಗಿನ ಮುಳ್ಳಿನ ಗಿಡ ಇತರೆ ಅನೇಕ ಔಷಧಿ ಗುಣಗಳುಳ್ಳ ಸಸ್ಯಗಳು ಕಣ್ಮರೆಯಾಗುತ್ತಿವೆ. ಅಲ್ಲದೆ ಕೀಟಗಳ ಸಂಖ್ಯೆ ಹೆಚ್ಚಾಗುತ್ತದೆ. ಕೀಟಗಳ ನಾಶಕ್ಕೆ ಕೀಟನಾಶಕ ಎಣ್ಣೆ ಹೊಡೆಯುತ್ತೇವೆ, ಸತ್ತ ಕೀಟಗಳ ತಿಂದು ಹಕ್ಕಿಗಳು ಸಾಯುತ್ತವೆ. ಹೀಗೆ ಒಂದೊಂದು ವಿನಾಶಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.ಮಕ್ತಂಪುರ ಗದ್ದುಗೆ ಮಠದ ಶ್ರೀ ಚರಲಿಂಗ ಸ್ವಾಮೀಜಿ, ಕಾರಬೋಸಗಾದ ಶ್ರೀ ಸಿದ್ಧರಾಮ ಸ್ವಾಮೀಜಿ, ಶ್ರೀ ವಾಮದೇವ ಶಿವಾಚಾರ್ಯ, ಶ್ರೀ ಬಸಮ್ಮ ಮಾತಾ, ಶ್ರೀ ಶರಣಮ್ಮ ಮಾತಾ, ಶ್ರೀ ಶಿವದೇವಿ ಮಾತಾ, ಅಕ್ಕಲಕೋಟ ನಗರಪಾಲಿಕೆ ಅಧ್ಯಕ್ಷ ಮಿಲಿಂದ್ ಕಲ್ಯಾಣಶೆಟ್ಟಿ, ಶಿವಲಿಂಗೇಶ್ವರ ಮಠದ ಅಧ್ಯಕ್ಷ ಸಿದ್ದರಾಮ ಪೊಲೀಸ್ ಪಾಟೀಲ್, ಕಾರ್ಯದರ್ಶಿ ಸಿದ್ದರಾಮ ಅರಳಿಮಾರ, ಪ್ರಮುಖರಾದ ಶರಣಬಸಪ್ಪ ಬೆಣ್ಣೂರೆ, ಅರುಣಕುಮಾರ ಪಾಟೀಲ್, ಅರುಣಕುಮಾರ ಮೇಳಕುಂದಿ, ಬಸಲಿಂಗಯ್ಯ ಸ್ವಾಮಿ, ಶಿವಾನಂದ ಪಾಟೀಲ್, ಸೋಮನಾಥ ಕೌಲಗಿ, ಶಾಂತಕುಮಾರ ಹಿರೇಮಠ ಇದ್ದರು.
"
ಭಾರತದಲ್ಲಿ ಗೋವಿಗೆ ದೇವರ ಸ್ಥಾನ ನೀಡಿದ್ದೇವೆ. ಒಂದು ಮನೆಯಲ್ಲಿ ದೇಶಿ ಹಸುವೊಂದಿದ್ದರೆ ಕುಟುಂಬಕ್ಕೆ ವೈದ್ಯನ ಅವಶ್ಯಕತೆ ಇರಲ್ಲ. ಹಾಲು, ಮೊಸರು, ಬೆಣ್ಣೆ, ತುಪ್ಪ ತಿಂದ ಮಕ್ಕಳು ಆರೋಗ್ಯವಾಗಿರುತ್ತಾರೆ. ರೈತಾಪಿ ವರ್ಗ ಸಾವಯವ ಕೃಷಿಯತ್ತ ಗಮನಹರಿಸಿ, ಅತ್ಯಧಿಕ ಲಾಭ ಪಡೆದುಕೊಳ್ಳಬೇಕು.
- > ಶ್ರೀ ಡಾ.ಮುರುರಾಜೇಂದ್ರ ಶಿವಯೋಗಿಗಳು, ಜಿಡಗಾ, ಮುಗಳಖೋಡ ಮಠಇನ್ನಷ್ಟು ಓದಿ

