Dailyhunt Logo
  • Light mode
    Follow system
    Dark mode
    • Play Story
    • App Story
ಕಾಂಗ್ರೆಸ್‌ಗೆ ಜಬ್ಬಾರ್ ಮರಳಿ ಕರೆತರದಿರಿ

ಕಾಂಗ್ರೆಸ್‌ಗೆ ಜಬ್ಬಾರ್ ಮರಳಿ ಕರೆತರದಿರಿ

ದಾವಣಗೆರೆ:ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅಮಾನತಾದ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷಕ್ಕೆ ಮರಳಿ ಕರೆತರಬಾರದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ, ಹೈಕಮಾಂಡ್‌ಗೆ ಮನವಿ ಮಾಡಿದೆ.
ಅಬ್ದುಲ್ ಜಬ್ಬಾರ್ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದ ಹೇಳಿಕೆ ನೀಡುತ್ತ ಬಂದಿದ್ದಾರೆ.
ಅವರನ್ನು ಪಕ್ಷಕ್ಕೆ ಕರೆತರಲು ಬೆಂಗಳೂರಿನ ಕೆಲ ನಾಯಕರು ಪ್ರಯತ್ನಿಸುತ್ತಿದ್ದಾರೆ. ವಾಪಾಸ್ ಕರೆತಂದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ಜತೆಗೆ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಎಚ್.ಬಿ.ಮಂಜಪ್ಪ ಮಾತನಾಡಿ ಪಕ್ಷದ ಕಾರ್ಯಕ್ರಮ, ಹೋರಾಟಗಳಿಗೆ ಬರಲಲ್ಲ. ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲೂ ಓಡಾಡಲಿಲ್ಲ. ಚುನಾವಣೆ ವೇಳೆ ಟಿಕೆಟ್ ಇನ್ನಿತರೆ ಕಾರಣಕ್ಕೆ ಗೊಂದಲ ಸೃಷ್ಟಿ ಮಾಡಿ ಪಕ್ಷದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಸ್ಲಿಮರ ಪರವಾಗಿದೆ. ಕೆಲವರ ಅಪಪ್ರಚಾರಕ್ಕೆ ಮುಸ್ಲಿ ಸಮಾಜ ಕಿವಿಗೊಡಬಾರದು ಎಂದು ಮನವಿ ಮಾಡಿದರು.ವೀರಶೈವ ಮಹಾಸಭಾ ಕಾರ್ಯಕ್ರಮದಲ್ಲಿ ಎಸ್ಸೆಸ್ ಅವರು ಬಿ.ವೈ.ರಾಘವೇಂದ್ರ ಅವರನ್ನು ಹೊಗಳಿದ್ದರೇ ಹೊರತಾಗಿ ಸಾರಾಸಗಟಾಗಿ ಬಿಜೆಪಿಗೆ ಮತ ಹಾಕಿ ಎಂದು ಹೇಳಲಿಲ್ಲ. 2008ರ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಸೈಯದ್ ಸೈಫುಲ್ಲಾ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಆದರೆ ತಮಗಿಂತಲೂ ಮಲ್ಲಿಕಾರ್ಜುನ್ ಸಮರ್ಥರು ಎಂದು ಸ್ವತಃ ಸೈಫುಲ್ಲಾ ಹೇಳಿದ್ದರು. ತಾಂತ್ರಿಕ ಕಾರಣದಿಂದಾಗಿ ಎ ಫಾರ್ಮ್ ತಿದ್ದುಪಡಿಯಲ್ಲಿ ಗೊಂದಲವಾಗಿತ್ತು ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.
ಆರು ಮುಖಂಡರ ಅಮಾನತುಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಮುಜುಗರವಾಗುವಂತೆ ಹಾಗೂ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡಿದ್ದ ಮುಖಂಡರಾದ ಎಂ.ಟಿ.ಸುಭಾಶ್ಚಂದ್ರ, ಸಿರಾಜ್ ಅಹ್ಮದ್, ಘನಿ ತಾಹೇರ್, ಕಡತಿ ತಿಪ್ಪೇಶ್, ಮನ್ಸೂರ್ ಅಲಿ, ಇನಾಯತ್ ಉಲ್ಲಾ ಖಾನ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದ್ದು, ಈ ಬಗ್ಗೆ ಕೆಪಿಸಿಸಿ ಶಿಸ್ತು ಸಮಿತಿ ಗಮನಕ್ಕೆ ತರಲಾಗಿದೆ ಎಂದರು. ಅಯೂಬ್ ಪೈಲ್ವಾನ್ ಮಾತನಾಡಿ ಉಚ್ಚಾಟಿತ ಅಬ್ದುಲ್ ಜಬ್ಬಾರ್ ಅವರು ಎಂಎಲ್ಸಿ ಸ್ಥಾನಕ್ಕೂ ರಾಜೀನಾಮೆ ನೀಡಬೇಕು. ಬಜೆೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಇದುವರೆಗೆ 4227 ಕೋಟಿ ರೂ.ಗಳನ್ನು ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಎಂದಿಗೂ ಮುಸ್ಲಿಮರನ್ನು ಕೈಬಿಟ್ಟಿಲ್ಲ. ಇದನ್ನು ಜಬ್ಬಾರ್ ಬೆಂಬಲಿಸುವ ಮುಸ್ಲಿಂ ಗುರುಗಳು, ಬುದ್ದಿಜೀವಿಗಳು ತಿಳಿಯಬೇಕು. ಜಬ್ಬಾರ್ ಹಾಗೂ ಅವರ ಬೆಂಬಲಿಗರು ಶಾಮನೂರು ಕುಟುಂಬದ ಬಗ್ಗೆ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಮಾಜಿ ಮೇಯರ್ ಕೆ. ಚಮನ್‌ಸಾಬ್ ಮಾತನಾಡಿ ಜಾತಿ-ಧರ್ಮದ ಹೆಸರಲ್ಲಿ ಕಾಂಗ್ರೆಸ್ ಒಡೆಯುವ ಪ್ರಯತ್ನ ಬೇಡ. ಧರ್ಮದಲ್ಲಿ ರಾಜಕೀಯ ಬೆರೆಸಬಾರದು. ಜಬ್ಬಾರ್ ಅವರ ಅಮಾನತಿನಿಂದ ಸಮಾಜಕ್ಕೆ ಅನ್ಯಾಯವಾಗಿದೆ ಎಂಬಂತೆ ಕೆಲವರು ಬಿಂಬಿಸುವುದು ಸರಿಯಲ್ಲ. ಯುವಕರಲ್ಲಿ ಕೆಲ ನಾಯಕರು ಪ್ರಚೋದನೆ ನೀಡುತ್ತಿದ್ದು, ಇದಕ್ಕೆ ಕಿವಿಗೊಡದಿರಿ ಎಂದು ಹೇಳಿದರು. ಮುಸ್ಲಿಮರಿಗೆ ಟಿಕೆಟ್ ನೀಡುವಂತೆ ಜಬ್ಬಾರ್ ಅವರ ಅವರ ಜತೆ ಬಿಜೆಪಿ, ಜೆಡಿಎಸ್, ಎಸ್‌ಡಿಪಿಐ, ಇತರೆ ಪಕ್ಷದವರೂ ಇದ್ದರು. ಯಾರಿಗೆ ಟಿಕೆಟ್ ನೀಡಬೇಕೆಂದು ಜಿಲ್ಲಾ ನಾಯಕರಲ್ಲಿ, ಜಿಲ್ಲಾ ಸಚಿವರಲ್ಲಿ ಅರ್ಜಿ ಹಾಕಿರಲಿಲ್ಲ. ಅಲ್ಪಸಂಖ್ಯಾತರು ಕಾಂಗ್ರೆಸ್ ಉಸಿರು. ಪ್ರಚೋದನೆಗೆ ಒಳಗಾದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ಮುಸ್ಲಿಂ ಆಕಾಂಕ್ಷಿಗಳಿಗೆ ಅನ್ಯಾಯವಾಗಲಿದೆ ಎಂದರು. ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ ವಿಧಾನಸಭೆಗೆ ಟಿಕೆಟ್ ಸಿಗದಿದ್ದರೂ ನಾನು 40 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಯಾರೂ ಸಹ ಪಕ್ಷಕ್ಕೆ ದ್ರೋಹ ಬಗೆಯಬಾರದು. ಚುನಾವಣೆ ವೇಳೆ ಇಲ್ಲಿನ ಪ್ರತಿ ಘಟನೆಯವ ವರದಿಯನ್ನೂ ಅಭಿಷೇಕ್ ದತ್ ಅವರು ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದಾರೆ. ಜಬ್ಬಾರ್‌ಗೆ ನೀಡಿದ ಶಿಕ್ಷೆಯನ್ನು ವೈಭವೀಕರಿಸಬಾರದು ಎಂದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಕೆ.ಜಿ.ಶಿವಕುಮಾರ್, ಜಿ.ಸಿ. ನಿಂಗಪ್ಪ, ಮುದೇಗೌಡ್ರ ಗಿರೀಶ್, ಆರ್.ಎಚ್. ನಾಗಭೂಷಣ್, ಎ. ನಾಗರಾಜ್, ಎ.ಬಿ.ರಹೀಂಸಾಬ್, ಅನಿತಾಬಾಯಿ ಮಾಲತೇಶ್ ಇತರರಿದ್ದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani