Dailyhunt Logo
  • Light mode
    Follow system
    Dark mode
    • Play Story
    • App Story
ಕಾರಿನ ಮೇಲ್ಛಾವಣಿಯನ್ನೇ ಹಿಡಿದು ಸಾಗಿದ ಹೆಡ್ ಕಾನ್‌ಸ್ಟೆಬಲ್

ಕಾರಿನ ಮೇಲ್ಛಾವಣಿಯನ್ನೇ ಹಿಡಿದು ಸಾಗಿದ ಹೆಡ್ ಕಾನ್‌ಸ್ಟೆಬಲ್

Coimbatore Gutka Smuggling: ಸಿನಿಮಾದ ಸಾಹಸ ದೃಶ್ಯವನ್ನೇ ಮೀರಿಸುವಂತೆ, ನಿಷೇಧಿತ ಗುಟ್ಕಾ ಮತ್ತು ತಂಬಾಕು ಸಾಗಿಸುತ್ತಿದ್ದ ಕಾರಿನ ರೂಫ್ ಹಿಡಿದು ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ ಒಬ್ಬರು ಬರೋಬ್ಬರಿ 40 ಕಿ.ಮೀ ಸಾಗಿದ್ದಾರೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೊಯಮತ್ತೂರಿನ ಕೋವಿಲ್ಪಾಳಯಂ ಪೊಲೀಸ್ ಠಾಣೆ ವ್ಯಾಪ್ತಿಯ ವಿಲಾಂಕುರಿಚಿ ಪ್ರದೇಶದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕರ್ನಾಟಕದಿಂದ ಕೊಯಮತ್ತೂರಿನತ್ತ ಬರುತ್ತಿದ್ದ ಕಾರನ್ನು ತಡೆದು ಪರಿಶೀಲನೆ ಮಾಡಲು ಮುಂದಾಗಿದ್ದಾರೆ.

ಪೊಲೀಸರನ್ನು ಕಂಡು ಕಾರು ಎಸ್ಕೇಪ್

ಕಾರಿನ ಹಿಂಭಾಗದಲ್ಲಿ ಹಲವು ಚೀಲಗಳು ಕಾಣಿಸಿಕೊಂಡಿದ್ದರಿಂದ ಪೊಲೀಸರಿಗೆ ಅನುಮಾನ ಬಂದಿದೆ. ಪರಿಶೀಲನೆಗೆ ಮುಂದಾದಾಗ ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಪೊಲೀಸರನ್ನು ತಳ್ಳಿ, ಬಾಗಿಲುಗಳನ್ನು ಲಾಕ್ ಮಾಡಿಕೊಂಡು ವೇಗವಾಗಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ.

ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಹತ್ತಿದ ಪೇದೆ

ಕಾರು ವೇಗವಾಗಿ ಹೊರಟಾಗ ಹೆಡ್ ಕಾನ್‌ಸ್ಟೆಬಲ್ ವೇಲ್‌ಮುರುಗನ್‌ ತಕ್ಷಣ ರೂಫ್ ಮೇಲೆ ಹತ್ತಿ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆರೋಪಿಗಳು ತಪ್ಪಿಸಿಕೊಳ್ಳದಂತೆ ಕಾರಿನ ಮೇಲೆಯೇ ಉಳಿದ ಅವರು, ವಿಲಾಂಕುರಿಚಿಯಿಂದ ಅವಿನಾಶಿ ಕಡೆಗೆ ಸಾಗಿದ ಕಾರಿನ ಬೆನ್ನತ್ತಿದ್ದಾರೆ. ಪೊಲೀಸರು ಸುಮಾರು 40 ಕಿ.ಮೀ ಬೆನ್ನಟ್ಟಿ, ಪೊಲೀಸ್ ವಾಹನಗಳು ಹಾಗೂ ಆಯಂಬುಲೆನ್ಸ್ ಸಿಬ್ಬಂದಿಯ ನೆರವಿನಿಂದ ಕಾರನ್ನು ತಡೆದಿದ್ದಾರೆ.

300 ಕೆಜಿ ಗುಟ್ಕಾ ಪತ್ತೆ

ಕೊನೆಗೆ ಅವಿನಾಶಿ ರಸ್ತೆಯಲ್ಲಿ ಪೊಲೀಸರು ಕಾರನ್ನು ಸುತ್ತುವರಿದು ನಿಲ್ಲಿಸಿದ್ದಾರೆ. ಮೂವರು ಆರೋಪಿಗಳನ್ನು ವಶಕ್ಕೆ ಪಡೆದು, ಕಾರಿನಲ್ಲಿ ಸುಮಾರು 300 ಕೆಜಿ ನಿಷೇಧಿತ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿದ್ದಾರೆ. ರಾಜಸ್ಥಾನ ಮೂಲದ ಆರೋಪಿಗಳು ಬೆಂಗಳೂರಿನಿಂದ ಕೊಯಮತ್ತೂರಿಗೆ ಗುಟ್ಕಾ ಸಾಗಿಸುತ್ತಿದ್ದರು ಎಂಬುದು ಪೊಲೀಸರ ಮಾಹಿತಿ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇನ್ನು ಚಲಿಸುತ್ತಿದ್ದ ಕಾರಿನ ರೂಫ್ ಹಿಡಿದು ಸಾಗಿದ ಹೆಡ್ ಕಾನ್‌ಸ್ಟೆಬಲ್ ವೇಲ್‌ಮುರುಗನ್‌ ಅವರ ಸಾಹಸ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಕಾರಣವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Vijayvani