Dailyhunt Logo
  • Light mode
    Follow system
    Dark mode
    • Play Story
    • App Story
ಕಪ್ ಸೋತರೂ ವಿಶ್ವ ಗೆದ್ದ ಪೋರ್ಚುಗಲ್ ಮಾಂತ್ರಿಕ

ಕಪ್ ಸೋತರೂ ವಿಶ್ವ ಗೆದ್ದ ಪೋರ್ಚುಗಲ್ ಮಾಂತ್ರಿಕ

(ಲೇಖಕರು 'ವಿಜಯವಾಣಿ' ಸೀನಿಯರ್ ಡೆಪ್ಯೂಟಿ ಎಡಿಟರ್)

ಪರೂಪಕ್ಕೆ ಬರುವ ನೆಂಟನಿಗೆ ಸತ್ಕಾರ, ನಿತ್ಯವೂ ಬಂದರೆ ತಾತ್ಸಾರ.. ಪವಾಡಗಳು ಸಹ ಅಷ್ಟೇ. ಯಾವಾಗಲೋ ಒಮ್ಮೆ ಸಂಭವಿಸಿದರಷ್ಟೇ ಪವಾಡ. ಆದರೂ, ಮನುಷ್ಯ ಕನಸು ಕಾಣುವುದನ್ನು ಬಿಡುವುದಿಲ್ಲ..

ನಾಲ್ಕು ವರ್ಷ ಕೆಳಗೆ ಕತಾರ್​ನಲ್ಲಿ ನಡೆದ ಫಿಫಾ ವಿಶ್ವಕಪ್​ನ ಕ್ವಾರ್ಟರ್​ಫೈನಲ್ ಹಂತದಲ್ಲಿ ಮೊರಕ್ಕೊ ವಿರುದ್ಧ ಪೋರ್ಚುಗಲ್ ಸೋತಾಗಲೇ ಕ್ರಿಶ್ಚಿಯಾನೊ ರೊನಾಲ್ಡೊ 'ಹಂಸಗೀತೆ'ಯ ನಿರೀಕ್ಷೆಗಳಿದ್ದವು.

ಆಗಲೇ ಅವರಿಗೆ 37 ವಯಸ್ಸು. ಆದರೆ, ರೊನಾಲ್ಡೊ ಸಿದ್ಧರಿರಲಿಲ್ಲ. ಇನ್ನೊಮ್ಮೆ ಆಡುವ ಹುಮ್ಮಸ್ಸು ದೇಹಾಯಾಸವನ್ನು ಮೀರಿಸಿತ್ತು. ಹಾಗಾಗಿ ಅಮೆರಿಕ- ಮೆಕ್ಸಿಕೋ- ಕೆನಡಾ ಸಹ ಆತಿಥ್ಯದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ಗೆ ರೊನಾಲ್ಡೊ ಮತ್ತೆ ಪೋರ್ಚುಗಲ್​ನ ಮುಂದಾಳಾಗಿ ಆಗಮಿಸಿದ್ದರು.

41ನೇ ವಯಸ್ಸಿನಲ್ಲಿ ಪವಾಡ ಸೃಜಿಸುವ ಭರವಸೆ ಹೊತ್ತು ಸತತ 6ನೇ ವಿಶ್ವಕಪ್​ನಲ್ಲಿ ಆಡಿದ್ದರು. ಆದರೆ, ಸ್ಪೇನ್ ವಿರುದ್ಧ ಪ್ರಿ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಪರಾಭವದೊಂದಿಗೆ ಪೋರ್ಚುಗಲ್ ಹಾಗೂ ರೊನಾಲ್ಡೋರ ವಿಶ್ವಕಪ್ ಅಭಿಯಾನ ಅಂತ್ಯಗೊಂಡಿತು. 4 ವರ್ಷ ಬಳಿಕ 2030ರಲ್ಲಿ ಪೋರ್ಚುಗಲ್ ಸಹ-ಆತಿಥೇಯ ರಾಷ್ಟ್ರವಾಗಿ ಮತ್ತೊಮ್ಮೆ ವಿಶ್ವಕಪ್​ಗೆ ಮರಳಲಿದೆ. ಆದರೆ, ರೊನಾಲ್ಡೊ ಮರಳುವುದಿಲ್ಲ. ಅವರ ಪಾಲಿಗಿದು ಪೂರ್ಣವಿರಾಮ. ಶುಭಂ.

ರೊನಾಲ್ಡೊ ತಾವು ಅಂದುಕೊಂಡಂತೆ ಈ ವಿಶ್ವಕಪ್​ನಲ್ಲಿ ಪವಾಡಸದೃಶ ಆಟ ಆಡುವುದು ಸಾಧ್ಯವಾಗಿದ್ದರೆ, ಅವರ ಶ್ರೇಷ್ಠತೆಯ ಅಳತೆಗೋಲು ನಿಸ್ಸಂಶಯವಾಗಿ ಇನ್ನಷ್ಟು ಎತ್ತರಕ್ಕೇರುತ್ತಿತ್ತು. ಆದರೆ, ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲವಲ್ಲ. ಲೀಗ್​ನಲ್ಲಿ 3, ನಾಕೌಟಲ್ಲಿ 2 ಸೇರಿ 5 ಪಂದ್ಯಗಳಲ್ಲಿ ಆಡಿದ ರೊನಾಲ್ಡೊ 3 ಗೋಲುಗಳನ್ನೇನೋ ದಾಖಲಿಸಿದರು. ಅದರೊಂದಿಗೆ ಆಡಿದ ಎಲ್ಲ 6 ವಿಶ್ವಕಪ್​ಗಳಲ್ಲಿ ಗೋಲು ಬಾರಿಸಿದ ವಿಶ್ವದ ಮೊದಲಿಗರೆಂಬ ದಾಖಲೆ ಅವರದ್ದಾಯಿತು. ಒಮ್ಮೆ ವಿಶ್ವಕಪ್ ಆಡುವುದೇ ದೊಡ್ಡ ಸಾಧನೆ. ಅಂಥದ್ದರಲ್ಲಿ 2006ರಲ್ಲಿ 21ನೇ ವಯಸ್ಸಿನಲ್ಲಿ ಮೊದಲ ವಿಶ್ವಕಪ್ ಆಡಿದ್ದ ರೊನಾಲ್ಡೊ ಆನಂತರ ಸತತ 6 ವಿಶ್ವಕಪ್ ಆಡುವ ತನಕ ಬಾಳಿಕೆ ಬಂದಿದ್ದು ಮಹತ್ಸಾಧನೆಯೇ.

ಏಕೆಂದರೆ 4 ಬಾರಿಯ ವಿಶ್ವ ಚಾಂಪಿಯನ್ ಇಟಲಿಯಂಥ ಬಲಾಢ್ಯ ತಂಡವೇ 2018, 2022 ಹಾಗೂ 2026ರಲ್ಲಿ ಸತತ 3 ವಿಶ್ವಕಪ್​ಗಳಿಗೆ ಅರ್ಹತೆ ಗಳಿಸಲು ವಿಫಲವಾಯಿತು. ಹೀಗಿರುವಾಗ ಒಮ್ಮೆಯೂ ವಿಶ್ವಕಪ್ ಗೆಲ್ಲದ ಪೋರ್ಚುಗಲ್ 2002ರಿಂದ ಸತತವಾಗಿ ಫಿಫಾ ವಿಶ್ವಕಪ್​ನಲ್ಲಿ ಆಡುತ್ತಲೇ ಬಂದಿರುವುದು, ಈ 7ರಲ್ಲಿ 6 ಬಾರಿ ರೊನಾಲ್ಡೊ ಸ್ಪೂರ್ತಿಯಲ್ಲಿ ತಂಡ ವಿಶ್ವಕಪ್ ಪ್ರವೇಶಿಸಿರುವುದು ದೊಡ್ಡ ಸಾಧನೆ. 2002ಕ್ಕೆ ಮುನ್ನ ಪೋರ್ಚುಗಲ್ 1966 ಮತ್ತು 1986ರಲ್ಲಿ 2 ಬಾರಿ ಮಾತ್ರ ವಿಶ್ವಕಪ್​ಗೆ ಅರ್ಹತೆ ಗಳಿಸಿತ್ತು. 1966ರಲ್ಲಿ ಯೂಸೆಬಿಯೊ ನಾಯಕತ್ವದಲ್ಲಿ ಸೋವಿಯತ್ ಒಕ್ಕೂಟವನ್ನು ಸೋಲಿಸಿ 3ನೇ ಸ್ಥಾನಕ್ಕೇರಿದ್ದು ಫಿಫಾ ವಿಶ್ವಕಪ್​ಗಳಲ್ಲಿ ಪೋರ್ಚುಗಲ್​ನ ಶ್ರೇಷ್ಠ ಸಾಧನೆ.

ಅದಾದ ಬಳಿಕ 2006ರಲ್ಲಿ ಲೂಯಿಸ್ ಫಿಗೊ, ರೂಯಿ ಕೋಸ್ಟ ಮತ್ತು ತರುಣ ರೊನಾಲ್ಡೊ ಆಟದ ಬಲದಿಂದ ಪೋರ್ಚುಗಲ್ ಸೆಮಿಫೈನಲ್ ತಲುಪಿತ್ತು. ಇವೆರಡು ಅನಿರೀಕ್ಷಿತ ಸಾಧನೆಗಳ ಹೊರತಾಗಿಯೂ, ಪೋರ್ಚುಗಲ್ ಯಾವುದೇ ಪ್ರಮುಖ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದಿರಲಿಲ್ಲ. ಪೋರ್ಚುಗಲ್ ಆಟಗಾರರ ಪಾಲಿಗೆ ಯುರೋಪಿನ ಪ್ರತಿಷ್ಠಿತ ಕ್ಲಬ್ ತಂಡಗಳಿಗೆ ಆಯ್ಕೆ ಆಗುವುದೇ ದೊಡ್ಡ ಸಾಧನೆ ಎಂಬಂತಿದ್ದ ಕಾಲದಿಂದ, ವಿಶ್ವ ಫುಟ್​ಬಾಲ್ ರಾಷ್ಟ್ರವಾಗಿ ಪೋರ್ಚುಗಲ್ ಸ್ಥಾನಮಾನವನ್ನು ಎತ್ತರಿಸಿದ್ದು ರೊನಾಲ್ಡೊ ಸಾಧನೆ.

ಪೋರ್ಚುಗಲ್ ಇತಿಹಾಸದಲ್ಲಿ ಮೊದಲ ಬಾರಿ ಗೆದ್ದ ಪ್ರಮುಖ ವಿಶ್ವಮಟ್ಟದ ಟೂರ್ನಿಯೆಂದರೆ 2016ರ ಯುರೋ ಕಪ್. ಆಗ ರೊನಾಲ್ಡೊ ತಂಡದ ನಾಯಕರಾಗಿದ್ದರು. 2018-19ರಲ್ಲಿ ಹಾಗೂ 2024-25ರಲ್ಲಿ ಪೋರ್ಚುಗಲ್ 2 ಬಾರಿ ಯುರೋಪಿಯನ್ ನೇಷನ್ಸ್ ಕಪ್ ಪ್ರಶಸ್ತಿ ಗೆಲುವಿನ ರೂವಾರಿಯೂ ರೊನಾಲ್ಡೊ. ಯುರೋಪಿಯನ್ ಫುಟ್​ಬಾಲ್​ನಲ್ಲಿ ಜರ್ಮನಿ, ಸ್ಪೇನ್, ಫ್ರಾನ್ಸ್, ಇಂಗ್ಲೆಂಡ್, ಇಟಲಿ ಶಕ್ತಿಕೇಂದ್ರಗಳು. ಇದಕ್ಕೆ ಕಾರಣ ಆ ರಾಷ್ಟ್ರಗಳಲ್ಲಿ ಪ್ರಬಲವಾಗಿ ಬೇರೂರಿರುವ ಕ್ಲಬ್ ಫುಟ್​ಬಾಲ್ ಕಲ್ಚರ್. ಆಫ್ರಿಕಾ, ಅಮೆರಿಕ, ಏಷ್ಯಾ ರಾಷ್ಟ್ರಗಳ ಪ್ರತಿಭಾವಂತರು ಈ ಕ್ಲಬ್​ಗಳ ಮೂಲಕ ಜಾಗತಿಕ ಆಟಗಾರರಾಗಿ ಪ್ರವರ್ಧಮಾನಕ್ಕೆ ಬರುತ್ತಾರೆ.

ಅರ್ಜೆಂಟೀನಾದ ಮರಡೋನಾ, ಮೆಸ್ಸಿ, ಬ್ರೆಜಿಲ್​ನ ರೊನಾಲ್ಡೊ, ರೊನಾಲ್ಡಿನೊ, ನೇಮರ್, ಆಫ್ರಿಕಾ ದೇಶಗಳ ಮೊಹಮದ್ ಸಲಾಹ್, ಡೀಡಿಯರ್ ಡ್ರೋಗ್ಬಾ, ಸ್ಯಾಮ್ಯುಯೆಲ್ ಎಟೊರಂಥ ಸಾಧಕರನ್ನು ಬೆಳಕಿಗೆ ತಂದಿದ್ದೇ ಇಂಥ ಯುರೋಪಿಯನ್ ಕ್ಲಬ್​ಗಳು. ಕ್ರಿಶ್ಚಿಯಾನೊ ರೊನಾಲ್ಡೊ ಕೂಡ ಇಂಗ್ಲೆಂಡ್​ನ ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಸ್ಪೇನ್​ನ ರಿಯಲ್ ಮ್ಯಾಡ್ರಿಡ್ ಕ್ಲಬ್​ಗಳ ಮೂಲಕ ಶ್ರೇಷ್ಠತೆಯ ಏಣಿ ಏರಿದವರು. ಇನ್ನು ಯುರೋಪಿನ ಚಾಂಪಿಯನ್ಸ್ ಲೀಗ್​ನಂಥ ಮತ್ತೊಂದು ಶ್ರೇಷ್ಠ ಗುಣಮಟ್ಟದ ಟೂರ್ನಿ ಜಗತ್ತಿನಲ್ಲೇ ಇಲ್ಲ. ಇಂಥ ಯುರೋಪಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ತಾವೂ ಬೆಳೆದು ಪೋರ್ಚುಗಲ್ ಫುಟ್​ಬಾಲ್​ಗೆ ವರ್ಚಸ್ಸು ತಂದುಕೊಟ್ಟವರು ರೊನಾಲ್ಡೊ.

ಕ್ರೀಡೆ ಯಾವುದೇ ಇರಲಿ, ಶ್ರೇಷ್ಠ ಆಟಗಾರರಿಗೆ ಗೌರವಯುತ ಬೀಳ್ಕೊಡುಗೆ ದೊರಕಬೇಕೆನ್ನುವುದು ಅಭಿಮಾನಿಗಳ ಅಪೇಕ್ಷೆ. ಕ್ಲಬ್ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆ 1330 ಪಂದ್ಯಗಳಲ್ಲಿ ಆಡಿರುವ, ಪೋರ್ಚುಗಲ್ ಪ್ರತಿನಿಧಿಸಿ ವಿಶ್ವದಾಖಲೆ 146 ಗೋಲು ಬಾರಿಸಿರುವ, ವೃತ್ತಿಜೀವನದಲ್ಲಿ ಒಟ್ಟಾರೆ 976 ಗೋಲು ಸಿಡಿಸಿ ಸಾವಿರದ ಸಾಧನೆಗೆ ಹತ್ತಿರದಲ್ಲಿರುವ, ಚಾಂಪಿಯನ್ಸ್ ಲೀಗ್​ನಲ್ಲಿ ಸಾರ್ವಕಾಲಿಕ ಗರಿಷ್ಠ 140 ಗೋಲು ಬಾರಿಸಿರುವ, ಫುಟ್​ಬಾಲ್​ನ ಆಸ್ಕರ್ 'ಬ್ಯಾಲನ್ ಡಿ'ಓರ್' ಪ್ರಶಸ್ತಿಯನ್ನು 5 ಬಾರಿ ಗೆದ್ದಿರುವ, ಇಂಗ್ಲೆಂಡ್, ಸ್ಪೇನ್, ಇಟಲಿ ದೇಶಗಳಲ್ಲಿ 7 ದೇಶೀಯ ಲೀಗ್ ಪ್ರಶಸ್ತಿ, 5 ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿ ಗೆದ್ದಿರುವ ರೊನಾಲ್ಡೊ ಪಾಲಿಗೆ ವೃತ್ತಿಜೀವನದಲ್ಲಿ ಎಟುಕದೆ ಹೋಗಿದ್ದು ಫಿಫಾ ವಿಶ್ವಕಪ್ ಟ್ರೋಫಿ ಮಾತ್ರ.

ಈ ಕನಸಿನ ಸಲುವಾಗಿಯೇ ರೊನಾಲ್ಡೊ ತಮ್ಮ ವೃತ್ತಿಜೀವನವನ್ನು 41ನೇ ವಯಸ್ಸಿನವರೆಗೂ ವಿಳಂಬಿಸಿದರು. ಆದರೆ, ಕಂಡ ಕನಸೆಲ್ಲವೂ ನನಸಾಗುವುದೇ ಆದರೆ, ಈ ಜೀವನಕ್ಕೆ ಸ್ವಾರಸ್ಯವೆಲ್ಲಿರುತ್ತದೆ? ಜಾಗತಿಕ ಫುಟ್​ಬಾಲ್​ನ ಹಲವು ಪ್ರಥಮಗಳ ಸರದಾರನೆನಿಸಿದರೂ, ವಿಶ್ವಕಪ್ ಟ್ರೋಫಿ ಗೆಲ್ಲದ ಶ್ರೇಷ್ಠ ಆಟಗಾರನಾಗಿ ರೊನಾಲ್ಡೊ ಇತಿಹಾಸದ ಪುಟ ಸೇರಿದರು. 2018ರ ವಿಶ್ವಕಪ್​ನಲ್ಲಿ ಸ್ಪೇನ್ ವಿರುದ್ಧವೇ ಹ್ಯಾಟ್ರಿಕ್ ಗೋಲು ಬಾರಿಸಿದ್ದ ರೊನಾಲ್ಡೊ, ಈ ವಿಶ್ವಕಪ್​ನಲ್ಲಿ ತಮ್ಮ ವಯಸ್ಸು, ದೇಹ ಪರಿಸ್ಥಿತಿ ಕಡೆಗಣಿಸಿ ಆಡಲೇಬೇಕಿತ್ತೇ? ಪೋರ್ಚುಗಲ್ ತಂಡಕ್ಕೆ ಅವರ ಅನಿವಾರ್ಯವಿತ್ತೇ? ತಮ್ಮ ಶ್ರೇಷ್ಠ ಆಟದ ದಿನಗಳು ಬೆನ್ನ ಹಿಂದಿರುವಾಗ, 41ನೇ ವಯಸ್ಸಿನಲ್ಲಿ ಆಡಲೇಬೇಕೆಂಬ ಅವರ ನಿರ್ಧಾರ ಸರಿಯಾಗಿತ್ತೇ?

ನಾಲ್ಕು ವರ್ಷ ಕೆಳಗೆ ಕತಾರ್​ನಲ್ಲಿ ನಡೆದ ಫಿಫಾ ವಿಶ್ವಕಪ್​ನ ಪ್ರಿ ಕ್ವಾರ್ಟರ್​ಫೈನಲ್ ಘಟ್ಟದ ಪಂದ್ಯದಲ್ಲಿ ಆಗಿನ ಪೋರ್ಚುಗಲ್ ಕೋಚ್ ಫರ್ನಾಂಡೊ ಸ್ಯಾಂಟೊಸ್ ರೊನಾಲ್ಡೊರನ್ನು ಕೈಬಿಟ್ಟು ಯುವ ಸ್ಟ್ರೈಕರ್ ಗೊನ್ಸಾಲೊ ರಾಮೋಸ್​ಗೆ ಅವಕಾಶ ನೀಡಿದ್ದರು. ರಾಮೋಸ್ ಆ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಿದ್ದರು. ಈ ವಿಶ್ವಕಪ್​ನಲ್ಲೂ ರಾಮೋಸ್ ತಂಡದಲ್ಲಿದ್ದರು. 32ರ ಘಟ್ಟದ ಪಂದ್ಯದಲ್ಲಿ ಕ್ರೋಷಿಯಾ ವಿರುದ್ಧ ರಾಮೋಸ್ ಗೋಲು ಬಾರಿಸಿದ್ದರು. ಆದರೆ, ಸ್ಪೇನ್ ವಿರುದ್ಧ ಹಾಲಿ ಕೋಚ್ ರಾಬರ್ಟೆ ಮಾರ್ಟಿನೆಜ್ ರಾಮೋಸ್​ಗೆ ಅವಕಾಶವನ್ನೇ ನೀಡಲಿಲ್ಲ. ಪೂರ್ಣಾವಧಿಯಲ್ಲಿ ರೊನಾಲ್ಡೊರನ್ನೇ ಆಡಿಸುವ ನಿರ್ಧಾರ ತೆಗೆದುಕೊಂಡರು. ಇದು ಪೋರ್ಚುಗಲ್ ವಿಶ್ವಕಪ್​ನಿಂದಲೇ ನಿರ್ಗಮಿಸುವುದಕ್ಕೆ ಕಾರಣವಾಯಿತೇ?

ಫುಟ್​ಬಾಲ್ ಅಪಾರವಾದ ದೇಹಶಕ್ತಿಯನ್ನು ಬೇಡುವ ಆಟ. 90 ನಿಮಿಷಗಳ ಪಂದ್ಯದಲ್ಲಿ ಆಟಗಾರನೊಬ್ಬ ಮೈದಾನದಲ್ಲಿ ಸರಾಸರಿ 10ರಿಂದ 13 ಕಿ.ಮೀ. ಓಡಿರುತ್ತಾನೆ. 20-25 ವರ್ಷಗಳ ಯುವ ಆಟಗಾರರಿಗೆ ಸರಿಸಮನಾಗಿ 41 ವರ್ಷದ ರೊನಾಲ್ಡೊ ವಿಶ್ವಕಪ್ ಪಂದ್ಯಗಳಲ್ಲಿ ಓಡುವುದು ಬಹುದೊಡ್ಡ ಸವಾಲೇ ಸರಿ. ಈ ವಿಶ್ವಕಪ್​ನಲ್ಲಿ ರೊನಾಲ್ಡೊ ದೈಹಿಕವಾಗಿ ತಮ್ಮ ಅರ್ಧ ವಯಸ್ಸಿನ ಆಟಗಾರರಿಗಿಂತ ಫಿಟ್ ಆಗಿದ್ದರೂ, ಚಾಂಪಿಯನ್ ಪಟ್ಟದ ಕನಸಿಗೆ ಅವರ 41 ವರ್ಷದ ಬಳಲಿದ ಕಾಲುಗಳು ಸಾತ್ ಕೊಡಲಿಲ್ಲ. ಪೂರ್ತಿ 98 ನಿಮಿಷ ಕಾಲ ನಡೆದ ಸ್ಪೆನ್ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಗಳು ಕಾಯುತ್ತಿದ್ದ ಪವಾಡದ, ಚಮತ್ಕಾರದ ಕಾಲ್ಚಳಕ ರೊನಾಲ್ಡೊರಿಂದ ಸಾಧ್ಯವಾಗಲಿಲ್ಲ. ಆ ಇಡೀ ಪಂದ್ಯದಲ್ಲಿ ಚೆಂಡಿಗೆ ಪಾದಸ್ಪರ್ಶ ಮಾಡುವ ಅವಕಾಶ ರೊನಾಲ್ಡೊಗೆ ಸಿಕ್ಕಿದ್ದೇ 19 ಬಾರಿ.

ಪೂರ್ವಾರ್ಧದ ಆಟದಲ್ಲಿ 12 ಬಾರಿ, ಉತ್ತರಾರ್ಧದ ಆಟದಲ್ಲಿ ಕೇವಲ 7 ಬಾರಿ. ಉಳಿದಂತೆ ಇಡೀ ಪಂದ್ಯದಲ್ಲಿ ರೊನಾಲ್ಡೊ ಅಸಹಾಯಕ ಮೂಕಪ್ರೇಕ್ಷಕರಂತಾಗಿದ್ದರು. ಪೋರ್ಚುಗಲ್​ನ ಆಟಗಾರರು ಸ್ಪೇನ್​ನ ರಕ್ಷಣಾಕೋಟೆ ಛಿದ್ರಗೊಳಿಸಿ, ರೊನಾಲ್ಡೊಗೆ ಗೋಲು ಅವಕಾಶ ಸೃಷ್ಟಿಸಿಕೊಡುವಷ್ಟು ಸಮರ್ಥರಾಗಿರಲಿಲ್ಲ. ಜತೆ ಆಟಗಾರರಿಂದ ನಿಖರ ಪಾಸ್​ಗಳು ಸಿಗದೇ ಹೋದಾಗ ಸ್ವತಃ ಎದುರಾಳಿ ಆವರಣದೊಳಕ್ಕೆ ನುಗ್ಗಿ ಏಕಾಂಗಿಯಾಗಿ ಗೋಲು ದಾಖಲಿಸಿ ಗೆಲ್ಲಿಸುವಂಥ ಗತ ದಿನಗಳ ಚಮತ್ಕಾರ ಪುನರಾವರ್ತಿಸುವುದು ಅವರಿಂದ ಸಾಧ್ಯವಾಗಲಿಲ್ಲ. ಅಲ್ಲಿಗೆ ರೊನಾಲ್ಡೊರ ವಿಶ್ವಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿದುಹೋಯಿತು.

ಒಂದು ವಿಶ್ವಕಪ್ ಟ್ರೋಫಿ ಆಟಗಾರನ ಶ್ರೇಷ್ಠತೆ ನಿರ್ಧರಿಸುವುದಿಲ್ಲ. ಫುಟ್​ಬಾಲ್, ಕ್ರಿಕೆಟ್​ನಂಥ ಟೀಮ್ ಗೇಮ್ಳಲ್ಲಿ ವಿಶ್ವಕಪ್ ಗೆದ್ದವರೆಲ್ಲರೂ ಶ್ರೇಷ್ಠ ಆಟಗಾರರೂ ಅಲ್ಲ. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಿ.ಆರ್. ವಿಶ್ವನಾಥ್​ರಂಥ ಶ್ರೇಷ್ಠ ಆಟಗಾರರಿಗೇ ವಿಶ್ವಕಪ್ ಗೆಲ್ಲುವ ಯೋಗ ಇರಲಿಲ್ಲ. ಹಾಗಾಗಿ ವಿಶ್ವಕಪ್ ಗೆಲ್ಲದ ಕಾರಣಕ್ಕೆ ಶ್ರೇಷ್ಠತೆಯೇನೂ ಕಡಿಮೆಯಾಗುವುದಿಲ್ಲ. ಫುಟ್​ಬಾಲ್ ಜಗತ್ತಿನ ಸರ್ವಶ್ರೇಷ್ಠರ ಯಾದಿಯಲ್ಲಿ ಮುಂಚೂಣಿಯಲ್ಲಿರುವ ಹಾಲೆಂಡ್​ನ ಜೊಹಾನ್ ಕ್ರಯುಫ್, ಹಂಗೆರಿಯ ಫೆರೆಂಕ್ ಪುಸ್ಕಾಸ್, ಬ್ರೆಜಿಲ್​ನ ಝೈಕೊ, ಇಟಲಿಯ ಪೌಲೊ ಮಾಲ್ಡಿನಿ, ಫ್ರಾನ್ಸ್​ನ ಮೈಕೆಲ್ ಪ್ಲಾಟಿನಿ, ಇಂಗ್ಲೆಂಡ್​ನ ಜಾರ್ಜ್ ಬೆಸ್ಟ್, ಪೋರ್ಚುಗಲ್​ನ ಯೂಸೆಬಿಯೊ ಇವರ್ಯಾರೂ ವಿಶ್ವಕಪ್ ಗೆಲ್ಲಲಿಲ್ಲ. ಈ ಪರಂಪರೆಯನ್ನು ರೊನಾಲ್ಡೊ ಮುಂದುವರಿಸಿದರು ಅಷ್ಟೇ.

ಬ್ರೆಜಿಲ್ ಪ್ರಿ ಕ್ವಾರ್ಟರ್​ಫೈನಲ್​ನಲ್ಲಿ ನಾರ್ವೆ ವಿರುದ್ಧ ಆಘಾತಕಾರಿಯಾಗಿ ಸೋತ ಬೆನ್ನಲ್ಲೇ ನೇಮರ್ ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ವಿದಾಯ ಘೋಷಿಸಿದರು. ಕ್ರೋಷಿಯಾದ ಲೂಕ ಮಾಡ್ರಿಕ್, ಜರ್ಮನಿಯ ಮ್ಯಾನ್ಯುಯೆಲ್ ನ್ಯೂಯರ್ ಸಹ ವಿದಾಯದ ಬಾಗಿಲು ದಾಟಿದರು. ಅರ್ಜೆಂಟೀನಾದ ದಿಗ್ಗಜ ಲಿಯೊನಲ್ ಮೆಸ್ಸಿಗೂ ಇದೇ ಕೊನೆಯ ವಿಶ್ವಕಪ್ ಆಗುವ ಸಾಧ್ಯತೆ ಇದೆ. ಎಲ್ಲ ಶ್ರೇಷ್ಠ ಸಂಗತಿಗಳೂ ಒಂದಲ್ಲ ಒಂದು ದಿನ; ಒಂದಲ್ಲ ಒಂದು ಹಂತದಲ್ಲಿ; ಜಾಗದಲ್ಲಿ; ಸಮಯದಲ್ಲಿ ಕೊನೆಯಾಗಲೇಬೇಕು. ಸಚಿನ್ ತೆಂಡುಲ್ಕರ್, ಡೀಗೊ ಮರಡೋನಾ, ಪೀಲೆ, ಮೊಹಮ್ಮದ್ ಅಲಿ ಕೂಡ 'ಇನ್ನು ಸಾಕು' ಅನ್ನಿಸಿದಾಗ ನಿವೃತ್ತಿಯ ಬಾಗಿಲು ದಾಟಿದವರೇ. ಅದೇ ರೀತಿ ಕ್ರಿಶ್ಚಿಯಾನೊ ರೊನಾಲ್ಡೊ ಪಾಲಿನ ವಿಶ್ವಕಪ್ ಗೆಲ್ಲುವ ಕನಸು ಕೂಡ ಕಣ್ಣೀರಿನೊಂದಿಗೆ ಕೊನೆಗೊಂಡಿದೆ. ಕೆಲವು ನಿರಾಸೆಗಳು ಶಾಶ್ವತವಾಗಿ ಉಳಿದುಬಿಡುತ್ತವೆ. ಯಾಕೆಂದರೆ, ಹಣೆಯ ಮೇಲೆ ಬರೆದಿರುವುದನ್ನು ಅಳಿಸುವುದು ಯಾರಿಂದಲೂ ಸಾಧ್ಯವಿಲ್ಲ.

ಆರು ಅಡಿ ಎತ್ತರದ ಆಜಾನುಬಾಹು ರೊನಾಲ್ಡೊ ಮೈದಾನದಲ್ಲಿ ಚಿರತೆ ವೇಗದಲ್ಲಿ ಓಡುವ, ಎದುರಾಳಿ ಆಟಗಾರರ ಚಕ್ರವ್ಯೂಹ ಭೇದಿಸಿ ಗೋಲು ಗಳಿಸುವ, ಮೈದಾನದ ಯಾವುದೇ ದಿಕ್ಕು, ಕೋನ, ಪಾರ್ಶ್ವದಿಂದ ಫ್ರೀಕಿಕ್ ನೀಡಿದರೂ ಗೋಲಾಗಿಸುವ, ಕಾರ್ನರ್, ಫ್ರೀಕಿಕ್​ಗಳನ್ನು ಹೆಡ್ ಮಾಡುವ ಸಲುವಾಗಿ ಜಿರಾಫೆಯ ಕೊರಳಿನೆತ್ತರಕ್ಕೆ ಸರ›ನೆ ಜಿಗಿಯುವ, ಪ್ರತೀ ಬಾರಿ ಗೋಲು ಬಾರಿಸಿದಾಗ ಅಂಗಣದ ಮೂಲೆಯ ಪೋರ್ಚುಗಲ್ ಧ್ವಜದತ್ತ ಓಡಿ, ಗಗನಕ್ಕೆ ನೆಗೆದು, ಕೈಗಳನ್ನು ಹಿರಿದು 'ಸ್ಸೀ..ಯೂ..' ಎಂದು ಸಂಭ್ರಮಿಸುವ ಸಿಆರ್ 7 ಬ್ರಾಯಂಡ್ ರೊನಾಲ್ಡೊರ ಟ್ರೇಡ್​ವಾರ್ಕ್ ಆಟವನ್ನಿನ್ನು ಹೈಲೈಟ್ಸ್​ಗಳಲ್ಲಿ ಮಾತ್ರ ಕಣ್ತುಂಬಿಕೊಳ್ಳಲು ಸಾಧ್ಯ.



ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani