Dailyhunt
ಕರೊನಾ ಲಸಿಕೆ ಕೊಡದಿದ್ರೆ ಉದ್ದೇಶವೇ ವ್ಯರ್ಥ; ಹೈಕೋರ್ಟ್ ಕಳವಳ

ಕರೊನಾ ಲಸಿಕೆ ಕೊಡದಿದ್ರೆ ಉದ್ದೇಶವೇ ವ್ಯರ್ಥ; ಹೈಕೋರ್ಟ್ ಕಳವಳ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆ ಕೊರತೆಯಿಂದಾಗಿ ನಿಗದಿತ ಸಮಯದಲ್ಲಿ 2ನೇ ಡೋಸ್ ಕೊಡದಿದ್ದರೆ ಅಭಿಯಾನದ ಉದ್ದೇಶವೇ ಈಡೇರುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಸಮರ್ಪಕ ವ್ಯಾಕ್ಸಿನೇಷನ್​ಗೆ 'ನೀಲಿನಕ್ಷೆ' ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ. ಕರೊನಾ ನಿಯಂತ್ರಣ, ಚಿಕಿತ್ಸೆಗೆ ಸಂಬಂಧಿಸಿದ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ರಾಜ್ಯದಲ್ಲಿ ಲಭ್ಯವಿರುವ ಕೋವಿಡ್ ಲಸಿಕೆ ಕುರಿತು ಸರ್ಕಾರ ಸಲ್ಲಿಸಿದ್ದ ಲಿಖಿತ ಹೇಳಿಕೆ ಪರಿಶೀಲಿಸಿದ ಪೀಠ, ಲಸಿಕೆ ಕೊರತೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿತಲ್ಲದೆ, ಸಮಸ್ಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ, ತಕ್ಷಣ ಕ್ರಮ ಕೈಗೊಳ್ಳಬೇಕು.

ಇಲ್ಲವಾದರೆ, ಲಸಿಕಾ ಅಭಿಯಾನದ ಉದ್ದೇಶವೇ ನಿಷ್ಪಲಗೊಳ್ಳಲಿದೆ ಎಂದು ಕಳವಳ ವ್ಯಕ್ತಪಡಿಸಿತು.

ಸರ್ಕಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸದ್ಯ 9.37 ಲಕ್ಷ ಡೋಸ್ ಲಸಿಕೆ ದಾಸ್ತಾನು ಇದೆ. ಆದರೆ, 2ನೇ ಡೋಸ್ ಲಸಿಕೆ ಪಡೆದುಕೊಳ್ಳುವವರ ಸಂಖ್ಯೆಯೇ 26 ಲಕ್ಷ ಇದೆ. ಅವರೆಲ್ಲರಿಗೂ ನಿಗದಿತ ಸಮಯದೊಳಗೆ 2ನೇ ಡೋಸ್ ಲಸಿಕೆ ನೀಡಬೇಕಿದ್ದು, ಇಂಥ ಪರಿಸ್ಥಿತಿಯನ್ನು ನಿಭಾಯಿಸುವುದಾದರೂ ಹೇಗೆ, ಲಸಿಕೆ ಕೊರತೆಯಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ ಸಹ ನೀಡಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿತು.

ರಾಜ್ಯದಲ್ಲಿ 18ರಿಂದ 44 ವರ್ಷದೊಳಗಿನವರಿಗಿರಲಿ, 45 ವರ್ಷ ಮೇಲ್ಪಟ್ಟವರಿಗೂ ವ್ಯಾಕ್ಸಿನ್ ಸಿಗುತ್ತಿಲ್ಲ. 2ನೇ ಡೋಸ್ ಕೊರತೆ ಗಂಭೀರ ಸಮಸ್ಯೆ ಸೃಷ್ಟಿಸಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಲಸಿಕಾ ಅಭಿಯಾನದ ಉದ್ದೇಶವೇ ಈಡೇರುವುದಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶೀಘ್ರ ಕ್ರಮಕೈಗೊಳ್ಳಬೇಕೆಂದು ನ್ಯಾಯಪೀಠ ಸೂಚಿಸಿತು.

ನೀಲಿನಕ್ಷೆ ಸಿದ್ಧಪಡಿಸಿ: ಮೊದಲ ಡೋಸ್ ಪಡೆದುಕೊಳ್ಳಬೇಕಾದವರಿಗೆ ಲಸಿಕೆ ನೀಡಲು ಮಾಡುವ ವ್ಯವಸ್ಥೆ ಏನು? 2ನೇ ಡೋಸ್ ಪಡೆದುಕೊಳ್ಳಬೇಕಿರುವವರಿಗೆ ಯಾವಾಗ ಲಸಿಕೆ ನೀಡಲಾಗುತ್ತದೆ? 18ರಿಂದ 44 ವರ್ಷದವರಿಗೆ ವ್ಯಾಕ್ಸಿನ್ ನೀಡಲು ಕೈಗೊಳ್ಳಲಾಗುವ ಕ್ರಮಗಳೇನು? 45 ವರ್ಷ ಮೇಲ್ಪಟ್ಟವರಿಗೆ ಏನು ವ್ಯವಸ್ಥೆ ಮಾಡಲಾಗುತ್ತದೆ? ಎಂಬ ಬಗ್ಗೆ ರಾಜ್ಯಕ್ಕೆ ಅನ್ವಯವಾಗುವಂತೆ ನೀಲಿನಕ್ಷೆಯೊಂದನ್ನು ಸಿದ್ಧಪಡಿಸಿ ಮೇ 13ರಂದು ಕೋರ್ಟ್​ಗೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿತು.

ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!

ಅಪ್ಪ-ಮಗ ಇಬ್ಬರೂ ಕರೊನಾಗೆ ಬಲಿ; ಸೋಂಕಿಗೆ ಒಳಗಾಗಿರುವ ಮತ್ತೊಬ್ಬ ಮಗನ ಪರಿಸ್ಥಿತಿ ಚಿಂತಾಜನಕ..

Dailyhunt
Disclaimer: This content has not been generated, created or edited by Dailyhunt. Publisher: Vijayvani