Thursday, 03 Dec, 12.28 am ವಿಜಯವಾಣಿ

ಮುಖಪುಟ
ಕರೊನಾ ಪ್ರಕರಣ ಕುರಿತ ಮಾಹಿತಿ ಮುಚ್ಚಿಟ್ಟ ಚೀನಾ!

ನವದೆಹಲಿ: ಕರೊನಾ ವೈರಸ್ ಸ್ಪೋಟಗೊಂಡ ಆರಂಭದಲ್ಲಿ ಅದರ ಗಂಭೀರತೆ ಕುರಿತ ಅಧಿಕೃತ ಅಂಕಿ-ಅಂಶಗಳನ್ನು ಮುಚ್ಚಿಟ್ಟ ಚೀನಾ, ಇಡೀ ಜಗತ್ತನ್ನು ತಪ್ಪು ದಾರಿಗೆಳೆದಿತ್ತು. ವುಹಾನ್​ನಿಂದ ಸೋರಿಕೆಯಾಗಿರುವ ದಾಖಲೆಗಳಿಂದ ಚೀನಾದ ಈ ಕೃತ್ಯ ಬಹಿರಂಗಗೊಂಡಿದೆ.

ಕರೊನಾ ವೈರಸ್ ಮೊದಲಿಗೆ ಕಾಣಿಸಿಕೊಂಡ ಹುಬೆ ಪ್ರಾಂತ್ಯದಲ್ಲಿ ಫೆಬ್ರವರಿ 10ರಂದು ಒಟ್ಟು 5,918 ಹೊಸ ಪ್ರಕರಣಗಳು ಪತ್ತೆಯಾಗಿದ್ದವು ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಪಟ್ಟಿ ಮಾಡಿದ್ದರು. ಆದರೆ ಅದರ ಅರ್ಧದಷ್ಟನ್ನು ಮಾತ್ರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿತ್ತು. ದೊಡ್ಡ ಸಂಖ್ಯೆಯನ್ನು ಚೀನಾ ಸರ್ಕಾರ ಯಾವತ್ತೂ ಬಹಿರಂಗಗೊಳಿಸಿರಲಿಲ್ಲ ಎಂದು ಲಭ್ಯ ದಾಖಲೆಗಳಿಂದ ತಿಳಿದುಬಂದಿದೆ. ವಾಸ್ತವವಾಗಿ ಎಷ್ಟು ಜನರು ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದರು ಎನ್ನುವುದು ಹುಬೆ ಪ್ರಾಂತೀಯ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ 117 ಪುಟಗಳ ವರದಿಯಲ್ಲಿ ದಾಖಲಾಗಿದೆ. ದೃಢಪಟ್ಟ ಸೋಂಕಿತರ ಮೂರನೇ ಎರಡರಷ್ಟು ಜನರ ಮಾಹಿತಿ ಮಾತ್ರ ಬಹಿರಂಗಪಡಿಸಲಾಗಿತ್ತು.

ವುಹಾನ್ ಫೈಲ್ಸ್: ಸೋಂಕು ವ್ಯಾಪಿಸಿದ ಬಳಿಕ ಚೀನಾದಲ್ಲಿ ಸೋರಿಕೆಯಾದ ಮಹತ್ವದ ದಾಖಲೆ ಇದಾಗಿದೆ. ಆರಂಭದ ದಿನಗಳಲ್ಲಿ ಸೋಂಕು ನಿಯಂತ್ರಿಸುವಲ್ಲಿ ಚೀನಾ ಆಡಳಿತ ವಿಫಲವಾಗಿತ್ತು ಎಂಬುದಕ್ಕೆ ಸೋರಿಕೆಯಾಗಿರುವ 'ವುಹಾನ್ ಕಡತ' ಸಾಕ್ಷಿಯಾಗಿದೆ. ಕೋವಿಡ್-19ಗೆ ಪ್ರಾಣಿಗಳೇ ಮೂಲ ಎನ್ನುವುದನ್ನು ಸಾಬಿತು ಪಡಿಸಲು ಸಾಧ್ಯವಾದ ಎಲ್ಲ ಕ್ರಮ ಕೈಗೊಳ್ಳುತ್ತೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ.ಎಚ್.ಒ.) ಮುಖ್ಯಸ್ಥ ಟೆಡ್ರೋಸ್ ಅಧಾನಂ ಹೇಳಿದ ಮರುದಿನವೇ ದಾಖಲೆಗಳ ಸೋರಿಕೆಯಾಗಿದೆ. ವೈರಸ್​ನ ಮೂಲ ಏನೆಂಬುದು ಗೊತ್ತಾಗಲೇ ಬೇಕು. ಮುಂದೆ ಅದು ವ್ಯಾಪಿಸುವುದನ್ನು ತಡೆಯುವುದು ಅಗತ್ಯ ಎಂದು ಟೆಡ್ರೋಸ್ ಹೇಳಿದ್ದರು.

ಮಾಸ್ಕ್ ಧರಿಸದಿದ್ದರೆ ಸಮಾಜ ಸೇವೆ ಶಿಕ್ಷೆ!

ಕರೊನಾ ಹರಡುವುದನ್ನು ತಡೆಯುವ ಭಾಗವಾಗಿ ಕಡ್ಡಾಯ ಮಾಸ್ಕ್ ಧರಿಸುವ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಜೊತೆಗೆ ಕೋವಿಡ್-19 ಆರೈಕೆ ಕೇಂದ್ರಗಳಲ್ಲಿ ಸೇವೆಗೆ ನಿಯೋಜಿಸುವ ಶಿಕ್ಷೆ ವಿಧಿಸುವಂತೆ ಗುಜರಾತ್ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಕಡ್ಡಾಯ ಮಾಸ್ಕ್ ನಿಯಮ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿಭಾಗೀಯ ಪೀಠ ಅತೃಪ್ತಿ ವ್ಯಕ್ತಪಡಿಸಿ, ಈ ವಿನೂತನ ಸಲಹೆಯನ್ನು ನೀಡಿದೆ. ಮಾಸ್ಕ್ ನಿಯಮ ಉಲ್ಲಂಘಿಸುವವರನ್ನು ಕೋವಿಡ್ ಕೇಂದ್ರಗಳಲ್ಲಿ 5ರಿಂದ 15 ದಿನಗಳ ಕಾಲ ಪ್ರತಿದಿನ ನಾಲ್ಕರಿಂದ ಆರು ಗಂಟೆ ಅವಧಿಗೆ ವೈದ್ಯೇತರ ಸೇವೆಗಳಿಗೆ ಬಳಸಿಕೊಳ್ಳಬೇಕೆಂದು ಮುಖ್ಯ ನ್ಯಾಯಮೂರ್ತಿ ವಿಕ್ರಂನಾಥ್ ಮತ್ತು ನ್ಯಾ. ಜೆ.ಬಿ. ಪರ್ಡಿವಾಲಾ ಇದ್ದ ಪೀಠ ಹೇಳಿದೆ.

ಎರಡನೇ ಅಲೆಗೆ ಅಮೆರಿಕ ತತ್ತರ

| ಬೆಂಕಿ ಬಸಣ್ಣ ನ್ಯೂಯಾರ್ಕ್

ಅಮೆರಿಕದ ಬಹಳಷ್ಟು ಭಾಗಗಳಲ್ಲಿ ಕರೊನಾ ಮಹಾಮಾರಿಯ ಎರಡನೇ ಅಲೆ ಭೀಕರವಾಗಿ ಹಬ್ಬುತ್ತಿದ್ದು, ನವೆಂಬರ್ ತಿಂಗಳೊಂದರಲ್ಲೇ 40 ಲಕ್ಷ ಹೊಸ ಕೇಸುಗಳು ದಾಖಲಾಗಿವೆ. ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಜನರು ಕಂಗಾಲಾಗುತ್ತಿದ್ದಾರೆ. ಅಮೆರಿಕ ಒಂದು ಕೋಟಿ 37 ಲಕ್ಷ ಸೋಂಕಿತರು ಮತ್ತು 2,70,000 ಸಾವುಗಳೊಂದಿಗೆ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಇಲ್ಲಿ ಪ್ರತಿದಿನ ಅಂದಾಜು ಒಂದೂವರೆಯಿಂದ ಎರಡು ಲಕ್ಷ ಹೊಸ ಕರೊನಾ ಕೇಸುಗಳು ದಾಖಲಾಗುತ್ತಿವೆ. ಪ್ರತಿ ದಿವಸ ಸುಮಾರು ಒಂದರಿಂದ ಒಂದೂವರೆ ಸಾವಿರ ಜನರು ಸಾಯುತ್ತಿದ್ದಾರೆ. ನವಂಬರ್ 24 ನೇ ತಾರೀಕು ಒಂದೇ ದಿನ ಎರಡು ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಮೇ ತಿಂಗಳ ನಂತರ ಒಂದೇ ದಿನದಲ್ಲಿ ಸಂಭವಿಸಿದ ಅತ್ಯಂತ ಹೆಚ್ಚಿನ ಸಾವುಗಳ ದಾಖಲೆ ಇದಾಗಿದೆ.

ಕಳೆದ ಕೆಲವು ವಾರಗಳಿಂದ ಮಿತಿ ಮೀರಿ ಹಬ್ಬುತ್ತಿರುವ ಕರೊನಾಗೆ ಮುಖ್ಯ ಕಾರಣವೆಂದರೆ, ಆರೋಗ್ಯ ತಜ್ಞರು ಕೊಟ್ಟ ಎಚ್ಚರಿಕೆಗೆ ಜನರು ಬೆಲೆ ಕೊಡದೆ, ಮಾಸ್ಕ್ ಇನ್ನಿತರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು. ಈಗ ಇಲ್ಲಿ ರಜಾ ಸೀಸನ್ ಬಂದಿರುವುದರಿಂದ ಥ್ಯಾಂಕ್ಸ್ -ಗಿವಿಂಗ್ ರಜಾದಿನಗಳ ಪ್ರಯುಕ್ತ, ಕೋಟ್ಯಂತರ ಜನರು ಬೇರೆ ಬೇರೆ ಊರುಗಳಿಗೆ ಪ್ರವಾಸ, ಪಾರ್ಟಿ, ಹಬ್ಬಗಳ ಆಚರಣೆ ಮಾಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಕಿಸ್​ವುಸ್ ರಜಾ ಇರುವುದರಿಂದ ಜನರ ಸಂಚಾರ, ಪ್ರಯಾಣ, ಪಾರ್ಟಿಗಳು ಇನ್ನೂ ಜಾಸ್ತಿಯಾಗಲಿದ್ದು ಇದರ ಪರಿಣಾಮ ಕರೊನಾ ಸಾವುಗಳ ಸಂಖ್ಯೆ ಇನ್ನೂ ಬಹಳಷ್ಟು ಹೆಚ್ಚುವ ನಿರೀಕ್ಷೆ ಇದೆ. ಈ ಚಳಿಗಾಲವು ಅತ್ಯಂತ ಭೀಕರ ಚಳಿಗಾಲ ( ಈಚ್ಟk ಗಜ್ಞಿಠಿಛ್ಟಿ ) ಆಗುವ ಎಲ್ಲಾ ಲಕ್ಷಣಗಳಿವೆ. ಇಷ್ಟೊಂದು ತೊಂದರೆಗಳ ಮಧ್ಯೆಯೂ, ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೋಲನ್ನು ಒಪ್ಪಿಕೊಳ್ಳುತ್ತಿಲ್ಲ ಮತ್ತು ಹೊಸದಾಗಿ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ ಅವರಿಗೆ ಅಧಿಕಾರ ಹಸ್ಥಾಂತರವನ್ನು ಸರಿಯಾಗಿ ಮಾಡುತ್ತಿಲ್ಲ. ಅಮೆರಿಕ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರು ಹಸಿವು, ನಿರುದ್ಯೋಗ ಸಮಸ್ಯೆ, ಆರೋಗ್ಯ ಸಮಸ್ಯೆ ಮತ್ತು ಮನೆ ಬಾಡಿಗೆ ಕಟ್ಟಲು ಆಗದೇ ಕಂಗಾಲಾಗಿದ್ದಾರೆ. ಸರ್ಕಾರದಿಂದ ಹೊಸ ಪರಿಹಾರಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ದುರದೃಷ್ಟವಶಾತ್, ಸಂಸತ್ತಿನಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್ ಪಕ್ಷದ ವೈರತ್ವ ರಾಜಕೀಯದ ಮಧ್ಯೆ ಒಮ್ಮತ ಮೂಡದೇ ಇನ್ನೊಂದು ಆರ್ಥಿಕ ಪ್ಯಾಕೇಜ್ ಬಿಲ್ ಅಂಗೀಕಾರ ಆಗುತ್ತಿಲ್ಲ.

ಇವುಗಳೆಲ್ಲದರ ಮಧ್ಯೆ ಆಶಾಕಿರಣವೆಂದರೆ ಇಲ್ಲಿಯ ಮೂರೂ ಕಂಪನಿಗಳಾದ ಫೈಜರ್, ಮಾಡರ್ನ ಮತ್ತು ಜಾನ್ಸನ್ ಜಾನ್ಸನ್ ಸಂಶೋಧನೆ ಮಾಡುತ್ತಿರುವ ಲಸಿಕೆಗಳು ಕೊನೆಯ ಹಂತದಲ್ಲಿದೆ. ಫೈಜರ್ ಮತ್ತು ಮಾಡರ್ನ ಕಂಪನಿಗಳು, ಕ್ಲಿನಿಕಲ್ ಟ್ರಯಲ್ಸ್ ಮುಗಿಸಿದ್ದು, ತಮ್ಮ ಲಸಿಕೆಗಳನ್ನು ಬಿಡುಗಡೆ ಮಾಡಲು ತುರ್ತು ಅನುಮತಿಗಾಗಿ ವಿನಂತಿಸಿಕೊಂಡಿದೆ. ಹೀಗಾಗಿ ಕೆಲವೇ ವಾರಗಳಲ್ಲಿ ಅಮೆರಿಕದಲ್ಲಿ ಲಸಿಕೆಗಳು ಬಿಡುಗಡೆಯಾಗುವ ಸೂಚನೆಗಳಿವೆ. ಈಗಾಗಲೇ ಸರ್ಕಾರ ಲಸಿಕೆಗಳನ್ನು ಯಾವ ರೀತಿ ವಿತರಿಸಬೇಕು, ಯಾರಿಗೆ ಮೊದಲು ಕೊಡಬೇಕು, ಯಾವ ರಾಜ್ಯಗಳಿಗೆ ಎಷ್ಟು ಕೊಡಬೇಕು ಎಂಬ ಯೋಜನೆಯಲ್ಲಿ ತೊಡಗಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರಿಗೆ, ನರ್ಸ್ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮೊದಲ ಆದ್ಯತೆ

ಕೊಡಲಾಗುವುದು. ನಂತರ ನರ್ಸಿಂಗ್ ಹೋಂ ಗಳಲ್ಲಿರುವ ವೃದ್ಧರಿಗೆ, ಹಿರಿಯ ನಾಗರಿಕರಿಗೆ ಆದ್ಯತೆ ಕೊಡಲಾಗುವುದು. ಚಿಕ್ಕ ಮಕ್ಕಳಿಗೆ ಲಸಿಕೆ ಇನ್ನು ಸಂಶೋಧನೆಯ ಹಂತದಲ್ಲಿಯೇ ಇದ್ದು, ಅದು ಬಿಡುಗಡೆಯಾಗಲು ಇನ್ನೂ ಅನೇಕ ತಿಂಗಳುಗಳೇ ಬೇಕಾಗಬಹುದು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top