ದುಬೈ: ಅಂತಿಮ ಹಂತದವರೆಗೂ ಕುತೂಹಲ ಕೆರಳಿಸಿದ ಕದನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್‌ಗಳಿಂದ ಕೋಲ್ಕತ ನೈಟ್ ರೈಡರ್ಸ್ ಎದುರು ರೋಚಕ ಜಯ ದಾಖಲಿಸಿತು. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್-13ರ ಪಂದ್ಯ ಕಡೇ ಎಸೆತದವರೆಗೂ ರೋಚಕತೆ ಹುಟ್ಟಿಸಿತು. ಈ ಸೋಲಿನೊಂದಿಗೆ ಕೆಕೆಆರ್ ತಂಡದ ಪ್ಲೇ-ಆಫ್ ಹಾದಿ ಕಠಿಣಗೊಂಡರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮೊದಲ ತಂಡವಾಗಿ ಮುಂದಿನ ಹಂತಕ್ಕೇರಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ, ಆರಂಭಿಕ ನಿತೀಶ್ ರಾಣಾ (87 ರನ್, 61 ಎಸೆತ, 10 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಲವಾಗಿ 5 ವಿಕೆಟ್‌ಗೆ 172 ರನ್ ಕಲೆಹಾಕಿತು. ಪ್ರತಿಯಾಗಿ ಸಿಎಸ್‌ಕೆ ತಂಡ ಋತುರಾಜ್ ಗಾಯಕ್ವಾಡ್ (72ರನ್,53 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಕಡೇ ಹಂತದಲ್ಲಿ ರವೀಂದ್ರ ಜಡೇಜಾ (31*ರನ್, 11 ಎಸೆತ, 2 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 178 ರನ್‌ಗಳಿಸಿತು.

