ನವದೆಹಲಿ: ಕೇರಳ(Kerala) ರಾಜ್ಯದ ಹೆಸರನ್ನು 'ಕೇರಳಂ' ಎಂದು ಮರು ನಾಮಕರಣ ಮಾಡುವ ಮಸೂದೆಯನ್ನು ಮಂಗಳವಾರ(ಆ. 11) ವಿರೋಧ ಪಕ್ಷದ ಸದಸ್ಯರ ಘೋಷಣೆಗಳು ಮತ್ತು ಪ್ರತಿಭಟನೆಗಳ ನಡುವೆ ಯಾವುದೇ ಚರ್ಚೆಯಿಲ್ಲದೆ ಧ್ವನಿ ಮತದ ಮೂಲಕ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
ದೆಹಲಿಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಅಮಿತ್ ಶಾ ವಿವರಣೆ ನೀಡಬೇಕೆಂದು ಒತ್ತಾಯಿಸಿ ವಿರೋಧ ಪಕ್ಷಗಳು ಸದನದಲ್ಲಿ ಪ್ರತಿಭಟನೆ ಮುಂದುವರೆಸಿವೆ. ಅದರ ನಡುವೆಯೂ ಸದನವು ಮಸೂದೆಯನ್ನು ಅಂಗೀಕರಿಸಿತು.
ಕೇರಳ ವಿಧಾನಸಭೆಯು 2024 ಜೂನ್ ತಿಂಗಳಲ್ಲಿ ರಾಜ್ಯವನ್ನು ಮಲಯಾಳಂನಲ್ಲಿ 'ಕೇರಳಂ' ಎಂದು ಕರೆಯಬೇಕೆಂದು ಮತ್ತು ಅದೇ ಹೆಸರನ್ನು ಅಧಿಕೃತವಾಗಿ ಅಂತಿಮಗೊಳಿಸಬೇಕೆಂದು ನಿರ್ಣಯವನ್ನು ಅಂಗೀಕರಿಸಿತು. ಮತ್ತು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿತ್ತು. ಬಳಿಕ ಕೇಂದ್ರ ಸಚಿವ ಸಂಪುಟವು ಈ ಪ್ರಸ್ತಾವನೆಯನ್ನು ಅನುಮೋದಿಸಿತ್ತು.
ಇನ್ನೂ ಕೇರಳ ಮಸೂದೆ ಬಳಿಕ ಸಹಕಾರ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು, ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ತಿದ್ದುಪಡಿ) ಮಸೂದೆ-2026 ಅನ್ನು ಮಂಡಿಸಿದರು, ಇದನ್ನು ನಿರಂತರ ಗದ್ದಲದ ನಡುವೆಯೂ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು.ಲೋಕಸಭೆಯು ಇಲ್ಲಿಯವರೆಗೆ ಅಂಗೀಕರಿಸಿದ 11 ಮಸೂದೆಗಳಲ್ಲಿ ಕೇವಲ ಎರಡು ಮಸೂದೆಗಳು ಮಾತ್ರ ಚರ್ಚೆ ಮಾಡಲಾಗಿದೆ. ಉಳಿದ ಎಲ್ಲಾ ಮಸೂದೆಗಳು ವಿರೋಧ ಪಕ್ಷದ ಪ್ರತಿಭಟನೆಯ ನಡುವೆ ಚರ್ಚೆಯಿಲ್ಲದೆ ಅಂಗೀಕರಿಸಲ್ಪಟ್ಟಿವೆ (ಏಜೆನ್ಸೀಸ್).

