ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2027ನೇ ಆವೃತ್ತಿಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಡಿಸೆಂಬರ್ 16ರಂದು ನಡೆಯಲಿರುವ ಮಿನಿ ಹರಾಜಿಗೆ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಬಲಿಷ್ಠ ತಂಡ ಕಟ್ಟುವ ಲೆಕ್ಕಾಚಾರದಲ್ಲಿವೆ. ಈ ನಡುವೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಮುಂಬರುವ ಆವೃತ್ತಿಗೂ ಮುನ್ನ ತನ್ನ ಕೋಚಿಂಗ್ ಬಳಗದಲ್ಲಿ ಸಂಪೂರ್ಣ ಬದಲಾವಣೆ ಮಾಡಿರುವ ಎಂಐ, ಕನ್ನಡಿಗ ರಾಬಿನ್ ಉತ್ತಪ್ಪ (Robin Uthappa) ಅವರನ್ನು ನೂತನ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ರಾಬಿನ್ ಉತ್ತಪ್ಪ, ತಮಗೆ ಈ ಆಫರ್ ಸಂಪೂರ್ಣ ಅನಿರೀಕ್ಷಿತವಾಗಿ ಬಂತು ಎಂದು ಹೇಳಿಕೊಂಡಿದ್ದಾರೆ. ಐದು ಬಾರಿಯ ಚಾಂಪಿಯನ್ ತಂಡದಿಂದ ತಮಗೆ ಕರೆ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅವರು ಮನಬಿಚ್ಚಿ ಮಾತನಾಡಿದ್ದಾರೆ.
ಕ್ರಿಕ್‌ಬಜ್ ಜೊತೆ ಮಾತನಾಡಿದ ಉತ್ತಪ್ಪ, ಈ ಆಫರ್ ಸಂಪೂರ್ಣವಾಗಿ ಅನಿರೀಕ್ಷಿತವಾಗಿ ಬಂತು. ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ, ಕೋಚಿಂಗ್ ಮಾಡುವ ಆಸಕ್ತಿ ನನ್ನಲ್ಲಿತ್ತು. ಯಾವುದೇ ಒಂದು ಫ್ರಾಂಚೈಸಿಯೊಂದಿಗೆ ಕೆಲಸ ಮಾಡಲು ಒಂದಲ್ಲ ಒಂದು ದಿನ ಕರೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆ. ಏಕೆಂದರೆ ತಂಡಕ್ಕೆ ನನ್ನಿಂದ ಸಾಕಷ್ಟು ಮೌಲ್ಯವನ್ನು ಸೇರಿಸಲು ಸಾಧ್ಯವಿದೆ ಎಂದು ನಾನು ಭಾವಿಸಿದ್ದೆ ಎಂದು ತಿಳಿಸಿದ್ದಾರೆ.
ರೋಹಿತ್, ಸ್ಕೈ ಜೊತೆ ಕೆಲಸ!
ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಅವರಂತಹ ವಿಶ್ವದರ್ಜೆಯ ದಿಗ್ಗಜ ಆಟಗಾರರಿದ್ದಾರೆ. ಇಂತಹ ದೊಡ್ಡ ಹೆಸರುಗಳೊಂದಿಗೆ ಕೆಲಸ ಮಾಡುವಾಗ ಆಲೋಚನೆಯಲ್ಲಿ ಹೆಚ್ಚಿನ ಸ್ಪಷ್ಟತೆ ಇರುತ್ತದೆ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
ದಿಗ್ಗಜ ಹಾಗೂ ಅನುಭವಿ ಕ್ರಿಕೆಟಿಗರಾಗಿರುವುದರಿಂದ ಆಲೋಚನೆಯಲ್ಲಿ ಸ್ಪಷ್ಟತೆ ಇರುವುದು ಬಹಳ ಮುಖ್ಯ. ಮದರ್ ಕ್ರಿಕೆಟ್ಗಿಂತ ಯಾರೂ ದೊಡ್ಡವರಲ್ಲ. ಯಾರೂ ಮಿಗಿಲಲ್ಲ ಎಂಬುದನ್ನು ಅರಿಯುವಷ್ಟು ದೀರ್ಘಕಾಲ ಎಲ್ಲರೂ ಆಟದಲ್ಲಿದ್ದಾರೆ. ನೀವು ಎಷ್ಟೇ ದೊಡ್ಡ ಆಟಗಾರರಾಗಿದ್ದರೂ, ಒಂದು ಟೂರ್ನಿ ಆರಂಭವಾಗುವ ಮುನ್ನ ಕ್ರೀಡಾಪಟುಗಳಾಗಿ ಸ್ಪಷ್ಟತೆಯನ್ನು ಬಯಸುತ್ತೀರಿ ಎಂದು ಉತ್ತಪ್ಪ ವಿವರಿಸಿದ್ದಾರೆ.
ಕೋಚ್ ಜವಾಬ್ದಾರಿ ಬಗ್ಗೆ ಉತ್ತಪ್ಪ ಹೇಳಿದ್ದಿಷ್ಟು!
ಅನುಭವಿ ಆಟಗಾರರಿಗೆ ಕೋಚ್‌ಗಳಿಂದ ಯಾವ ರೀತಿಯ ಬೆಂಬಲ ಬೇಕಾಗುತ್ತದೆ ಎಂಬುದರ ಕುರಿತು ಮಾತನಾಡಿದ ಉತ್ತಪ್ಪ, ಅನುಭವಿ ಆಟಗಾರರಿಗೆ ಹಲವು ವಿಷಯಗಳ ಅಗತ್ಯವಿರುತ್ತದೆ. ಕೋಚ್‌ಗಳಾಗಿ ನಾವು ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಿದ್ಧರಾಗುವಂತೆ ಬೇಕಾದ ಎಲ್ಲಾ ಸೌಲಭ್ಯ ಮತ್ತು ವಾತಾವರಣವನ್ನು ಒದಗಿಸುವ ಮೂಲಕ ಸೇವೆ ಸಲ್ಲಿಸಬಹುದು. ಪಂದ್ಯ ಆರಂಭವಾಗುವ ಮುನ್ನ ಅವರು ತಾವು ಇರುವ ಸ್ಥಿತಿಯ ಬಗ್ಗೆ ಸಂತೋಷ ಮತ್ತು ಆತ್ಮವಿಶ್ವಾಸದಿಂದ ಇರಬೇಕು. ಕೆಲವೊಮ್ಮೆ, ಅನುಭವಿ ಆಟಗಾರರಿಗಾಗಿ ಸದಾ ಲಭ್ಯವಿರುವುದೇ ಒಂದು ದೊಡ್ಡ ವರದಾನವಾಗಿರುತ್ತದೆ. ಈ ನಿಟ್ಟಿನಲ್ಲಿ ನಾವು ಮಾಡಬಹುದಾದ ಕೆಲಸಗಳು ಸಾಕಷ್ಟಿವೆ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ, ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಕನ್ನಡಿಗ ರಾಬಿನ್ ಉತ್ತಪ್ಪ ಅವರ ಸೇರ್ಪಡೆ ಹೊಸ ಉತ್ಸಾಹ ತಂದಿದ್ದು, ರೋಹಿತ್ ಮತ್ತು ಸೂರ್ಯಕುಮಾರ್ ಅವರಂತಹ ಸ್ಟಾರ್ ಬ್ಯಾಟರ್‌ಗಳೊಂದಿಗೆ ಉತ್ತಪ್ಪ ಅವರ ಮಾರ್ಗದರ್ಶನ ಹೇಗೆ ಕೆಲಸ ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ(ಏಜೆನ್ಸೀಸ್).

