ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ನಡೆಯುತ್ತಿರುವ ಅನಧಿಕೃತ ಹೋಂಸ್ಟೇ, ಗೆಸ್ಟ್‌ಹೌಸ್ ಹಾಗೂ ಲಾಡ್ಜ್‌ಗಳ ಮಾಲೀಕರ ವಿರುದ್ಧ ಜಿಲ್ಲಾಡಳಿತ, ಹಂಪಿ ಅಭಿವೃದ್ಧಿ ಪ್ರಾಧಿಕಾರ (ಹವಾಮ) ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಂಗಳವಾರ ಜಂಟಿ ಕಾರ್ಯಾಚರಣೆ ನಡೆಸಿದರು.
ಪ್ರಾಧಿಕಾರ ಆಯುಕ್ತ ಇ. ಬಾಲಕೃಷ್ಣಪ್ಪ ಮಾತನಾಡಿ, ವಸತಿ ಅಥವಾ ಕೃಷಿ ಉದ್ದೇಶಕ್ಕೆ ಭೂಮಿ ಬಳಕೆ ಅನುಮತಿ ಪಡೆದು, ವಾಣಿಜ್ಯಕ್ಕೆ ಬಳಸುವುದು ಕಾನೂನುಬಾಹಿರ. ನಿಯಮ ಉಲ್ಲಂಘಿಸಿರುವ ಘಟಕಗಳ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸುವುದರ ಜತೆಗೆ ಕಟ್ಟಡಗಳನ್ನು ಸೀಜ್ ಮಾಡಲಾಗುವುದು ಎಂದು ತಿಳಿಸಿದರು.
ವಿದ್ಯುತ್ ದುರ್ಬಳಕೆಗೆ ನೋಟಿಸ್
ಕಡ್ಡಿರಾಂಪುರ ಬಳಿಯ ಜಮೀನೊಂದರಲ್ಲಿ ವೆಂಕಟೇಶ್ ಎಂಬುವವರು ಅನಧಿಕೃತವಾಗಿ ಹೋಂಸ್ಟೇ ನಿರ್ಮಿಸಿ, ಕೃಷಿ ಚಟುವಟಿಕೆಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ತಕ್ಷಣ ಜೆಸ್ಕಾಂ ಅಧಿಕಾರಿ ಮೂಲಕ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಸ್ಥಳದಲ್ಲೇ ನೋಟಿಸ್ ಜಾರಿ ಮಾಡಲಾಯಿತು.ಮುಚ್ಚಳಿಕೆ ಪತ್ರ ಕಡ್ಡಾಯ:
ಅಧಿಕೃತ ಪರವಾನಗಿ ಸಿಗುವವರೆಗೆ ಯಾವುದೇ ಕಾರಣಕ್ಕೂ ಹೋಂಸ್ಟೇ ನಡೆಸುವುದಿಲ್ಲ ಎಂದು ಮಾಲೀಕರು ಡಿಸಿ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಲಿಖಿತ ಮುಚ್ಚಳಿಕೆ ಪತ್ರ ನೀಡಬೇಕು. ಹಂಪಿ ನಿರ್ವಹಣಾ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಪಂಚಾಯಿತಿಯಿಂದ ಅಧಿಕೃತ ನಿರಾಕ್ಷೇಪಣಾ ಪತ್ರ ಪಡೆದು, ನಿಯಮಾನುಸಾರ ಪರವಾನಗಿ ಪಡೆದ ನಂತರವೇ ಉದ್ಯಮ ಮುಂದುವರಿಸಲು ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
