ಜನರೊಂದಿಗೆ ಬೆರೆಯುವುದು ಹಬ್ಬದಂತಿದ್ದರೂ, ನಮ್ಮ ಅಸ್ತಿತ್ವವು ಯಾವಾಗಲೂ ಏಕಾಂತದಲ್ಲಿರುತ್ತದೆ. ನಿಮ್ಮನ್ನು ನೀವು ಅದ್ಭುತ ವ್ಯಕ್ತಿಯನ್ನಾಗಿ ಮಾಡಿಕೊಂಡರೆ, ಸುಮ್ಮನೆ ಕುಳಿತುಕೊಳ್ಳುವುದು ಕೂಡ ಅದ್ಭುತವಾಗಿರುತ್ತದೆ. ನಿಮ್ಮ ಜೀವನದ ಪ್ರತಿಯೊಂದು ಕ್ಷಣದಲ್ಲೂ ಪ್ರೀತಿಯಿಂದ ಇರುವುದು ಯಾವುದೋ ಒಂದು ನಿರ್ದಿಷ್ಟ ಪರಿಸ್ಥಿತಿ ಸಂಭವಿಸಿದಾಗ ಅಥವಾ ನಿರ್ದಿಷ್ಟ ವ್ಯಕ್ತಿಯನ್ನು ನೋಡಿದಾಗ ಮಾತ್ರವಲ್ಲ, ನೀವು ಯಾವುದೇ ತಾರತಮ್ಯವಿಲ್ಲದೆ ಪ್ರೀತಿಯಿಂದಿದ್ದರೆ, ನಿಮ್ಮ ಬುದ್ಧಿವಂತಿಕೆಯು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ವಿಕಸನಗೊಳ್ಳುತ್ತದೆ. ಆಯ್ಕೆಗಳನ್ನು ಮಾಡುವಲ್ಲಿ ಬುದ್ಧಿವಂತಿಕೆಯು ಕುಂಠಿತಗೊಳ್ಳುತ್ತದೆ. ಪ್ರೀತಿಯಿಂದಿರುವುದು ಬೇರೊಬ್ಬರಿಗೆ ನೀಡುವ ಕೊಡುಗೆಯಲ್ಲ. ಅದು ನಿಮಗಾಗಿ ನೀವೇ ಸಾಧ್ಯವಾಗಿಸಿಕೊಳ್ಳುವ ಸುಂದರವಾದ ಸಂಗತಿ. ಅದು ನಿಮ್ಮ ವ್ಯವಸ್ಥೆಯ ಆಹ್ಲಾದಕತೆ- ನಿಮ್ಮ ಭಾವನೆ, ಮನಸ್ಸು ಮತ್ತು ಶರೀರಗಳು ಸಹಜವಾಗಿಯೇ ಆಹ್ಲಾದಕರವಾಗುತ್ತವೆ. ನಿಮ್ಮ ವ್ಯವಸ್ಥೆಯು ಆಹ್ಲಾದಕರವಾಗಿದ್ದಾಗ ಮಾತ್ರ ನಿಮ್ಮ ಬುದ್ಧಿವಂತಿಕೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರೂಪಿಸಲು ಸಾಕಷ್ಟು ವೈಜ್ಞಾನಿಕ ಪುರಾವೆಗಳಿವೆ.
ಸಂಪೂರ್ಣ ಲಯದಲ್ಲಿ: ನೀವು ವಿಶ್ರಾಂತಿಯಲ್ಲಿದ್ದಾಗ ನಿಮ್ಮ ಹೃದಯ ಬಡಿತವು ನಿಮಿಷಕ್ಕೆ 60 ಬಾರಿ ಇದ್ದರೆ, ನೀವು ಈ ಪ್ರಪಂಚದೊಂದಿಗೆ ಲಯದಲ್ಲಿದ್ದೀರಿ ಎಂದರ್ಥ. ಹೆಚ್ಚಿನ ಜನರು ಆರೋಗ್ಯವಾಗಿ ಮತ್ತು ಕ್ಷೇಮವಾಗಿದ್ದಾಗ ಅವರ ಹೃದಯ ಬಡಿತ 65ರಿಂದ 75ರಷ್ಟಿರುತ್ತದೆ. ನೀವು ಸೂರ್ಯ ನಮಸ್ಕಾರ ಮತ್ತು ಶಾಂಭವಿ ಮಹಾಮುದ್ರೆಯಂತಹ ಕೆಲವು ಸರಳ ಯೋಗಾಭ್ಯಾಸಗಳನ್ನು ಸುಮಾರು 18 ತಿಂಗಳ ಕಾಲ ಮಾಡಿದರೆ, ಅದು 60ಕ್ಕೆ ಬರುತ್ತದೆ- ಆಗ ನೀವು ಲಯದಲ್ಲಿರುತ್ತೀರಿ. ನೀವು ಲಯದಲ್ಲಿದ್ದಾಗ, ಆನಂದವಾಗಿರುವುದು ಸಹಜವಾಗುತ್ತದೆ, ಏಕೆಂದರೆ ಜೀವವನ್ನು ಸೃಷ್ಟಿಸಿರುವುದೇ ಹಾಗೆ. ಅದು ವಿಕಸನಗೊಳ್ಳಲು ಸೃಷ್ಟಿಯಾಗಿದೆ.
ಕೃಷ್ಣನು ತನ್ನ ಸುತ್ತಲಿನ ಜೀವನದೊಂದಿಗೆ ಸಂಪೂರ್ಣ ಲಯದಲ್ಲಿದ್ದನು, ಇದೇ ಕೃಷ್ಣನ ಸಾಧನೆಯಾಗಿತ್ತು. ಬಾಲ್ಯದಲ್ಲಿ ಅವನು ಎಂತಹ ಆಟಗಳನ್ನು ಆಡಿದರೂ, ಅದ್ಭುತವಾದ ಲಯದಲ್ಲಿದ್ದನು. ಅವನು ಜನರ ಮನೆಗಳಿಂದ ಬೆಣ್ಣೆಯನ್ನು ಕದ್ದು, ಎಲ್ಲ ರೀತಿಯ ತುಂಟಾಟಗಳನ್ನು ಮಾಡಿದರೂ ಪ್ರತಿಯೊಬ್ಬರೂ ಅವನನ್ನು ಪ್ರೀತಿಸುತ್ತಿದ್ದರು ಎಂದರೆ, ಅವನು ಅವರನ್ನು ತನ್ನೊಂದಿಗೆ ಲಯಕ್ಕೆ ತಂದಿದ್ದನು ಎಂದರ್ಥ. ನೀವು ಯಾರೊಂದಿಗಾದರೂ ಲಯದಲ್ಲಿದ್ದೀರಿ ಎಂದು ಭಾವಿಸಿದಾಗ ಮಾತ್ರ, ಅವರ ಉಪಸ್ಥಿತಿ ನಿಮಗೆ ಆಹ್ಲಾದಕರ ಎನಿಸುತ್ತದೆ. ಒಬ್ಬರೇ ವ್ಯಕ್ತಿಯೊಂದಿಗೆ ಆಹ್ಲಾದಕರ ಮತ್ತು ಆಹ್ಲಾದಕರವಲ್ಲದ ಭಾವನೆಗಳೆರಡೂ ಸಂಭವಿಸಬಹುದು. ನೀವು ಆ ವ್ಯಕ್ತಿಯೊಂದಿಗೆ ಲಯದಲ್ಲಿದ್ದಾಗ ಅವರನ್ನು ನೋಡಿದರೆ, ಅಲ್ಲಿ ಆಹ್ಲಾದಕತೆ ಇರುತ್ತದೆ.
ಅವನ ಧ್ಯೇಯದ ಸ್ಮರಣೆ: ಹದಿನಾರನೇ ವಯಸ್ಸಿನವರೆಗೆ, ಕೃಷ್ಣನ ಸಾಧನೆಯು ತನ್ನ ಸುತ್ತಲಿನ ಜೀವನದೊಂದಿಗೆ ಲಯದಲ್ಲಿರುವುದಾಗಿತ್ತು. ನಂತರ ಅವನ ಗುರು ಸಾಂದೀಪನಿಯವರು ಬಂದು ಅವನ ಜೀವನಕ್ಕೆ ಒಂದು ದೊಡ್ಡ ಉದ್ದೇಶವಿದೆ ಎಂದು ನೆನಪಿಸಿದರು. ಕೃಷ್ಣನು ಅದಕ್ಕಾಗಿ ತೊಳಲಾಡಿದನು. ಅವನು ತಾನು ವಾಸಿಸುತ್ತಿದ್ದ ಹಳ್ಳಿಯನ್ನು ಪ್ರೀತಿಸುತ್ತಿದ್ದನು ಮತ್ತು ಎಲ್ಲರೂ ಅವನನ್ನು ಪ್ರೀತಿಸುತ್ತಿದ್ದರು. ಅವನು ತನ್ನ ಸುತ್ತಲಿನ ಪ್ರತಿಯೊಬ್ಬರ ಮತ್ತು ಪ್ರತಿಯೊಂದರೊಂದಿಗೂ- ಪುರುಷ, ಮಹಿಳೆ, ಪ್ರಾಣಿ ಮತ್ತು ಮಗುವಿನೊಂದಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದನು. ಅವನು, 'ನನಗೆ ಯಾವುದೇ ದೊಡ್ಡ ಉದ್ದೇಶದ ಅಗತ್ಯವಿಲ್ಲ. ನಾನು ಈ ಹಳ್ಳಿಯಲ್ಲಿರಲು ಇಷ್ಟಪಡುತ್ತೇನೆ. ನನಗೆ ಹಸುಗಳು, ಗೋಪಾಲಕರು, ಗೋಪಿಕೆಯರು ಎಂದರೆ ಇಷ್ಟ. ನಾನು ಅವರೊಂದಿಗೆ ಕುಣಿದು ನರ್ತಿಸಲು ಮತ್ತು ಹಾಡಲು ಬಯಸುತ್ತೇನೆ' ಎಂದನು. ಆದರೆ ಸಾಂದೀಪನಿಯವರು, 'ನೀನು ಎದ್ದು ನಿಲ್ಲಬೇಕು, ಏಕೆಂದರೆ ನೀನು ಹುಟ್ಟಿದ ಉದ್ದೇಶವೇ ಇದು. ಇದು ನಡೆಯಬೇಕಾಗಿದೆ' ಎಂದರು.
ಕೃಷ್ಣನು ಗೋವರ್ಧನ ಗಿರಿ ಎಂದು ಕರೆಯಲ್ಪಡುವ ಸಣ್ಣ ಬೆಟ್ಟದ ಮೇಲೆ ಹೋಗಿ ನಿಂತನು. ಅವನು ಕೆಳಗೆ ಬಂದಾಗ, ಮೊದಲಿದ್ದ ಹುಡುಗನಾಗಿರಲಿಲ್ಲ. ತನ್ನಲ್ಲಿ ವಿಭಿನ್ನ ಗಾಂಭೀರ್ಯದೊಂದಿಗೆ ಕೆಳಗೆ ಬಂದನು. ಏನೋ ಅದ್ಭುತ ಸಂಭವಿಸಿದೆ ಎಂದು ಜನರಿಗೆ ತಿಳಿಯಿತು, ಆದರೆ ಅದು ಎಷ್ಟೇ ಅದ್ಭುತವಾಗಿದ್ದರೂ, ತಾವು ಅವನನ್ನು ಕಳೆದುಕೊಳ್ಳಲಿದ್ದೇವೆ ಎಂದು ಅವರಿಗೆ ತಿಳಿದಿತ್ತು. ಅವರು ಅವನನ್ನು ನೋಡಿದಾಗ, ಅವನು ನಗುತ್ತಾ ಅವರನ್ನೇ ಹಿಂತಿರುಗಿ ನೋಡಿದನು, ಆದರೆ ಅವನ ಕಣ್ಣುಗಳಲ್ಲಿ ಪ್ರೀತಿ ಇರಲಿಲ್ಲ- ಅಲ್ಲಿ ಒಂದು ದೂರದೃಷ್ಟಿಯಿತ್ತು. ಅವರು ಊಹಿಸಲೂ ಸಾಧ್ಯವಾಗದ ವಿಷಯಗಳನ್ನು ಅವನು ನೋಡುತ್ತಿದ್ದನು.
ಆ ನೆನಪಿಸುವಿಕೆಯ ನಂತರ, ಅವನ ಮೊದಲ ಸಾಹಸವೆಂದರೆ ತನ್ನ ಮಾವ ಕಂಸನನ್ನು ಕೊಂದು ಯಾದವರ ಮೇಲಿದ್ದ ಅವನ ದೌರ್ಜನ್ಯವನ್ನು ಕೊನೆಗೊಳಿಸುವುದು. ನಂತರ ಅವನು ತನ್ನ ಸಹೋದರ ಬಲರಾಮನೊಂದಿಗೆ ತನ್ನ ಗುರು ಸಾಂದೀಪನಿಯವರ ಆಶ್ರಮಕ್ಕೆ ಹಿಂತಿರುಗಿ, ಮುಂದಿನ ಏಳು ವರ್ಷಗಳ ಕಾಲ ಬ್ರಹ್ಮಚಾರಿಯ ಜೀವನವನ್ನು ನಡೆಸಿದನು. ತನ್ನ 22ನೇ ವಯಸ್ಸಿನವರೆಗೆ, ಅವನು ತೀವ್ರವಾದ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದನು.
ವಿಭಿನ್ನ ಸ್ವರೂಪದ ಸಾಧನೆ: ಕೃಷ್ಣನ ಸಾಧನೆಯು ವಿಭಿನ್ನ ಆಯಾಮ ಮತ್ತು ಸ್ವರೂಪದ್ದಾಗಿತ್ತು. ಸಾಂದೀಪನಿಯವರು ಅದನ್ನು ಬಹುಮಟ್ಟಿಗೆ ಆಂತರಿಕವಾಗಿರುವಂತೆ ವಿನ್ಯಾಸಗೊಳಿಸಿ ದ್ದರು. ಕೃಷ್ಣನು ದ್ವಾಪರ ಯುಗಕ್ಕೆ ಸೇರಿದವನಾಗಿರಲಿಲ್ಲ- ಅವನು ಸತ್ಯಯುಗಕ್ಕೆ ಸೇರಿದವನಂತೆ ಬದುಕಿದನು ಮತ್ತು ವರ್ತಿಸಿದನು- ಆದ್ದರಿಂದ ಅವನಿಗೆ ಎಲ್ಲವೂ ಮಾನಸಿಕ ಮಟ್ಟದಲ್ಲೇ ನಡೆಯಿತು. ಸಾಂದೀಪನಿಯವರು ಸೂಚನೆ ನೀಡಲು ಮಾತನಾಡುವ ಅಗತ್ಯವೇ ಇರಲಿಲ್ಲ. ಎಲ್ಲವನ್ನೂ ಮಾನಸಿಕವಾಗಿಯೇ ತಲುಪಿಸ ಲಾಯಿತು; ಎಲ್ಲವನ್ನೂ ಮಾನಸಿಕವಾಗಿಯೇ ಗ್ರಹಿಸಲಾಯಿತು; ಎಲ್ಲವನ್ನೂ ಮಾನಸಿಕವಾಗಿಯೇ ಸಾಧಿಸಲಾಯಿತು.
ಅವರು ತಮ್ಮ ಸಾಧನೆಯಿಂದ ಹೊರಬಂದಾಗ, ಕೃಷ್ಣ ಮತ್ತು ಅವನ ಸಹೋದರನ ನಡುವೆ ಎದ್ದುಕಾಣುವ ವ್ಯತ್ಯಾಸವಿತ್ತು. ಬಲರಾಮನು ಬೃಹತ್ ಮತ್ತು ಕಾಯಾಪುಷ್ಟಿಯುಳ್ಳವನಾದರೆ, ಕೃಷ್ಣನು ಶಾರೀರಿಕವಾಗಿ ಮೊದಲಿನಂತೆಯೇ ಉಳಿದುಕೊಂಡನು. ಬಲರಾಮನು, 'ನಾನೊಬ್ಬ ಮಹಾನ್ ಯೋಧನಾಗಿದ್ದೇನೆ. ನೀನೇಕೆ ಇನ್ನೂ ಹೀಗೆ ಕಾಣುತ್ತಿದ್ದೀಯ?' ಎಂದು ಅವನನ್ನು ಗೇಲಿ ಮಾಡುತ್ತಿದ್ದನು. ಆದಾಗ್ಯೂ, ಮಲ್ಲಯುದ್ಧದ ಅಖಾಡದಲ್ಲಿ ಅಥವಾ ಬಿಲ್ಲುವಿದ್ಯೆಯ ಸ್ಪರ್ಧೆಯಲ್ಲಿ ಕೃಷ್ಣನನ್ನು ಯಾರೂ ಎದುರಿಸಲು ಸಾಧ್ಯವಾಗಲಿಲ್ಲ. ಖಡ್ಗಧಾರಿಯಾಗಿದ್ದಾಗ, ಕೆಲವು ಜನರಷ್ಟೇ ಅವನ ಹತ್ತಿರ ಬರುವ ಧೈರ್ಯ ಮಾಡುತ್ತಿದ್ದರು. ಆದರೆ ಅವನು ಕಾಯಾಪುಷ್ಟಿಯುಳ್ಳವನಾಗಲಿಲ್ಲ. ಏಕೆಂದರೆ ಅವನ ಸಾಧನೆಯು ಸಂಪೂರ್ಣವಾಗಿ ಮಾನಸಿಕವಾಗಿತ್ತು, ಮತ್ತು ಅವನು ಅದನ್ನು ತನ್ನ ಜೀವನದಲ್ಲಿ ಲಕ್ಷಾಂತರ ವಿಭಿನ್ನ ರೀತಿಗಳಲ್ಲಿ ಪ್ರದರ್ಶಿಸಿದನು.
-(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ)

