(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)ನಮ್ಮಲ್ಲಿ ಯಾವುದೇ ಶುಭ ಕಾರ್ಯಕ್ರಮಗಳಿಗೆ ಹೋಗಲಿ, ಮೊದಲು ಎದುರುಗೊಳ್ಳುವುದು ಮಾವಿನ ಎಲೆಯ ತಳಿರು ತೋರಣಗಳು. ಮದುವೆ, ಗೃಹಪ್ರವೇಶ, ಉಪನಯನ, ಸತ್ಯನಾರಾಯಣ ಪೂಜೆ ಹೀಗೆ ಎಲ್ಲ ಕಾರ್ಯಕ್ರಮಗಳಲ್ಲಿ ಚಪ್ಪರದ ಸುತ್ತ, ಮನೆಯ ಮುಂಬಾಗಿಲಿಗೆ, ದಾರಿಯ ಬದಿಯಲ್ಲೆಲ್ಲ ಇಂತಹ ತೋರಣ ಕಟ್ಟಿರುವುದನ್ನು ಕಾಣಬಹುದಾಗಿದೆ.
ಈ ಮಾವಿನ ಎಲೆಯ ತಳಿರು ತೋರಣಕಟ್ಟುವ ಪರಿಪಾಠ ಯಾವಾಗ ಶುರುವಾಯಿತೆಂದು ಯಾರಿಗೂ ತಿಳಿಯದು. ಆದರೆ ಅದರ ಮಹತ್ವ, ಪ್ರಯೋಜನ ಅಪಾರವಾದುದು. ತಳಿರು ತೋರಣ ಮನೆಗೆ ಶುಭ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂಬ ನಂಬಿಕೆಯಿದೆ. ಇದರ ಜತೆಗೆ ಮಾವಿನ ಮರವು ಹೇರಳವಾಗಿ ಆಮ್ಲಜನಕ ಬಿಡುಗಡೆ ಮಾಡುವುದರಿಂದ ಅವುಗಳ ಎಲೆಗಳನ್ನು ತಂದು ಕಟ್ಟುವ ಮೂಲಕ ಅಲ್ಲಿಯೂ ಆಮ್ಲಜನಕ ದೊರೆಯಲಿ ಎಂಬ ಕಾರಣವೂ ಇದ್ದಿರಬಹುದು.
ಹಸಿರಿನಿಂದ ತುಂಬಿದ ತಾಜಾ ಎಲೆಗಳಿಂದ ಮಾಡಿದ ತೋರಣವು ಹೊಸತನ ಮತ್ತು ಸಂತೋಷದ ವಾತಾವರಣ ನಿರ್ಮಾಣಕ್ಕೆ ಕಾರಣವಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ ಇದು ದುಷ್ಟಶಕ್ತಿಗಳನ್ನು ದೂರವಿಟ್ಟು ಧನಾತ್ಮಕತೆಯನ್ನು ಆಹ್ವಾನಿಸುತ್ತದೆ. ಯಾವುದೇ ಕಾರ್ಯಕ್ರಮಕ್ಕಾಗಿ ಮನೆ ಮುಂದೆ ಎಷ್ಟೇ ದೊಡ್ಡ ಚಪ್ಪರ, ಪೆಂಡಾಲ್ ಹಾಕಲಿ, ಬಾಗಿಲಿಗೆ, ಚಪ್ಪರಕ್ಕೆ ಸುಂದರವಾಗಿ ಪೋಣಿಸಿದ ತಳಿರು ತೋರಣ ಕಟ್ಟಿದಾಗ ವಿಶೇಷ ಕಳೆ ಬರುತ್ತದೆ. ಪೂಜಾ ಸಮಯದಲ್ಲಿ, ಹಬ್ಬ-ಹರಿದಿನಗಳ ಆಚರಣೆ ಸಮಯದಲ್ಲಿ ಮನೆಯನ್ನು ಶುಚಿಗೊಳಿಸಿ, ಬಾಗಿಲಿಗೆ ತೋರಣ ಕಟ್ಟಿ, ಅಂಗಳದಲ್ಲಿ ರಂಗೋಲಿ ಇಡುವ ಪರಿಪಾಠವಿದೆ. ಅಲ್ಲದೆ ದೇವಾಲಯಗಳಲ್ಲಿ ಕೂಡ ತಳಿರು ತೋರಣಕಟ್ಟಲಾಗುತ್ತದೆ.
ನಮ್ಮ ಶ್ರೀ ಮಂಜುನಾಥ ಸ್ವಾಮಿಯ ವಿಷು ಜಾತ್ರೆ, ಲಕ್ಷ ದೀಪೋತ್ಸವ, ಶಿವರಾತ್ರಿ ಹಾಗೂ ಎಲ್ಲ ವಿಶೇಷ ದಿನಗಳಲ್ಲಿ ಕೂಡ ಮಾವಿನ ಎಲೆಯ ತಳಿರು ತೋರಣ ಕಟ್ಟುತ್ತೇವೆ. ಅದು ನಮ್ಮ ಸಂಪ್ರದಾಯ, ಸಂಸ್ಕೃತಿ. ಹಾಗೆಯೇ ದೇವಸ್ಥಾನವನ್ನು ಭಕ್ತರು ಹೂವುಗಳಿಂದ ಸಿಂಗರಿಸುವ ಮೂಲಕ ತಮ್ಮ ಸೇವೆ ಸಮರ್ಪಿಸುತ್ತಾರೆ. ನನಗೆ ಇಷ್ಟವಾಗುವ ಸಂಗತಿಯೆಂದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಸದಸ್ಯರು ತಮ್ಮತಮ್ಮ ಊರಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶನೈಶ್ಚರ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಪೂಜಾ ಸ್ಥಳವನ್ನು ಹೇಗೆ ಸಿಂಗರಿಸುತ್ತಾರೆ ಎಂದರೆ ಹೊರಗಡೆ ಎಷ್ಟೇ ಬಿಸಿಲಿದ್ದರೂ, ಚಪ್ಪರದ ಒಳಗೆ ಹೋಗುವಾಗ ತಂಪಿನ ಅನುಭವ ಆಗುತ್ತದೆ. ತೆಂಗು ಮತ್ತು ಅಡಕೆಯ ಸೋಗೆ ಬಳಸಿ, ಸ್ಥಳೀಯವಾಗಿ ಸಿಗುವ ಪರಿಕರಗಳನ್ನು ಉಪಯೋಗಿಸಿ ಸುಂದರ ವೇದಿಕೆ ನಿರ್ಮಿಸುತ್ತಾರೆ. ಮಾವಿನ ಎಲೆ ಉಪಯೋಗಿಸಿ ಕಲಾತ್ಮಕವಾಗಿ ತೋರಣ ಕಟ್ಟುತ್ತಾರೆ. ಇಂತಹ ಕಾರ್ಯ ಮಾಡಲು ಸಾಕಷ್ಟು ಸಮಯ, ತಾಳ್ಮೆ, ಕಲಾತ್ಮಕತೆ ಅಗತ್ಯ. ಪೂಜಾ ವಿಧಿ ವಿಧಾನಗಳಲ್ಲಿ ಕುಂಭ ಕಲಶ ಬಳಸುವುದನ್ನು ನಾವೆಲ್ಲ ನೋಡಿರುತ್ತೇವೆ. ಅವುಗಳಲ್ಲೂ ಮಾವಿನ ಮರದ ಎಲೆಗಳ ತುದಿಗಳನ್ನು ಬಳಸುತ್ತಾರೆ. ತೀರ್ಥದಿಂದ ಶುದ್ಧೀಕರಣ ಮಾಡುವಾಗ ಅರ್ಚಕರು ಮಾವಿನ ಎಲೆಯ ತುದಿಯಿಂದಲೇ ಸಂಪ್ರೋಕ್ಷಣೆ ಮಾಡುತ್ತಾರೆ. ಹೀಗೆ ಧಾರ್ಮಿಕವಾಗಿ ಮಾವಿನ ಎಲೆ ಮಹತ್ವ ಪಡೆದಿದೆ.
ಮಾವಿನ ಮರ ದಟ್ಟ ನೆರಳು ನೀಡುವ ಮರಗಳಲ್ಲಿ ಒಂದಾಗಿದ್ದು, ಪಕ್ಷಿಗಳು ಗೂಡುಕಟ್ಟಿ ಆಶ್ರಯ ಪಡೆಯುತ್ತವೆ. ಮಾವಿನ ಹಣ್ಣು ಅತ್ಯಂತ ಸಿಹಿಯಾದ, ರುಚಿಕರ ಹಣ್ಣಾಗಿದ್ದು, ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಭಾರತದಲ್ಲಿ ಇದನ್ನು ಹಣ್ಣುಗಳ ರಾಜ ಎನ್ನುತ್ತಾರೆ. ಹಸಿರು, ಹಳದಿ, ಕಿತ್ತಳೆ ಅಥವಾ ಕೆಂಪು ಮಿಶ್ರಿತವಾಗಿದ್ದು ತೋತಾಪುರಿ, ಬಾದಾಮಿ, ನೀಲಂ, ರಸಪುರಿ ಹೀಗೆ ಹಲವಾರು ಜಾತಿಯ ಮಾವಿನ ತಳಿಗಳಿವೆ. ಇವಷ್ಟೇ ಅಲ್ಲದೆ ಅನೇಕ ಜಾತಿಯ ಕಾಡು ಮಾವಿನ ಹಣ್ಣುಗಳು ಹಳ್ಳಿಗಳಲ್ಲಿ ದೊರೆಯುತ್ತವೆ. ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಫೈಬರ್ ಹಾಗೂ ಹಲವಾರು ಖನಿಜಾಂಶಗಳು ಇದ್ದು ಆರೋಗ್ಯವರ್ಧಕವೂ ಆಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕಣ್ಣು, ಚರ್ಮ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮಾವಿನ ಹಣ್ಣು ದೇಹಕ್ಕೆ ಶಕ್ತಿ ನೀಡುವ ಆಹಾರ. ದೌರ್ಬಲ್ಯ ಕಡಿಮೆಯಾಗಲು ಸಹಾಯ ಮಾಡುತ್ತದೆ. ಕಲ್ಪವೃಕ್ಷದಂತೆ ಮಾವಿನ ಮರವೂ ಸರ್ವ ರೀತಿಯಲ್ಲಿ ಪ್ರಯೋಜನಕಾರಿಯಾದುದು.

ಮಾವಿನ ಎಳೆ ಮಿಡಿ ಕಾಯಿಯನ್ನು ಉಪ್ಪಿನ ಕಾಯಿ ಮಾಡುತ್ತಾರೆ. ಬಲಿತ ಕಾಯಿಯಿಂದ ಚಟ್ನಿ ಮಾಡುತ್ತಾರೆ. ಹಣ್ಣನ್ನು ಚೆನ್ನಾಗಿ ತೊಳೆದು ಹಾಗೆಯೇ ತಿನ್ನಬಹುದು. ಜ್ಯೂಸ್, ಮಿಲ್ಕ್ ಶೇಕ್, ಐಸ್ಕ್ರೀಂ, ಪಾಯಸ, ಜ್ಯಾಂ ಮಾಡಲಾಗುತ್ತದೆ. ಹೀಗೆ ಮಾವಿನ ಖಾದ್ಯಗಳು ಒಂದೇ ಎರಡೇ.
ನಾವೆಲ್ಲ ಚಿಕ್ಕವರಿರುವಾಗ ಸಾಕಷ್ಟು ಮಾವಿನ ಮರಗಳಿದ್ದವು. ಕಾಯಿಗೆ ಉಪ್ಪು, ಖಾರ ಹಾಕಿ ತಿನ್ನುವ ಖುಷಿ ವರ್ಣಿಸಲಾಗದ್ದು. ಶಾಲೆಗೆ ಹೋಗುವಾಗ ಮಾವಿನ ಕಾಯಿಗೆ ಕಲ್ಲೆಸೆದದ್ದು, ಕದ್ದು ಮಾವಿನ ಕಾಯಿ ತಿಂದದ್ದು ಎಲ್ಲವೂ ಬಾಲ್ಯದ ಸವಿ ನೆನಪುಗಳು. ಅನೇಕರು ಮಾವಿನ ಹಣ್ಣನ್ನು ಹೆಕ್ಕಿ ತಂದು ಅದನ್ನು ಕೈಯ್ಯಲ್ಲಿ ಹಿಚುಕಿ, ರಸ ತೆಗೆದು, ಉಪ್ಪು, ಖಾರ, ಈರುಳ್ಳಿ ಬೆರೆಸಿಕೊಂಡು ಊಟ ಮಾಡುತ್ತಿದ್ದರು. ಬಿಸಿಲಿನ ಬೇಗೆಗೆ ಈ ರೀತಿಯ ಊಟವೇ ಇಷ್ಟವಾಗುತ್ತಿತ್ತು. ಇನ್ನು ಕೆಲವರು ತೆಂಗಿನ ಕಾಯಿ ತುರಿದು ಮಾವಿನ ಕಾಯಿಯ (ಸೀಕರಣೆ) ಸಾಂಬಾರ್ ಮಾಡುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ ಮಾವಿನ ಹಣ್ಣನ್ನು ರುಬ್ಬುವ ಕಲ್ಲು ಅಥವಾ ಒರಳು ಕಲ್ಲಿನಲ್ಲಿ ಜಜ್ಜಿ ಚೆನ್ನಾಗಿ ರಸ ತೆಗೆದು ಅದಕ್ಕೆ ಉಪ್ಪು, ಖಾರ ಬೆರೆಸಿ ಬಿಳಿಯ ಬಟ್ಟೆಯಲ್ಲಿ ಸವರಿ ಬಿಸಿಲಲ್ಲಿ ಒಣಗಿಸಲು ಇಡುತ್ತಿದ್ದರು. ಚೆನ್ನಾಗಿ ಒಣಗಿದ ಮೇಲೆ ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಗಾಳಿಯಾಡದ ಹಾಗೆ ಡಬ್ಬದಲ್ಲಿ ಹಾಕಿಟ್ಟು, ಮಳೆಗಾಲದಲ್ಲಿ ಜೋರು ಮಳೆ ಸಂದರ್ಭದಲ್ಲಿ ತಿನ್ನಲು ಕೊಡುತ್ತಿದ್ದರು. ಅದರ ಸವಿಯನ್ನು ನೆನಪಿಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ. ಇಂತಹ ಅನೇಕ ತಿಂಡಿ ತಿನಸುಗಳನ್ನು ಮರೆಯಲಾಗದು. ಈಗಲೂ ಗ್ರಾಮೀಣ ಪ್ರದೇಶದ ಕೆಲವು ಮನೆಗಳಲ್ಲಿ ಮಾವಿನ ಹಣ್ಣಿನ ವಿವಿಧ ಖಾದ್ಯಗಳನ್ನು ಸವಿಯಬಹುದಾಗಿದೆ. ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಮಾವಿನ ಹಣ್ಣಿನ ರಸಾಯನವನ್ನು ಹೋಳಿಗೆ ಜತೆಗೆ ತಿನ್ನಲು ಬಡಿಸುತ್ತಾರೆ. ಅದಂತೂ ಸ್ವಾದಿಷ್ಟವಾಗಿರುತ್ತದೆ.
ಆಗೆಲ್ಲ ಶಾಲಾ ರಜೆಯಲ್ಲಿ ನೆಂಟರ ಮನೆಗೆ ಹೋಗಿ ಹಿಂದಿರುಗುವಾಗ ಒಂದಷ್ಟು ಮಾವಿನ ಹಣ್ಣು ಮತ್ತು ಬಲಿತ ಕಾಯಿಗಳನ್ನು ಕೊಡುವುದು ರೂಢಿಯಲ್ಲಿತ್ತು. ಅದರ ಜತೆಗೆ ಹಲಸಿನ ಹಪ್ಪಳ, ಸಂಡಿಗೆಯನ್ನೂ ಕಟ್ಟಿ ಕೊಡುತ್ತಿದ್ದರು. ಅವರು ಕೊಟ್ಟ ಮಾವಿನ ಹಣ್ಣನ್ನು ತಿಂದು ಬೀಜವನ್ನು ಮಣ್ಣಲ್ಲಿ ಹುದುಗಿಸಿ ಸಸಿ ಮಾಡಲಾಗುತ್ತಿತ್ತು. ಈಗ ನರ್ಸರಿಗಳಲ್ಲಿ ವಿವಿಧ ಜಾತಿಯ, 2-3 ವರ್ಷಗಳಲ್ಲಿ ಫಲ ನೀಡುವ ಗಿಡಗಳೂ ದೊರೆಯುತ್ತವೆ. ಕಸಿ ಗಿಡಗಳೂ ಲಭ್ಯವಿದ್ದು, ಅಂಗಳದ ಮೂಲೆಯಲ್ಲಿ, ಸ್ವಲ್ಪವೇ ಸ್ವಲ್ಪ ಜಾಗದಲ್ಲಿ ನೆಟ್ಟು ಬೆಳೆಸಬಹುದಾದ ಮಾವಿನ ಹಣ್ಣಿನ ತಳಿಗಳಿವೆ.
ಮಾವು ಚಿಗುರಿತೆಂದರೆ ವಸಂತ ಋತುವಿನ ಆಗಮನವಾಯಿತೆಂದು ಅರ್ಥ. ಚಿಗುರಿದ ಮಾವಿನ ಮರದ ಮೇಲೆ ಕೋಗಿಲೆ ಕೂತು ಮಧುರಾವಾಗಿ ಹಾಡುವುದನ್ನು ಕೇಳುವುದು ಮನಸ್ಸಿಗೆ ಸಂತೋಷ ನೀಡುತ್ತದೆ. 'ವಸಂತ ಮಾಸ ಬಂದಾಗ ಮಾವು ಚಿಗುರಲೇಬೇಕು, ಕಂಕಣ ಕೂಡಿ ಬಂದಾಗ ಮದುವೆ ಆಗಲೇಬೇಕು' ಎಂದು ಸಾಹಿತಿಯೊಬ್ಬರು ವಸಂತ ಋತುವಿನ ಸೊಬಗು ಮತ್ತು ಜೀವನದ ಹೊಸತನದ ಬಗ್ಗೆ ಚೆನ್ನಾಗಿ ಹೇಳಿದ್ದಾರೆ.
ವಸಂತ ಮಾಸವು ಪ್ರಕೃತಿಯ ಸೌಂದರ್ಯದಿಂದ ತುಂಬಿರುವ ಸುಂದರ ಸಮಯ. ಈ ವೇಳೆ ಪ್ರಕೃತಿಯು ಸರ್ವಾಭರಣ ಸುಂದರಿಯಂತೆ ಕಂಗೊಳಿಸುತ್ತದೆ. ಮರಗಳು ಹೊಸ ಚಿಗುರುಗಳನ್ನು ಬಿಡುತ್ತವೆ, ಬಣ್ಣಬಣ್ಣದ ಹೂಗಳು ಅರಳುತ್ತವೆ. ತಂಪಾದ ಗಾಳಿ ಮನಸ್ಸಿಗೆ ಆಹ್ಲಾದವನ್ನು ಉಂಟುಮಾಡುತ್ತದೆ. ಹಕ್ಕಿಗಳ ಕಲರವ ತುಂಬಿರುತ್ತದೆ. ವಸಂತ ಋತುವು ಹೊಸತನ, ಸಂತೋಷ, ಚೈತನ್ಯದ ಸಂಕೇತವಾಗಿದೆ.
ವಸಂತಾಗಮನಕ್ಕೆ ಮತ್ತಷ್ಟು ರಂಗು ತುಂಬುವ ಮಾವಿನ ಮರ ಕೇವಲ ಹಣ್ಣನ್ನು ನೀಡುವುದಲ್ಲದೆ, ಪಕ್ಷಿಗಳಿಗೆ ಆಶ್ರಯ ಒದಗಿಸುವುದು ಹಾಗೂ ಪ್ರಕೃತಿಯ ಸಮತೋಲನ ಕಾಪಾಡುವುದರಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ಈ ಕಾರಣಗಳಿಂದ ಭಾರತೀಯ ಸಂಸ್ಕೃತಿಯಲ್ಲಿ ಮಾವಿನ ಮರವನ್ನು ಪವಿತ್ರ ಹಾಗೂ ಶುಭಕರವಾದ ಮರವೆಂದು ಗೌರವಿಸಲಾಗುತ್ತದೆ. ಮಾವಿನ ಎಲೆಗಳಿಂದ ತಯಾರಿಸುವ ತೋರಣಕ್ಕೂ ವಿಶೇಷ ಮಹತ್ವವಿದೆ. ಹಬ್ಬ, ಮದುವೆ ಮತ್ತು ಶುಭ ಸಮಾರಂಭಗಳಲ್ಲಿ ಮನೆಗಳ ಬಾಗಿಲಿಗೆ ತೋರಣ ಕಟ್ಟಿ ಅಲಂಕರಿಸುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ಇದು ನಮ್ಮ ಪರಂಪರೆ, ಧಾರ್ಮಿಕ ನಂಬಿಕೆ ಮತ್ತು ಪ್ರಕೃತಿ ಪ್ರೀತಿಯನ್ನು ಪ್ರತಿಬಿಂಬಿಸುವ ಸುಂದರ ಆಚರಣೆಯಾಗಿದೆ.
ಮಾವಿನ ಮರ ನಮ್ಮ ಜೀವನದೊಂದಿಗೆ ಬೆಸೆದುಕೊಂಡಿರುವ ಒಂದು ಅಮೂಲ್ಯ ಪ್ರಕೃತಿ ಸಂಪತ್ತು. ಇದು ಹಣ್ಣು ಕೊಡುವ ಮರ ಮಾತ್ರವಲ್ಲ, ನಮ್ಮ ಸಂಸ್ಕೃತಿ, ಸಂಪ್ರದಾಯ, ಆರೋಗ್ಯ, ಪರಿಸರದ ಜತೆಗೆ ಅವಿನಾಭಾವ ಸಂಬಂಧ ಹೊಂದಿದೆ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಹಲವಾರು ಹಳೆಯ ಆಚರಣೆಗಳು ನಿಧಾನವಾಗಿ ಮರೆಯಾಗುತ್ತಿರುವ ಸಂದರ್ಭದಲ್ಲಿ ಮಾವಿನ ಎಲೆಯ ತೋರಣ, ಗ್ರಾಮೀಣ ಆಹಾರ ಪದ್ಧತಿ ಹಾಗೂ ಪ್ರಕೃತಿಯೊಂದಿಗೆ ಬೆಸೆದುಕೊಂಡ ಜೀವನಶೈಲಿಯನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯ.
ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯ ಅಂಗಳದಲ್ಲೂ ಒಂದು ಮಾವಿನ ಮರ ಇರುತ್ತಿತ್ತು. ನೆರಳು ನೀಡುವುದು, ಹಣ್ಣು ಕೊಡುವುದು, ಪಕ್ಷಿಗಳಿಗೆ ಆಶ್ರಯ ಒದಗಿಸುವುದು, ಹಬ್ಬ-ಹರಿದಿನಗಳಿಗೆ ಎಲೆ, ಕೊಂಬೆಗಳನ್ನು ನೀಡುವುದು, ಈ ರೀತಿಯಲ್ಲಿ ಮಾವಿನ ಮರವು ಅನೇಕ ರೀತಿಯಲ್ಲಿ ಮನುಷ್ಯನ ಬದುಕಿಗೆ ಉಪಕಾರಿಯಾಗಿದೆ. ಆದರೆ ಇಂದು ನಗರೀಕರಣ ಮತ್ತು ಅರಣ್ಯ ನಾಶದಿಂದ ಮರಗಳು ನಾಶವಾಗುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಕನಿಷ್ಠ ಒಂದು ಮಾವಿನ ಗಿಡವನ್ನಾದರೂ ನೆಟ್ಟು ಬೆಳೆಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಪ್ರಕೃತಿಯ ಮಹತ್ವ ತಿಳಿಸಿ, ಹಣ್ಣು-ಮರಗಳೊಂದಿಗೆ ಭಾವನಾತ್ಮಕ ನಂಟು ಬೆಳೆಸುವುದು ಇಂದಿನ ಅಗತ್ಯವಾಗಿದೆ. ಹಬ್ಬ-ಹರಿದಿನಗಳಲ್ಲಿ ಪ್ಲಾಸ್ಟಿಕ್ ಅಲಂಕಾರಗಳ ಬದಲು ನೈಸರ್ಗಿಕ ತೋರಣ ಮತ್ತು ಹೂವಿನ ಅಲಂಕಾರ ಬಳಸುವುದರಿಂದ ಪರಿಸರ ರಕ್ಷಣೆ ಜತೆಗೆ ನಮ್ಮ ಸಂಸ್ಕೃತಿಯೂ ಉಳಿಯುತ್ತದೆ. ಮಾವು ಚಿಗುರಿ ವಸಂತದ ಆಗಮನವನ್ನು ಸಾರುವಂತೆ, ನಮ್ಮ ಬದುಕಿನಲ್ಲೂ ಹೊಸ ಆಶಾಭಾವನೆ ಮತ್ತು ಉತ್ಸಾಹ ಮೂಡಿಸಬೇಕು. ಪ್ರಕೃತಿಯನ್ನು ಪ್ರೀತಿಸಿ, ಸಂಪ್ರದಾಯವನ್ನು ಗೌರವಿಸಿ, ಮುಂದಿನ ಪೀಳಿಗೆಗೆ ಅದನ್ನು ಉಳಿಸಿ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಾವಿನ ಮರದಂತೆ ಎಲ್ಲರಿಗೂ ನೆರಳು, ಸಿಹಿ ಮತ್ತು ಸಂತೋಷ ನೀಡುವ ಬದುಕನ್ನು ರೂಪಿಸೋಣ.
ಇನ್ನಷ್ಟು ಓದಿ