ವಿಜಯವಾಣಿ ಸುದ್ದಿಜಾಲ ಬೆಂಗಳೂರುನಾಯಕ ಶುಭಾಂಗ್ ಹೆಗ್ಡೆ (65*) ಮತ್ತು ಪ್ರವಿಣ್ ದುಬೆ (69*) ಅರ್ಧಶತಕದಾಟದ ಬಲದಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯ (Maharaja Trophy KSCA T20) ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಸ್ಟಲ್ ಕಿಂಗ್ಸ್ ಮಂಗಳೂರು ವಿರುದ್ಧ 12 ರನ್ಗಳಿಂದ ಗೆಲುವು ಸಾಧಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಬೆಂಗಳೂರು 5 ವಿಕೆಟ್ಗೆ 185 ರನ್ ಗಳಿಸಿತು. ಬೆಂಗಳೂರು ಒಂದು ಹಂತದಲ್ಲಿ 52 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಪ್ರತಿಯಾಗಿ ನಿಕಿನ್ ಜೋಸ್ (45), ಸೂರಜ್ ಅಹುಜಾ (52*) ಪ್ರತಿರೋಧದ ನಡುವೆಯೂ ಮಂಗಳೂರು 6 ವಿಕೆಟ್ಗೆ 173 ರನ್ ಗಳಿಸಲಷ್ಟೇ ಶಕ್ತಗೊಂಡಿತು.
2ನೇ ಕ್ವಾಲಿಫೈಯರ್ಗೆ ಶಿವಮೊಗ್ಗ ಯೋಧಾಸ್ ಎಂಟ್ರಿ: ಸರ್ವಾಂಗೀಣ ನಿರ್ವಹಣೆ ತೋರಿದ ಶಿವಮೊಗ್ಗ ಯೋಧಾಸ್ ತಂಡ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯ ಎಲಿಮಿನೇಟರ್ನಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ, 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಿತು. ಲವನೀತ್ ಸಿಸೋಡಿಯಾ ಹಂಗಾಮಿ ಸಾರಥ್ಯದ ಶಿವಮೊಗ್ಗ ಯೋಧಾಸ್ ಸೆಮಿಫೈನಲ್ ಮಾದರಿಯ ಕ್ವಾಲಿಫೈಯರ್ನಲ್ಲಿ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡವನ್ನು ಶನಿವಾರ ಎದುರಿಸಲಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶಿವಮೊಗ್ಗ ಯೋಧಾಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಎಡಗೈ ವೇಗಿ ಅಭಿಲಾಷ್ ಶೆಟ್ಟಿ (14ಕ್ಕೆ 3) ದಾಳಿಗೆ ನಲುಗಿದ ಮೈಸೂರಿನ ಅಗ್ರ ಕ್ರಮಾಂಕ ವೈಫಲ್ಯ ಕಂಡಿತು. ಅಭಿಷೇಕ್ ಪ್ರಭಾಕರ್ (36* ರನ್, 10 ಎಸೆತ, 1 ಬೌಂಡರಿ, 5 ಸಿಕ್ಸರ್) ಆಸರೆಯಲ್ಲಿ ಮೈಸೂರು 9 ವಿಕೆಟ್ಗೆ 161 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಆರಂಭಿಕರಾದ ಲವನೀತ್ ಸಿಸೋಡಿಯ (56 ರನ್, 32 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ತುಷಾರ್ ಸಿಂಗ್ (53 ರನ್, 39 ಎಸೆತ, 2 ಬೌಂಡರಿ, 3 ಸಿಕ್ಸರ್) ಭರ್ಜರಿ ಜತೆಯಾಟದ ನೆರವಿನಿಂದ ಶಿವಮೊಗ್ಗ 16.1 ಓವರ್ಗಳಲ್ಲಿ 3 ವಿಕೆಟ್ಗೆ 162 ರನ್ಗಳಿಸಿ ಗೆದ್ದು ಬೀಗಿತು.
ಇನ್ನಷ್ಟು ಓದಿ

