ಮುಂಬೈ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಮುಂಬೈನ ಕುರ್ಲಾ ಪ್ರದೇಶದಲ್ಲಿ ಬುಧವಾರ ಭೂ ಕುಸಿತ ಸಂಭವಿಸಿದ ಪರಿಣಾಮ, ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ನಾಲ್ಕರಿಂದ ಐದು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಸಿಬ್ಬಂದಿಯಿಂದ ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ.
ನಸುಕಿನ ಮುಂಜಾನೆ ಭೂ ಕುಸಿತ
ಘಟಕೋಪರ್‌ನ ಚಿರಾಗ್ ನಗರ್‌ನಲ್ಲಿರುವ ಗೌಸಿಯಾ ಚಾಲ್‌ನಲ್ಲಿ ಬುಧವಾರ ನಸುಕಿನ ಮುಂಜಾನೆ 3:48ಕ್ಕೆ ಸಂಭವಿಸಿದೆ. ಗೌಸಿಯಾ ಚಾಲ್‌ನಲ್ಲಿ ಬೆಟ್ಟದ ಇಳಿಜಾರಿನಲ್ಲಿರುವ ಗುಡ್ಡದ ಒಂದು ಭಾಗ ಮೂರು ಮನೆಗಳ ಮೇಲೆ ಕುಸಿದ ಪರಿಣಾಮ ಐವರು ಮೃತಪಟ್ಟಿದ್ದಾರೆ.ಇಬ್ಬರಿಗೆ ಗಾಯ18 ವರ್ಷದ ಸೋಹೈಲ್ ಅನ್ಸಾರಿ ಮತ್ತು 14 ವರ್ಷದ ಮೊಹಮದ್ ಅನ್ಸಾರಿ ಎಂಬುವವರಿಗೆ ತಲೆ ಮತ್ತು ಬೆನ್ನಿಗೆ ಗಾಯವಾಗಿದೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿಯನ್ನು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (Brihanmumbai Municipal Corporation) ನೀಡಿದೆ.
ಬಿಎಂಸಿ ಮತ್ತು ಮುಂಬೈ ಅಗ್ನಿಶಾಮಕ ದಳ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅವಶೇಷಗಳ ಅಡಿ ಸಿಲುಕಿರುವವರನ್ನು ಪತ್ತೆ ಹಚ್ಚಲು ರಕ್ಷಣಾ ತಂಡಗಳು ವಿಶೇಷ ಕ್ಯಾಮೆರಾಗಳನ್ನು ಬಳಸಿ ತೀವ್ರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದಿದೆ.
ರಿತು ತಾವ್ಡೆಯಿಂದ ಕಾರ್ಯಾಚರಣೆ
ಬಿಎಂಸಿ ಮೇಯರ್ ರಿತು ತಾವ್ಡೆ ಮತ್ತು ಹೆಚ್ಚುವರಿ ಪುರಸಭೆ ಆಯುಕ್ತ ಅವಿನಾಶ್ ಧಾಕ್ನೆ ಅವರು ಭೂಕುಸಿತಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ 3 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೆರವಾಗುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಎಷ್ಟು ಜನರು ಮೃತಪಟ್ಟಿದ್ದಾರೆ ಎನ್ನುವ ನಿಖರ ಮಾಹಿತಿ ಸಿಕ್ಕಿಲ್ಲ. ಆದರೆ, ಮೂರರಿಂದ ನಾಲ್ಕು ಜನರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು. ಭೂಕುಸಿತದಲ್ಲಿ ಮೃತಪಟ್ಟವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಡಿಸಿಪಿ ಗಣೇಶ್ ಶಿಂಧೆ ಹೇಳಿದರು, (ಏಜೆನ್ಸೀಸ್).

