(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)
ಹಿಮಾಚಲಪ್ರದೇಶದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವ ಜತೆಗೆ ಪತ್ತೆಯಾದ ಅಂತಹ ಉಪಕರಣಗಳನ್ನು ಜಪ್ತು ಮಾಡುವ ಮತ್ತು ಐನೂರು ರೂ. ದಂಡ ವಿಧಿಸುವ ಕಾನೂನನ್ನು ಅಲ್ಲಿನ ಸರ್ಕಾರ ಜಾರಿಗೆ ತಂದಿದೆ.ಎಟಿಎಂನಲ್ಲಿ ದುಡ್ಡು ತೆಗೆಯಲು ಸರದಿ ಸಾಲಿನಲ್ಲಿ ನಿಂತಿದ್ದ ನಾನು ಬಾಗಿಲಲ್ಲೇ ಕುಳಿತಿದ್ದ ಸೆಕ್ಯೂರಿಟಿ ಗಾರ್ಡ್ನನ್ನು ನೋಡುತ್ತಿದ್ದೆ. ಮೊಬೈಲ್ ಹಿಡಿದುಕೊಂಡು ರೀಲ್ಸ್ ನೋಡುತ್ತಾ ತನ್ನಷ್ಟಕ್ಕೆ ತಾನೇ ನಗುತ್ತ ಅದ್ಯಾವುದೋ ಲೋಕದಲ್ಲಿ ಕಳೆದುಹೋಗಿದ್ದನಾತ. ಕೊನೆಯವನಾಗಿ ಅಲ್ಲಿಂದ ನಾನು ಹೊರಹೋದರೂ ಆತನಿಗೆ ಯಾವ ಪರಿವೆಯೇ ಇರಲಿಲ್ಲ. ಒಳಗೆ ಡೆಸ್ಕ್ನಲ್ಲಿ ಜೋಡಿಸಿಟ್ಟಿದ್ದ ದಿನಪತ್ರಿಕೆಗಳು ಗಾಳಿಗೆ ಹಾರಿ ನೆಲದ ಮೇಲೆ ಬಿದ್ದಿರುವುದು ಅಲ್ಲಿನ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿತ್ತು.
ನಮ್ಮ ಪಕ್ಕದ ಮನೆಯ ಅಜ್ಜಿಗೆ ಕಳೆದ ವರ್ಷ ಊರಿಗೆ ಬಂದಿದ್ದ ಮೊಮ್ಮಗ ಅಮೆರಿಕದಿಂದ ಕರೆ ಮಾಡಿ ಮಾತನಾಡಲು ಅನುಕೂಲವಾಗುವಂತೆ ಹೊಸ ಸ್ಮಾರ್ಟ್ ಫೋನ್ ಕೊಡಿಸಿ ಅಲ್ಪಸ್ವಲ್ಪ ಬಳಕೆಯನ್ನೂ ಹೇಳಿಕೊಟ್ಟಿದ್ದ. ಈ ಬಾರಿ ನಾನು ಊರಿಗೆ ಹೋಗಿದ್ದಾಗ ಆತನ ಮನೆಯ ಮುಂದೆ ರಿಕ್ಷಾ ನಿಂತಿರುವುದನ್ನು ಕಂಡು ಹೋಗಿ ಮಾತಾಡಿಸಿದಾಗ ಅಜ್ಜಿಯ ಮೊಬೈಲ್ ಬಳಕೆ ಹೆಚ್ಚಾಗಿ ಹೊಸದಾಗಿ ವಕ್ಕರಿಸಿಕೊಂಡ ಕತ್ತುನೋವಿಗೆ ಔಷಧಿ ತರಲು ದವಾಖಾನೆಗೆ ಹೋಗಿರುವುದು ಗೊತ್ತಾಯಿತು. ಗಟ್ಟಿಮುಟ್ಟಾಗಿ ಎಲ್ಲರಿಂದ ಸೈ ಎನಿಸಿಕೊಂಡಿದ್ದ ಅಜ್ಜಿಗೆ ಮೊಬೈಲ್ ಒಂದೇ ವರ್ಷಕ್ಕೆ ಕತ್ತುನೋವು ತರಿಸಿತ್ತು.
ಇತ್ತೀಚೆಗೆ ನನ್ನ ಗೆಳೆಯನೊಬ್ಬ ತನಗೆ ಮೊಮ್ಮಗ ಜನಿಸಿದ ಖುಷಿಗೆ ಮನೆಗೆ ಊಟಕ್ಕೆ ಆಹ್ವಾನಿಸಿದ್ದ. ಉಭಯಕುಶಲೋಪರಿಯ ನಡುವೆ ಒಂದು ವರ್ಷದ ಆ ಮಗುವಿನ ಕೈಗೆ ಮೊಬೈಲ್ ಕೊಟ್ಟು ಕಾರ್ಟೂನ್ನಲ್ಲಿ ಮಗ್ನವಾಗಿದ್ದಾಗ ಊಟ ಮಾಡಿಸಲು ಅವರಮ್ಮ ಹರಸಾಹಸ ಪಡುತ್ತಿದ್ದುದು ಕಂಡು ಬಂತು. ನಾನು ಅವಳತ್ತ ನೋಡುತ್ತಿರುವುದು ಗಮನಕ್ಕೆ ಬಂದಿದ್ದೇ ಆ ಕಡೆಯಿಂದ ಸಬೂಬು ಬಂತು "ಮತ್ತೇನ್ಮಾಡ್ಲಿ ಅಂಕಲ್. ಕಾರ್ಟೂನು ನಿಲ್ಲಿಸಿದ ತಕ್ಷಣವೇ ಪಾಪು ನುಂಗುವುದು ನಿಲ್ಲಿಸುತ್ತೆ.' ಸುಮ್ಮನೆ ನಕ್ಕು ಅಲ್ಲಿಂದ ಹೊರಟುಬಂದೆ. ಹಾಗೆ ನೋಡಿದರೆ ಎಲ್ಲರಿಗೂ ಮೊಬೈಲ್ ಬಳಸಲು ಅವರವರದ್ದೇ ಆದ ಕಾರಣಗಳಿವೆ. ಅವತ್ತು ಎಟಿಎಂ ಮುಂದೆ ಕುಳಿತಿದ್ದ ಗಾರ್ಡ್ಗೆ ಒಬ್ಬನೇ 12 ಗಂಟೆ ಒಂದೇ ಕಡೆ ಕೂರಬೇಕಾಗಿರುವ ತನ್ನ ನೌಕರಿ ಕಾರಣವಾಗಿದ್ದರೆ ಅಜ್ಜಿಗೆ ಮನೆಯಲ್ಲಿ ಒಂಟಿಯಾಗಿರುವುದು ಒಂದು ಕಾರಣ. ಅವರ ಕಷ್ಟಗಳನ್ನು ಒಪ್ಪೋಣ. ಆದರೆ ಇಂತಹ ಕಷ್ಟಗಳು ನಿನ್ನೆ ಮೊನ್ನೆ ಆಗಸದಿಂದ ಬಿದ್ದವವಲ್ಲ. ಅವು ಮೊದಲೂ ಇದ್ದವು. ಆದರೆ ಈ ದಿನಗಳಲ್ಲಿ ಎಲ್ಲರೂ ತಂತಮ್ಮ ಕಷ್ಟಗಳಿಗೂ ಅಂತಿಮ ಪರಿಹಾರವಾಗಿ ಮೊಬೈಲನ್ನು ಆಶ್ರಯಿಸುತ್ತಿರುವುದು ಯೋಚಿಸಬೇಕಾದ ಸಂಗತಿ. ಇದು ನಮ್ಮ ಮುಂದಿನ ಪೀಳಿಗೆಗೆ ಬದುಕುವ ದಾರಿಯನ್ನು ತೋರಿಸಬೇಕಾಗಿರುವ ಹಿರಿಯರ ಕತೆಯಾದರೆ ಭವಿಷ್ಯದ ಕುಡಿಗಳ ಪರಿಸ್ಥಿತಿ ಮತ್ತೂ ಆತಂಕಕಾರಿ.
ಕೋವಿಡ್ ನಮ್ಮ ಜೀವನಶೈಲಿಗೆ ತಿರುವು ನೀಡಿದ ಕಾಲಘಟ್ಟ. ನಾಲ್ಕು ಗೋಡೆಗಳ ನಡುವೆ ಅನಿವಾರ್ಯವಾಗಿ ಬಂಧಿಯಾಗಬೇಕಾದ ಸನ್ನಿವೇಶದಲ್ಲಿ ಲ್ಯಾಪ್ಟಾಪ್ ಆಫೀಸ್ ಆಗಿಯೂ, ಮೊಬೈಲ್ ಶಾಲೆಯಾಗಿಯೂ ಪರಿವರ್ತನೆಗೊಂಡವು. ಅಂದು ಒಲ್ಲದ ಮನಸ್ಸಿನಿಂದ ಪುಟ್ಟಮಕ್ಕಳ ಕೈಗೆ ಮೊಬೈಲ್ ಕೊಡುವ ಅನಿವಾರ್ಯತೆಗೆ ಸಿಕ್ಕಿಕೊಂಡ ಪಾಲಕರಿಗೆ ಕೋವಿಡ್ನ ನಂತರದಲ್ಲಿ ಆನ್ಲೈನ್ ಕ್ಲಾಸ್ಗಳು, ಕೃತಕ ಬುದ್ಧಿಮತ್ತೆ ಬಳಸಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಹೊಸ ಟ್ರೆಂಡು ಮಕ್ಕಳಿಗೆ ಮೊಬೈಲ್ ಜತೆಗಿನ ಸಂಬಂಧವನ್ನು ಇನ್ನಷ್ಟು ಗಾಢವಾಗಿಸಿದೆ. ಕೆಲವೇ ವರ್ಷಗಳಲ್ಲಿ ಇದು ಅತ್ಯಂತ ಅಪಾಯಕಾರಿ ಮಟ್ಟಕ್ಕೆ ಬೆಳೆದಿರುವುದೇ ಸರ್ಕಾರಗಳು ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧದಂತಹ ನಿರ್ಧಾರ ತಳೆಯಲು ಕಾರಣ.
"ಡಿಜಿಟಲ್ ಐ ಸ್ಟ್ರೈನ್' ಅಥವಾ ಮೊಬೈಲ್ ಅಥವಾ ಲ್ಯಾಪ್ಟಾಪ್ ಪರದೆಗಳನ್ನು ಹೆಚ್ಚು ಸಮಯ ದಿಟ್ಟಿಸುವುದರಿಂದ ಉಂಟಾಗುವ ಕಣ್ಣು ಬೇನೆಯ ಕುರಿತು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ಅಂಕಿಅಂಶಗಳು ಹೇಳುವಂತೆ ಕೋವಿಡ್ ಪೂರ್ವದಲ್ಲಿ ಕಣ್ಣುನೋವಿಗಾಗಿ ಆಸ್ಪತ್ರೆಗೆ ಬರುವವರಲ್ಲಿ ಶೇ. 5ರಿಂದ 65ರಷ್ಟು ರೋಗಿಗಳು ಡಿಜಿಟಲ್ ಐ ಸ್ಟ್ರೈನ್ನಿಂದ ಬಳಲುತ್ತಿದ್ದರೆ ಕೋವಿಡ್ ನಂತರ ಅದು ಶೇ. 80ರಿಂದ 94ಕ್ಕೇರಿದೆ. ಹೆಚ್ಚೂಕಮ್ಮಿ ಎಲ್ಲ ಕೆಲಸ ಮತ್ತು ನೌಕರಿಗಳು ಮೊಬೈಲ್ ಮತ್ತು ಲ್ಯಾಪ್ಟಾಪ್ ಕೇಂದ್ರಿತವಾಗಿರುವ ಇಂದಿನ ದಿನಗಳಲ್ಲಿ ನಾವು ನಮಗರಿವಿಲ್ಲದಂತೆ ನಮ್ಮ ಕಣ್ಣುಗಳ ಮೇಲೆ ವಿಪರೀತ ಒತ್ತಡ ಹಾಕುತ್ತಿದ್ದೇವೆ. ಇದರಿಂದ ಉಂಟಾಗುವ ಕಣ್ಣುನೋವಿಗೆ ವೈದ್ಯರು ಅಸ್ತೇನೋಪಿಯ ಎನ್ನುತ್ತಾರೆ. ಎಲ್ಲ ಓಕೆ, ಮೊಬೈಲ್ ಬಳಸಿದರೆ ಕಣ್ಣು ನೋವು ಯಾಕೆ? ಎಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ಕಣ್ಣುಗಳು ಬೆಳವಣಿಗೆಯಾದ ರೀತಿಯನ್ನೊಮ್ಮೆ ತಿಳಿದುಕೊಳ್ಳಬೇಕಾಗುತ್ತದೆ.
ಕಣ್ಣುಗಳ ರಚನೆ ಹೇಗಿದೆಯೆಂದರೆ ದೂರದ ವಸ್ತುವನ್ನು ನೋಡುವಾಗ ಕಣ್ಣುಗುಡ್ಡೆಗಳು ಒಂದಕ್ಕೊಂದು ಸಮಾನಾಂತರವಾಗಿದ್ದು ಸ್ನಾಯುಗಳು ಹೆಚ್ಚು ಆರಾಮಾಗಿರುತ್ತವೆ. ಅದೇ ಹತ್ತಿರದ ವಸ್ತುಗಳನ್ನು ನೋಡುವಾಗ ಅಥವಾ ಓದುವಾಗ ಅವುಗಳ ಪರಿಸ್ಥಿತಿ ಸಂಪೂರ್ಣ ಭಿನ್ನ. ಎರಡೂ ಗುಡ್ಡೆಗಳು ಹತ್ತಿರದಲ್ಲಿರುವ ನಾವು ನೋಡಬೇಕಾದ ವಸ್ತುವಿನ ಮೇಲೆ ಕೇಂದ್ರೀಕೃತವಾಗುತ್ತವೆ. ಇದು ಕಣ್ಣಿನ ಸ್ನಾಯುಗಳ ಮೇಲೆ ಒತ್ತಡವನ್ನು ಸೃಷ್ಟಿಸುತ್ತದೆ. ಪುಸ್ತಕವನ್ನು ಹತ್ತಿರದಲ್ಲಿಟ್ಟು ಓದುವಾಗ ಈ ಪರಿಸ್ಥಿತಿಯಾದರೆ ಗಂಟೆಗಟ್ಟಲೆ ಮೊಬೈಲ್ ಮೇಲೆ ಕಣ್ಣು ನೆಟ್ಟಿರುವಾಗ ಅವುಗಳ ಮೇಲೆ ಎಷ್ಟು ಒತ್ತಡ ಸೃಷ್ಟಿಯಾಗಬಹುದೆಂದು ನೀವೇ ಊಹಿಸಿ. ಇನ್ನು ಮೊಬೈಲ್ ಗೇಮ್ನಂತಹ ಪರದೆಯ ತುಂಬೆಲ್ಲ ಅತಿ ವೇಗದಿಂದ ನಮ್ಮ ದೃಷ್ಟಿಯನ್ನು ಓಡಾಡಿಸುವಾಗಲಂತೂ ಕೇಳಲೇಬೇಡಿ.
ಹೆಚ್ಚುಕಾಲ ಮೊಬೈಲ್ ಪರದೆ ದಿಟ್ಟಿಸುವುದರಿಂದ ಕಣ್ಣಿನ ಸ್ನಾಯುಗಳ ಮೇಲೆ ಉಂಟಾಗುವ ಒತ್ತಡ ನೋವು ತರುವುದರ ಜತೆಗೆ ಇನ್ನೂ ಹಲವಾರು ತೊಂದರೆಗಳು ಎದುರಾಗುತ್ತವೆ. ಸಾಮಾನ್ಯವಾಗಿ ನಮ್ಮ ಕಣ್ಣ ರೆಪ್ಪೆಗಳು ನಿಮಿಷಕ್ಕೆ 10-15 ಬಾರಿ ಮಿಟುಕುತ್ತವೆ. ಆದರೆ ನಮ್ಮ ದೃಷ್ಟಿ ಮೊಬೈಲ್ ಪರದೆಯ ಮೇಲಿರುವಾಗ ಇದರ ಪ್ರಮಾಣ ಅರ್ಧಕ್ಕಿಂತ ಕಡಿಮೆಯಾಗುತ್ತದೆ. ಕಣ್ಣು ಹೆಚ್ಚು ಸಮಯ ತೆರೆದೇ ಇರುವ ಕಾರಣ ಕಣ್ಣೀರು ಒಣಗಿ ಕಣ್ಣುರಿಗೆ ಕಾರಣವಾಗುತ್ತದೆ. ಇದಕ್ಕೆ ಮತ್ತೊಂದು ಮಜಲೂ ಇದೆ. ನಿಮ್ಮ ಕೆಲಸವು ಹವಾನಿಯಂತ್ರಣ ಕೊಠಡಿಯಲ್ಲೋ ಅಥವಾ ಗಾಳಿಯಲ್ಲಿ ಹೆಚ್ಚು ಧೂಳು ಇರುವ ಪ್ರದೇಶದಲ್ಲೋ ಹೆಚ್ಚು ಕಾಲ ಕಂಪ್ಯೂಟರ್ ಅಥವಾ ಮೊಬೈಲ್ ಬಳಸುತ್ತಿದ್ದರೆ ಅದರಿಂದ ಕಣ್ಣುಗಳು ಸಮರ್ಪಕವಾಗಿ ಕಣ್ಣೀರನ್ನು ಉತ್ಪಾದಿಸಲಾಗದೇ ಒಣಗುತ್ತವೆ. ಇದನ್ನು "ಡ್ರೈ ಐ ಸಿಂಡ್ರೋಮ್' ಅಥವಾ ಒಣ ಕಣ್ಣುಗಳ ಲಕ್ಷಣವೆಂದು ಹೇಳಲಾಗುತ್ತದೆ. ಮನುಷ್ಯರಲ್ಲಿ 40ರ ನಂತರ ಕಣ್ಣುಗಳಲ್ಲಿ ಉತ್ಪತ್ತಿಯಾಗುವ ನೀರಿನ ಪ್ರಮಾಣ ನೈಸರ್ಗಿಕವಾಗಿ ಕುಗ್ಗುತ್ತದೆ. ಆದ್ದರಿಂದ 40 ವರ್ಷ ದಾಟಿದವರು ವಿಶೇಷ ಕಾಳಜಿ ವಹಿಸುವುದು ಸೂಕ್ತ. ಹೆಚ್ಚು ನೀರು ಕುಡಿಯದ ಕಾರಣವೂ ಬರುವ ಈ ರೋಗಲಕ್ಷಣಕ್ಕೆ 20:20:20 ನಿಯಮ ಪಾಲಿಸುವುದು ಉತ್ತಮವೆಂದು ಪರಿಣತರ ಅಂಬೋಣ. ಅದರನ್ವಯ ನೀವು ಸತತವಾಗಿ ಮೊಬೈಲ್ ಸ್ಕ್ರೀನ್ ದಿಟ್ಟಿಸುತ್ತಿದ್ದರೆ ಪ್ರತಿ 20 ನಿಮಿಷಕ್ಕೊಮ್ಮೆ ಸುಮಾರು 20 ಅಡಿ ದೂರದಲ್ಲಿರುವ ವಸ್ತುವನ್ನು ಸಹಜವಾಗಿ ಕಣ್ಣು ಮಿಟುಕಿಸುತ್ತ 20 ಸೆಕೆಂಡ್ ನೋಡಿ. ಹೀಗೆ ಮಾಡುವುದರಿಂದ ಕಣ್ಣಿನ ಸ್ನಾಯುಗಳ ಮೇಲಿನ ಒತ್ತಡ ಕಡಿಮೆಯಾಗಿ ಹಗುರಾಗುತ್ತವೆ.
ಮತ್ತೆ ಮಕ್ಕಳ ವಿಷಯಕ್ಕೆ ಬರೋಣ. ಹೆಚ್ಚು ಸಮಯ ಮೊಬೈಲ್ ಬಳಸುವುದರಿಂದ ಮಕ್ಕಳಲ್ಲಿ ಭಾಷಾಕಲಿಕೆ ಕುಂಠಿತವಾಗುವುದು ಪ್ರಮಾಣಿತವಾಗಿದೆ. ಇದು ಹೆಚ್ಚು ಮುಂದುವರೆದರೆ ನಿದ್ರೆ ಮತ್ತು ಏಕಾಗ್ರತೆಯ ಕೊರತೆಯ ಜತೆಗೆ ದೈಹಿಕ ಚಟುವಟಿಕೆಗಳು ಕುಂಠಿತವಾಗಿ ಸ್ಥೂಲಕಾಯ, ಅತಿ ಹಸಿವಿನಂತಹ ಅವರ ವಯಸ್ಸಿಗೆ ಮೀರಿದ ಬೆಳವಣಿಗೆಗಳು ಕಂಡುಬರುವ ಸಾಧ್ಯತೆ ಹೆಚ್ಚುತ್ತದೆ. ಸಾಮಾನ್ಯವಾಗಿ ಮಕ್ಕಳು ಮೊಬೈಲ್ ಬಳಸುವಾಗ ಕಡಿಮೆ ಬೆಳಕಿರುವ ಕೊಠಡಿಯಲ್ಲಿ, ಹೊಟ್ಟೆಯ ಮೇಲೆ ಮಲಗಿ ಅದ್ಯಾವುದೋ ಕೋನದಿಂದ ಕಾರ್ಟೂನು ನೋಡುವ ದೃಶ್ಯಗಳನ್ನು ನಾವು ದಿನನಿತ್ಯವೂ ನೋಡುತ್ತೇವೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು ಹೆಚ್ಚು ಸಮಯ ಮುಂದುವರೆದರೆ ಇದರಿಂದ ಕಣ್ಣಿಗೆ ಖಾಯಂ ಕಾಯಿಲೆ ಉಂಟಾಗಬಲ್ಲದು.
ಇತ್ತೀಚೆಗೆ ಭಾರತೀಯ ಸಮುದಾಯ ಔಷಧಿ ಪತ್ರಿಕೆ ಪ್ರಕಟಿಸಿರುವ ವರದಿಯೊಂದರ ಪ್ರಕಾರ ಭಾರತದಾದ್ಯಂತ ಶಾಲಾ ಮಕ್ಕಳಲ್ಲಿ ಶೇ. 7ರಷ್ಟು ಮಕ್ಕಳು ಸ್ಥೂಲಕಾಯರಾಗಿದ್ದು ಅಂಥವರ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕುರಿತು ವರದಿ ಕಳವಳ ವ್ಯಕ್ತಪಡಿಸಿದೆ. ಬದಲಾಗುತ್ತಿರುವ ಆಹಾರ ಪದ್ಧತಿ, ಮೊಬೈಲ್ ಬಳಕೆಯಿಂದ ಕುಗ್ಗುತ್ತಿರುವ ದೈಹಿಕ ಚಟುವಟಿಕೆ ಮುಂತಾದವು ಇದಕ್ಕೆ ಕಾರಣ. ಇಂದಿನ ಪೀಳಿಗೆಯ ಶಾಲಾ ಮಕ್ಕಳನ್ನು ಮತ್ತು ಅವರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ನಮಗೆ ಅರ್ಥವಾಗುತ್ತದೆ.
ತಂತ್ರಜ್ಞಾನದ ಜತೆಜತೆಗೆ ಜೀವನವೂ ಸಾಗಬೇಕಾದದ್ದು ನಿಜವೇ. ಮೊಬೈಲ್ನಲ್ಲಿ ಕಾರ್ಟೂನು ತೋರಿಸುತ್ತ ಮಕ್ಕಳಿಗೆ ಉಣಿಸುವ ಅಮ್ಮನ ಕಷ್ಟವೂ ಅರ್ಥವಾಗುವಂಥದ್ದೇ. ಕಾರ್ಟೂನನ್ನು ಊಟದ ಸಮಯಕ್ಕಷ್ಟೇ ಮೀಸಲಿಟ್ಟು ಉಳಿದ ಸಮಯದಲ್ಲಿ ಮಗುವಿಗೆ ಆಟ ಮತ್ತು ಇತರ ದೈಹಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವುದರಲ್ಲಿ ಪಾಲಕರ ಚಾಣಾಕ್ಷತೆ ಅಡಗಿದೆ. ಹಾಂ.. ಮರೆತಿದ್ದೆ. ಈ ಸೂತ್ರವು ಮಗುವಿನ ಪಾಲಕರಿಗೂ ಅನ್ವಯವಾಗುತ್ತದೆ.
ಇನ್ನಷ್ಟು ಓದಿ

