
ಬೆಂಗಳೂರು: ಸಿರಿಕನ್ನಡ ವಾಹಿನಿ ತನ್ನ ವೈಶಿಷ್ಟ್ಯತೆಯಿಂದಲೇ ವೀಕ್ಷಕರ ಮನದಲ್ಲಿ ಸ್ಥಾನ ಪಡೆದು, ಇದೀಗ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ. ಟಾಟಾ ಸ್ಕೈ, ಡಿಟಿಎಚ್ನಲ್ಲಿಯೂ ವಾಹಿನಿ ವೀಕ್ಷಣೆಗೆ ಲಭ್ಯವಿದ್ದು, ನಾಡಿನ ಜನರ ಮನೆಯಂಗಳವನ್ನು ತಲುಪುತ್ತಿದೆ.
ಹಬ್ಬದ ಸಂಭ್ರಮ ಜೋರಾಗಿರುವ ಈ ಸಂದರ್ಭದಲ್ಲಿ ಸಿರಿ ಕನ್ನಡ ವಾಹಿನಿ ವೀಕ್ಷಕರಿಗೆ ಮೆಗಾ ಮನರಂಜನೆ ಪ್ಯಾಕೇಜ್ ನೀಡುತ್ತಿದೆ. ಸೆ. 13ರಿಂದ ರಾತ್ರಿ 9ಕ್ಕೆ 'ಧೃವ ನಕ್ಷತ್ರ' ಎಂಬ ಹೊಸ ಮೆಗಾ ಧಾರಾವಾಹಿ ಪ್ರಾರಂಭವಾಗಿದೆ. ಮೈಕೋ ಮಂಜು, ಸ್ವಪ್ನ ರಾಜ್, ಶ್ರೀಕಾಂತ್ ಹೆಬ್ಳೀಕರ್, ಅಲಕಾನಂದ್ ಸೇರಿ ಹಲವರಿದ್ದಾರೆ.
ರಾತ್ರಿ 9.30ಕ್ಕೆ ಮುಗ್ದ ಮನಸ್ಸುಗಳ ಮುದ್ದಾದ ಪ್ರೇಮ ಕಥೆಯುಳ್ಳ 'ಪ್ರೇಮ್ ಜೊತೆ ಅಂಜಲಿ' ಮೆಗಾ ಧಾರಾವಾಹಿ ಪ್ರಸಾರವಾಗಲಿದ್ದು, ಪದ್ಮಜಾ ರಾವ್, ಮಂಜುನಾಥ ಹೆಗಡೆೆ, ಪ್ರವೀಣ್ ರಾವ್ ತಾರಾಗಣದಲ್ಲಿದ್ದಾರೆ. ಹಾಸ್ಯದ ಕಚಗುಳಿ ಇಡಲು ಗಂಗಾವತಿ ಪ್ರಾಣೇಶ್, ಮುಖ್ಯಮಂತ್ರಿ ಚಂದ್ರು, ಎಂ.ಎಸ್. ನರಸಿಂಹಮೂರ್ತಿ, ಸುಧಾ ಬರಗೂರ್, ರಿಚರ್ಡ್ ಲೂಯಿಸ್ 'ಹಾಸ್ಯ ದರ್ಬಾರ್' ಮೂಲಕ ಪ್ರತಿದಿನ ರಾತ್ರಿ 7.30ಕ್ಕೆ ಬರಲಿದ್ದಾರೆ. ಈ ಹೊಸ ಕಾರ್ಯಕ್ರಮಗಳ ಜತೆಗೆ ಮತ್ತಷ್ಟು ವಿಭಿನ್ನ ಕಾರ್ಯಕ್ರಮಗಳು ಸಿರಿಕನ್ನಡ ವಾಹಿನಿಯಲ್ಲಿ ಮೂಡಿ ಬರಲಿವೆ ಎಂದು ವಾಹಿನಿ ಮುಖ್ಯಸ್ಥರಾದ ಸಂಜಯ್ ಶಿಂಧೆ ತಿಳಿಸಿದ್ದಾರೆ.