Dailyhunt Logo
  • Light mode
    Follow system
    Dark mode
    • Play Story
    • App Story
ಮೇಕೆದಾಟು ಪರ್ಯಾಯ ಭೂಮಿ ಗುರುತಿಸಲು ಗಡುವು

ಮೇಕೆದಾಟು ಪರ್ಯಾಯ ಭೂಮಿ ಗುರುತಿಸಲು ಗಡುವು

ಬೆಂಗಳೂರು: ಮೇಕೆದಾಟು ಯೋಜನೆಗೆ ಮುಳುಗಡೆ ಆಗಲಿರುವ ಭೂ ಪ್ರದೇಶಕ್ಕೆ ಪರ್ಯಾಯವಾಗಿ ಅರಣ್ಯ ಬೆಳೆಸಲು ನವೆಂಬರ್ ಅಂತ್ಯದೊಳಗೆ ಭೂಮಿ ಗುರುತಿಸಿ ಅಂತಿಮಗೊಳಿಸುವಂತೆ ಜಲ ಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಸೂಚಿಸಿದ್ದಾರೆ.

ಮೇಕೆದಾಟು ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಕಾಸಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ಮಾತನಾಡಿದರು.

ಈಗಾಗಲೇ 14 ಜಿಲ್ಲೆಗಳಲ್ಲಿ ಭೂಮಿ ಅಂತಿಮಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ (ರಾಮನಗರ), ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಗುರುತಿಸುವಿಕೆ ಆಗಿಲ್ಲ. ವಿಳಂಬ ಆಗಕೂಡದು ಎಂದು ತಾಕೀತು ಮಾಡಿದರು.

ಅರಣ್ಯೀಕರಣಕ್ಕೆ ಜಮೀನು ಗುರುತಿಸಿ ಈ ನವೆಂಬರ್ ಅಂತ್ಯದೊಳಗೆ ಇಲಾಖೆಗೆ ಹಸ್ತಾಂತರಿಸಬೇಕು ಬೇಕು.ಈಗಾಗಲೇ ಸ್ವೀಕೃತವಾದ 14 ಜಿಲ್ಲೆಗಳ ಭೂಮಿಯ ದಾಖಲಾತಿಗಳನ್ನು ಪರಿಶೀಲಿಸಿ ಲೋಪವಿದ್ದಲ್ಲಿ ಸರಿಪಡಿಸುವಂತೆ ನಿರ್ದೇಶನ ನೀಡಿದರು.

ಯಾವುದೇ ಕಾರಣಕ್ಕೆ ಕಡತಗಳು ವಿಳಂಬ ಆಗಬಾರದು. ಈ ಸಂಬಂಧ ಕಂದಾಯ, ಅರಣ್ಯ, ಜಲಸಂಪನ್ಮೂಲ, ಕಾವೇರಿ ನೀರಾವರಿ ನಿಗಮದ ನಡುವೆ ನಿರಂತರ ಸಮನ್ವಯ ಇರಬೇಕು. ಎಂದು ತಾಕೀತು ಮಾಡಿದರು.

ಮೇಕೆದಾಟು ಯೋಜನೆ ಅಭಿವೃದ್ಧಿ ಯೋಜನೆಯಾಗಿದ್ದರೂ, ಪರಿಸರ ಸಂರಕ್ಷಣೆಗೆ ಸರ್ಕಾರ ಪೂರ್ಣ ಬದ್ಧವಾಗಿದೆ. ಹೀಗಾಗಿ, ಪರಿಹಾರಾತ್ಮಕ ಅರಣ್ಯೀಕರಣ ಕಾಗದದ ಮೇಲಿನ ಪ್ರಕ್ರಿಯೆ ಆಗಿಸದೆ ಅರಣ್ಯ ಬೆಳೆಸುವ ಉದ್ದೇಶದಿಂದ ಅನುಷ್ಠಾನಗೊಳಿಸಲು ಸೂಚಿಸಿದರು.

ಈ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮ ನಿಯಮಿತದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಯೋಜನೆಗೆ ಎಷ್ಟು ಭೂಮಿ ಬೇಕು?

ಮೇಕೆದಾಟು ಯೋಜನೆಗೆ ಒಟ್ಟು 5,096.24 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದ್ದು ಇದಕ್ಕೆ ಪ್ರತಿಯಾಗಿ ನೀಡಬೇಕಾದ ಪರಿಹಾರಾತ್ಮಕ ಅರಣ್ಯೀಕರಣ ಭೂಮಿಯ ಪ್ರಮಾಣವು ಭೂಮಿಯ ವರ್ಗವನ್ನು ಅವಲಂಬಿಸಿದೆ. ಸಿ ಡಿ ಕ್ಲಾಸ್ ಭೂಮಿ ಆಗಿದ್ದರೆ 1:1 ಅನುಪಾತದಲ್ಲಿ 5,096.24 ಹೆಕ್ಟೇರ್, ಡೀಮ್ಡ್ ಾರೆಸ್ಟ್ ಆಗಿದ್ದರೆ 1:2 ಅನುಪಾತದಲ್ಲಿ 10,192.48 ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕಿದೆ. ಈ ವರೆಗೆ 14 ಜಿಲ್ಲೆಗಳಿಂದ 2,456.27 ಹೆಕ್ಟೇರ್ ಜಮೀನಿನ ದಾಖಲಾತಿಗಳು ಸ್ವೀಕೃತವಾಗಿವೆ.

ಲಭ್ಯವಿರುವ ಪರಿಭಾವಿತ ಅರಣ್ಯ ಭೂಮಿ

2022 ರ ಫೆಬ್ರವರಿ 5 ರ ಆದೇಶದ ಪ್ರಕಾರ ಮಂಡ್ಯ ಜಿಲ್ಲೆಯಲ್ಲಿ 32,958.95 ಹೆಕ್ಟೇರ್ ಚಾಮರಾಜ ನಗರ ಜಿಲ್ಲೆಯಲ್ಲಿ 7,514.07 ಹೆಕ್ಟೇರ್ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 3,389.99 ಹೆಕ್ಟೇರ್ ಸೇರಿ ಒಟ್ಟು 43,863.01 ಹೆಕ್ಟೇರ್ ಭೂಮಿ ಲಭ್ಯವಿದೆ. ನಿಯಮಾನುಸಾರ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಸಾಧ್ಯತೆಗಳ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.

ಡಿ.ಕೆ.ಶಿವಕುಮಾರ್- ವಿಜಯ್ ಭೇಟಿಗೆ ಡಿಎಂಕೆ ಕೆಂಡ

ದಿಲ್ಲಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಪರಸ್ಪರ ಭೇಟಿಯಾಗಿ ಕೈ ಕುಲುಕಿರುವುದು ತಮಿಳುನಾಡಿನ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಸೋನಿಯಾ ಗಾಂಧಿ ಅವರ ಆತ್ಮಕಥೆ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ಉಭಯಕುಶಲೋಪರಿ ನಡೆದಿತ್ತು. ಮೇಕೆದಾಟು ಸಂಬಂಧ ಇಬ್ಬರ ನಡುವೆ ಮಾತುಕತೆ ನಡೆದಿದೆ ಎಂದು ತ.ನಾಡಿನ ವಿಪಕ್ಷ ಡಿಎಂಕೆ ವಿಜಯ್ ಮೇಲೆ ಹರಿಹಾಯ್ದಿದೆ.

ಈ ಸಂದರ್ಭದಲ್ಲಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರೂ ಡಿಎಂ ಕೆ ಇದನ್ನು ಅಲ್ಲಿನ ಸಿಎಂ ವಿಜಯ್ ವಿರುದ್ದ ರಾಜಕೀ ಅಸವಾಗಿ ಬಳಸುತ್ತಿದೆ ಎಂದು ಹೇಳಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Vijayvani