ಚೆನ್ನೈ: ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಎದುರು ಆಡಿದ ನಾಲ್ಕು ಪಂದ್ಯಗಳಲ್ಲೂ ಸೋತು ನಿರಾಸೆ ಅನುಭವಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿ ಮೊದಲ ಮುಖಾಮುಖಿಯಲ್ಲೇ ಗೆಲುವಿನ ನಗೆ ಬೀರಿದೆ. ಅಲ್ಲದೆ, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಎದುರು ಸತತ 5 ಸೋಲುಗಳ ಬಳಿಕ ಡೆಲ್ಲಿ ಜಯದ ಹಳಿಗೇರಿತು. ಚೆಪಾಕ್‌ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಯುವ ನಾಯಕ ರಿಷಭ್ ಪಂತ್ ಬಳಗ 6 ವಿಕೆಟ್‌ಗಳಿಂದ ಜಯ ದಾಖಲಿಸಿತು. ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದ ಹಾಲಿ ಚಾಂಪಿಯನ್ ರೋಹಿತ್ ಬಳಗ ನಿರಾಸೆ ಅನುಭವಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ (24ಕ್ಕೆ 4) ಹಾಗೂ ಆವೇಶ್ ಖಾನ್ (15ಕ್ಕೆ 2) ಮಾರಕ ದಾಳಿಗೆ ನಲುಗಿತು. ನಾಯಕ ರೋಹಿತ್ ಶರ್ಮ (44ರನ್, 30 ಎಸೆತ, 3 ಬೌಂಡರಿ, 3 ಸಿಕ್ಸರ್) ಹಾಕಿಕೊಟ್ಟ ಭದ್ರ ಬುನಾದಿಯ ನಡುವೆಯೂ ಮುಂಬೈ ತಂಡ ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ 9 ವಿಕೆಟ್‌ಗೆ 137 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು.
ಪ್ರತಿಯಾಗಿ ಡೆಲ್ಲಿ ತಂಡ ಶಿಖರ್ ಧವನ್ (45ರನ್, 42 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಕಡೇ ಹಂತದಲ್ಲಿ ಶಿಮ್ರೋನ್ ಹೆಟ್ಮೆಯರ್ (14*ರನ್, 9 ಎಸೆತ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 138 ರನ್‌ಗಳಿಸಿ ಜಯದ ನಗೆ ಬೀರಿತು.
ಮುಂಬೈ ಇಂಡಿಯನ್ಸ್: 9 ವಿಕೆಟ್‌ಗೆ 137 (ರೋಹಿತ್ ಶರ್ಮ 44, ಸೂರ್ಯಕುಮಾರ್ ಯಾದವ್ 24, ಇಶಾನ್ ಕಿಶನ್ 26, ಜಯಂತ್ ಯಾದವ್ 23, ಅಮಿತ್ ಮಿಶ್ರಾ 24ಕ್ಕೆ 4, ಅವೇಶ್ ಖಾನ್ 15ಕ್ಕೆ 2, ಮಾರ್ಕಸ್ ಸ್ಟೋಯಿನಿಸ್ 20ಕ್ಕೆ 1, ಕಗಿಸೊ ರಬಾಡ 25ಕ್ಕೆ 1, ಲಲಿತ್ ಯಾದವ್ 17ಕ್ಕೆ 1), ಡೆಲ್ಲಿ ಕ್ಯಾಪಿಟಲ್ಸ್: 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 138 (ಶಿಖರ್ ಧವನ್ 45, ಸ್ಟೀವನ್ ಸ್ಮಿತ್ 33, ಲಲಿತ್ ಯಾದವ್ 22*, ಶಿಮ್ರೋನ್ ಹೆಟ್ಮೆಯರ್ 14*, ಜಯಂತ್ ಯಾದವ್ 25ಕ್ಕೆ 1, ಜಸ್‌ಪ್ರೀತ್ ಬುಮ್ರಾ 32ಕ್ಕೆ 1, ರಾಹುಲ್ ಚಹರ್ 29ಕ್ಕೆ 1, ಕೈರಾನ್ ಪೊಲ್ಲಾರ್ಡ್ 9ಕ್ಕೆ 1).

