Dailyhunt
ನಮ್ಮ ನಾಯಕ ಖಮೇನಿಯವರ ಬಲಿದಾನಕ್ಕೆ ಸಿಕ್ಕ ಜಯವಿದು! ಕದನ ವಿರಾಮದ ನಡುವೆಯೂ ಕಿಡಿಹೊತ್ತಿಸಿದ ಇರಾನ್ ಅಧ್ಯಕ್ಷರ ಹೇಳಿಕೆ! Masoud Pezeshkian

ನಮ್ಮ ನಾಯಕ ಖಮೇನಿಯವರ ಬಲಿದಾನಕ್ಕೆ ಸಿಕ್ಕ ಜಯವಿದು! ಕದನ ವಿರಾಮದ ನಡುವೆಯೂ ಕಿಡಿಹೊತ್ತಿಸಿದ ಇರಾನ್ ಅಧ್ಯಕ್ಷರ ಹೇಳಿಕೆ! Masoud Pezeshkian

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮದ ನಂತರ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್(Masoud Pezeshkian) ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಈ ಕದನ ವಿರಾಮವು ಇರಾನ್‌ನ ಶರಣಾಗತಿಯಲ್ಲ, ಬದಲಿಗೆ ಇತ್ತೀಚೆಗೆ ಹುತಾತ್ಮರಾದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ರಕ್ತಕ್ಕೆ ಸಂದ ಜಯ ಎಂದು ಬಣ್ಣಿಸಿದ್ದಾರೆ.
ಈ ಹೇಳಿಕೆಯು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಸಂಚಲನ ಮೂಡಿಸಿದೆ.

ಖಮೇನಿಯವರ ಬಲಿದಾನದ ಫಲವಿದು": ಅಧ್ಯಕ್ಷರ ಪೋಸ್ಟ್

ಮಂಗಳವಾರ ತಡರಾತ್ರಿ Xನಲ್ಲಿ ಪೋಸ್ಟ್ ಮಾಡಿರುವ ಅಧ್ಯಕ್ಷ ಪೆಜೆಶ್ಕಿಯಾನ್, ಈ ಕದನ ವಿರಾಮವು ಇರಾನ್ ಬಯಸಿದ ತತ್ವಗಳ ಆಧಾರದ ಮೇಲೆ ನಡೆದಿದೆ. ಇದು ನಮ್ಮ ಶ್ರೇಷ್ಠ ಹುತಾತ್ಮ ನಾಯಕ ಖಮೇನಿಯವರ ರಕ್ತದ ಫಲ ಮತ್ತು ಇರಾನ್ ಜನತೆ ರಣರಂಗದಲ್ಲಿ ತೋರಿದ ಬದ್ಧತೆಗೆ ಸಿಕ್ಕ ಸಾಧನೆ ಎಂದು ಬರೆದುಕೊಂಡಿದ್ದಾರೆ. ಫೆಬ್ರವರಿ 28 ರಂದು ಟೆಹ್ರಾನ್‌ನಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದರು. ಅಂದಿನಿಂದ ಹತ್ತಿ ಉರಿಯುತ್ತಿದ್ದ ಸೇಡಿನ ಜ್ವಾಲೆಗೆ ಈಗಿನ ಕದನ ವಿರಾಮವು ಒಂದು ದೊಡ್ಡ ತಿರುವು ನೀಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಟೆಹ್ರಾನ್ ಬೀದಿಗಳಲ್ಲಿ ವಿಜಯೋತ್ಸವ!

ಟ್ರಂಪ್ ನೀಡಿದ್ದ ಮಂಗಳವಾರ ರಾತ್ರಿ 8 ಗಂಟೆಯ ಡೆಡ್‌ಲೈನ್‌ಗಿಂತ ಕೇವಲ ಎರಡು ಗಂಟೆಗಳ ಮೊದಲು ಕದನ ವಿರಾಮ ಘೋಷಣೆಯಾಯಿತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಇರಾನ್‌ನ ರಾಜಧಾನಿ ಟೆಹ್ರಾನ್‌ನ ಬೀದಿಗಳಲ್ಲಿ ಸಾವಿರಾರು ಜನರು ಧ್ವಜಗಳನ್ನು ಹಿಡಿದು ವಿಜಯೋತ್ಸವ ಆಚರಿಸಿದ್ದಾರೆ. ಅಮೆರಿಕದ ಅಹಂಕಾರಕ್ಕೆ ಇರಾನ್ ತಕ್ಕ ಪಾಠ ಕಲಿಸಿದೆ ಎಂದು ಘೋಷಣೆಗಳನ್ನು ಕೂಗುತ್ತಿರುವುದು ವರದಿಯಾಗಿದೆ.
ಇದನ್ನು ಓದಿ: ಅಮೆರಿಕ-ಇರಾನ್ ಯುದ್ಧ ನಿಲ್ಲಿಸಿದ ಡ್ರ್ಯಾಗನ್ ರಾಷ್ಟ್ರ? ಯುದ್ಧದ ಭೂಮಿಯಲ್ಲಿ ಶಾಂತಿಯ ಮಂತ್ರ ಜಪಿಸಿದ ಚೀನಾ! China

ಅಮೆರಿಕಕ್ಕೆ ನಾವು ಶರಣಾಗಿಲ್ಲ, ಅಮೆರಿಕವೇ ನಮಗೆ ಶರಣಾಗಿದೆ

ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ (SNSC) ಈ ಕದನ ವಿರಾಮವನ್ನು ಐತಿಹಾಸಿಕ ಜಯ ಎಂದು ಘೋಷಿಸಿದೆ. ಇರಾನ್ ನೀಡಿದ 10 ಅಂಶಗಳ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವಂತೆ ಅಮೆರಿಕವನ್ನು ನಾವು ಒತ್ತಾಯಿಸಿದ್ದೇವೆ ಎಂದು ಕೌನ್ಸಿಲ್ ಪ್ರತಿಪಾದಿಸಿದೆ.
ಇರಾನ್ ಸರ್ಕಾರ ನೀಡುತ್ತಿರುವ ಮಾಹಿತಿ ಹೀಗಿದೆ:
ಹೋರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ಸಂಪೂರ್ಣ ನಿಯಂತ್ರಣವನ್ನು ಅಮೆರಿಕ ಒಪ್ಪಿಕೊಂಡಿದೆ.
ಇರಾನ್‌ನ ಪರಮಾಣು ಪುಷ್ಟೀಕರಣದ ಹಕ್ಕನ್ನು ಅಮೆರಿಕ ಮಾನ್ಯ ಮಾಡಿದೆ.
ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸಲು ಅಮೆರಿಕ ಸಮ್ಮತಿಸಿದೆ.
ಯುದ್ಧದಿಂದಾದ ಹಾನಿಗೆ ಅಮೆರಿಕ ಪರಿಹಾರ ನೀಡಲಿದೆ ಮತ್ತು ಮಧ್ಯಪ್ರಾಚ್ಯದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲಿದೆ.

ಡೆಡ್‌ಲೈನ್‌ಗೆ ಕ್ಯಾರೇ ಎನ್ನದ ಇರಾನ್!

ಅಮೆರಿಕದ ಅಧ್ಯಕ್ಷರು ಹಲವು ಬಾರಿ ಗಡುವು ನೀಡಿದ್ದರು. ಆದರೆ ನಾವು ಅದಕ್ಕೆ ಯಾವುದೇ ಬೆಲೆ ನೀಡಿರಲಿಲ್ಲ. ಶತ್ರುವಿನ ಮನಸ್ಸಿನಲ್ಲಿ ಭೀತಿ ಮತ್ತು ಹತಾಶೆ ಮೂಡುವವರೆಗೂ ನಾವು ಯುದ್ಧ ಮುಂದುವರಿಸಲು ನಿರ್ಧರಿಸಿದ್ದೆವು. ಕಳೆದ 40 ದಿನಗಳಿಂದ ನಡೆದ ಈ ಹೋರಾಟವು ಅಂತಿಮವಾಗಿ ಇರಾನ್‌ನ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಸೆಕ್ಯುರಿಟಿ ಕೌನ್ಸಿಲ್ ಹೇಳಿದೆ.

ಹೋರ್ಮುಜ್ ಜಲಸಂಧಿ ಈಗ ಹೇಗಿದೆ..?

ಒಪ್ಪಂದದ ಭಾಗವಾಗಿ, ಹೋರ್ಮುಜ್ ಜಲಸಂಧಿಯ ಮೂಲಕ ಅಂತಾರಾಷ್ಟ್ರೀಯ ಹಡಗುಗಳ ಸಂಚಾರಕ್ಕೆ ಇರಾನ್ ಸದ್ಯಕ್ಕೆ ಅನುವು ಮಾಡಿಕೊಟ್ಟಿದೆ. ಇದು ಜಾಗತಿಕ ತೈಲ ಮಾರುಕಟ್ಟೆಗೆ ದೊಡ್ಡ ನಿರಾಳತೆ ತಂದಿದೆ. ಆದರೆ, ಅಧ್ಯಕ್ಷ ಪೆಜೆಶ್ಕಿಯಾನ್ ಅವರ ಮಾತುಗಳನ್ನು ಗಮನಿಸಿದರೆ, ಇರಾನ್ ಕೇವಲ ರಕ್ಷಣಾತ್ಮಕವಾಗಿಲ್ಲದೆ ರಾಜತಾಂತ್ರಿಕವಾಗಿಯೂ ಅಮೆರಿಕದ ವಿರುದ್ಧ ಹಗೆತನ ಮುಂದುವರಿಸುವ ಸೂಚನೆ ನೀಡಿದೆ.

ಯುದ್ಧಕ್ಕೆ ವಿರಾಮವೋ ಅಥವಾ ಮುಂದಿನ ದಾಳಿಗೆ ಸಿದ್ಧತೆಯೋ?

ನಾಯಕ ಖಮೇನಿಯವರ ಸಾವಿನ ಸೇಡಿನ ಕಿಚ್ಚು ಇನ್ನೂ ಇರಾನ್‌ನಲ್ಲಿ ಆರಿಲ್ಲ. ಅಧ್ಯಕ್ಷರು ಈ ಒಪ್ಪಂದವನ್ನು ಹುತಾತ್ಮರ ರಕ್ತದ ಫಲ ಎಂದು ಕರೆದಿರುವುದು, ಭವಿಷ್ಯದಲ್ಲಿ ಇರಾನ್ ಮತ್ತಷ್ಟು ಆಕ್ರಮಣಕಾರಿ ನೀತಿ ಅನುಸರಿಸಬಹುದು ಎಂಬ ಮುನ್ಸೂಚನೆ ನೀಡುತ್ತಿದೆ. ಅತ್ತ ಟ್ರಂಪ್ ಇದನ್ನು ಸುವರ್ಣ ಯುಗ ಎನ್ನುತ್ತಿದ್ದರೆ, ಇತ್ತ ಪೆಜೆಶ್ಕಿಯಾನ್ ಇದನ್ನು ಶತ್ರುವಿನ ಸೋಲು ಎನ್ನುತ್ತಿದ್ದಾರೆ,(ಏಜೆನ್ಸೀಸ್).

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani