
ಭೌತಿಕವಾಗಿ, ಸಂಪನ್ಮೂಲಗಳ ದೃಷ್ಟಿಯಿಂದ ನಮ್ಮದು ಅತ್ಯಂತ ಶ್ರೀಮಂತ ದೇಶ, ಆದರೆ ಜಾಗತಿಕ ಪ್ರಜೆಗಳಾಗಿ ನೋಡಿದಾಗ ನಾವಿನ್ನೂ ಬಡವರಾಗಿಯೇ ಉಳಿದಿದ್ದೇವೆ. ಇವತ್ತಿನ ಪರಿಸ್ಥಿತಿಯೇನೋ ಹೀಗಿದೆ, ಭವಿಷ್ಯದಲ್ಲಿಯೂ ಇದು ಹೀಗೆಯೇ ಮುಂದುವರಿಯಬೇಕೇ? ಈ ಪ್ರಶ್ನೆಗೆ ಉತ್ತರ ನಾವು ಅನುಸರಿಸುವ ಹಾದಿಯನ್ನು ಅವಲಂಬಿಸಿರುತ್ತದೆ.
ಆದರೆ ನಾನು 'ಭವಿಷ್ಯ ಚೆನ್ನಾಗಿಯೇ ಇರುತ್ತದೆ' ಎನ್ನುವ ಆಶಾದಾಯಕ ಮನಸ್ಥಿತಿ ಹೊಂದಿದ್ದೇನೆ. ಅದಕ್ಕೆ ಕಾರಣ ಯುವಜನರು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಯುವಜನರೇ ಇದ್ದಾರೆ. ಇವರು ಕೇವಲ ಭೋಗದ ಬೆನ್ನೇರದೆ, ಸೇವೆ ಮತ್ತು ತ್ಯಾಗದ ಮಾರ್ಗ ಅನುಸರಿಸಿದರೆ, ಉಳಿದ ಅರ್ಧ ಭಾಗದ ಜನರ ಬದುಕು ಸಹಜವಾಗಿಯೇ ಉತ್ತಮಗೊಳ್ಳುತ್ತದೆ. ಹೀಗೆ ಜನರ ಬದುಕನ್ನು ಉತ್ತಮಗೊಳಿಸಬಲ್ಲ ನಾಯಕರು ನಮ್ಮ ಸಮಾಜದಲ್ಲಿ ಹೊರಹೊಮ್ಮಬೇಕಾಗಿದೆ. ನಮ್ಮೆಲ್ಲರಿಗೂ, ವಿಶೇಷವಾಗಿ ಯುವಕರಿಗೆ ನಾಯಕರಾಗಬೇಕೆಂಬ ಹಂಬಲವಿದೆ. ಆದರೆ ನಿಜವಾದ ನಾಯಕತ್ವ ಎಂದರೇನು?
ಈ ಪ್ರಶ್ನೆಗೆ ಕಠೋಪನಿಷತ್ತಿನಲ್ಲಿ ಸುಂದರವಾದ ಉತ್ತರವಿದೆ. ಯಮರಾಜನು ನಚಿಕೇತನಿಗೆ ನಿಜವಾದ ನಾಯಕನ ಗುಣಲಕ್ಷಣಗಳನ್ನು ಮಾರ್ವಿುಕವಾಗಿ ವಿವರಿಸುತ್ತಾನೆ. 'ನಿಜವಾದ ನಾಯಕನೆಂದರೆ ಆತ್ಮ ಮತ್ತು ಸತ್ಯವನ್ನು ಹುಡುಕುವ ಅಚಲ ಧೈರ್ಯ ಹೊಂದಿರುವವನು. ಆತ ತನ್ನ ದೃಷ್ಟಿಯನ್ನು ಸದಾ ಬಾಹ್ಯದತ್ತ ಹರಿಸದೆ, ಅಂತರಾಳದ ಕಡೆಗೆ ತಿರುಗಿಸುತ್ತಾನೆ. ಆತ ಎಂದಿಗೂ ತನ್ನ ಮನಸ್ಸು ಮತ್ತು ಇಂದ್ರಿಯಗಳ ಕೈಗೊಂಬೆಯಾಗುವುದಿಲ್ಲ, ಅವುಗಳ ಮೇಲೆ ಪ್ರಭುತ್ವ ಸಾಧಿಸಿರುತ್ತಾನೆ. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವವನೇ ಅಪ್ಪಟ ನಾಯಕ. ಎಂಥ ಸವಾಲು, ವಿರೋಧ ಎದುರಾದರೂ ಏಕಾಂಗಿಯಾಗಿ ನಿಂತು ಧೈರ್ಯದಿಂದ ಎದುರಿಸಬಲ್ಲ, ತ್ಯಾಗದ ಮಾರ್ಗ ಬಿಡದೆ ಅನುಸರಿಸುವವನೇ ಇಡೀ ಜಗತ್ತನ್ನು ಮುನ್ನಡೆಸಬಲ್ಲ. ನಾಯಕನಿಗೆ ಇರಬೇಕಾದ ಮೊಟ್ಟಮೊದಲ ಗುಣವೇ ಧೈರ್ಯ. ಭಗವಂತನನ್ನು ಹಾಗೂ ಸತ್ಯವನ್ನು ಅನುಸರಿಸುವ ಧೈರ್ಯ ಆತನಿಗಿರಬೇಕು. ಇಂತಹ ಧೈರ್ಯವನ್ನು ಮೈಗೂಡಿಸಿಕೊಂಡ ವ್ಯಕ್ತಿಯನ್ನೇ ಧೀರ, ದೃಢನಿಶ್ಚಯಿ, ಬುದ್ಧಿವಂತ ಎಂದು ಕರೆಯಲಾಗುತ್ತದೆ. ಯುವಜನತೆ ಈ ಧೈರ್ಯದಿಂದ ಮೇಲೇರಿ ಸೇವೆ-ತ್ಯಾಗಗಳ ಮಾರ್ಗ ಅಪ್ಪಿಕೊಳ್ಳಲು ಇದು ಸಕಾಲ. ಯುವಜನರು ಮೊದಲು ತಮ್ಮನ್ನು ತಾವು ಇಂಥ ನಾಯಕರನ್ನಾಗಿ ರೂಪಿಸಿಕೊಳ್ಳಬೇಕಾಗಿದೆ. ನಂತರ ಹಿರಿಯರು ತೋರಿದ ಉದಾತ್ತ ಹಾದಿಯಲ್ಲಿ ಸಾಗುವ ಮೂಲಕ ಜಗತ್ತಿಗೇ ಅವರು ನಾಯಕರಾಗಬಲ್ಲರು.
ನಾಯಕತ್ವದ ಬಗ್ಗೆ ದೊಡ್ಡದೊಡ್ಡ ಮಾತು ಆಡುವವರು ಹಲವರಿದ್ದಾರೆ. ಆದರೆ ನಾಯಕತ್ವದ ಸರಳ ಉದಾಹರಣೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ನಮ್ಮ ಸಂಸ್ಥೆಯ ಅನ್ನದಾನ ಕಾರ್ಯಕ್ರಮದಿಂದ ಪ್ರೇರೇಪಿತರಾಗಿ, ಅನೇಕ ಯುವಕರು ಬಡವರಿಗೆ ಅನ್ನ ನೀಡುವ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಗತ್ಯವಿರುವವರಿಗೆ ಊಟ ಬಡಿಸಲು ಅವರ ಅಡುಗೆಮನೆಗಳು ಸದಾ ಸಕ್ರಿಯವಾಗಿರುತ್ತವೆ. 'ಯಾರೂ ಹಸಿದ ಹೊಟ್ಟೆಯಲ್ಲಿ ಮಲಗಬಾರದು' ಎಂಬುದೇ ಈ ಯೋಜನೆಯ ಉದ್ದೇಶ. ಮಾನವನು ಚಂದ್ರನನ್ನು ಮುಟ್ಟಿಬರುವ ಈ ಅತ್ಯಾಧುನಿಕ ಯುಗದಲ್ಲಿಯೂ, ಅನೇಕರು ಊಟವಿಲ್ಲದೆ ನಿದ್ರಿಸುತ್ತಿರುವುದು ನಿಜಕ್ಕೂ ದೊಡ್ಡ ದುರಂತ.
'ನಾನು ಇಂದು ಹೊಟ್ಟೆತುಂಬ ಊಟ ಮಾಡಿದ್ದೇನೆ, ಹಾಗಾಗಿ ಹಸಿದಿರುವ ಮತ್ತೊಬ್ಬರಿಗೆ ಊಟ ಸಿಗುವಂತೆ ನಾನು ನೋಡಿಕೊಳ್ಳಬೇಕು' ಎಂದು ಪ್ರತಿಯೊಬ್ಬರೂ ಚಿಂತಿಸಬೇಕು. ಇತರರ ನೋವು, ಕಷ್ಟ, ದುಃಖಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಯಾವಾಗ ನೀವು ಹೀಗೆ ಮಿಡಿಯುತ್ತೀರೋ, ಆಗ ನಿಮ್ಮಲ್ಲಿ ಕರುಣಾಪೂರಿತ ಹೃದಯ, ಅಂದರೆ 'ಹೃದ್+ದಯಾ' (ಹೃದಯ) ಅರಳುತ್ತದೆ. ಮೊದಲು ನಿಮ್ಮನ್ನು ನೀವು ಮುನ್ನಡೆಸುವ ನಾಯಕರಾಗಿ ನೀವು ರೂಪುಗೊಳ್ಳಬೇಕು. ಆನಂತರ ಇಡೀ ಜಗತ್ತನ್ನು ಸಂತೋಷ, ಸಮೃದ್ಧಿ ಮತ್ತು ಶಾಂತಿಯ ಕಡೆಗೆ ಕೊಂಡೊಯ್ಯುವ ಶಕ್ತಿ ನಿಮ್ಮಲ್ಲಿ ಮೈಗೂಡುತ್ತದೆ. ಜಗತ್ತಿನಾದ್ಯಂತ ಹಲವಾರು ಯುವಕರು ಕೈಗೊಂಡಿರುವ ಇಂತಹ ಸೇವಾಕಾರ್ಯಗಳಲ್ಲಿ ತಾವೂ ಕೈಜೋಡಿಸುವುದಾಗಿ ಪ್ರತಿಯೊಬ್ಬ ಯುವಕನೂ ಇಂದು ಪ್ರತಿಜ್ಞೆ ಮಾಡಲಿ. ಜೀವನದಲ್ಲಿ ಪ್ರಗತಿ ಸಾಧಿಸಬೇಕಾದರೆ, ಉತ್ತಮ ನಾಯಕರಾಗಿ ರೂಪುಗೊಳ್ಳಬೇಕಾದರೆ ಕೇವಲ ಸೇವೆ ಸಾಲದು; ದ್ವಿಚಕ್ರ ವಾಹನ ಚಲಿಸಲು ಎರಡು ಗಾಲಿಗಳು ಹೇಗೆ ಅತ್ಯಗತ್ಯವೋ, ಹಾಗೆ ಪ್ರೇಮ ಮತ್ತು ಸೇವೆಗಳೆರಡೂ ನಿಮ್ಮಲ್ಲಿ ಮನೆಮಾಡಿರಬೇಕು. ಪ್ರೇಮವಿಲ್ಲದ ಸೇವೆಯು ಯಾಂತ್ರಿಕವಾಗುತ್ತದೆ. ಅವೆರಡನ್ನೂ ಸಮತೋಲನಗೊಳಿಸಿದಾಗ ಮಾತ್ರ ಗಣನೀಯವಾದ ಪ್ರಭಾವ ಬೀರಲು ಸಾಧ್ಯ. ಈ ವಿಚಾರವನ್ನು ನಾನು ನನ್ನ ವಿದ್ಯಾರ್ಥಿಗಳಿಗೆ ಒಂದು ಕಥೆಯ ಮೂಲಕ ವಿವರಿಸಿದ್ದೆ- 'ಪ್ರೇಮಕ್ಕೆ ಕಣ್ಣುಗಳಿವೆ, ಅದು ದಾರಿಯನ್ನು ಸ್ಪಷ್ಟವಾಗಿ ನೋಡಬಲ್ಲದು, ಆದರೆ ಕಾಲುಗಳಿಲ್ಲದ ಕಾರಣ ಅದು ನಡೆಯಲಾರದು (ಕುಂಟ). ಮತ್ತೊಂದೆಡೆ, ಸೇವೆಗೆ ಕಾಲುಗಳಿವೆ, ಅದು ಶರವೇಗದಲ್ಲಿ ನಡೆಯಬಲ್ಲದು, ಆದರೆ ನೋಡಲು ಕಣ್ಣುಗಳಿಲ್ಲ (ಕುರುಡ). ಇವೆರಡೂ ಪ್ರತ್ಯೇಕವಾಗಿದ್ದಾಗ ಗುರಿ ತಲುಪಲು ಸಾಧ್ಯವಿಲ್ಲ. ಆದರೆ, ಪ್ರೇಮವು ಸೇವೆಯ ಹೆಗಲ ಮೇಲೆ ಕುಳಿತಾಗ, ಪ್ರೇಮವು ದಾರಿ ತೋರುತ್ತದೆ ಮತ್ತು ಸೇವೆಯು ಆ ದಾರಿಯಲ್ಲಿ ನಡೆಯುತ್ತದೆ. ಆಗ ಇವೆರಡೂ ಸೇರಿ ಸುಲಭವಾಗಿ ಗುರಿ ಮುಟ್ಟುತ್ತವೆ'. ನಾವು ಭಗವಂತನ ಬಳಿಗೆ ಸಾಗಲು ಹೇಗೆ ಎರಡು ಕಾಲುಗಳನ್ನು ಬಳಸುತ್ತೇವೆಯೋ, ಹಾಗೆಯೇ ಪ್ರೇಮ ಮತ್ತು ಸೇವೆಯೆಂಬ ಎರಡು ಸಾಧನಗಳನ್ನು ಸದಾ ಜೊತೆಯಾಗಿ ಯೋಚಿಸಬೇಕು. ಇಂದೇ ಕಾರ್ಯಪ್ರವೃತ್ತರಾಗಿರಿ.
ಈ ಜಗತ್ತಿನಲ್ಲಿ ಧಾರಾಳವಾದ ಜ್ಞಾನ ಮತ್ತು ಬುದ್ಧಿವಂತಿಕೆಗಳಿವೆ. ಆದರೆ, ಪ್ರತಿಯೊಬ್ಬರೂ ಅದನ್ನು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ಗ್ರಹಿಸಬಲ್ಲರು. ನದಿಯಲ್ಲಿ ಎಷ್ಟೇ ನೀರಿದ್ದರೂ, ಒಂದು ಪಾತ್ರೆಯು ತನ್ನ ಗಾತ್ರಕ್ಕೆ ತಕ್ಕಷ್ಟು ನೀರನ್ನು ಮಾತ್ರ ಸ್ವೀಕರಿಸಬಲ್ಲದು. ಹಾಗೆಯೇ, ಜ್ಞಾನವನ್ನು ಪಡೆಯಲು ನೀವು ಎಷ್ಟು ಸಿದ್ಧರಿರುತ್ತೀರೋ, ಅಷ್ಟನ್ನು ಮಾತ್ರ ನೀವು ಪಡೆಯುತ್ತೀರಿ. ಗೀತೆಯಲ್ಲಿ ಹೇಳಿರುವಂತೆ 'ಶ್ರದ್ಧಾವಾನ್ ಲಭತೇ ಜ್ಞಾನಂ' ಎಂದರೆ ಯಾರಿಗೆ ಶ್ರದ್ಧೆ ಇರುತ್ತದೆಯೋ, ಅವರಿಗೆ ಮಾತ್ರ ಜ್ಞಾನ ಒಲಿಯುತ್ತದೆ. ನೀವು ಕೇಳಿದ್ದನ್ನು ಶ್ರದ್ಧೆಯಿಂದ ಆಲಿಸಿ, ಮನನ ಮಾಡಿ, ಅದರ ಮೇಲೆ ಧ್ಯಾನಿಸಿದರೆ (ನಿಧಿಧ್ಯಾಸನಮ್ ಮಾತ್ರ ಇಂತಹ ಬೋಧನೆಗಳಿಂದ ಪ್ರಯೋಜನ ಸಾಧ್ಯ. ನಾಯಕರಾಗಿ ರೂಪುಗೊಳ್ಳುವ ನೀವು ಇಂಥ ವಿದ್ಯೆಯನ್ನು ಸಾಕಷ್ಟು ಕಲಿಯುವುದಷ್ಟೇ ಅಲ್ಲ, ಇತರರಿಗೂ ತಿಳಿಸಿಹೇಳಬೇಕು.
ಒಬ್ಬ ನಾಯಕನು ತನ್ನ ವರ್ತನೆಯ ಬಗ್ಗೆ ಸದಾ ಎಚ್ಚರದಿಂದ ಇರಬೇಕು. ಆಹಾರ-ವಿಹಾರಗಳನ್ನು ಸುತ್ತಲಿರುವವರು ಗಮನಿಸುತ್ತಿರುತ್ತಾರೆ. ಬೆಳಗಿನ ತಿಂಡಿಯನ್ನು ಹೊಟ್ಟೆ ಬಿರಿಯುವಂತೆ ತಿಂದರೆ ಶ್ರದ್ಧೆಯಿಂದ ಕಲಿಯಲು ಸಾಧ್ಯವಿಲ್ಲ, ನಿದ್ದೆ ಬರುತ್ತದೆ. 'ಮಿತಾಹಾರಿ' (ಕಡಿಮೆ ತಿನ್ನುವುದು, ಹೆಚ್ಚು ಆಲಿಸುವುದು) ಆಗಿರುವುದು ಒಳ್ಳೆಯ ವಿದ್ಯಾರ್ಥಿಯ ಲಕ್ಷಣ. ಮಧ್ಯಾಹ್ನ ಹೆಚ್ಚು ತಿಂದರೂ ತೂಕಡಿಕೆ ಬರುತ್ತದೆ. ಈ ಸಂದರ್ಭದಲ್ಲಿ ಮಹಾಭಾರತದ ಸುಭದ್ರೆ ಮತ್ತು ಅಭಿಮನ್ಯುವಿನ ಕಥೆಯನ್ನು ಗಮನಿಸಿ. ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹವನ್ನು ಭೇದಿಸುವ ರಹಸ್ಯವನ್ನು ಅರ್ಜುನನು ಸುಭದ್ರೆಗೆ ವಿವರಿಸುತ್ತಿದ್ದಾಗ, ಆಕೆ ಅರ್ಧದಲ್ಲಿಯೇ ನಿದ್ರೆಗೆ ಜಾರಿದಳು. ಗರ್ಭದಲ್ಲಿದ್ದ ಅಭಿಮನ್ಯು ಚಕ್ರವ್ಯೂಹ ಪ್ರವೇಶಿಸುವುದನ್ನು ಮಾತ್ರ ಕೇಳಿಸಿಕೊಂಡ. ಮುಂದೆ ಯುದ್ಧರಂಗದಲ್ಲಿ ತಂದೆ ಬಂದು ಕಾಪಾಡುವನೆಂಬ ಭರವಸೆಯಲ್ಲಿ ಚಕ್ರವ್ಯೂಹ ಹೊಕ್ಕ ಅಭಿಮನ್ಯು, ಅರ್ಜುನ ಬರುವುದು ವಿಳಂಬವಾದಾಗ ಮೋಸದಿಂದ ಹತನಾದ. ಅಂತೆಯೇ, ಉಪನ್ಯಾಸವನ್ನು ಅರ್ಧಂಬರ್ಧ ಕೇಳಿ, ಸತ್ಯವನ್ನು ಅರೆಬರೆಯಾಗಿ ಅರ್ಥ ಮಾಡಿಕೊಂಡರೆ ತೊಂದರೆಗಳು ಸಹಜ. ಆದ್ದರಿಂದ ಏಕಾಗ್ರತೆಯಿಂದ ಆಲಿಸಿ, ಟಿಪ್ಪಣಿ ಮಾಡಿಕೊಳ್ಳಿ; ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕೆಂಬ ಬಗ್ಗೆ ಯೋಚಿಸಿ. ಇಂಥ ಎಚ್ಚರಿಕೆಗಳನ್ನು ತೆಗೆದುಕೊಂಡರೆ ಮುಂದಿನ ತಲೆಮಾರಿನ ಅಭಿಮನ್ಯುಗಳು ಯಶಸ್ವಿಯಾಗಿ ಚಕ್ರವ್ಯೂಹವನ್ನು ಭೇದಿಸಬಲ್ಲರು.
ತ್ಯಾಗವು ನಾಯಕತ್ವ ಸ್ಥಾನದಲ್ಲಿರುವವರಿಗೆ ಸಹಜವಾಗಿ ಮೈಗೂಡಿರಬೇಕಾದ, ಸ್ವಭಾವದ ಭಾಗವೇ ಅಗಿರಬೇಕಾದ ಮೌಲ್ಯ. ನಮ್ಮ ಪ್ರಾಚೀನ ಭಾರತೀಯ ಸಂಸ್ಕೃತಿ ಎಲ್ಲ ಧರ್ಮಗಳೊಂದಿಗೆ ಸೇರಿ ಯಾವಾಗಲೂ ತ್ಯಾಗದ ಅತ್ಯುನ್ನತ ಮೌಲ್ಯವನ್ನೇ ಪ್ರತಿಪಾದಿಸುತ್ತ ಬಂದಿದೆ. ಸುತ್ತಲಿನ ಪ್ರಕೃತಿಯನ್ನು ಗಮನಿಸಿದರೆ ಇಡೀ ಸೃಷ್ಟಿಯೇ ತ್ಯಾಗದಿಂದ ರೂಪಿತವಾಗಿರುವುದು ಅರ್ಥವಾಗುತ್ತದೆ.
ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಮ್ ||
(ಮರಗಳು ಪರರ ಪ್ರಯೋಜನಕ್ಕಾಗಿಯೇ ಹಣ್ಣು ಬಿಡುತ್ತವೆ, ನದಿಗಳು ಪರರ ಬಾಯಾರಿಕೆ ಹಿಂಗಿಸಲೇ ಹರಿಯುತ್ತವೆ, ಹಸುಗಳು ಎಲ್ಲರಿಗಾಗಿ ಹಾಲು ಕೊಡುತ್ತವೆ. ಅದೇ ರೀತಿ ಈ ಮಾನವ ಶರೀರವಿರುವುದೇ ಪರರ ಸೇವೆಗಾಗಿ).
ಶಾಸ್ತ್ರಗಳು ಸಾರುವಂತೆ 'ಜಂತೂನಾಂ ನರಜನ್ಮ ದುರ್ಲಭಮ್- 84 ಲಕ್ಷ ಜೀವಿಗಳಲ್ಲಿ ಮಾನವ ಜನ್ಮ ಸಿಗುವುದು ದೈವೀ ಅನುಗ್ರಹದಿಂದ ಮಾತ್ರ. ಈ ಮನುಷ್ಯ ಜನ್ಮದಲ್ಲಿ ಯೌವನಾವಸ್ಥೆ ಅತ್ಯಂತ ರಚನಾತ್ಮಕ, ಅಮೂಲ್ಯ ಹಂತ. ಈ ವಯಸ್ಸಿನಲ್ಲಿ ನಿಮ್ಮ ಇಂದ್ರಿಯಗಳು ಕ್ರಿಯಾಶೀಲವಾಗಿರುತ್ತವೆ, ಮನಸ್ಸು ಮೊನಚಾಗಿರುತ್ತದೆ, ಬುದ್ಧಿಶಕ್ತಿ ಪರಿಶುದ್ಧವಾಗಿರುತ್ತದೆ, ಹೃದಯ ಪ್ರೇಮ-ಅನುಕಂಪಗಳಿಂದ ತುಂಬಿರುತ್ತದೆ. ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳಲು ಇದಕ್ಕಿಂತ ಸೂಕ್ತ ಸಮಯ ಬೇರೊಂದಿಲ್ಲ. ಋತುಮಾನ ಮೀರಿ ಮಳೆಗಾಲ ಕಳೆದ ಮೇಲೆ ಮಣ್ಣು ಎಷ್ಟೇ ಹದವಾಗಿದ್ದರೂ ಬೆಳೆ ಬಾರದು. ಹಾಗೆಯೇ ಯೌವನದಲ್ಲಿ ನೀವು ಏನನ್ನು ಬಿತ್ತುತ್ತೀರೋ, ಜೀವಿತಾವಧಿಯ ಕೊನೆಗೆ ಅದೇ ಫಲ ಸಿಗುತ್ತದೆ. ಮಾವಿನ ಬೀಜ ಬಿತ್ತಿದರೆ ಮಾವು, ಲಿಂಬೆ ಬೀಜ ಬಿತ್ತಿದರೆ ಲಿಂಬೆಯೆ ಸಿಗುವುದು. ಆದ್ದರಿಂದ ಯೌವನದಲ್ಲೇ ಒಳ್ಳೆಯತನದ ಬೀಜಗಳನ್ನು ಬಿತ್ತಿ, ನಿಮ್ಮ ಜೀವನವನ್ನು ಸಂತೋಷದ ಫಸಲಿನಿಂದ ತುಂಬಿಸಿಕೊಳ್ಳಿ. ನಿಜವಾದ ಅರ್ಥದಲ್ಲಿ ನಾಯಕರಾಗಿ ಬೆಳೆಯಬೇಕೆನ್ನುವ ಸಂಕಲ್ಪವನ್ನು ಯೌವನದಲ್ಲಿಯೇ ಮಾಡಿ.
ಒಮ್ಮೆ ಯೌವನದ ಕಿಟಕಿ ಮುಚ್ಚಿತೆಂದರೆ, ಆಮೇಲೆ ಎಷ್ಟೇ ಕಷ್ಟಪಟ್ಟರೂ ಫಲಿತಾಂಶ ಸೀಮಿತವಾಗಿರುತ್ತದೆ. ಕಾಲದ ಮಹತ್ವವನ್ನರಿತೇ ನಮ್ಮ ಸಂಸ್ಕೃತಿಯಲ್ಲಿ ಕಾಲಕಾಲಾಯ ನಮಃ, ಕಾಲದಮನಾಯ ನಮಃ, ಕಾಲಾಯ ನಮಃ, ಕಾಲಾತೀತಾಯ ನಮಃ, ಕಾಲಸ್ವರೂಪಾಯ ನಮಃ ಎಂದು ಕಾಲವನ್ನು ಪೂಜಿಸಲಾಗುತ್ತದೆ. ಆದ್ದರಿಂದ ಜೀವನದ ಈ ಮಹತ್ವದ ಹಂತವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಿ.
ಕೇವಲ ತಿನ್ನುವುದು, ನಿದ್ರಿಸುವುದು, ಭವಿಷ್ಯದ ಬಗ್ಗೆ ಭಯಪಡುವುದು ಮತ್ತು ಸಂತಾನ ಹೊಂದುವುದು ಪ್ರಾಣಿಗಳಿಗೂ ಮನುಷ್ಯರಿಗೂ ಸಾಮಾನ್ಯ. ಇಷ್ಟಕ್ಕೇ ಸೀಮಿತ ವಾದರೆ ನೀವು ಪ್ರಾಣಿಗಳಿಗಿಂತ ಕೀಳಾಗುತ್ತೀರಿ. ಪ್ರಾಣಿಯಾಗಿ ಹುಟ್ಟಿಯೂ ದೈವತ್ವಕ್ಕೇರಿದ ಹನುಮಾನನು ನಮಗೆಲ್ಲ ಆದರ್ಶ. ನೀವೇ ನಿಮ್ಮ ಸ್ನೇಹಿತ, ನೀವೇ ನಿಮ್ಮ ಶತ್ರು. ಶಾಸ್ತ್ರಗಳು ಸಾರುವ ತ್ಯಾಗದ ಮೂಲಕ ಒಳ್ಳೆಯವರಾಗಲು ನಿಮಗೆ ನೀವೇ ನೆರವಾಗಿ.
ಸಾಧಕ ಐಸ್ಯಾಕ್ ಟೈಗ್ರೆಟ್ ಹೇಳುವಂತೆ, 'ಮುಂದಾಳುವಾಗಲು ಸೇವೆ ಕೈಗೊಳ್ಳಿ'. ಇದು ಕೇವಲ ಹೇಳಿಕೆಯಲ್ಲ, ಅಗಾಧ ಶಕ್ತಿಯುಳ್ಳ ನುಡಿ. ಸೇವೆ ಮಾಡದ ಜೀವನ ಅಪೂರ್ಣ. ನಾನೇಕೆ ಓದಬೇಕು? ನಾನೇಕೆ ದುಡ್ಡು ಗಳಿಸಬೇಕು? ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ. ನನ್ನ ವಿದ್ಯೆ, ಜ್ಞಾನ, ಕೌಶಲ ಮತ್ತು ನಾನು ಗಳಿಸಿದ ಸಂಪತ್ತು ಇತರರ ಸೇವೆಗೆ ಬಳಕೆಯಾಗಬೇಕು. ನನ್ನ ಬಳಿ ಅಗತ್ಯಕ್ಕಿಂತ ಹೆಚ್ಚಿರುವುದು ಹಸಿದವರಿಗೆ ಹಂಚಿಕೆಯಾಗಬೇಕು ಎಂಬ ನಿರಂತರ ಯೋಚನೆ ನಿಮ್ಮದಾಗಿರಲಿ. ನಿಮ್ಮ ಅಗತ್ಯಕ್ಕಿಂತ ಹೆಚ್ಚು ನಿಮ್ಮಲ್ಲಿದ್ದರೆ, ಅದು ಸದಾ ಪರರ ಸೇವೆಗಾಗಿ ಮೀಸಲಾಗಿರಲಿ.
-(ಲೇಖಕರು ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ಗುರುಗಳು)

