Dailyhunt Logo
  • Light mode
    Follow system
    Dark mode
    • Play Story
    • App Story
ನೀರಿನಾಳದಲ್ಲಿ ವಿಲ್​ ಯೂ ಮ್ಯಾರಿ ಮಿ? ಎಂದ ಪ್ರಿಯತಮ

ನೀರಿನಾಳದಲ್ಲಿ ವಿಲ್​ ಯೂ ಮ್ಯಾರಿ ಮಿ? ಎಂದ ಪ್ರಿಯತಮ

ಬ್ರಿಟನ್​: ಪ್ರೀತಿ ಎಂಬುದು ಸುಂದರ, ಮಧುರ ಅನುಭವ. ಇದನ್ನು ವ್ಯಕ್ತಪಡಿಸಲು ಪ್ರತಿಯೊಬ್ಬರೂ ಒಂದಲ್ಲ ಒಂದು ವಿಭಿನ್ನ ದಾರಿಯನ್ನು ಹುಡುಕುತ್ತಾರೆ. ಕೆಲವರು ಕ್ಯಾಂಡಲ್ ಲೈಟ್ ಡಿನ್ನರ್ ಎಂದರೆ, ಇನ್ನು ಕೆಲವರು ಮಂಡಿಯೂರಿ ಉಂಗುರ ತೊಡಿಸಿ ತಮ್ಮ ಪ್ರೇಮ ನಿವೇದನೆಯನ್ನು ಪೂರೈಸುತ್ತಾರೆ.

ಆದರೆ, ಸೋಷಿಯಲ್​ ಮೀಡಿಯಾನಲ್ಲಿ ಹರಿಹಾಡುತ್ತಿರುವ ​ ಬ್ರಿಟನ್​ ಮೂಲದ ಜೋಡಿಗಳ ಪ್ರೇಮ ನಿವೇದನೆ ಮಾಡಿಕೊಂಡ ರೀತಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ನೀರಿನಾಳದಲ್ಲಿ ಪ್ರಪೋಸ್​!

ಬ್ರಿಟನ್‌ನ ಬಕಿಂಗ್‌ಹ್ಯಾಮ್‌ಶೈರ್‌ನ ವೆಂಡೋವರ್‌ನವರಾದ ಜೇಮ್ಸ್ ವಾಲ್ಷ್ ಮತ್ತು ಅವನ ಗೆಳತಿ ಪೈಜ್ ಕುಕ್ ಇತ್ತೀಚೆಗೆ ಪ್ರಸಿದ್ಧ ಸ್ಕೆಗ್‌ನೆಸ್ ಅಕ್ವೇರಿಯಂಗೆ (Skegness Aquarium) ಭೇಟಿ ನೀಡಿದ್ದರು. ಈ ಜೋಡಿ ಸೆಪ್ಟೆಂಬರ್ 10 ರಂದು ಅಕ್ವೇರಿಯಂನಲ್ಲಿ ಆಯೋಜಿಸಲಾಗಿದ್ದ 'ಶಾರ್ಕ್‌ಗಳೊಂದಿಗೆ ಡೈವಿಂಗ್' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕುಕ್ ಅವರಿಗೆ ಶಾರ್ಕ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ತಮ್ಮ ನೆಚ್ಚಿನ ಪ್ರಾಣಿಗಳ ಜೊತೆ ನೀರಿನ ಅಡಿಯಲ್ಲಿ ಈಜಾಡುವುದು ಕುಕ್ ಅವರ ಕನಸಾಗಿತ್ತು. ಆದರೆ, ಈ ಡೈವಿಂಗ್ ಹಿಂದೆ ಪ್ರೇಮಿ ಜೇಮ್ಸ್ ವಾಲ್ಷ್ ಮತ್ತೊಂದು ದೊಡ್ಡ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದರು ಎಂಬುದು ಆಕೆಗೆ ಕೊನೆವರೆಗೂ ಗೊತ್ತಿರಲಿಲ್ಲ.

ಶಾರ್ಕ್‌ಗಳ ನಡುವೆ ರೋಚಕ ಪ್ರಪೋಸಲ್!

ಜೇಮ್ಸ್, ಎಲ್ಲರಂತೆ ಕೇವಲ ಡೈವಿಂಗ್ ಮುಗಿಸಿ ಹೊರಬರಲು ಬಯಸಿರಲಿಲ್ಲ. ಗೆಳತಿಯ ಅಚ್ಚುಮೆಚ್ಚಿನ ಪ್ರಾಣಿಗಳ ನಡುವೆಯೇ ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳಬೇಕು ಎನ್ನುವುದು ಅವರ ಯೋಜನೆಯಾಗಿತ್ತು. ನೀರಿನೊಳಗೆ ಇಬ್ಬರು ಇಳಿದ ನಂತರ, ಅಕ್ವೇರಿಯಂ ಸಿಬ್ಬಂದಿಯೊಬ್ಬರು "ನನ್ನನ್ನು ಮದುವೆಯಾಗುತ್ತೀರಾ?" (Will you marry me?) ಎಂಬ ಫಲಕವನ್ನು ಜೇಮ್ಸ್ ಕೈಗೆ ತಲುಪಿಸಿದ್ದಾರೆ.

ನೀರಿನ ಅಡಿಯಲ್ಲಿ ಅಚಾನಕ್ಕಾಗಿ ಈ ಫಲಕವನ್ನು ನೋಡಿದ ಕುಕ್ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಆಶ್ಚರ್ಯದ ನಡುವಿನಲ್ಲೇ ಅಂತಿಮವಾಗಿ ತಮ್ಮ ಒಪ್ಪಿಗೆಯನ್ನು ಸೂಚಿಸುತ್ತಾ 'ಸರಿ' ಎಂದು ಸನ್ನೆ ಮಾಡಿದರು. ತಕ್ಷಣವೇ ಇಬ್ಬರೂ ನೀರಿನ ಅಡಿಯಲ್ಲಿಯೇ ಪರಸ್ಪರ ಅಪ್ಪಿಕೊಂಡು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ನೀರಲ್ಲಿದ್ದೇನೆ ಎಂಬುದನ್ನೇ ಮರೆತುಬಿಟ್ಟಿದ್ದೆ

ಈ ಅನಿರೀಕ್ಷಿತ ಪ್ರಸ್ತಾಪದ ಬಗ್ಗೆ ಮಾತನಾಡಿದ ಪೈಜ್ ಕುಕ್, ಇದು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಕ್ಷಣ. ಶಾರ್ಕ್‌ಗಳೊಂದಿಗೆ ಈಜುವುದು ನನ್ನ ಕನಸಾಗಿತ್ತು. ಜೇಮ್ಸ್ ಈ ರೀತಿ ಅಚ್ಚರಿ ನೀಡುತ್ತಾರೆಂದು ನಾನು ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಆ ಕ್ಷಣದಲ್ಲಿ ನಾನು ನೀರಿನ ಟ್ಯಾಂಕ್‌ನಲ್ಲಿದ್ದೇನೆ ಎಂಬುದನ್ನೇ ಸಂಪೂರ್ಣವಾಗಿ ಮರೆತುಹೋಗಿದ್ದೆ, ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.

ಜೇಮ್ಸ್ ವಾಲ್ಷ್ ಮಾತನಾಡಿ, ಶಾರ್ಕ್‌ ಅವಳ ನೆಚ್ಚಿನ ಪ್ರಾಣಿ. ಹಾಗಾಗಿ ಅವಳ ನೆಚ್ಚಿನ ಜಾಗದಲ್ಲೇ, ಅವಳ ಇಷ್ಟದ ಪ್ರಾಣಿಗಳ ನಡುವೆ ಪ್ರಸ್ತಾಪಿಸುವುದು ವಿಶಿಷ್ಟವಾಗಿರುತ್ತದೆ ಎಂದುಕೊಂಡೆ. ಅಕ್ವೇರಿಯಂ ಸಿಬ್ಬಂದಿ ಕೂಡ ನನ್ನ ಈ ಯೋಜನೆಗೆ ಸಾಥ್ ನೀಡಿದರು, ಎಂದು ಧನ್ಯವಾದ ತಿಳಿಸಿದ್ದಾರೆ, (ಏಜೆನ್ಸೀಸ್​).

Dailyhunt
Disclaimer: This content has not been generated, created or edited by Dailyhunt. Publisher: Vijayvani