ಬೆಂಗಳೂರು: ಜಿಕೆವಿಕೆ ಆವರಣದ ಗಣಪತಿ ದೇವಸ್ಥಾನ ಸಮೀಪದ ಗುಂಡು ತೋಪಿನಲ್ಲಿ ವಿಭಿನ್ನವಾಗಿ ಆಯೋಜಿಸಿದ್ದ ಈ ತಿಂಗಳ 'ರೈತ ಸಂತೆ' ನೋಡುಗರ ಗಮನ ಸೆಳೆಯಿತು. ನೇರಳೆ ಜೂಸ್ ಶಾಟ್ಸ್, ಸ್ವೀಟ್ ಕಾರ್ನ್ ಸುಲಿಯುವ ಯಂತ್ರ, ಪರಿಸರ ಸ್ನೇಹಿ ಆರ್ಯುವೇದಿಕ್ ಹೆರ್ ಡೈ, ಬೆಟ್ಟ ನೆಲ್ಲಿಕಾಯಿ, ಮಾವು, ಹಲಸು, ಮಳ್ಳು ಬದನೆಕಾಯಿ, ನಾಟಿ ಸೌತೆಕಾಯಿ ಹಾಗೂ ಇತರೆ ಉತ್ಪನ್ನಗಳು ಗ್ರಾಹಕರ ಮನಸ್ಸನ್ನು ಆಕರ್ಷಿಸಿದವು.
ನೇರಳೆಯಿಂದ ತಯಾರಿಸಿದ ಜೂಸ್, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿದ್ದು, ನೈಸರ್ಗಿಕ ರುಚಿ ಮತ್ತು ತಾಜಾತನದಿಂದ ಜನರನ್ನು ಆಕರ್ಷಿಸಿತು. ಸಿಹಿ ಜೋಳದ ಕಾಳನ್ನು ವೇಗವಾಗಿ ಮತ್ತು ಸಲಭವಾಗಿ ಬೇರ್ಪಡಿಸುವ ಸ್ವೀಟ್ ಕಾರ್ನ್ ಸುಲಿಯುವ ಯಂತ್ರವು ರೈತರಿಗೆ ಸಮಯ ಮತ್ತು ಶ್ರಮ ಉಳಿಸಲಿದೆ. ಇದರ ಕಾರ್ಯವೈಖರಿ ಬಗ್ಗೆ ಆಸಕ್ತಿಯಿಂದ ಸಾರ್ವಜನಿಕರು ವೀಕ್ಷಿಸಿದರು. ವಿವಿಧ ಸಿರಿಧಾನ್ಯಗಳಿಂದ, ಔಷಧ ಗಿಡಗಳಿಂದ ತಯಾರಿಸಲಾದ ಮಿಲೆಟ್ಸ್ ಮಿಶ್ರಣದ ರುಚಿಯನ್ನು ಮಕ್ಕಳು ಮತ್ತು ಹಿರಿಯರು ಸವಿದರು.
ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಅಲಂಕಾರಿಕ ಗಿಡಗಳು, ಜೈವಿಕ ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು, ಎರೆಹುಳು ಗೊಬ್ಬರ, ಜೈವಿಕ ಕೀಟನಾಶಕಗಳು, ಕರಕುಶಲ ವಸ್ಥುಗಳು, ಅಡಿಕೆ ಉತ್ಪನ್ನಗಳು, ರೇಷ್ಮೆ ಕೃಷಿಯ ಉಪ ಉತ್ಪನ್ನಗಳು, ಜೇನು ಕೃಷಿ ನೋಡಿ ಜನರು ಖುಷಿಪಟ್ಟರು. ಎತ್ತಿನ ಬಂಡಿ ಸವಾರಿ, ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿತ್ತು. ಎತ್ತಿನಗಾಡಿ ಸವಾರಿ ನಗರದ ಮಕ್ಕಳನ್ನು ಆಕರ್ಷಿಸಿತು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಕೃಷಿ ಪರಿಸರದೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಕ್ಕೆ 150ಕ್ಕೂ ಹೆಚ್ಚು ನಗರವಾಸಿಗಳು ಭಾಗವಹಿಸಿ 6 ಕಿ.ಮೀ. ನಡಿಗೆಯಲ್ಲಿ ಪಾಲ್ಗೊಂಡು ಕೃಷಿ ಸಂಬಂಧಿತ ವಿಷಯಗಳ ಸಮಗ್ರ ಮಾಹಿತಿ ಪಡೆದುಕೊಂಡರು. ಈ ತಂಡದಲ್ಲಿ ವೈದ್ಯರು, ಐಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳು, ಮಕ್ಕಳು, ಯುವಕರು, ಗೃಹಿಣಿಯರು, ನಿವೃತ್ತಿ ಹೊಂದಿದ ಹಿರಿಯರು ಇದ್ದರು. ಕೃಷಿ ವಿವಿ ಕುಲಪತಿ ಡಾ.ಎಸ್.ವಿ. ಸುರೇಶ, ವಿಸ್ತರಣಾ ನಿರ್ದೇಶಕ ಡಾ.ವೈ.ಎನ್. ಶಿವಲಿಂಗಯ್ಯ, ಸಂಶೋಧನಾ ನಿರ್ದೇಶಕರಾದ ಡಾ. ಮುಡಲಗಿರಿಯಪ್ಪ ರೈತ ಸಂತೆಗೆ ಭೇಟಿ ನೀಡಿದರು.
ಇನ್ನಷ್ಟು ಓದಿ

