Dailyhunt Logo
  • Light mode
    Follow system
    Dark mode
    • Play Story
    • App Story
ನೋಯ್ಡಾ ಡಿಎಲ್‌ಎಫ್ ಮಾಲ್‌ನಲ್ಲಿ ಕಳ್ಳತನದ ಆರೋಪದಡಿ ಸಿಕ್ಕಿಬಿದ್ದ ಮಹಿಳೆ

ನೋಯ್ಡಾ ಡಿಎಲ್‌ಎಫ್ ಮಾಲ್‌ನಲ್ಲಿ ಕಳ್ಳತನದ ಆರೋಪದಡಿ ಸಿಕ್ಕಿಬಿದ್ದ ಮಹಿಳೆ

ನೋಯ್ಡಾ: ನೋಯ್ಡಾದ ಸೆಕ್ಟರ್ 18 ರಲ್ಲಿರುವ ಪ್ರತಿಷ್ಠಿತ 'ಡಿಎಲ್‌ಎಫ್ ಮಾಲ್ ಆಫ್ ಇಂಡಿಯಾ'ದ (DLF Mall of India) ಸೂಪರ್‌ಮಾರ್ಕೆಟ್‌ನಲ್ಲಿ ನಡೆದಿರುವ ಕಳ್ಳತನದ ಘಟನೆ ಈಗ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ. ನೋಡಲು ಶ್ರೀಮಂತ ಕುಟುಂಬದ ಮಹಿಳೆಯಂತೆ ಕಾಣುವ ಯುವತಿಯೊಬ್ಬಳು ತುಪ್ಪ ಮತ್ತು ಅಡುಗೆ ಎಣ್ಣೆ ಕಳ್ಳತನ ಮಾಡಲು ಹೋಗಿ ತಗಲಾಕೊಂಡಿರುವ ಘಟನೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಪಿಂಗ್ ನೆಪದಲ್ಲಿ ನಡೆದಿದ್ದೇನು?

ವರದಿಗಳ ಪ್ರಕಾರ, ಭಾನುವಾರ (ಅ.4) ಸಂಜೆ ಈ ಮಹಿಳೆ ತನ್ನ ಪತಿಯೊಂದಿಗೆ ಮಾಲ್‌ನಲ್ಲಿರುವ ದಿನಸಿ ಅಂಗಡಿಗೆ ಶಾಪಿಂಗ್ ಮಾಡಲು ಬಂದಿದ್ದಾಳೆ. ಇಬ್ಬರೂ ಒಟ್ಟಿಗೆ ಸುತ್ತಾಡಿ ಕೆಲವು ಸಾಮಗ್ರಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ನಂತರ ಗಂಡ ಬಿಲ್ಲಿಂಗ್ ಕೌಂಟರ್‌ನ ಸಾಲಿನಲ್ಲಿ ನಿಂತರೆ, ಈಕೆ ಕೈಯಲ್ಲಿದ್ದ ಬ್ಯಾಗ್ ಹಿಡಿದುಕೊಂಡು ಮೆಲ್ಲನೆ ಎಕ್ಸಿಟ್ ಗೇಟ್ ಕಡೆ ಹೆಜ್ಜೆ ಹಾಕಿದ್ದಾಳೆ.

ಮಹಿಳೆಯ ಈ ಅಸಹಜ ನಡುವಳಿಕೆಯನ್ನು ಗಮನಿಸುತ್ತಿದ್ದ ಭದ್ರತಾ ಸಿಬ್ಬಂದಿಗೆ ಸಂಶಯ ಬಂದಿದೆ. ಎಕ್ಸಿಟ್ ಬಳಿ ಬ್ಯಾಗ್ ಚೆಕ್ ಮಾಡಲು ಕೇಳಿದಾಗ ಆಕೆ ತಪಾಸಣೆಗೆ ನಿರಾಕರಿಸಿ, ಸಿಬ್ಬಂದಿ ಮೇಲೆಯೇ ಗರಂ ಆಗಿ ವಾಗ್ವಾದಕ್ಕಿಳಿದಿದ್ದಾರೆ. ಆದರೆ ಭದ್ರತಾ ಸಿಬ್ಬಂದಿ ಬಿಡದೇ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಬಟಾಬಯಲಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳಾಟ!

ಕ್ಯಾಮೆರಾದಲ್ಲಿ ಮಹಿಳೆ 1 ಕೆಜಿ ತುಪ್ಪದ ಬಾಕ್ಸ್ ಹಾಗೂ ರಿಫೈನ್ಡ್ ಅಡುಗೆ ಎಣ್ಣೆಯ ಬಾಟಲಿಯನ್ನು ಯಾರಿಗೂ ಕಾಣದಂತೆ ತನ್ನ ಬ್ಯಾಗ್‌ನೊಳಗೆ ತೂರಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ತಕ್ಷಣವೇ ಮಹಿಳಾ ಸೆಕ್ಯುರಿಟಿ ಗಾರ್ಡ್‌ಗಳು ಆಕೆಯನ್ನು ವಶಕ್ಕೆ ಪಡೆದು ಅಂಗಡಿಯೊಳಗೆ ಕರೆದೊಯ್ದಿದ್ದಾರೆ.

ಅಷ್ಟರಲ್ಲಿ ಬಿಲ್ಲಿಂಗ್ ಕೌಂಟರ್‌ನಲ್ಲಿದ್ದ ಗಂಡನನ್ನೂ ಸ್ಥಳಕ್ಕೆ ಕರೆಯಲಾಗಿದೆ. ಎಲ್ಲ ಗ್ರಾಹಕರ ಸಮ್ಮುಖದಲ್ಲೇ ಆಕೆಯ ಬ್ಯಾಗ್ ತಪಾಸಣೆ ಮಾಡಿದಾಗ ಕದ್ದೊಯ್ಯುತ್ತಿದ್ದ ತುಪ್ಪ ಮತ್ತು ಎಣ್ಣೆ ಹೊರಬಿದ್ದಿದೆ. ನೂರಾರು ಜನರ ಮುಂದೆ ಸಿಬ್ಬಂದಿ ಆ ದಂಪತಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.

ಒಂದು ತಿಂಗಳಿಂದ ಇದೇ ಕೆಲಸ?

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಆಗಿದ್ದು, ಸಕ್ಕತ್​ ವೈರಲ್​ ಆಗುತ್ತಿದೆ. ವಿಡಿಯೋದಲ್ಲಿ ಮಹಿಳೆ ಮುಖ ಕಾಣಿಸದಂತೆ ಮೊಬೈಲ್ ಅಡ್ಡ ಹಿಡಿದುಕೊಂಡು ನಡೆಯುತ್ತಿರುವುದು ಮತ್ತು ಸಿಬ್ಬಂದಿ ಆಕೆಯನ್ನು ತರಾಟೆಗೆ ತೆಗೆದುಕೊಳ್ಳುವುದು ಕಾಣಿಸುತ್ತದೆ.

ಅಂಗಡಿ ಉದ್ಯೋಗಿಯೊಬ್ಬರು ಆರೋಪಿಸಿರುವ ಪ್ರಕಾರ, ಈ ಮಹಿಳೆ ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಈ ಸ್ಟೋರ್‌ಗೆ ಬರುತ್ತಿದ್ದರು. ಈ ಹಿಂದೆಯೂ ಸಾವಿರಾರು ರೂಪಾಯಿ ಬೆಲೆಬಾಳುವ ತುಪ್ಪ ಹಾಗೂ ದಿನಸಿ ವಸ್ತುಗಳು ನಾಪತ್ತೆಯಾಗಿದ್ದವು. ಹಿಂದಿನ ಸಿಸಿಟಿವಿ ಫೂಟೇಜ್ ಜಾಲಾಡಿದಾಗಲೂ ಈಕೆಯ ಮೇಲೆ ಸಂಶಯ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಆಕೆಯ ಮೇಲೆ ನಿಗಾ ಇಟ್ಟಿದ್ದರು ಎನ್ನಲಾಗಿದೆ.

ಇದು ಶೋಕಿನಾ ಅಥವಾ ಕಾಯಿಲೆನಾ?

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ ಜನರು ದಂಗಾಗಿದ್ದಾರೆ. "ಉತ್ತಮ ಬಟ್ಟೆ ಧರಿಸಿ, ಐಷಾರಾಮಿ ಮಾಲ್‌ಗೆ ಬರುವ ಇಂಥವರಿಗೆ ದಿನಸಿ ಕೊಳ್ಳಲು ಹಣವಿರಲ್ವಾ?" ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನೂ ಕೆಲವರು ಇದು ದುಡ್ಡಿನ ಕೊರತೆಯಲ್ಲ, ಇದೊಂದು ಮಾನಸಿಕ ಸಮಸ್ಯೆ ಎನ್ನುತ್ತಿದ್ದಾರೆ. ವೈದ್ಯಕೀಯ ಲೋಕದಲ್ಲಿ ಇದಕ್ಕೆ 'ಕ್ಲೆಪ್ಟೊಮೇನಿಯಾ' (Kleptomania) ಎಂದು ಕರೆಯಲಾಗುತ್ತದೆ. ಅಂದರೆ, ಅಗತ್ಯವಿಲ್ಲದಿದ್ದರೂ ಅಥವಾ ಕೊಳ್ಳುವ ಶಕ್ತಿಯಿದ್ದರೂ ಏನನ್ನಾದರೂ ಕದಿಯಲೇಬೇಕೆಂಬ ತೀವ್ರ ಮಾನಸಿಕ ಚಪಲ ಅಥವಾ ನಿಯಂತ್ರಿಸಲಾಗದ ಬಯಕೆ ಇದಾಗಿರಬಹುದು ಎಂದು ಹಲವರು ವಿಶ್ಲೇಷಿಸಿದ್ದಾರೆ.

ಆಮೇಲೆ ಏನಾಯ್ತು?

ಅಂಗಡಿಯೊಳಗೆ ನಡೆದ ಈ ಹೈಡ್ರಾಮಾ ಬಳಿಕ, ಕದ್ದೊಯ್ಯಲು ಯತ್ನಿಸಿದ ವಸ್ತುಗಳಿಗೆ ಆಕೆ ಸಂಪೂರ್ಣ ಹಣ ಪಾವತಿಸಿದ್ದಾರೆ. ನಂತರ ಎರಡೂ ಕಡೆಯವರು ಮಾತುಕತೆ ನಡೆಸಿ ವಿಷಯವನ್ನು ಅಲ್ಲಿಗೇ ಮುಕ್ತಾಯಗೊಳಿಸಿದರು ಎಂದು ತಿಳಿದುಬಂದಿದೆ. ಆಕೆಯ ವಿರುದ್ಧ ಪೊಲೀಸರಿಗೆ ಅಧಿಕೃತ ದೂರು ದಾಖಲಾಗಿದೆಯೇ ಅಥವಾ ಹಿಂದಿನ ನಷ್ಟಕ್ಕೆ ದಂಡ ವಿಧಿಸಲಾಗಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ, (ಏಜೆನ್ಸೀಸ್).

Dailyhunt
Disclaimer: This content has not been generated, created or edited by Dailyhunt. Publisher: Vijayvani