Dailyhunt Logo
  • Light mode
    Follow system
    Dark mode
    • Play Story
    • App Story
ಪಾಕಿಸ್ತಾನದಲ್ಲಿ ಭೀಕರ ಆತ್ಮಾಹುತಿ ದಾಳಿ, ಪೊಲೀಸ್ ಚೆಕ್‌ಪೋಸ್ಟ್ ಧ್ವಂಸ; 11 ಸಾವು!

ಪಾಕಿಸ್ತಾನದಲ್ಲಿ ಭೀಕರ ಆತ್ಮಾಹುತಿ ದಾಳಿ, ಪೊಲೀಸ್ ಚೆಕ್‌ಪೋಸ್ಟ್ ಧ್ವಂಸ; 11 ಸಾವು!

ಡೇರಾ ಇಸ್ಮಾಯಿಲ್: ಪಾಕಿಸ್ತಾನದ ವಾಯುವ್ಯ ಭಾಗದಲ್ಲಿರುವ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಆತ್ಮಾಹುತಿ ಬಾಂಬ್​ ಸ್ಪೋಟ ಸಂಭವಿಸಿದ ಹಿನ್ನಲೆ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಪೊಲೀಸ್ ತಪಾಸಣಾ ಕೇಂದ್ರವೊಂದನ್ನು ಗುರಿಯಾಗಿಸಿ ಉಗ್ರರು ಈ ಕೃತ್ಯವನ್ನು ಎಸಗಿದ್ದಾರೆಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ವಾಹನ ಡಿಕ್ಕಿ ಹೊಡೆಸಿ ಸ್ಫೋಟ!

ವರದಿಯ ಪ್ರಕಾರ, ಡೇರಾ ಇಸ್ಮಾಯಿಲ್ ಖಾನ್ ನಗರದ ಪೊಲೀಸ್ ತಪಾಸಣಾ ಕೇಂದ್ರದ ಮೇಲೆ ಆತ್ಮಹತ್ಯಾ ಬಾಂಬರ್ ಸ್ಫೋಟಕಗಳನ್ನು ತುಂಬಿದ ವಾಹನವನ್ನು ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ್ದಾನೆ. ಸ್ಫೋಟದ ತೀವ್ರತೆಗೆ ತಪಾಸಣಾ ಕೇಂದ್ರ ಸಂಪೂರ್ಣ ಧ್ವಂಸವಾಗಿದೆ ಎನ್ನಲಾಗುತ್ತಿದೆ.

ಮೃತಪಟ್ಟವರು ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಭದ್ರತಾ ಸಿಬ್ಬಂದಿ ಹಾಗೂ ಸಾರ್ವಜನಿಕರಾಗಿದ್ದಾರೆಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಸಫ್ದರ್ ಬಲೋಚ್ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆಯ ಬೆನ್ನಲ್ಲೇ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೊಣೆ ಹೊತ್ತ ಟಿಟಿಪಿ (TTP)

ಈ ಭಯೋತ್ಪಾದಕ ಕೃತ್ಯದ ಹೊಣೆಯನ್ನು 'ತೆಹ್ರೀಕ್-ಎ-ತಾಲೀಬಾನ್ ಪಾಕಿಸ್ತಾನ್' (TTP) ಎಂಬ ಉಗ್ರ ಸಂಘಟನೆ ಅಧಿಕೃತ ಹೇಳಿಕೆ ಮೂಲಕ ಒಪ್ಪಿಕೊಂಡಿದೆ. ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಡೇರಾ ಇಸ್ಮಾಯಿಲ್ ಖಾನ್ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಉಗ್ರರ ಹಿಂಸಾಚಾರ ಹಾಗೂ ದಾಳಿಗಳು ತೀವ್ರವಾಗಿ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಟಿಟಿಪಿ ಹಾಗೂ ಬಲೂಚಿಸ್ತಾನದ ಪ್ರತ್ಯೇಕತಾವಾದಿ ಗುಂಪುಗಳು ಆಗಾಗ್ಗೆ ಇಂತಹ ದಾಳಿಗಳನ್ನು ನಡೆಸುತ್ತಲೇ ಇವೆ. ಅಫ್ಘಾನ್ ತಾಲಿಬಾನ್ ಜೊತೆ ನಿಕಟ ನಂಟು ಹೊಂದಿರುವ ಟಿಟಿಪಿ ಉಗ್ರರು, ಅಫ್ಘಾನಿಸ್ತಾನದ ನೆಲದಿಂದ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ಅಫ್ಘಾನ್ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಹೆಚ್ಚುತ್ತಿರುವ ಗಡಿ ಉದ್ವಿಗ್ನತೆ

ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿಯಲ್ಲಿ ಇತ್ತೀಚೆಗೆ ನಡೆದ ಘರ್ಷಣೆಯಲ್ಲಿ 13 ಅಫ್ಘಾನ್ ತಾಲಿಬಾನ್ ಉಗ್ರರು ಹತ್ಯೆಯಾಗಿದ್ದರು. ಇದರ ಬೆನ್ನಲ್ಲೇ ಈ ಆತ್ಮಾಹುತಿ ದಾಳಿ ನಡೆದಿರುವುದು ಉಭಯ ದೇಶಗಳ ನಡುವಿನ ದ್ವೇಷವನ್ನು ಮತ್ತಷ್ಟು ಹೆಚ್ಚಿಸಿದೆ. ಪಾಕಿಸ್ತಾನ ಸೇನೆಯು ಈ ಹಿಂದೆ ಉಗ್ರರ ಭದ್ರಕೋಟೆಯಾಗಿದ್ದ ವಜೀರಿಸ್ತಾನದ ಸುತ್ತಮುತ್ತ ಹಲವಾರು ಕಾರ್ಯಾಚರಣೆಗಳನ್ನು ನಡೆಸಿದ್ದರೂ, ಉಗ್ರರ ದಾಳಿಗಳು ಮಾತ್ರ ನಿಂತಿಲ್ಲ.

ಡಿಸೆಂಬರ್ 2023ರಲ್ಲೂ ಇದೇ ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ನಡೆದ ಪೊಲೀಸ್ ಠಾಣೆ ಮೇಲಿನ ಆತ್ಮಾಹುತಿ ದಾಳಿಯಲ್ಲಿ 23 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದರು. ಈಗ ಮತ್ತೆ ಅದೇ ರೀತಿಯ ಭೀಕರ ದಾಳಿ ಮರುಕಳಿಸಿರುವುದು ದೇಶದ ಆಂತರಿಕ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ, (ಏಜೆನ್ಸೀಸ್​).

Dailyhunt
Disclaimer: This content has not been generated, created or edited by Dailyhunt. Publisher: Vijayvani