Dailyhunt Logo
  • Light mode
    Follow system
    Dark mode
    • Play Story
    • App Story
ಪದವಿ ಮುಗಿದ ಬಳಿಕ ಎದುರಾಗಲಿದೆ ಸವಾಲು: ಗಿರೀಶ್ ಸಿ.ಹೊಸೂರ್

ಪದವಿ ಮುಗಿದ ಬಳಿಕ ಎದುರಾಗಲಿದೆ ಸವಾಲು: ಗಿರೀಶ್ ಸಿ.ಹೊಸೂರ್

ಮೈಸೂರು:ಪದವಿ ಮುಗಿದ ಬಳಿಕ ಜೀವನದ ನಿಜವಾದ ಸವಾಲು ಎದುರಾಗಲಿದ್ದು, ಆ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ದರಾಗಬೇಕು ಎಂದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಗಿರೀಶ್ ಸಿ.ಹೊಸೂರ್ ಹೇಳಿದರು.ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ 18ನೇ ಪದವೀಧರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪದಕ ಹಾಗೂ ಬಹುಮಾನ ವಿತರಿಸಿ ಮಾತನಾಡಿದರು.ಇಷ್ಟು ವರ್ಷಗಳ ಕಾಲ ಬದ್ಧತೆಯಿಂದ ಓದಿ ಪದವಿ, ಸ್ನಾತಕೋತ್ತರ ಪದವಿಯನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳು ಸವಾಲಿನಿಂದ ಕೂಡಿರುತ್ತವೆ.
ನೀವು ಓದಿರುವ, ಅಭ್ಯಾಸ ಮಾಡಿ ಗಳಿಸಿಕೊಂಡಿರುವ ವಿಷಯಗಳನ್ನೇ ತಂತ್ರಗಾರಿಕೆಯಾಗಿ ಬಳಕೆ ಮಾಡಿಕೊಂಡು, ಸೂಕ್ತ ಆಲೋಚನೆಯಿಂದ ಮುಂದುವರಿಯಬೇಕು ಎಂದು ಸಲಹೆ ನೀಡಿದರು.ಜೀವನದಲ್ಲಿ ಮುಂದೆ ಸಾಧನೆ ಅಥವಾ ಯಶಸ್ಸನ್ನು ಗಳಿಸಿಕೊಳ್ಳಬೇಕಾದರೆ ಒಂದು ಗುರಿ ಇಟ್ಟುಕೊಳ್ಳಬೇಕು. ಅದರಡೆಗೆ ಒಂದೇ ಮಟ್ಟದಲ್ಲಿ ಸಾಗಬೇಕು. ಚಿತ್ತಚಾಂಚಲ್ಯ ಹೊಂದದೆ ಏಕ್ರಾಗತೆಯಿಂದ ಲಕ್ಷ್ಯವಿಟ್ಟು ನಡೆದರೆ ನಾವು ಅಂದುಕೊಂಡ ಗುರಿಯನ್ನು ಮುಟ್ಟಬಹುದು ಎಂದರು.ವಿದ್ಯಾರ್ಥಿಗಳು ಬದ್ಧತೆ, ಸಂಯಮ, ದೃಢತೆಯನ್ನು ಹೊಂದಿರಬೇಕು. ಬೇರೆಯವರು ಹಾಗೆನ್ನುತ್ತಾರೆ, ಹೀಗೆನ್ನುತ್ತಾರೆ ಎಂದು ಅವರಿವರ ಮಾತಿಗೆ ಕಿವಿ ಕೊಡದೇ ನಾವು ಆಯ್ಕೆ ಮಾಡಿಕೊಂಡಿರುವ ಹಾದಿಯಲ್ಲಿ ನಡೆಯಬೇಕು ಎಂದು ತಿಳಿಸಿದರು.ಕೆಲ ಹಿಂದಿನ ದಶಕಗಳಿಗೆ ಹೋಲಿಕೆ ಮಾಡಿದರೇ ಪ್ರಸ್ತುತ ದಿನದಲ್ಲಿ ಮಹಿಳೆಯರ ಪ್ರಾತಿನಿಧ್ಯ ಎಲ್ಲ ಕ್ಷೇತ್ರದಲ್ಲೂ ಇದೆ. ಪುರುಷರಿಗಷ್ಟೇ ಮೀಸಲು ಎನ್ನುವಂತಹ ಹುದ್ದೆ, ಕ್ಷೇತ್ರಗಳಲ್ಲಿಯೂ ಮಹಿಳೆಯರು ಯಶ ಕಂಡಿದ್ದಾರೆ. ಈ ಪ್ರಮಾಣ ಇನ್ನಷ್ಟು ಹೆಚ್ಚಬೇಕು. ಈ ಸಬಲೀಕರಣ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು. ಬೆಟ್ಟದ ಮೇಲೊಂದು ಮನೆಯನ್ನು ಮಾಡಿ, ಮೃಗ ಪಕ್ಷಿಗಳಿಗೆ ಅಂಜಿದೊಡೆಂತಯ್ಯ ಎನ್ನುವ ಶಿವಶರಣೆ ಅಕ್ಕ ಮಹಾದೇವಿಯ ವಚನದಂತೆ ಅನ್ಯರ ಬಗ್ಗೆ ತಲೆಕೆಡಿಸಿಕೊಳ್ಳದೆ ಸಮಚಿತ್ತದಿಂದ ಮುನ್ನಡೆದರೆ ಸಾಧನೆ ಮಾಡಬಹುದು. ಆಗ ನಿಂದಿಸಿದವರೆ ಹೊಗಳುತ್ತಾರೆ ಎಂದರು ಪದವಿ ಗಳಿಸಿದ ವಿದ್ಯಾರ್ಥಿಗಳು ಮುಂದೆ ಜೀವನದಲ್ಲಿ ಉನ್ನತ ಮಟ್ಟದ ಹುದ್ದೆಗೋ, ಬೇರೆ ಇನ್ಯಾವುದಾದರೂ ಕ್ಷೇತ್ರದಲ್ಲಿ ಯಶಸ್ಸುಗಳಿಸಿ, ಒಂದು ಹಂತವನ್ನು ತಲುಪಿದಾಗ ಸಮಾಜವನ್ನು ಮರೆಯಬಾರದು. ಪ್ರತಿಭಾವಂತರಾಗಿದ್ದರೂ ಹಲವು ಕಾರಣಗಳಿಂದ ಅವಕಾಶ ಸಿಗದೇ ವಂಚಿತರಾಗಿರುವವರಿಗೆ ಸಹಾಯವನ್ನು ಮಾಡಬೇಕು. ದೀನರನ್ನು ಮೇಲೆತ್ತಬೇಕು. ಆಗ ಮಾತ್ರ ನೀವು ಕಲಿತ ವಿದ್ಯೆಗೂ ಸಾರ್ಥಕತೆ ಸಿಗುತ್ತದೆ ಎಂದು ಹೇಳಿದರು. ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಂಶುಪಾಲ ಡಾ.ರೇಚಣ್ಣ, ಜೆಎಸ್‌ಎಸ್ ಪ್ರಕಟಣಾ ವಿಭಾಗದ ಮೊರಬದ ಮಲ್ಲಿಕಾರ್ಜುನ, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಆರ್.ಎಸ್.ಕುಮಾರ್, ಸಹಾಯಕ ಪ್ರಾಧ್ಯಾಪಕಿ ಜೆ.ಪುಷ್ಪಲತಾ ಇತರರು ಇದ್ದರು.

508 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಸೇರಿ ಒಟ್ಟು 508 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ವಿವಿಧ ವಿಭಾಗಗಳ 21 ವಿದ್ಯಾರ್ಥಿನಿಯರಿಗೆ ಪದಕ ಹಾಗೂ ಬಹುಮಾನವನ್ನು ನೀಡಲಾಯಿತು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani