ಮುಂಬೈ: ಕನ್ನಡಿಗ ದೇವದತ್ ಪಡಿಕಲ್ (101*ರನ್, 52 ಎಸೆತ, 11 ಬೌಂಡರಿ, 6 ಸಿಕ್ಸರ್) ಐಪಿಎಲ್‌ನಲ್ಲಿ ಸಿಡಿಸಿದ ಚೊಚ್ಚಲ ಶತಕದ ಆರ್ಭಟ ಮತ್ತು ನಾಯಕ ವಿರಾಟ್ ಕೊಹ್ಲಿ (72* ರನ್, 47 ಎಸೆತ, 6 ಬೌಂಡರಿ, 3 ಸಿಕ್ಸರ್) ಭರ್ಜರಿ ಬ್ಯಾಟಿಂಗ್‌ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಓಟ ಮುಂದುವರಿಸಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಗುರುವಾರ ಆಡಿದ ಐಪಿಎಲ್-14ರ ತನ್ನ 4ನೇ ಪಂದ್ಯದಲ್ಲಿ ಆರ್‌ಸಿಬಿ 10 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿತು. ಸತತ 4ನೇ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೂ ಮರಳಿತು.
ಹಾಲಿ ಆವೃತ್ತಿಯಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಟಾಸ್ ಜಯಿಸಿದ ನಾಯಕ ವಿರಾಟ್ ಕೊಹ್ಲಿ, ಫೀಲ್ಡಿಂಗ್ ಆಯ್ದುಕೊಂಡರು. ಆರಂಭಿಕ ಆಘಾತದ ನಡುವೆಯೂ ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ (46 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಮತ್ತು ರಾಹುಲ್ ತೆವಾಟಿಯಾ (40 ರನ್, 23 ಎಸೆತ, 4 ಬೌಂಡರಿ, 2 ಸಿಕ್ಸರ್) ಪ್ರದರ್ಶಿಸಿದ ಬಿರುಸಿನ ಆಟದಿಂದ ರಾಜಸ್ಥಾನ ರಾಯಲ್ಸ್ ತಂಡ 9 ವಿಕೆಟ್ 177 ರನ್ ಪೇರಿಸುವಲ್ಲಿ ಸಲವಾಯಿತು.
ಪಡಿಕಲ್-ಕೊಹ್ಲಿ ಭರ್ಜರಿ ಜತೆಯಾಟ
ಕಳೆದ ಕೆಲ ಪಂದ್ಯಗಳಿಂದ ಉತ್ತಮ ಆರಂಭ ಕಾಣಲು ವಿಲವಾಗುತ್ತಿದ್ದ ಆರ್‌ಸಿಬಿ ತಂಡ ಈ ಬಾರಿ ಆರಂಭಿಕ ಜೋಡಿಯ ಸಾಹಸದಿಂದಲೇ ಗೆಲುವಿನ ದಡ ಸೇರಿತು. ಕರೊನಾದಿಂದ ಚೇತರಿಸಿಕೊಂಡು ಆರ್‌ಸಿಬಿ ತಂಡ ಕೂಡಿಕೊಂಡ ಬಳಿಕ ಲಯ ಕಂಡುಕೊಳ್ಳಲು ಪರದಾಡುತ್ತಿದ್ದ ಎಡಗೈ ಆರಂಭಿಕ ದೇವದತ್ ಪಡಿಕಲ್ ವಾಂಖೆಡೆ ಮೈದಾನದಲ್ಲಿ ಆರಂಭದಿಂದಲೇ ರನ್ ಪ್ರವಾಹ ಹರಿಸಿದರು. ಆರಂಭದಲ್ಲಿ ಅವರಿಗೆ ಬೆಂಬಲವಾಗಿ ತಾಳ್ಮೆಯ ಆಟವಾಡಿದ ಕೊಹ್ಲಿ ಬಳಿಕ ತಾವೂ ಭರ್ಜರಿ ಹೊಡೆತಗಳ ಮೂಲಕ ಗಮನಸೆಳೆದರು. ಪಡಿಕಲ್ 27 ಎಸೆತಗಳಲ್ಲಿ ಮತ್ತು ಕೊಹ್ಲಿ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕ ಪಡಿಕಲ್ 51 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕ ಪೂರೈಸಿದರು. ಈ ಜೋಡಿಯನ್ನು ಬೇರ್ಪಡಿಸಲು ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ನಡೆಸಿದ ಪ್ರಯತ್ನಗಳೆಲ್ಲ ವಿಲವಾದವು.

