Dailyhunt Logo
  • Light mode
    Follow system
    Dark mode
    • Play Story
    • App Story
ಪಂತ್​ ಸೆಂಚುರಿಗೆ ಸುನಿಲ್ ಗವಾಸ್ಕರ್ ಸಂಭ್ರಮ

ಪಂತ್​ ಸೆಂಚುರಿಗೆ ಸುನಿಲ್ ಗವಾಸ್ಕರ್ ಸಂಭ್ರಮ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಭರ್ಜರಿ ಶತಕ ಸಿಡಿಸಿ (Rishabh Pant Century) ಮಿಂಚಿದ್ದಾರೆ. ಈ ಐತಿಹಾಸಿಕ ಶತಕದ ಬೆನ್ನಲ್ಲೇ, ಟೀಮ್​ ಇಂಡಿಯಾ ದಿಗ್ಗಜ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಅವರು ಚಪ್ಪಾಳೆ ತಟ್ಟಿ ಪಂತ್ ಸಾಧನೆಯನ್ನು ಸಂಭ್ರಮಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಈ ಹಿಂದೆ ಪಂತ್ ಅವರ ಆಟದ ಶೈಲಿಯನ್ನು ಕಟುವಾಗಿ ಟೀಕಿಸಿದ್ದ ಗವಾಸ್ಕರ್ ಅವರ ಈ ಪ್ರತಿಕ್ರಿಯೆ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದೆ.

ಅಂದು ಕೆಂಡಾಮಂಡಲವಾಗಿದ್ದ ಗವಾಸ್ಕರ್, ಇಂದು ಫಿದಾ!

ಗವಾಸ್ಕರ್ ಅವರ ಸಂಭ್ರಮ ಈ ಮಟ್ಟದಲ್ಲಿ ಸದ್ದು ಮಾಡಲು ಒಂದು ಕಾರಣವಿದೆ. ಅದೇನೆಂದರೆ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ವೇಳೆ ಪಂತ್ ಬೇಜವಾಬ್ದಾರಿಯುತ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದ್ದಾಗ ಸುನಿಲ್ ಗವಾಸ್ಕರ್ ವೀಕ್ಷಕ ವಿವರಣೆಯಲ್ಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಟುಪಿಡ್, ಸ್ಟುಪಿಡ್, ಸ್ಟುಪಿಡ್ ಅಲ್ಲಿ ಇಬ್ಬರು ಫೀಲ್ಡರ್‌ಗಳಿದ್ದರೂ ನೀನು ಆ ಹೊಡೆತಕ್ಕೆ ಕೈಹಾಕುತ್ತೀಯಾ? ಅದೊಂದು ಮೂರ್ಖತನದ ಹೊಡೆತ. ನೀನು ತಂಡವನ್ನು ನಿರಾಸೆಗೆ ದೂಡುತ್ತಿದ್ದೀಯಾ ಎಂದು ಗವಾಸ್ಕರ್ ಕಠಿಣ ಪದಗಳಲ್ಲಿ ಟೀಕಿಸಿದ್ದರು.

ಆದರೆ, ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಪಂತ್ ಆಡಿದ ಜವಾಬ್ದಾರಿಯುತ ಹಾಗೂ ಸ್ಫೋಟಕ ಇನ್ನಿಂಗ್ಸ್ ಗವಾಸ್ಕರ್ ಅವರ ಮನಸ್ಸು ಮುಟ್ಟಿದ್ದು, ಪಂತ್ ಶತಕ ಪೂರೈಸುತ್ತಿದ್ದಂತೆಯೇ ಕಾಮೆಂಟೇಟರ್‌ಗಳು ಅವರ ಆಟವನ್ನು ಕೊಂಡಾಡಿದರೆ, ಬೌಂಡರಿ ಗೆರೆಯ ಬಳಿ ನಿಂತಿದ್ದ ಗವಾಸ್ಕರ್ ಮುಖದಲ್ಲಿ ಮಂದಹಾಸ ಬೀರುತ್ತಾ ಮನಸಾರೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಸಿಕ್ಸರ್ ಮೂಲಕ ಶತಕ ಪೂರೈಸಿದ ಪಂತ್!

ಮೂರನೇ ದಿನದಾಟದ ಅಂತ್ಯಕ್ಕೆ ಅಜೇಯ 55 ರನ್ ಗಳಿಸಿದ್ದ ಪಂತ್, ನಾಲ್ಕನೇ ದಿನ ನೈಟ್ ವಾಚ್‌ಮನ್ ಅನ್ಶುಲ್ ಕಾಂಬೋಜ್ ಜೊತೆಗೂಡಿ ಆಟ ಮುಂದುವರಿಸಿದರು. ಬ್ಯಾಟಿಂಗ್‌ಗೆ ಸಹಕಾರಿಯಾಗಿದ್ದ ಪಿಚ್ ಮತ್ತು ದಣಿದಿದ್ದ ಕಿವೀಸ್ ಬೌಲಿಂಗ್ ದಾಳಿಯ ಸಂಪೂರ್ಣ ಲಾಭ ಪಡೆದ ಪಂತ್, ಗ್ಲೆನ್ ಫಿಲಿಪ್ಸ್ ಎಸೆತವನ್ನು ಮೈದಾನದಿಂದಲೇ ಹೊರಗೆ ಅಟ್ಟಿದರು. ರಿವರ್ಸ್ ಸ್ವೀಪ್ ಮೂಲಕ 99 ರನ್ ತಲುಪಿದ ಪಂತ್, ಬಳಿಕ ಆಫ್-ಸ್ಪಿನ್ನರ್ ಎಸೆತವನ್ನು ಮುಂದೆ ಬಂದು ಮಿಡ್-ಆಫ್ ಮೇಲಿಂದ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ 135 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು.

ಶತಕ ಪೂರೈಸಿದ ತಕ್ಷಣ ಪಂತ್ ಆಕಾಶದತ್ತ ನೋಡಿ ಸಂಭ್ರಮಿಸಿದರು. ಅಂತಿಮವಾಗಿ 153 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 128 ರನ್ ಗಳಿಸಿದ್ದ ಪಂತ್, ರಚಿನ್ ರವೀಂದ್ರ ಬೌಲಿಂಗ್‌ನಲ್ಲಿ ನಾಥನ್ ಸ್ಮಿತ್ ಹಿಡಿದ ಕ್ಯಾಚ್‌ಗೆ ತಮ್ಮ ವಿಕೆಟ್​ ಒಪ್ಪಿಸಿದರು.

ದಾಖಲೆ ಪುಸ್ತಕ ಸೇರಿದ ಪಂತ್!

ಈ ವರ್ಷ ನಡೆದ ಇರಾನಿ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಮುನ್ನಡೆಸುವಾಗ ಎಡಭಾಗದ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಪಂತ್, ಅಕ್ಟೋಬರ್ ನಂತರ ಮೊದಲ ಬಾರಿಗೆ ಕಣಕ್ಕಿಳಿದು ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಈ ಶತಕದೊಂದಿಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಈ ನಾಲ್ಕೂ ರಾಷ್ಟ್ರಗಳಲ್ಲಿ ಟೆಸ್ಟ್ ಶತಕ ಬಾರಿಸಿದ ಟೀಮ್​ ಇಂಡಿಯಾದ ಮೊದಲ ವಿಕೆಟ್ ಕೀಪರ್-ಬ್ಯಾಟರ್ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ(ಏಜೆನ್ಸೀಸ್​).

Dailyhunt
Disclaimer: This content has not been generated, created or edited by Dailyhunt. Publisher: Vijayvani