ವಿಜಯವಾಣಿ

461k Followers

ಪೊಲೀಸ್ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಗೆ 8 ಹೊಸ ನಿಯಮ ಅನುಷ್ಠಾನ

15 Feb 2021.09:15 AM

| ಕೀರ್ತಿನಾರಾಯಣ ಸಿ. ಬೆಂಗಳೂರು

ಪೊಲೀಸ್ ಸಬ್ ಇನ್​ಸ್ಪೆಕ್ಟರ್ ಹಾಗೂ ಕಾನ್​ಸ್ಟೆಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಸಲಿ, ನಕಲಿ ಅಭ್ಯರ್ಥಿಗಳ ಕಳ್ಳಾಟ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಇದಕ್ಕೆ ತಡೆಹಾಕುವ ಉದ್ದೇಶದಿಂದ ಬಯೋಮೆಟ್ರಿಕ್ ಅಸ್ತ್ರ ಪ್ರಯೋಗಿಸಿದೆ. ನಕಲಿ ದಾಖಲೆ ಸೃಷ್ಟಿಸಿ ಯಾರದ್ದೋ ಹೆಸರಲ್ಲಿ ಇನ್ಯಾರೋ ಪರೀಕ್ಷೆ ಬರೆದು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವ ಜಾಲ ರಾಜ್ಯದಲ್ಲಿ ಸಕ್ರಿಯವಾಗಿದೆ. ಈವರೆಗೆ ಅಧಿಕಾರಿಗಳ ಮಟ್ಟದಲ್ಲೇ ಡೀಲ್ ಕುದುರಿಸಿಕೊಂಡು ಪೊಲೀಸ್ ನೌಕರಿ ಗಿಟ್ಟಿಸಿಕೊಳ್ಳುತ್ತಿದ್ದವರೀಗ ಬೇರೆಯವರಿಂದ ಪರೀಕ್ಷೆ ಬರೆಸಿ ಉದ್ಯೋಗ ಪಡೆದುಕೊಳ್ಳುವ ಹೊಸಮಾರ್ಗ ಕಂಡುಕೊಂಡಿದ್ದಾರೆ. ಕೆಲ ಕಾನ್ಸ್​ಸ್ಟೆಬಲ್​ಗಳೇ ಅಕ್ರಮಕ್ಕೆ ಸಹಕರಿಸುತ್ತಿರುವುದು ರಾಜ್ಯ ಸರ್ಕಾರ ಹಾಗೂ ಇಲಾಖೆಗೆ ತಲೆನೋವು ತಂದಿದೆ.

ಈ ಕಾರಣಕ್ಕಾಗಿ ಪ್ರತಿಹಂತದಲ್ಲೂ ಅಭ್ಯರ್ಥಿಯ ಬೆರಳಚ್ಚು ಸಂಗ್ರಹಿಸುವ ಕಡ್ಡಾಯ ನಿಯಮದ ಜತೆಗೆ 8 ಹೊಸ ನಿಯಮ ರೂಪಿಸಲಾಗಿದೆ.

ಹಂತ ಹಂತದಲ್ಲೂ ಶೋಧ: ಆರಂಭದಲ್ಲೇ ಅಭ್ಯರ್ಥಿಯ ಬೆರಳಚ್ಚು ಸಂಗ್ರಹಿಸಿ ದೈಹಿಕ ಮತ್ತು ಸಹಿಷ್ಣುತೆ ಪರೀಕ್ಷೆ ಆರಂಭವಾದಾಗಿನಿಂದ ನೇಮಕಾತಿ ಆದೇಶ ಪತ್ರ ಕೊಡುವವರೆಗೆ ಪ್ರತಿಹಂತದಲ್ಲೂ ಬೆರಳಚ್ಚು ಪರಿಶೀಲಿಸಿ ತಾಳೆಯಾಗುತ್ತದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿ ಕೊಳ್ಳಬೇಕು. ಒಂದು ವೇಳೆ ಅನುಮಾನ ಮೂಡಿದರೆ ತನಿಖೆಗೆ ಆದೇಶಿಸಿ, ತಪ್ಪು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಕಳ್ಳಾಟ ಹೇಗೆ?: ಅರ್ಜಿ ಸಲ್ಲಿಕೆ ಸಂದರ್ಭದಲ್ಲೇ ಅಭ್ಯರ್ಥಿಯ ಭಾವಚಿತ್ರ, ಸಹಿ ಬದಲಿಗೆ ಬೇರೆ ವ್ಯಕ್ತಿಯ ಭಾವಚಿತ್ರ ಮತ್ತು ಸಹಿ ಹಾಕಿ ಅಪ್​ಲೋಡ್ ಮಾಡಲಾಗುತ್ತದೆ. ಲಿಖಿತ ಪರೀಕ್ಷೆ, ಪಿಎಸ್​ಟಿ, ಪಿಇಟಿ ಹಾಗೂ ವೈದ್ಯಕೀಯ ಪರೀಕ್ಷೆಗಳಿಗೆ ನಕಲಿ ಅಭ್ಯರ್ಥಿ ಹಾಜರಾಗುವಂತೆ ಮಾಡಿ ಉತ್ತೀರ್ಣರಾಗುತ್ತಾರೆ. ನೇಮಕಾತಿ ಆದೇಶ ಮಾತ್ರ ಅಸಲಿ ಅಭ್ಯರ್ಥಿಯೇ ಪಡೆದು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಾರೆ. ದಾಖಲಾತಿ ಪರಿಶೀಲನೆ ಕಾರ್ಯ ಕಟ್ಟುನಿಟ್ಟಾಗಿ ನಡೆಯದ ಕಾರಣ ನಕಲಿಯಾಟ ಗೊತ್ತಾಗುತ್ತಿರಲಿಲ್ಲ.

ಕಚೇರಿಯಲ್ಲಿ ಪರಿಶೀಲನೆ

ನೇಮಕಾತಿ ಕಚೇರಿಯಿಂದ ಆಯ್ಕೆಯಾದ ಅಭ್ಯರ್ಥಿಗಳ ಅರ್ಜಿಯ ಪ್ರತಿ, ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಕರೆಪತ್ರಗಳನ್ನು ಆಯಾ ಘಟಕದ ಮುಖ್ಯಸ್ಥರಿಗೆ ಕಳುಹಿಸಬೇಕು. ನೇಮಕಾತಿ ಆದೇಶ ಹೊರಡಿಸುವ ಮುನ್ನ ಅಭ್ಯರ್ಥಿಯನ್ನು ಕಚೇರಿಗೆ ಕರೆಸಿ ಅರ್ಜಿಯಲ್ಲಿ, ಕರೆಪತ' ಗಳಲ್ಲಿ ಹಾಗೂ ನಾಮಿನಲ್ ರೋಲ್​ಗಳಲ್ಲಿರುವ ಭಾವಚಿತ್ರದಲ್ಲಿರುವಂತೆ ಮುಖಚಹರೆ ಹೋಲುತ್ತದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಅದರ ಜತೆಗೆ ದೇಹದಲ್ಲಿನ ಗುರುತುಗಳು ದಾಖಲೆಗಳಲ್ಲಿ ನಮೂದಿಸಿರುವಂತೆ ಹೊಂದಾಣಿಕೆಯಾಗುತ್ತದೆಯೇ ಎಂದು ಅಧಿಕಾರಿಗಳೇ ಖುದ್ದಾಗಿ ಪರಿಶೀಲಿಸಬೇಕು.

ಪೇದೆಗಳೇ ಸಕ್ರಿಯ

ಸೇವೆಯಲ್ಲಿರುವ ಸಬ್ ಇನ್​ಸ್ಪೆಕ್ಟರ್ ಹಾಗೂ ಕಾನ್​ಸ್ಟೆಬಲ್​ಗಳೇ ಈ ಕಳ್ಳಾಟದ ಪಾತ್ರಧಾರಿಗಳು. ಈಗಾಗಲೇ ಪರೀಕ್ಷೆ ಬರೆದು ಆಯ್ಕೆಯಾಗಿರುವುದರಿಂದ ಸುಲಭವಾಗಿ ಪರೀಕ್ಷೆ ಪಾಸ್ ಮಾಡಬಹುದು. 2020-21ನೇ ಸಾಲಿನಲ್ಲಿ ನಡೆದ ಹಲವು ಪರೀಕ್ಷೆಗಳಲ್ಲಿ ಅಸಲಿ ಅಭ್ಯರ್ಥಿಗಳ ಬದಲಾಗಿ ನಕಲಿ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಿ ಸಿಕ್ಕಿಬಿದ್ದಿದ್ದರು. ಈ ಸಂಬಂಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿ, ಇಬ್ಬರು ಪೊಲೀಸ್ ಪೇದೆಗಳು ಸೇರಿ ಹಲವರನ್ನು ಬಂಧಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದಂತೆ ರಾಜ್ಯಾದ್ಯಂತ ಜಾಲ ವಿಸ್ತರಿಸಿರುವುದಕ್ಕೆ ಸಾಕ್ಷ್ಯ ಲಭಿಸಿದೆ.

ಪೊಲೀಸ್ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆಯುವ ನಕಲಿ ತಡೆಯಲು ಕಡ್ಡಾಯವಾಗಿ ಅಭ್ಯರ್ಥಿಗಳ ಬೆರಳಚ್ಚು ಸಂಗ್ರಹಿಸುವ ಬಯೋಮೆಟ್ರಿಕ್ ವ್ಯವಸ್ಥೆ ಸೇರಿ ಕೆಲವೊಂದು ಹೊಸ ನಿಯಮ ರೂಪಿಸಲಾಗಿದೆ. ಏಪ್ರಿಲ್ ಅಥವಾ ಮೇನಲ್ಲಿ ನಡೆಯಲಿರುವ ಹೊಸ ನೇಮಕಾತಿ ಪರೀಕ್ಷೆಯಿಂದಲೇ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ. ಎಲ್ಲ ಘಟಕಗಳಿಗೆ ಸೂಚನೆ ಕೊಡಲಾಗಿದೆ.

| ಅಮ್ರಿತ್ ಪಾಲ್ ಎಡಿಜಿಪಿ, ಪೊಲೀಸ್ ನೇಮಕಾತಿ ವಿಭಾಗ

ಸಿಸಿ ಕ್ಯಾಮರಾ ದೃಶ್ಯ ಪರಿಶೀಲನೆ

ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಪ್ರಕ್ರಿಯೆಯನ್ನು ಸಿಸಿ ಕ್ಯಾಮರಾ ಮೂಲಕ ಸೆರೆಹಿಡಿಯಲಾಗುತ್ತದೆ. ಆ ದೃಶ್ಯಾವಳಿ ಗಳನ್ನು ತರಿಸಿಕೊಂಡು ಪರಿಶೀಲಿಸಬೇಕು. ಖಚಿತಗೊಂಡ ನಂತರವೇ ಅಭ್ಯರ್ಥಿಗೆ ನೇಮಕಾತಿ ಆದೇಶ ಹೊರಡಿಸಬೇಕು ಎಂದು ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪಾಲ್ ಲಿಖಿತ ಆದೇಶ ಹೊರಡಿಸಿದ್ದಾರೆ.

ಸಾಧನ ಖರೀದಿಗೆ ಶೀಘ್ರ ಸೂಚನೆ

ಬಯೋಮೆಟ್ರಿಕ್ ಮತ್ತು ತಂತ್ರಾಂಶ ಸಾಧನ ಖರೀದಿಸುವ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು. ಅದಕ್ಕೂ ಮುನ್ನ ಈ ನಿಯಮಾವಳಿಗಳ ಜಾರಿಗೆ ಸೂಕ್ರಕ್ರಮ ಕೈಗೊಳ್ಳುವಂತೆ ಸೂಚನೆ ಕೊಡಲಾಗಿದೆ.

ಹೊಸ ನಿಯಮಗಳೇನು?

  1. ದೈಹಿಕ-ಸಹಿಷ್ಣುತೆ ಪರೀಕ್ಷೆಗಳಲ್ಲಿ ಅರ್ಹರಾದ ಅಭ್ಯರ್ಥಿಗಳ ಎಡಗೈ ಹೆಬ್ಬೆಟ್ಟಿನ ಮುದ್ರೆ ಸಂಗ್ರಹ

2. ವೈದ್ಯಕೀಯ, ದಾಖಲೆ ಪರಿಶೀಲನೆಗೆ ಬಂದಾಗ ಮತ್ತೊಮ್ಮೆ ಬಯೋಮೆಟ್ರಿಕ್ ಪಡೆದು ತಾಳೆ

3. ಹೆಬ್ಬೆಟ್ಟಿನ ಮುದ್ರೆ ಖಚಿತವಾದ ನಂತರವೇ ವೈದ್ಯಕೀಯ ಪರೀಕ್ಷೆಗೆ ಅನುವು ಮಾಡಿಕೊಡಬೇಕು

4. ಅಭ್ಯರ್ಥಿ ಮುಂಗೈ ಮೇಲೆ ಕಚೇರಿ ಸೀಲ್ ಹಾಕಿ, ಪ್ರತಿ ಘಟಕಕ್ಕೆ ಹೋದಾಗಲೂ ಪರಿಶೀಲಿಸಬೇಕು

5. ನೇಮಕ ಆದೇಶ ಕೊಡುವಾಗ ಮತ್ತೆ ಬೆರಳು ಮುದ್ರೆ ಪಡೆದು ತಾಳೆ ಮಾಡಿ ಖಾತ್ರಿಪಡಿಸಿಕೊಳ್ಳಬೇಕು

6. ಬಯೋಮೆಟ್ರಿಕ್​ನಲ್ಲಿ ಪಡೆದ ಬೆರಳು ಮುದ್ರೆಯನ್ನು ಸಂಗ್ರಹಿಸಿಟ್ಟು, ಅಗತ್ಯವಿದ್ದಾಗ ಕೊಡಬೇಕು, ನಾಮಿನಲ್ ರೋಲ್​ಗಳನ್ನು ಕಲರ್ ಪ್ರಿಂಟ್ ಪಡೆದು ಪರೀಕ್ಷೆಗೆ ಹಾಜರಾದಾಗ ಪರಿಶೀಲಿಸಬೇಕು

7. ದಾಖಲೆಗಳಲ್ಲಿರುವ ಭಾವಚಿತ್ರ ಮತ್ತು ಹಾಜರಾದ ವ್ಯಕ್ತಿ ಇಬ್ಬರೂ ಒಬ್ಬರೇ ಎಂದು ಖಚಿತಪಡಿಸಬೇಕು

8. ಒಂದು ವೇಳೆ ಅನುಮಾನ ಬಂದರೆ ಹೆಚ್ಚಿನ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು

15 ಲಕ್ಷ ರೂ.ಗೆ ಡೀಲ್?

ಪರೀಕ್ಷೆಗೆ ಹಾಜರಾಗುವ ನಕಲಿ ಅಭ್ಯರ್ಥಿಗೆ 10 ರಿಂದ 15 ಲಕ್ಷ ರೂ. ನಿಗದಿಯಾಗಿರುತ್ತದೆ. ಆರಂಭದಲ್ಲಿ ಅರ್ಧ ಹಣ ಕೊಟ್ಟು ಎಲ್ಲ ಪರೀಕ್ಷೆಗಳಲ್ಲೂ ಪಾಸ್ ಆಗಿ, ನೇಮಕಾತಿ ಆದೇಶ ಕೈ ಸೇರಿ ತರುವಾಯ ಉಳಿದ ಹಣ ಕೊಡುವುದು ಎಂದು ಒಪ್ಪಂದ ಆಗಿರುತ್ತದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags