Dailyhunt Logo
  • Light mode
    Follow system
    Dark mode
    • Play Story
    • App Story
ರಾಜಸ್ಥಾನದಲ್ಲಿ 'ಕೈ' ಮೇಲುಗೈ, ಕಮಲ ಪಾಳಯಕ್ಕೆ ಶಾಕ್

ರಾಜಸ್ಥಾನದಲ್ಲಿ 'ಕೈ' ಮೇಲುಗೈ, ಕಮಲ ಪಾಳಯಕ್ಕೆ ಶಾಕ್

Rajasthan Elections: ರಾಜಸ್ಥಾನ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣವಾಗಿ ಧೂಳೀಪಟವಾಗಿದೆ ಎಂದು ಪ್ರತಿಪಾದಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ, ಸೋಲಿನ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವಿಡಿಯೋ ಸಂದೇಶದ ಮೂಲಕ ಪ್ರತಿಕ್ರಿಯಿಸಿರುವ ದೋತಸ್ರಾ, ಹಿಂದಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪೊಲೀಸ್ ಹಾಗೂ ಆಡಳಿತ ಯಂತ್ರದ ದುರುಪಯೋಗ ಮತ್ತು ಅಸಮರ್ಪಕ ಕ್ಷೇತ್ರ ಪುನರ್ವಿಂಗಡಣೆ ಮೂಲಕ 'ಸುಳ್ಳು ಗೆಲುವಿನ ಕಥೆ' ಕಟ್ಟಿತ್ತು ಎಂದು ಆರೋಪಿಸಿದ್ದಾರೆ. ಆದರೆ, ಕಳೆದ ಮೂರು ವರ್ಷಗಳ ಬೆಲೆ ಏರಿಕೆ, ನಿರುದ್ಯೋಗ, ರೈತರ ಸಂಕಷ್ಟ, ಹದಗೆಟ್ಟ ಆರೋಗ್ಯ ವ್ಯವಸ್ಥೆ ಹಾಗೂ ಭ್ರಷ್ಟಾಚಾರದಿಂದ ಬೇಸತ್ತ ರಾಜಸ್ಥಾನದ ಜನತೆ ಭಜನ್‌ಲಾಲ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಅಂಕಿಅಂಶಗಳನ್ನು ಉಲ್ಲೇಖಿಸಿ ಮಾತನಾಡಿದ ದೋತಸ್ರಾ, ಒಟ್ಟು 37 ಜಿಲ್ಲಾ ಪರಿಷತ್ ಸ್ಥಾನಗಳ ಪೈಕಿ ಕಾಂಗ್ರೆಸ್ 27ರಲ್ಲಿ ಗೆಲುವು ಸಾಧಿಸುತ್ತಿದ್ದರೆ, ಬಿಜೆಪಿ ಕೇವಲ 6 ಜಿಲ್ಲೆಗಳಿಗೆ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, 419 ಪಂಚಾಯತ್ ಸಮಿತಿ ಸ್ಥಾನಗಳಲ್ಲಿ ಕಾಂಗ್ರೆಸ್ 269ಕ್ಕೂ ಹೆಚ್ಚು ಕಡೆ ಬಹುಮತ ಪಡೆದಿದ್ದು, ಬಿಜೆಪಿ ಕೇವಲ 73 ಸ್ಥಾನಗಳನ್ನು ಮಾತ್ರ ಗೆದ್ದಿದೆ ಎಂದು ಹೇಳಿದ್ದಾರೆ. ಜನರ ವಿಶ್ವಾಸ ಕಳೆದುಕೊಂಡಿರುವ ಸಿಎಂ ಭಜನ್‌ಲಾಲ್ ಶರ್ಮಾ ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿದ್ದರೆ ತಕ್ಷಣ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ನಾಯಕ ಅಭಿಷೇಕ್ ದತ್ ಮಾತನಾಡಿ, ರಾಜಸ್ಥಾನದ ಜನತೆ ಬಿಜೆಪಿ ವಿರುದ್ಧದ ಆಕ್ರೋಶವನ್ನು ಮತಗಳ ಮೂಲಕ ವ್ಯಕ್ತಪಡಿಸಿದ್ದು, ಇಡೀ ದೇಶಕ್ಕೆ ಪ್ರಬಲ ಸಂದೇಶ ರವಾನಿಸಿದ್ದಾರೆ ಎಂದಿದ್ದಾರೆ. 'ಮೋದಿ ಮತ್ತೆ ಮತ್ತೆ ಬರುತ್ತಾರೆ' ಎಂಬ ಬಿಜೆಪಿಯ ಹೇಳಿಕೆಗಳಿಗೆ ರಾಜಸ್ಥಾನದ ಫಲಿತಾಂಶ ಮೊದಲ ಪೆಟ್ಟು ನೀಡಿದ್ದು, 2027ರಲ್ಲಿ ಐದು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲೂ ಬಿಜೆಪಿ ಸೋಲು ಅನುಭವಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಕಳೆದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ರಾಜಸ್ಥಾನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒಟ್ಟು 309 ನಗರ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಶೇ. 35.18 (37,35,567) ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಶೇ. 34.24 (36,35,952) ಮತಗಳನ್ನು ಗಳಿಸಿತ್ತು. ಬಿಜೆಪಿ ಕೇವಲ ಶೇ. 0.94 (99,615 ಮತಗಳು) ಅಂತರದಿಂದ ಅಲ್ಪ ಮುನ್ನಡೆ ಸಾಧಿಸಿತ್ತು.

ಜೈಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 78 ಸ್ಥಾನಗಳನ್ನು ಗೆದ್ದಿದ್ದರೆ, ರಾಜ್ಯಾದ್ಯಂತ ಪಕ್ಷೇತರ ಅಭ್ಯರ್ಥಿಗಳು ಶೇ. 27.38 (29,06,787) ಮತಗಳನ್ನು ಪಡೆಯುವ ಮೂಲಕ ನಿರ್ಣಾಯಕ ಪಾತ್ರ ವಹಿಸಿದ್ದರು. ಉಳಿದಂತೆ ನೋಟಾ (NOTA) ಶೇ. 1.03, ಆರ್‌ಎಲ್‌ಪಿ ಶೇ. 0.94, ಆಪ್ ಶೇ. 0.46, ಸಿಪಿಐ(ಎಂ) ಶೇ. 0.32, ಬಿಎಸ್‌ಪಿ ಶೇ. 0.28 ಹಾಗೂ ಬಿಎಪಿ ಶೇ. 0.13 ರಷ್ಟು ಮತಗಳನ್ನು ಪಡೆದಿದ್ದವು.

Dailyhunt
Disclaimer: This content has not been generated, created or edited by Dailyhunt. Publisher: Vijayvani