Dailyhunt
ರೈತರಿಗೆ ಹೈಟೆಕ್ ಸಹಾಯವಾಣಿ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಘೊಷಣೆ ; ರಾಜ್ಯ ಮಟ್ಟದ ವಿಜಯವಾಣಿ ಕೃಷಿ ಮೇಳಕ್ಕೆ ವಿಧ್ಯುಕ್ತ ಚಾಲನೆ

ರೈತರಿಗೆ ಹೈಟೆಕ್ ಸಹಾಯವಾಣಿ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಘೊಷಣೆ ; ರಾಜ್ಯ ಮಟ್ಟದ ವಿಜಯವಾಣಿ ಕೃಷಿ ಮೇಳಕ್ಕೆ ವಿಧ್ಯುಕ್ತ ಚಾಲನೆ

ಮೈಸೂರು: ರಾಜ್ಯದ ಅನ್ನದಾತರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆಯಿರಿಸಿದ್ದು, ರೈತರಿಗೆ ಮಾರುಕಟ್ಟೆ ದರ, ಬೆಳೆ ಪದ್ಧತಿ ಹಾಗೂ ರೋಗ ನಿಯಂತ್ರಣದ ಬಗ್ಗೆ ಬೆರಳ ತುದಿಯಲ್ಲೇ ನಿಖರ ಮಾಹಿತಿ ನೀಡುವ ಕ್ರಾಂತಿಕಾರಿ 'ರೈತ ಸಹಾಯವಾಣಿ' ಯೋಜನೆಗೆ ರಾಜ್ಯ ಸರ್ಕಾರ ಶೀಘ್ರದಲ್ಲೇ ಚಾಲನೆ ನೀಡಲಿದೆ ಎಂದು ಕೃಷಿ ಸಚಿವ ಎನ್.
ಚಲುವರಾಯಸ್ವಾಮಿ ಘೊಷಿಸಿದ್ದಾರೆ.

ವಿಆರ್​ಎಲ್ ಮೀಡಿಯಾ ಪ್ರೈ. ಲಿಮಿಟೆಡ್​ನ ವಿಜಯವಾಣಿ ಪತ್ರಿಕೆ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ರಾಜ್ಯ ಮಟ್ಟದ ಬೃಹತ್ ಕೃಷಿ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಕಚೇರಿಗಳಿಗೆ ಅಲೆಯುವ ಪದ್ಧತಿಗೆ ಇತಿಶ್ರೀ ಹಾಡಿ, ತಂತ್ರಜ್ಞಾನದ ಮೂಲಕ ಅವರ ಬದುಕನ್ನು ಸದೃಢಗೊಳಿಸುವುದೇ ಈ ಯೋಜನೆಯ ಆಶಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಬಣ್ಣಿಸಿದರು.
ಗೊಬ್ಬರ, ಬಿತ್ತನೆ ಬೀಜ, ಔಷಧ, ಯಾವ ರೋಗಕ್ಕೆ ಯಾವ ಔಷಧ ಬಳಸುವುದು ಮತ್ತು ಹೊಸ ತಂತ್ರಜ್ಞಾನದ ಬಗ್ಗೆ ಸಹಾಯವಾಣಿಗೆ ಕರೆ ಮಾಡಿದರೆ ರೈತರಿಗೆ ಮಾಹಿತಿ ದೊರೆಯಲಿದೆ. ಧ್ವನಿ ಆಧಾರಿತ ಸಂದೇಶದ ಜತೆಗೆ ರೈತರ ಮೊಬೈಲ್​ಗೆ ಸಂದೇಶವುಳ್ಳ ಮಾಹಿತಿ ಬರಲಿದೆ. ರಾಜ್ಯದ 80 ಲಕ್ಷಕ್ಕೂ ಅಧಿಕ ರೈತರು, ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಗೆ ಅಲೆಯುವುದು ತಪ್ಪಲಿದೆ. ರೈತರನ್ನು ಸದೃಢ ಮಾಡಿದರೆ ಮಾತ್ರ ದೇಶವು ಬಲಿಷ್ಠ, ಸಮೃದ್ಧಿಯಾಗಲಿದೆ ಎಂದರು. ಹಿಂದೆ ಆಹಾರವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದವು. ಇಂದು ವಿದೇಶಗಳಿಗೆ ರಫ್ತು ಮಾಡುವ ಹಂತಕ್ಕೆ ನಾವು ಬಂದಿದ್ದೇವೆ. ರಾಷ್ಟ್ರದಲ್ಲಿ ಆಹಾರ ಉತ್ಪಾದನೆ ಹೆಚ್ಚಿದ್ದು, ಕರ್ನಾಟಕ 160 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡುತ್ತಿದೆ. ಹವಾಮಾನ ವೈಪರೀತ್ಯ ಸವಾಲು ಮೆಟ್ಟಿನಿಂತು ರೈತರು, ದೇಶಕ್ಕೆ ಇನ್ನಷ್ಟು ಆಹಾರ ನೀಡಲು ಸಜ್ಜಾಗಬೇಕಿದೆ ಎಂದು ಕರೆ ನೀಡಿದರು.

ಬಿತ್ತನೆ ಬೀಜ, ಗೊಬ್ಬರ ಪೂರೈಸಲು ಸಿದ್ಧ: ಮುಂಗಾರು ಆರಂಭವಾಗುತ್ತಿದ್ದಂತೆ ಬಿತ್ತನೆ ಬೀಜ, ಗೊಬ್ಬರ ಮತ್ತು ಔಷಧ ಪೂರೈಸಲು ನಮ್ಮ ಇಲಾಖೆ ಸಿದ್ಧವಿದೆ. ಮಧ್ಯಪ್ರಾಚ್ಯ ಸಂಘರ್ಷ ಹಿನ್ನೆಲೆಯಲ್ಲಿ ರಸಗೊಬ್ಬರದ ಅಭಾವ ಸೃಷ್ಟಿ ಮಾಡುವ ಅವಶ್ಯಕತೆ ಇಲ್ಲ. ರೈತರಲ್ಲದವರು ಅನಗತ್ಯವಾಗಿ ಗೊಬ್ಬರ ಖರೀದಿಸಬಾರದು. ಬೆಳೆ ಗುಣಮಟ್ಟ, ಇಳುವರಿ ಹಾಗೂ ಜನರ ಆರೋಗ್ಯ ದೃಷ್ಟಿಯಿಂದ ರಾಸಾಯನಿಕ ಬಳಕೆ ತಗ್ಗಬೇಕು ಎಂದು ಚಲುವರಾಯಸ್ವಾಮಿ ಸಲಹೆ ನೀಡಿದರು. ಮಣ್ಣಿನ ಗುಣಮಟ್ಟ ಪರೀಕ್ಷೆ ಮಾಡಲು ಈ ಬಾರಿ ಕ್ರಮ ತೆಗೆದುಕೊಂಡಿದ್ದೇವೆ.
ರಾಷ್ಟ್ರದಲ್ಲಿ ಶೇ.10 ಪ್ರಯೋಗಾಲಯಗಳಿಗೆ ಮಾನ್ಯತೆ ಸಿಕ್ಕಿಲ್ಲ. ಆದರೆ, ರಾಜ್ಯದ 52 ಪ್ರಯೋಗಾಲಯಗಳನ್ನೂ ರಾಷ್ಟ್ರಮಟ್ಟದ ಮಾನ್ಯತೆ ಪಡೆಯುವ ಉದ್ದೇಶ ಹೊಂದಿದ್ದೇವೆ. ಸಾವಯವ ಕೃಷಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ 'ಜೋಯಿಡಾ' ತಾಲೂಕು ಸಾವಯವ ತಾಲೂಕು ಎಂದು ಘೊಷಣೆ ಮಾಡಿದ್ದೆವು. ಈ ಬಾರಿ ಮಂಡ್ಯ ಜಿಲ್ಲೆಯ 'ಪಾಂಡವಪುರ' ಸಾವಯವ ತಾಲೂಕು ಮಾಡಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಇಲಾಖೆಯಿಂದ ಜೈವಿಕ ಕೀಟನಾಶಕಗಳ ಉತ್ಪಾದನೆ ಮಾಡುವ ಪ್ರಯೋಗಶಾಲೆಗಳನ್ನು ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಮಗ್ರ ಕೃಷಿಗೆ ಉತ್ತೇಜನ ನೀಡಲು 100 ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಸಚಿವರು ವಿವರಿಸಿದರು.

ರೈತರ ಸಬಲೀಕರಣಕ್ಕೆ ಒತ್ತು

ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ (ಕೆಪೆಕ್), ಆಹಾರ ಉದ್ದಿಮೆ ಆರಂಭಿಸುವ ರೈತರಿಗೆ 30 ಲಕ್ಷ ರೂ.ವರೆಗೆ ಸಬ್ಸಿಡಿ ನೀಡುತ್ತಿದೆ. ಇದನ್ನು ರೈತ ಉದ್ದಿಮೆಗಳು ಸದ್ಬಳಕೆ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಸೂಟು ಬೂಟು ಹಾಕಿಕೊಂಡು ಹೋಗುವವರಿಗೆ ಮಾನ್ಯತೆ ನೀಡುತ್ತದೆ. ಆದರೆ, ನಮ್ಮ ಸರ್ಕಾರವು ರೈತರಿಗೆ ನೀರಾವರಿ ಸೌಲಭ್ಯ, ಗೊಬ್ಬರ, ಔಷಧ, ರೋಗ ನಿರ್ವಹಣೆಗೆ ಸೂಕ್ತ ಮಾರ್ಗದರ್ಶನ, ಸಂಸ್ಕರಣೆ, ಮಾರುಕಟ್ಟೆ ವ್ಯವಸ್ಥೆಗೆ ಆದ್ಯತೆ ನೀಡಿದೆ. ಈ ಮೂಲಕ ರೈತರ ಸಬಲೀಕರಣ ಒತ್ತು ಕೊಡಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು. ಮೈಸೂರು ವಿಭಾಗದಲ್ಲಿ ಕೃಷಿಗೆ ಸಂಬಂಧಿಸಿದ ವಿವಿಗಳು ಇರಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯ್ ಅವರು 1939ರಲ್ಲೇ ಮಂಡ್ಯದಲ್ಲಿ ವಿ.ಸಿ. ಫಾರ್ಮ್​ನಲ್ಲಿ ಮೊದಲ ಕೃಷಿ ಸಂಶೋಧನಾ ಕೇಂದ್ರ ಪ್ರಾರಂಭಿಸಿದ್ದರು. ಅಂತಹ ಸಂಶೋಧನಾ ಕೇಂದ್ರವನ್ನು 80 ವರ್ಷಗಳ ನಂತರ ಕೃಷಿ ವಿವಿ ಮಾಡಿದ ಕೀರ್ತಿ ನಮ್ಮ ಸರ್ಕಾರಕ್ಕೆ ಸಲ್ಲುತ್ತದೆ ಎಂದರು. "

'ವಿಜಯವಾಣಿ' ಮಾಧ್ಯಮ ನಾಡಿನ ರೈತರ ಪರವಾಗಿ ಕೆಲಸ ಮಾಡುತ್ತಿರುವುದಕ್ಕೆ ಕೃಷಿ ಮೇಳವೇ ಸಾಕ್ಷಿ. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ಉದ್ಯಮಿಯಾಗಿದ್ದರೂ ರೈತರು ಮತ್ತು ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾದದು.

ಎನ್.ಚಲುವರಾಯಸ್ವಾಮಿ ಕೃಷಿ ಸಚಿವ

ವಿಜಯವಾಣಿ ಪ್ರಧಾನ ಸಂಪಾದಕ ಕೆ.ಎನ್.ಚನ್ನೇಗೌಡ, ಗೋಪಾಲಕರ ಸಂಘದ ಅಧ್ಯಕ್ಷ ಡಿ. ನಾಗಭೂಷಣ್, ವಿಆರ್​ಎಲ್ ಮೀಡಿಯಾ ಪ್ರೈ.ಲಿ.ನ ಹಿರಿಯ ಉಪಾಧ್ಯಕ್ಷ (ಜಾಹೀರಾತು ವಿಭಾಗ) ಅರುಣ್ ಕರಡಿ, ವಿಜಯವಾಣಿ ಡಿಜಿಟಲ್ ಸಂಪಾದಕ ಸಿದ್ದು ಕಾಳೋಜಿ, ವಿಜಯವಾಣಿ ಮೈಸೂರಿನ ಸ್ಥಾನಿಕ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ, ವಿಆರ್​ಎಲ್ ಮೈಸೂರು ವಿಭಾಗದ ವ್ಯವಸ್ಥಾಪಕ ಅಶೋಕ ಯಂಡಿಗೇರಿ ಮತ್ತಿತರರಿದ್ದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani