Dailyhunt Logo
  • Light mode
    Follow system
    Dark mode
    • Play Story
    • App Story
ರೋಗ ನಿಯಂತ್ರಿಸಿದರೆ ರೈತನೇ ನಿಜ ವೈದ್ಯ:ಡಾ.ಖಾದರ್ ವಲಿ ಅಭಿಮತ

ರೋಗ ನಿಯಂತ್ರಿಸಿದರೆ ರೈತನೇ ನಿಜ ವೈದ್ಯ:ಡಾ.ಖಾದರ್ ವಲಿ ಅಭಿಮತ

ಮೈಸೂರು:ದೇಶವನ್ನು ರೋಗಮುಕ್ತವನ್ನಾಗಿಸುವ ಶಕ್ತಿ ಇರುವುದು ನಮ್ಮ ರೈತರಿಗೆ ಮಾತ್ರ ಎಂದು ಸಿರಿಧಾನ್ಯ ತಜ್ಞ ಡಾ.ಖಾದರ್ ವಲಿ ಅಭಿಪ್ರಾಯಪಟ್ಟರು.ಪರಿಸರ ದಿನಾಚರಣೆ ಅಂಗವಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ಪರಿಸರ ಮತ್ತು ಆರೋಗ್ಯ ಕುರಿತ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.ಆಹಾರ ಬೆಳೆಯುವ ಪದ್ಧತಿಯಿಂದ ರೋಗ ನಿಯಂತ್ರಿಸಿದರೆ ರೈತನೇ ನಿಜವಾದ ವೈದ್ಯ.
ಹಾಗಾಗಿ ದೇಶದಲ್ಲಿ ಜನರನ್ನು ರೋಗ ಮುಕ್ತವಾಗಿಸುವುದು ರೈತನೇ ಹೊರತು ವೈದ್ಯರಿಂದ ಸಾಧ್ಯವಿಲ್ಲ. ಸಾವಯವ ಕೃಷಿ ಮಾಡಿ ಸಿರಿಧಾನ್ಯ, ಸೊಪ್ಪು ತರಕಾರಿ ಬೆಳೆದರೆ ಅದನ್ನು ತಿಂದರೆ ಖಂಡಿತ ರೋಗ ಮುಕ್ತರಾಗುತ್ತಾರೆ. ಈ ಕಾರ್ಯವನ್ನು ಮಾಡಲು ರೈತರಿಂದ ಸಾಧ್ಯ ಎಂದು ಹೇಳಿದರು.ಸಿರಿಧಾನ್ಯ ಕುರಿತು ಸರಿಯಾದ ಮಾಹಿತಿ ಪಡೆದು ಬಳಸಬೇಕು. ಸುಮಾರು 8 ಗಂಟೆಗಳ ಕಾಲ ಸಿರಿಧಾನ್ಯಗಳನ್ನು ನೀರಿನಲ್ಲಿ ನೆನೆಸಿ ಅಡುಗೆ ಮಾಡಿ ತಿನ್ನಬೇಕು. ಇಲ್ಲದಿದ್ದರೆ ನಿರೀಕ್ಷಿತ ಫಲಿತಾಂಶ ಬರುವುದಿಲ್ಲ. ನಾರು, ನೀರು, ಆಹಾರ ಇಲ್ಲದೆ ರೋಗ ಮುಕ್ತವಾಗಿರಲು ಸಾಧ್ಯವಿಲ್ಲ. ಎಲ್ಲರೂ ಆಹಾರ ಪದ್ಧತಿ ಬದಲಾಯಿಸಿಕೊಂಡರೆ ಆರೋಗ್ಯ ಉತ್ತಮವಾಗಿರುತ್ತದೆ. 30 ವರ್ಷಗಳ ಹಿಂದೆ ಅಪರೂಪದ ಯಾವುದೋ ಒಂದೊಂದು ಮನೆಯಲ್ಲಿ ಸಕ್ಕರೆ ಕಾಯಿಲೆ ಇತ್ತು. ಆದರೆ, ಇಂದು ಪ್ರತಿ ಮನೆಯಲ್ಲೂ ಡಯಾಬಿಟಿಸ್, ಬಿಪಿ, ಇನ್ನಿತರ ಕಾಯಿಲೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.ಮೂರು ತಿಂಗಳು ಅನ್ನ, ಸಕ್ಕರೆ, ಗೋಧಿ, ಬಿಟ್ಟು , ಸಿರಿಧಾನ್ಯ ತಿನ್ನಿ. 3 ತಿಂಗಳ ನಂತರ ಆರೋಗ್ಯ ಎಷ್ಟು ಉತ್ತಮವಾಗಿರುತ್ತದೆ ನೋಡಿ. ಹಾಗಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ. ರೈತರು ಕಾರ್ಪೋರೇಟ್ ಕಂಪನಿಗಳ ಗುಲಾಮನಾಗಬಾರದು. ಹಣ ಸಂಪಾದನೆಗಾಗಿ ಆರೋಗ್ಯ ಹಾಳು ಮಾಡುವ ವ್ಯವಸಾಯ ಮಾಡಿ, ವೈದ್ಯರಿಗೆ ಹಣ ಕೊಡಬೇಡಿ. ಅತಿಯಾದ ರಾಸಾಯನಿಕ, ಕ್ರಿಮಿನಾಶಕ ಬಳಕೆಯಿಂದ ಆಹಾರ ಪದಾರ್ಥಗಳು ವಿಷಪೂರಿತವಾಗುತ್ತಿವೆ ಎಂದು ಹೇಳಿದರು.ರೈತರು ಹೊಲದಲ್ಲಿ ಕೇವಲ 10 ಪರ್ಸೆಂಟ್ ಸಾವಯವ ಕೃಷಿ ಪದ್ಧತಿಯಲ್ಲಿ ಗೆಡ್ಡೆ-ಗೆಣಸು, ಸೊಪ್ಪು-ತರಕಾರಿ ಬೆಳೆದು ತಿನ್ನಿ. ಈ ಮೂಲಕ ಆರೋಗ್ಯಯುತ ಪದಾರ್ಥಗಳು ದೊರೆಯುತ್ತವೆ. ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರೆ ದೇಶ ಮುಂದಿನ 5 ವರ್ಷಕ್ಕೆ ಎಲ್ಲ ರೋಗವನ್ನು ದೂರ ಮಾಡಬಹುದು ಎಂದು ಅಭಿಪ್ರಾಯಪಟ್ಟರು.ಸುಮಾರು 25 ಸಾವಿರ ಜನ ರೈತರಿಗೆ ಬಿತ್ತನೆ ಬೀಜ ಕೊಟ್ಟು ಸಿರಿಧಾನ್ಯ ಬೆಳೆಯುವುದಕ್ಕೆ ತರಬೇತಿ ಕೊಡಬೇಕು. ಸಾವಯವ ಪದ್ಧತಿಯಲ್ಲಿ ರೈತರು ಬೆಳೆದ ಪದಾರ್ಥಗಳನ್ನು ನೇರವಾಗಿ ಗ್ರಾಹಕರಿಗೆ ಮಾರುವ ರೀತಿ ಆಗಬೇಕು. ಇದರಿಂದ ಮಧ್ಯವರ್ತಿಗಳಿಲ್ಲದೆ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಪದಾರ್ಥ, ರೈತರಿಗೆ ಹೆಚ್ಚಿನ ಆದಾಯ ದೊರೆತಂತಾಗುತ್ತದೆ ಎಂದರು.ಹಲವು ವರ್ಷಗಳಿಂದ ಡಯಾಬಿಟಿಸ್‌ಗೆ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದ ವ್ಯಕ್ತಿ ಇಂದು ಸಿರಿಧಾನ್ಯ, ಸಾವಯವ ಕೃಷಿಯಲ್ಲಿ ಬೆಳೆದ ತರಕಾರಿ ಸೇವನೆಯಿಂದ ಸಕ್ಕರೆ ರೋಗ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಸಾವಯವ ಕೃಷಿಯಲ್ಲಿ ಬೆಳೆದ ತರಕಾರಿ ಸೇವನೆ ಹಾಗೂ ಆಹಾರ ಪದ್ಧತಿಯಲ್ಲಿ ಬದಲಾಯಿಸಿದ ಆರೋಗ್ಯದಲ್ಲಿ ಚೇತರಿಕೆ ಆಗಿದೆ. ಯಾವುದೇ ರೋಗ ಬಂದರೂ ನಮ್ಮದೇ ಆಹಾರದಲ್ಲಿ ಆರೋಗ್ಯ ಉತ್ತಮಪಡಿಸಬೇಕು ಎಂದರೆ ನಮ್ಮ ಅಡುಗೆ ಮನೆಯಲ್ಲಿ ಎಲ್ಲ ಸಾಧ್ಯವಿದೆ. ನಮ್ಮ ಹಿರಿಯರು ಹೇಳಿಕೊಟ್ಟ ಆಹಾರ ಪದ್ಧತಿ ವೈಜ್ಞಾನಿಕವಾಗಿದ್ದು ಅದನ್ನು ಅನುಸರಿಸಬೇಕು ಎಂದರು.ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ, ರಾಜ್ಯದಲ್ಲಿ 41,200 ಕೆರೆಗಳು, ಮೈಸೂರು ಜಿಲ್ಲೆಯಲ್ಲಿ 2,990 ಕೆರೆಗಳ ಪುನರುಜ್ಜೀವನಗೊಳಿಸಿ ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಈಗ ಏಳು ಜನರಿಗೆ ಒಂದು ಮರ ಆಮ್ಲಜನಕ ನೀಡುತ್ತಿದೆ ಎಂದು ಸಂಶೋಧನಾ ವರದಿಗಳು ಹೇಳುತ್ತಿವೆ. ಶುದ್ಧ ಪರಿಸರವಿದ್ದರೆ ಪ್ರತಿಯೊಬ್ಬ ಮನುಷ್ಯರಿಗೆ ಶುದ್ಧ ಆರೋಗ್ಯವಿರುತ್ತದೆ. ರೈತರು ಗ್ರಾಮೀಣ ಭಾಗದಲ್ಲಿರುವ ಕೆರೆಗಳಲ್ಲಿ ಹೂಳು ತೆಗೆಸಿ ಆ ಮಣ್ಣನ್ನು ಜಮೀನಿಗೆ ಹಾಕಿಕೊಂಡರೆ ಭೂಮಿ ಫಲವತ್ತತೆ ವೃದ್ಧಿಸುತ್ತದೆ. ಇದರಿಂದ ರಸಗೊಬ್ಬರ ಕೀಟನಾಶಕ ಬಳಕೆ ಕಡಿಮೆಯಾಗುತ್ತದೆ ಎಂದರು.ಕೆರೆಗಳ ಸಂರಕ್ಷಣೆಯಿಂದ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚುತ್ತದೆ. ಗಿಡಗಳನ್ನು ನೆಡುವ ಮೂಲಕ ಉಸಿರಾಟಕ್ಕೆ ಬೇಕಾದ ಉತ್ತಮ ಆಮ್ಲಜನಕ ಪಡೆಯಲು ಅನುಕೂಲವಾಗುತ್ತದೆ. ದೆಹಲಿಯಂತ ದೊಡ್ಡ ನಗರಗಳಲ್ಲಿ ಪರಿಸರ ಹಾನಿಯಾಗಿ ಆಮ್ಲಜನಕದ ಕೊರತೆ ಉಂಟಾಗಿದೆ. ಇದನ್ನು ನಾವೆಲ್ಲ ಮನಗಾಣಬೇಕು. ಈ ಬಗ್ಗೆ ಎಚ್ಚೆತ್ತುಕೊಂಡರೆ ಭವಿಷ್ಯದಲ್ಲಿ ನಾವು ಸುರಕ್ಷತೆಯಿಂದ ಇರಬಹುದು ಎಂದು ಹೇಳಿದರು.ಸತ್ಯಸಾಯಿ ಸೇವಾ ಟ್ರಸ್ಟ್ ಆಸ್ಪತ್ರೆಯ ಶಾಲಿನಿ ಶ್ರೀನಿವಾಸ್, ನಯನ ಕುಮಾರ್ ಆಸ್ಪತ್ರೆಯ ಡಾ.ಗಜಾನನ ಹೆಗಡೆ, ಸಂಘದ ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಬರಡನಪುರ ನಾಗರಾಜ್, ಅತ್ತಹಳ್ಳಿ ದೇವರಾಜ್, ವರಕೋಡು ನಾಗೇಶ್ ಇತರರು ಇದ್ದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani