Forgetfulness: ರೂಮ್‌ಗೆ ಹೋದ ತಕ್ಷಣ 'ನಾನು ಇಲ್ಲಿಗೆ ಯಾಕೆ ಬಂದೆ?' ಅಂತ ಮರೆತುಹೋಗುತ್ತಾ? ಕೆಲವೇ ಕ್ಷಣಗಳ ಹಿಂದೆ ನೆನಪಿನಲ್ಲಿದ್ದ ವಿಚಾರ ಇದ್ದಕ್ಕಿದ್ದಂತೆ ಮಾಯವಾಗಬಹುದು. ಇದು ಯಾವಾಗಲೂ ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದರ್ಥವಲ್ಲ. ಮೆದುಳು ಕೆಲಸ ಮಾಡುವ ರೀತಿಯೂ ಇದಕ್ಕೆ ಕಾರಣವಾಗಬಹುದು.
ಇನ್ನು, ರೂಮ್ ಅಥವಾ ಸ್ಥಳ ಬದಲಿಸುವಾಗ ಇತ್ತೀಚೆಗೆ ಮನಸ್ಸಿನಲ್ಲಿದ್ದ ಮಾಹಿತಿಯನ್ನು ನೆನಪಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗಬಹುದು. ಇದನ್ನು ವಿಜ್ಞಾನದಲ್ಲಿ 'ಡೋರ್‌ವೇ ಎಫೆಕ್ಟ್' ಅಥವಾ 'ಲೊಕೇಶನ್ ಅಪ್‌ಡೇಟಿಂಗ್ ಎಫೆಕ್ಟ್' ಎಂದು ಕರೆಯಲಾಗುತ್ತದೆ.
ಡೋರ್‌ವೇ ಎಫೆಕ್ಟ್
2014ರ ಅಧ್ಯಯನವೊಂದರಲ್ಲಿ, ಪರಿಚಿತ ಜಾಗದಲ್ಲಿ ಓಡಾಡುತ್ತಿರುವುದನ್ನು ಕಲ್ಪಿಸಿಕೊಂಡಾಗಲೂ, ಬಾಗಿಲು ದಾಟಿ ಜಾಗ ಬದಲಿಸಿದ ಸಂದರ್ಭದಲ್ಲಿ ಮರೆವು ಹೆಚ್ಚಾಗಿರುವುದು ಕಂಡುಬಂದಿದೆ. ಅಂದರೆ, ನಿಜವಾಗಿಯೂ ಬಾಗಿಲು ದಾಟಬೇಕಿಲ್ಲ; ಜಾಗ ಬದಲಾಗುತ್ತಿದೆ ಎಂದು ಕಲ್ಪಿಸಿಕೊಂಡರೂ 'ಡೋರ್‌ವೇ ಎಫೆಕ್ಟ್' ಕಾಣಿಸಿಕೊಳ್ಳಬಹುದು.
ಬಾಗಿಲು ದಾಟಿದ ತಕ್ಷಣ ಏಕೆ ಮರೆತುಹೋಗುತ್ತೆ?
ಮೆದುಳು ನಮ್ಮ ಅನುಭವಗಳನ್ನು ಬೇರೆ ಬೇರೆ ಸಂದರ್ಭಗಳಾಗಿ ವಿಂಗಡಿಸುತ್ತದೆ. ಹೀಗಾಗಿ ಒಂದು ರೂಮ್‌ನಿಂದ ಮತ್ತೊಂದು ರೂಮ್‌ಗೆ ಹೋದಾಗ, ಹೊಸ ಪರಿಸರಕ್ಕೆ ಮೆದುಳು ಹೊಂದಿಕೊಳ್ಳುವ ವೇಳೆ ಕೆಲ ಕ್ಷಣಗಳ ಹಿಂದಿನ ಆಲೋಚನೆ ತಾತ್ಕಾಲಿಕವಾಗಿ ನೆನಪಿಗೆ ಬಾರದಿರಬಹುದು.
ಡೋರ್‌ವೇ ಎಫೆಕ್ಟ್' ಎಂದರೆ ಏನು?ಆದರೆ 2021ರ ಅಧ್ಯಯನದ ಪ್ರಕಾರ, ಈ ಪರಿಣಾಮ ಎಲ್ಲ ಸಂದರ್ಭಗಳಲ್ಲೂ ಕಾಣಿಸುವುದಿಲ್ಲ. ಮನಸ್ಸಿನಲ್ಲಿ ಹಲವು ವಿಚಾರಗಳಿದ್ದಾಗ ಅಥವಾ ಮೆದುಳಿನ ಮೇಲೆ ಹೆಚ್ಚು ಒತ್ತಡವಿದ್ದಾಗ, ಸ್ಥಳ ಬದಲಾವಣೆಯಿಂದ ನೆನಪು ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಾಗಬಹುದು.
ಹಿಂದಕ್ಕೆ ಹೋದಾಗ ನೆನಪು ಏಕೆ ಬರುತ್ತೆ?
ನೀವು ಬಂದ ಜಾಗಕ್ಕೆ ಹಿಂದಿರುಗಿದಾಗ ಕೆಲವೊಮ್ಮೆ ಮರೆತಿದ್ದ ವಿಚಾರ ಮತ್ತೆ ನೆನಪಾಗುತ್ತದೆ. ಹಿಂದಿನ ಜಾಗದ ಪರಿಸರ ಮತ್ತು ಅಲ್ಲಿದ್ದ ಕೆಲವು ಸುಳಿವುಗಳು ಮೆದುಳಿಗೆ ಆ ವಿಚಾರವನ್ನು ಮತ್ತೆ ನೆನಪಿಸಿಕೊಳ್ಳಲು ಸಹಾಯ ಮಾಡುತ್ತವೆ.
ನೀವು ಬಂದ ಜಾಗಕ್ಕೆ ಹಿಂದಿರುಗಿದಾಗ ಮತ್ತೆ ನೆನಪಾಗುತ್ತದೆಹೀಗಾಗಿ, ರೂಮ್‌ಗೆ ಹೋದಾಗ ಏಕೆ ಬಂದೆವು ಅನ್ನೋದು ಮರೆತುಹೋಗುವುದು ಯಾವಾಗಲೂ ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದರ್ಥವಲ್ಲ. ಜಾಗ ಬದಲಾವಣೆ, ಗಮನ ಬೇರೆಡೆ ಹೋಗುವುದು ಮತ್ತು ಒಂದೇ ಸಮಯದಲ್ಲಿ ಹಲವು ವಿಚಾರಗಳ ಬಗ್ಗೆ ಯೋಚಿಸುವುದೂ ಇದಕ್ಕೆ ಕಾರಣವಾಗಬಹುದು.
ಮುಂದಿನ ಬಾರಿ ರೂಮ್‌ಗೆ ಹೋದಾಗ ಏಕೆ ಬಂದೆವು ಅನ್ನೋದು ಮರೆತರೆ ತಕ್ಷಣ ಗಾಬರಿಯಾಗಬೇಕಿಲ್ಲ. ಹೊಸ ಜಾಗಕ್ಕೆ ಮೆದುಳು ಹೊಂದಿಕೊಳ್ಳುತ್ತಿರುವುದರಿಂದಲೂ ಹೀಗೆ ಆಗಬಹುದು.

