Dailyhunt Logo
  • Light mode
    Follow system
    Dark mode
    • Play Story
    • App Story
ಸಾಂಸ್ಕೃತಿಕ ಪರಂಪರೆ ನಮ್ಮ ಶಕ್ತಿ, ಅವರ ಸಂಕಟ

ಸಾಂಸ್ಕೃತಿಕ ಪರಂಪರೆ ನಮ್ಮ ಶಕ್ತಿ, ಅವರ ಸಂಕಟ

ಆಂಗ್ಲೋಸ್ಪಿಯರ್ ಎಂದು ಒಟ್ಟಿಗೆ ಕರೆಸಿಕೊಳ್ಳುವ ಇಂಗ್ಲೆಂಡ್ (ರಾಜಕೀಯವಾಗಿ ಯುನೈಟೆಡ್ ಕಿಂಗ್​ಡಂ, ಆಡುಮಾತಿನಲ್ಲಿ ಬ್ರಿಟನ್), ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ಗೆ ಇತರೆಲ್ಲಾ ದೇಶಗಳು ಮತ್ತವುಗಳ ಜನತೆ ಹೊರಗಿನವರು. ತಮ್ಮೊಳಗೆ ಮಾಡಿಕೊಳ್ಳುವಷ್ಟು ಹೊಂದಾಣಿಕೆಯನ್ನು ಅವು ಬೇರಾವ ದೇಶದೊಂದಿಗೂ ಮಾಡಿಕೊಳ್ಳುವುದಿಲ್ಲ.
ಮಾಡಿಕೊಂಡರೂ ಅದು ಸೀಮಿತ ವಿಷಯಾಧಾರಿತ ಹಾಗೂ ತಾತ್ಕಾಲಿಕ, ಅನುಕೂಲಸಿಂಧು ಮದುವೆಯ ಹಾಗೆ, ಯಾವಾಗ ಬೇಕಾದರೂ ಕಿತ್ತೆಸೆದು ನಡೆದುಬಿಡುವಂತಹದ್ದು. 2020ರ ಜ. 31ರಂದು ಯೂರೋಪಿಯನ್ ಯೂನಿಯನ್​ನಿಂದ ಬ್ರಿಟನ್ ಹೊರಬಂದ ಬ್ರೆಕ್ಸಿಟ್ ಮತ್ತು ಫ್ರಾನ್ಸ್​ನೊಂದಿಗೆ ಮಾಡಿಕೊಂಡಿದ್ದ ಅಗಾಧ 65 ಬಿಲಿಯನ್ ಡಾಲರ್​ಗಳ ಅಣುಶಕ್ತಿಚಾಲಿತ ಫ್ರೆಂಚ್ ಸಬ್​ವೆುರೀನ್ ವಹಿವಾಟನ್ನು 2021ರ ಸೆ. 15ರಂದು ಆಸ್ಟ್ರೇಲಿಯಾ ಏಕಾಏಕಿ ಸಮುದ್ರಕ್ಕೆಸೆದು ಬ್ರಿಟನ್ ಮತ್ತು ಅಮೆರಿಕಾಗಳ ಜತೆ ಆಕಸ್ (ಅಖಿಓಖಿಖ) ಒಪ್ಪಂದ ಮಾಡಿಕೊಂಡದ್ದು ಆಂಗ್ಲೋಸ್ಪಿಯರ್​ನ ನೆಪೊಟಿಸಂಗೆ ಇತ್ತೀಚಿನ ಉದಾಹರಣೆಗಳು. ಈಗ ಕೆನಡಾ ಕುರಿತಾಗಿ ಟ್ರಂಪ್ ಅನುಸರಿಸುತ್ತಿರುವ ನೀತಿ ನಿಜ ಅರ್ಥದಲ್ಲಿ ಆಂಗ್ಲೋಸ್ಪಿಯರ್​ನಲ್ಲಿ ರಾಜಕೀಯ ಒಗ್ಗಟ್ಟನ್ನು ಸಾಧಿಸುವ ಅಡ್ಡಾದಿಡ್ಡಿ ಪ್ರಯತ್ನವಷ್ಟೇ. ಏನು ಬೇಕೆಂದು ಟ್ರಂಪ್​ಗೆ ಗೊತ್ತು, ಆದರೆ ಹೇಗೆ ಪಡೆದುಕೊಳ್ಳಬೇಕೆಂದು ಗೊತ್ತಿಲ್ಲ. ಅಥವಾ ಎಲ್ಲವೂ ತನ್ನ ಆಡಳಿತಾವಧಿಯಲ್ಲೇ ಆಗಿಬಿಡಬೇಕು ಎನ್ನುವ ಅವ್ಯಾವಹಾರಿಕ ಆತುರ. ಇದರ ತಾತ್ಕಾಲಿಕ ಆಘಾತವನ್ನು ತಾಳಿಕೊಳ್ಳುವ ಶಕ್ತಿ ಆಂಗ್ಲೋಸ್ಪಿಯರ್​ಗಿದೆ.

19ನೇ ಶತಮಾನದ ಆದಿಯಲ್ಲಿ ನ್ಯೂಜಿಲೆಂಡ್​ನಲ್ಲಿ ಇಂಗ್ಲಿಷರ ಕಾಯಂ ವಾಸ್ತವ್ಯದ ಆರಂಭದೊಂದಿಗೆ ಅನೌಪಚಾರಿಕವಾಗಿ ಅಸ್ತಿತ್ವಕ್ಕೆ ಬಂದ ಆಂಗ್ಲೋಸ್ಪಿಯರ್​ಗೆ ಅದೇ ಸಮಯದಲ್ಲಿ ಪ್ರಬಲ ವಿರೋಧ ವ್ಯಕ್ತವಾದದ್ದು ಫ್ರೆಂಚರಿಂದ. ಆದರೆ ಅದೂ ತಾತ್ಕಾಲಿಕವಾಗಿತ್ತಷ್ಟೇ. ಮಕ್ಕಳ ಗೀತೆಗಳ ಪುಸ್ತಕಗಳಲ್ಲಿರುವ The lion and the unicorn fought for the crown, the lion beat the unicorn all round the town! ಎಂಬ ಸಾಲಿನಲ್ಲಿನ ಲಯನ್ ಅನ್ನು ಇಂಗ್ಲೆಂಡ್ ಎಂದೂ, ಯೂನಿಕಾರ್ನ್ ಎನ್ನುವುದನ್ನು ಫ್ರಾನ್ಸ್ ಎಂದೂ ಬದಲಿಸಿಕೊಂಡರೆ ಆ ಎರಡು ದೇಶಗಳ ವಸಾಹತುಶಾಹಿ ಹಗ್ಗಜಗ್ಗಾಟ ಮತ್ತದರ ಅಂತಿಮ ಪರಿಣಾಮ ನಮಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. 1860ರ ದಶಕದಲ್ಲಿ ಕ್ವಿಬೆಕ್ ಅನ್ನು ಇಂಗ್ಲಿಷರಿಗೂ, ಲೂಸಿಯಾನಾವನ್ನು ಅಮೆರಿಕನ್ನರಿಗೂ ಒಪ್ಪಿಸಿದ ಮೇಲೆ ತಾವೇ ಬಹುಸಂಖ್ಯಾತರಾಗಬಹುದಾದ ಒಂದು ಪ್ರದೇಶವಾದರೂ ಫ್ರೆಂಚರಿಗೆ ಪ್ರಪಂಚದ ಯಾವ ಭಾಗದಲ್ಲೂ ಸಿಗಲಿಲ್ಲ. ಸಿಕ್ಕಿದ್ದೆಲ್ಲವೂ ಆಫ್ರಿಕಾದಲ್ಲಿ, ಆಗ್ನೇಯ ಏಷ್ಯಾದಲ್ಲಿ, ನಮ್ಮ ಪಾಂಡಿಚೇರಿಯಲ್ಲಿ ಅದಾಗಲೇ ಸ್ಥಳೀಯರಿಂದ ತುಂಬಿದ್ದ ಪ್ರದೇಶಗಳು. ಅವನ್ನೇ ಒಟ್ಟಿಗೆ ಸೇರಿಸಿ ಫ್ರಾಂಕೋಫೋನಿ ಎಂದು ಫ್ರೆಂಚರು ಕರೆದುಕೊಂಡದ್ದು ತಮ್ಮ ಸಮಾಧಾನಕ್ಕಷ್ಟೇ. ಅಲ್ಲೆಲ್ಲೂ ಅವರು ಶಾಶ್ವತವಾಗಿ ನೆಲೆಸಲಾಗಲಿಲ್ಲ. ಹೀಗಾಗಿ ಆಂಗ್ಲೋಸ್ಪಿಯರ್​ಗೆ ಫ್ರಾಂಕೋಫೋನಿ ಎಂದೂ ಸಮಾನ ಸ್ಪರ್ಧಿಯಾಗಲಿಲ್ಲ.

ಜನ್ಮತಃ ಒಂದೇ ಮೂಲದವರಾದ ಜರ್ಮನ್ನರು ಮತ್ತು ಇಂಗ್ಲಿಷರು ಒಂದಷ್ಟು ಕಾಲ ಭಯಂಕರವಾಗಿ ಕಿತ್ತಾಡಿದರೂ ಅದು ಜಮೀನಿಗಾಗಿ, ಆಳುಕಾಳುಗಳಿಗಾಗಿ ದಾಯಾದಿಗಳ ನಡುವಿನ ಕಲಹವಾಗಿತ್ತಷ್ಟೇ. ಅಲ್ಪಕಾಲದಲ್ಲೇ ಅದು ಹೊಂದಾಣಿಕೆಯಲ್ಲಿ ಸರಿಹೋಯಿತು. ಆದರೆ ಆಂಗ್ಲೋಸ್ಪಿಯರ್​ಗೆ ಸರಿಸುಮಾರು ಎರಡು ಶತಮಾನ ಗಳಿಂದಲೂ ಪ್ರಬಲ ಸ್ಪರ್ಧೆಯೊಡ್ಡುತ್ತಿರುವುದು ರಷ್ಯನ್ನರು. ಅವರಿಗಿರುವ ಅನುಕೂಲತೆ

ಯೆಂದರೆ ಅವರೆಲ್ಲರೂ ಒಂದೇ ಕಡೆಯ ವಿಶಾಲ ನೆಲದಲ್ಲಿದ್ದಾರೆ. ಇಂಗ್ಲಿಷರಂತೆ ಭೌಗೋಳಿಕವಾಗಿ 3 ಖಂಡಗಳಲ್ಲಿ ಹಂಚಿಹೋಗಿಲ್ಲ. ಹೀಗಾಗಿಯೇ ರಷ್ಯನ್ ಶಕ್ತಿಯೆಂದರೆ, ಅದು ಝಾರಿಸ್ಟ್ ಚಕ್ರವರ್ತಿಗಳದ್ದಾಗಿರಲಿ, ಸೋವಿಯೆತ್ ಕಮ್ಯೂನಿಸ್ಟರದಾಗಿರಲಿ, ಪುಟಿನ್​ರಂತಹ ನಿಷ್ಠಾವಂತ ರಷ್ಯನ್ ರಾಷ್ಟ್ರೀಯವಾದಿಗಳದಾಗಿರಲಿ, ಆಂಗ್ಲೋಸ್ಪಿಯರ್​ಗೆ

ಸದಾ ನಡುಕ, ಬೆಚ್ಚಿಬೀಳಿಸುವ ದುಃಸ್ವಪ್ನ. ರಷ್ಯನ್ನರೊಂದಿಗೆ ಮತ್ತಾರಾದರೂ ಸೇರಿದರಂತೂ ಆಂಗ್ಲೋಸ್ಪಿಯರ್​ಗೆ ನಿದ್ದೆಯೇ ಹತ್ತುವುದಿಲ್ಲ. ಹಾಗೆ ಅವರನ್ನು ನಿದ್ದೆಗೆಡಿಸಿದ್ದು ಅರ್ಧ ಶತಮಾನದ ಹಿಂದೆ ಇಂದಿರಾ, ಈಗ ಮೋದಿ!

ಭಾರತದ ಶಕ್ತಿಯ ಮೂಲ ಅದರ ದೀರ್ಘ ಹಾಗೂ ಆಳ ನಾಗರಿಕತಾ ಮತ್ತು ಸಾಂಸ್ಕೃತಿಕ ಪರಂಪರೆ. ಇಂತಹದ್ದು ಜಗತ್ತಿನ ಯಾವ ದೊಡ್ಡ ದೇಶದಲ್ಲೂ ಇಲ್ಲ. ಈಜಿಪ್ಷಿಯನ್, ಮೆಸೊಪಟೇಮಿಯನ್, ಗ್ರೀಕ್ ಮತ್ತು ರೋಮನ್ ನಾಗರಿಕತೆ ಇಂದು ಕಾಣಸಿಗುವುದು ಮ್ಯೂಸಿಯಂಗಳು ಮತ್ತು ಭಗ್ನಾವಶೇಷಗಳಲ್ಲಿ ಮಾತ್ರ. ಆದರೆ ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿ ಕನಿಷ್ಠ ಆರು ಸಾವಿರ ವರ್ಷಗಳಿಂದ ಈ ಕ್ಷಣದವರೆಗೂ ಜೀವಂತವಾಗಿಯೇ ಉಳಿದಿದೆ. ಇಂತಹ ಹೆಗ್ಗಳಿಕೆ ಆರು ದಶಕಗಳ ಹಿಂದಿನವರೆಗೂ ಚೀನಾಕ್ಕೂ ಇತ್ತು. ಹೀಗಾಗಿಯೇ 1950ರ ದಶಕದಲ್ಲಿ ಚೀನಾ ಮತ್ತು ರಷ್ಯಾಗಳು ಜತೆಗೂಡಿದಾಗ ಆಂಗ್ಲೋಸ್ಪಿಯರ್ ದಿಕ್ಕೆಟ್ಟದ್ದು ನಿಜ. ಆದರೆ 1966-76ರ ತಥಾಕಥಿತ ಸಾಂಸ್ಕೃತಿಕ ಕ್ರಾಂತಿಯ ಮೂಲಕ ಚೀನಿ ಕಮ್ಯೂನಿಸ್ಟರು ಚೀನಿ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಸಂಪೂರ್ಣವಾಗಿ ನಾಶಗೊಳಿಸಿದರು ಮತ್ತು ರಷ್ಯಾದಿಂದ ದೂರಸರಿದು ಆಂಗ್ಲೋಸ್ಪಿಯರ್​ಗೇ ಹತ್ತಿರಾದರು. ಅಲ್ಲಿಗೆ ಚೀನಾದ ಬಗೆಗಿದ್ದ ಭಯದಿಂದ ಆಂಗ್ಲೋಸ್ಪಿಯರ್ ಮುಕ್ತವಾಯಿತು. ಮುಂದಿನ ಅರ್ಧ ದಶಕದಲ್ಲಿ ಅವೆರಡರ ನಡುವೆ ಘನಿಷ್ಠ ಆರ್ಥಿಕ ಸಂಬಂಧವೂ ಆರಂಭವಾಯಿತು. ಅದು ಇಂದಿಗೂ ನಿಂತಿಲ್ಲ. ಇಂದು ಚೀನಾದಿಂದ ಸರಕುಗಳು ಬಾರದಿದ್ದಲ್ಲಿ ಆಂಗ್ಲೋಸ್ಪಿಯರ್​ನ ಎಲ್ಲ ಐದೂ ದೇಶಗಳಲ್ಲಿ ಮಾಲ್​ಗಳು ಖಾಲಿ ಹೊಡೆಯುತ್ತವೆ! ಅಮೆರಿಕಾವನ್ನೇ ಪ್ರತ್ಯೇಕವಾಗಿ ತೆಗೆದುಕೊಳ್ಳುವುದಾದರೆ ಇಂದು ಅದು ಚೀನಾದ ಹೊರಗಿನಿಂದ ಪಡೆದುಕೊಳ್ಳುವ ತನ್ನಿಷ್ಟದ ಒಂದೇಒಂದು ವಸ್ತುವೆಂದರೆ ಆಪಲ್ ಫೋನ್ ಮಾತ್ರ. ಆದರೆ ಭಾರತದಿಂದ ಬರುವ ಅದೊಂದರಿಂದಷ್ಟೇ ದಿನನಿತ್ಯದ ಬದುಕು ನಡೆಯುವುದಿಲ್ಲವಲ್ಲ?

ತಂತಮ್ಮ ನಾಗರಿಕತಾ ಹಾಗೂ ಸಾಂಸ್ಕೃತಿಕ ಮೂಲಬೇರುಗಳಿಂದಾಗಿ ಚೀನಾ ಮತ್ತು ಭಾರತ ಯಾರ ಜತೆ ಸೇರುತ್ತವೋ ಅವರ ಶಕ್ತಿ ಹಲವು ಪಟ್ಟು ವೃದ್ಧಿಸುವ ಸ್ಥಿತಿ ಅರ್ಧ ಶತಮಾನದ ಹಿಂದಿನವರೆಗೂ ಇತ್ತು. ಆದರೆ ಮೇಲೆ ಹೇಳಿದಂತೆ 1970ರ ದಶಕದಲ್ಲಿ ಆ ಸ್ಥಾನವನ್ನು ಚೀನಾ ಕಳೆದುಕೊಂಡಿತು. ಆ ಶಕ್ತಿ ಹಾಗೂ ಸ್ಥಾನವನ್ನು ಉಳಿಸಿಕೊಂಡಿರುವ ಜಗತ್ತಿನ ಏಕೈಕ ದೊಡ್ಡ ದೇಶ ಭಾರತ. ಈ ಭಾರತ ಯಾವ ದೇಶದೊಂದಿಗೆ ಸೇರಿದರೂ ತನಗದು ಮಾರಣಾಂತಿಕ ಅಪಾಯ ಎಂದು ಆಂಗ್ಲೋಸ್ಪಿಯರ್ ತಿಳಿಯುತ್ತದೆ. ಚೀನಾ ಜತೆ ಸೇರಲಾಗದ ಸ್ಥಿತಿಯನ್ನು, ಪರಿಹರಿಸಲಾಗದ ಗಡಿಸಮಸ್ಯೆಯನ್ನು ಸ್ವಾತಂತ್ರ್ಯಪೂರ್ವದಲ್ಲೇ ಬ್ರಿಟಿಷರು ಮಾಡಿದರು; ಸ್ವಾತಂತ್ರಾಯನಂತರವೂ ಸರಿಪಡಿಸಲಾಗದಷ್ಟು ಕಗ್ಗಂಟಾಗಿಸಲು ನೆಹರೂರನ್ನು ಪ್ರಧಾನಿಯಾಗಿ ಕೂರಿಸಿ ಹೋದರು. 1962ರಲ್ಲಿ ತನಗನುಕೂಲವಾಗುವಂತೆ ಗಡಿಯನ್ನು ಬದಲಾಯಿಸಿಕೊಳ್ಳಲು ಚೀನಾ ಪ್ರಯತ್ನಿಸಿದಾಗ ಮತ್ತು ಅದನ್ನು ವಿಧಿಯಿಲ್ಲದೇ ಒಪ್ಪಿಕೊಳ್ಳಬೇಕಾದ ಸ್ಥಿತಿಯಲ್ಲಿ ಭಾರತವನ್ನು ನೆಹರೂ ಇರಿಸಿದಾಗ ಈ ದೇಶದ ನೆರವಿಗೆ ಓಡಿಬಂದದ್ದು ಕೇವಲ ನಾಲ್ಕು ದೇಶಗಳು. ಅವೆಂದರೆ ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಕೊನೆಯಲ್ಲಿ ಅಮೆರಿಕಾ! ಆಂಗ್ಲೋಸ್ಪಿಯರ್​ನ ಆ ನಾಲ್ಕು ದೇಶಗಳ ಉದ್ದೇಶ ಭಾರತದ ರಕ್ಷಣೆಯಲ್ಲ, ಬದಲಾಗಿ ಗಡಿಸಮಸ್ಯೆ ನಿರಂತರವಾಗಿ ಹೊಗೆಯಾಡುತ್ತಲೇ ಇರುವ ಸ್ಥಿತಿ ನಿರ್ವಿುಸುವುದು. ಭಾರತದ ಹಿತವೇ ಮುಖ್ಯವಾಗಿದ್ದರೆ ಕೊರಿಯಾ ಮತ್ತು ವಿಯೆಟ್ನಾಂಗಳಲ್ಲಿ ನೇರ ಸೇನಾ ಕಾರ್ಯಾಚರಣೆಗಿಳಿಯಬಹುದಾಗಿತ್ತು. ಆಗಿನ್ನೂ ರಷ್ಯಾ- ಚೀನಾ ಬಾಂಧವ್ಯ ಗಟ್ಟಿಯಾಗಿದ್ದರೂ ವಾರದ ಹಿಂದಷ್ಟೇ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನಲ್ಲಿ ಹಿನ್ನಡೆ ಅನುಭವಿಸಿದ್ದ ಮಾಸ್ಕೋ ಚೀನಾದ ಪರವಾಗಿ ಮುಂದೆಬರುವ ಸಾಧ್ಯತೆ ಇರಲಿಲ್ಲ. ಒಟ್ಟಿನಲ್ಲಿ ಭಾರತ- ಚೀನಾ ಸಮಸ್ಯೆಯಲ್ಲಿ ಇಂದಿಗೂ ಹಾವೂ ಸತ್ತಿಲ್ಲ, ಕೋಲೂ ಮುರಿದಿಲ್ಲ.

ಭಾರತ ಮತ್ತು ಇಸ್ಲಾಮಿಕ್ ಜಗತ್ತು ಜತೆಯಾಗದಂತಹ ಸನ್ನಿವೇಶವನ್ನು ಬ್ರಿಟನ್ ತಡೆದದ್ದು ಅಪಾರ ರಕ್ತಪಾತದೊಂದಿಗೆ ಪಾಕಿಸ್ತಾನವನ್ನು ಸೃಷ್ಟಿಸುವುದರ ಮೂಲಕ. ಇದೇ ಸ್ಥಿತಿ ದಿನನಿತ್ಯದ ರಗಳೆಯಾಗುವಂತೆ ಮಾಡಲು ಆಂಗ್ಲೋಸ್ಪಿಯರ್ ಅನುಸರಿಸಿದ್ದು ಎರಡು ತಂತ್ರಗಳು. ಒಂದು- 1946ರ ಚುನಾವಣೆಗಳಲ್ಲಿ ಮುಸ್ಲಿಂ ಲೀಗ್​ಗೆ ಮತ ಹಾಕಿದ್ದ ಮುಸ್ಲಿಂ ಸಮುದಾಯದ 90% ಭಾಗ ಭಾರತದಲ್ಲೇ, ಮುಖ್ಯವಾಗಿ ಮತೀಯವಾಗಿ ಸಂವೇದನಾಶೀಲವಾದ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಮಹಾರಾಷ್ಟ್ರಗಳಲ್ಲಿಯೇ ಉಳಿಯುವಂತೆ ನೆಹರೂ ಕೈನಿಂದ ಬ್ರಿಟನ್ ಮಾಡಿಸಿತು. ಎರಡು- ಕಾಶ್ಮೀರವನ್ನು ಒಂದು ಜ್ವಲಂತ ಸಮಸ್ಯೆಯಾಗಿಸಲು ಅಗತ್ಯವಾದ ಎಲ್ಲ ಬಗೆಯ ಸಹಕಾರ ಗಳನ್ನೂ ಪಾಕಿಸ್ತಾನಕ್ಕೆ ಬ್ರಿಟನ್ ಮತ್ತು ಅಮೆರಿಕಾ ನೀಡಿದವು.

ಇನ್ನು ಸಾಂಸ್ಕೃತಿಕ ಬೃಹದ್​ಭಾರತವಾದ ಆಗ್ನೇಯ ಏಷ್ಯಾ ಸಹ ಭಾರತದಿಂದ ದೂರ ಸರಿಯುವಂತೆ ಮಾಡಲು ಅಲ್ಲಿನ ಕೆಲವು ದೇಶಗಳೊಂದಿಗೆ ಪಾಕಿಸ್ತಾನವನ್ನು ಸೇರಿಸಿ ಅಮೆರಿಕಾ ಸಿಯಾಟೋ ಸೇನಾಕೂಟವನ್ನು ಕಟ್ಟಿತು. ಆ ತಂತ್ರದಲ್ಲಿ ಅದರೊಂದಿಗೆ ಜತೆಯಾಗಿ ನಿಂತದ್ದು ಅವೇ ಆಂಗ್ಲೋಸ್ಪಿಯರ್ ದೇಶಗಳು- ಬ್ರಿಟನ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್. ಇದು ಸಾಲದು ಎಂಬಂತೆ ಆರ್ಥಿಕವಾಗಿಯೂ ಆ ದೇಶಗಳು ಭಾರತದಿಂದ ದೂರವುಳಿದು ಆಂಗ್ಲೋಸ್ಪಿಯರ್​ಗೇ

ಅಂಟಿಕೊಳ್ಳುವ ತಂತ್ರವಾಗಿ ಆಸಿಯಾನ್ ಆರ್ಥಿಕ ಕೂಟವನ್ನು ಎತ್ತಿ ನಿಲ್ಲಿಸಲಾಯಿತು. ಕ್ರೂರ ವ್ಯಂಗ್ಯವೆಂದರೆ ಸಿಯಾಟೋ ಮತ್ತು ಆಸಿಯಾನ್​ಗಳೆರಡಕ್ಕೂ ಸೇರುವಂತೆ ಭಾರತಕ್ಕೆ ಆಹ್ವಾನಗಳನ್ನು ನೀಡಲಾಗಿತ್ತು, ಆದರೆ ಅದನ್ನು ಸ್ವೀಕರಿಸಲು ಭಾರತ ಹಿಂದೆಮುಂದೆ ನೋಡುವಂತಹ ನೇರ ಹಾಗೂ ಪರೋಕ್ಷ ನಿಯಮಗಳನ್ನೂ ಹಾಕಲಾಗಿತ್ತು! ಇಂತಹದೇ ಚಾಲಾಕಿತನವನ್ನು ಅಮೆರಿಕಾ ಮಾರ್ಷಲ್ ಪ್ಲಾನ್ ವಿಷಯದಲ್ಲಿ ಸೋವಿಯೆತ್ ಮುಂದೆಯೂ ತೋರಿತ್ತು. ದ್ವಿತೀಯ ಮಹಾಯುದ್ಧದಲ್ಲಿ ಜಝುರಿತಗೊಂಡ ತಮ್ಮ ಅರ್ಥವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಲು ಯುರೋಪಿಯನ್ ರಾಷ್ಟ್ರಗಳಿಗೆ ಮಾರ್ಷಲ್ ಪ್ಲಾನ್ ಸಹಾಯ ಯೋಜನೆಯನ್ನು ಅಮೆರಿಕಾ ಪ್ರಾರಂಭಿಸಿತು. ನೆರವಿಗೆ ಸೋವಿಯೆತ್ (ರಷ್ಯಾ) ಸಹ ಅರ್ಹ ಎಂದು ಹೇಳುತ್ತಲೇ ನೆರವನ್ನು ಸ್ವೀಕರಿಸಲಾಗದಂತಹ ನಿಬಂಧನೆಗಳನ್ನು ಮಾಸ್ಕೋ ಮುಂದೆ ಅಮೆರಿಕಾ ಇಟ್ಟಿತು! ನಂತರ ಭಾರತದ ವಿಷಯದಲ್ಲೂ ಅದೇ ಅತಿಬುದ್ಧಿವಂತಿಕೆ!

ಇಷ್ಟೆಲ್ಲಾ ಲೆಕ್ಕಾಚಾರಗಳ ಆಟ ಆಡಿದರೂ ರಷ್ಯಾ ಮತ್ತು ಭಾರತ ಜತೆಗೂಡಿಯೇಬಿಟ್ಟಾಗ ಆಂಗ್ಲೋಸ್ಪಿಯರ್​ಗೆ ಏನಾಗಿರಬೇಡ! ಭಾರತದ ಪರವಾಗಿರುವ ಆಟವನ್ನು ಆಂಗ್ಲೋಸ್ಪಿಯರ್ 1962ರಲ್ಲಿ ಆಡಿದ ಒಂದು ದಶಕದೊಳಗೇ ಏಷ್ಯಾದ ಭೂ-ರಾಜಕೀಯ ಮತ್ತು ಭೂ-ಸಾಮರಿಕ ವಾಸ್ತವಗಳು ಸಂಪೂರ್ಣವಾಗಿ ತಿರುವುಮುರುವಾಗಿ ಚೀನಾ ಆಂಗ್ಲೋಸ್ಪಿಯರ್​ನತ್ತಲೂ ಭಾರತ ರಷ್ಯಾದತ್ತಲೂ ಹೊರಳಿದವು. ಹುಚ್ಚೆದ್ದ ಆಂಗ್ಲೋಸ್ಪಿಯರ್ ಇಂದಿರಾ ವಿರುದ್ಧ ಏನೇನು ಮಾಡಿತೆಂದು ಈಗಾಗಲೇ ಹೇಳಿದ್ದೇನೆ. ಅದರೊಂದಿಗೆ ಕ್ಲಾವರ್ಡ್-ಪಿವನ್ ತಂತ್ರಗಳನ್ನು ಅನುಸರಿಸಿ ರಷ್ಯಾದ ಕಮ್ಯೂನಿಸ್ಟ್ ಸತ್ತೆಯನ್ನು ಕೆಳಗೆಳೆದದ್ದರ ಜತೆಗೆ ಶಾರ್ಪ್ ಕುತಂತ್ರಗಳನ್ನು ಪ್ರಯೋಗಿಸಿ ರಷ್ಯಾ ಪರವಾದ ಸತ್ತೆಗಳನ್ನು ಬೆಲ್​ಗ್ರೇಡ್ ಮತ್ತು ಕೀವ್​ಗಳಲ್ಲಿ ಉರುಳಿಸಿದ್ದನ್ನೂ ಈಗಾಗಲೇ ಹೇಳಿದ್ದೇನೆ. ಇಂದು ಅವೆರಡೂ ತಂತ್ರ-ಕುತಂತ್ರಗಳನ್ನು ಒಟ್ಟಿಗೇ ಭಾರತದಲ್ಲಿ ಪ್ರಯೋಗಿಸಬೇಕಾದ ಅಗತ್ಯ ತನಗಾಗಿದೆಯೆಂದು ಆಂಗ್ಲೋಸ್ಪಿಯರ್, ಮುಖ್ಯವಾಗಿ ಅಮೆರಿಕಾ, ತುಸು ಮಟ್ಟಿಗೆ ಕೆನಡಾ, ತಿಳಿದದ್ದು ಹೇಗೆ?

ಇಂದಿರಾಗಿಂತಲೂ ಮೋದಿ ಹೆಚ್ಚು ಅಪಾಯಕಾರಿ ಎಂದು ಅಮೆರಿಕಾ ತಿಳಿಯುತ್ತದೆ. ಯಾಕೆಂದರೆ ಇಂದಿರಾ ಅವರಲ್ಲಿ ಇಲ್ಲದ, ಅಥವಾ ಸನ್ನಿವೇಶದ ಒತ್ತಡಗಳಿಂದ ಅವರು ಬಹಿರಂಗವಾಗಿ ಪ್ರದರ್ಶಿಸಲಾಗದ ಅಂಶವೊಂದು ಮೋದಿಯವರಲ್ಲಿದೆ. ಮೋದಿ ಭಾರತೀಯ ರಾಷ್ಟ್ರೀಯವಾದಿ. ಭಾರತದ ಸಾಂಸ್ಕೃತಿಕ ಪರಂಪರೆ ಬಗ್ಗೆ ಅವರಿಗೆ ಅಗಾಧ ಗೌರವವಿದೆ. ಅವರು ಬೃಹತ್ ರಾಷ್ಟ್ರೀಯವಾದಿ ರಾಜಕೀಯ ಪಕ್ಷವೊಂದರ ನಿರ್ವಿವಾದಿತ ನೇತಾರ, ಜತೆಗೆ ರಾಷ್ಟ್ರನಿಷ್ಠ ಸಂಘಟನೆಯೊಂದರ ಬೆಂಬಲ ಅವರಿಗಿದೆ.

ಇಂತಹ ಭಾರತೀಯ ರಾಷ್ಟ್ರೀಯವಾದಿ ರಷ್ಯನ್ ರಾಷ್ಟ್ರೀಯವಾದಿಯೊಂದಿಗೆ ಜತೆಗೂಡಿದರೆ ಹೇಗೆ? ಇದು ಅಮೆರಿಕಾಗೆ ಎದುರಾಗಿರುವ ಪ್ರಶ್ನೆ. ಪರಿಹಾರಕ್ಕಾಗಿ ಕ್ಲಾವರ್ಡ್-ಪಿವನ್ ತಂತ್ರವೂ ಬೇಕು, ಶಾರ್ಪ್ ಕುತಂತ್ರವಂತೂ ಬೇಕೇಬೇಕು! ಕಟಾಕಟ್ ಪುಕ್ಕಟೆಗಳ ಭಾರ ದೇಶದ ಅರ್ಥವ್ಯವಸ್ಥೆಯ ಕುತ್ತಿಗೆಗೆ ಬೀಳಬೇಕು, ಲೇವಡಿಗಳಿಂದ ರಾಷ್ಟ್ರನಾಯಕರ ಆತ್ಮಸ್ಥೈರ್ಯ ಕುಗ್ಗಬೇಕು. ಅದಕ್ಕಾಗಿ ಆಮ್ ಕಾಕ್ರೋಚ್ ಕಾಂಗ್ರೆಸ್ ಸೇರಬೇಕು. ಆದರೆ ಹೆಸರು ಮಾತ್ರ ಕಾಕ್ರೋಚ್ 'ಜನತಾ' ಪಾರ್ಟಿ ಎಂದಿರಬೇಕು!

ಅಸಹಿಷ್ಣುತಾ ನೌಟಂಕಿಯಿಂದ ಜಂತರ್ ಮಂತರ್ ತಂತ್ರದವರೆಗಿನ ಒಂದು ದಶಕದ ವಿಶ್ಲೇಷಣೆ ಮುಂದಿನ ವಾರ. ಅದು ನಿಜವಾಗಿಯೂ ಸರಣಿಯ ಅಂತಿಮ ಲೇಖನ. ಪ್ರಾಮಿಸ್!

-(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)



Dailyhunt
Disclaimer: This content has not been generated, created or edited by Dailyhunt. Publisher: Vijayvani